ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೀರ್ಥಹಳ್ಳಿ: ಕುಂಬಳ ಬೆಳೆಗಾರರ ಕೈಹಿಡಿದ ಆಗ್ರಾ ಪೇಠಾ!

ಪೇಠಾ ತಯಾರಿಸಿ ರೈತರಿಗೆ ಆಶಾಕಿರಣವಾದ ಸಾಧಕ ಕುಂಟುವಳ್ಳಿ ವಿಶ್ವನಾಥ್
Last Updated 8 ಮೇ 2020, 2:35 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ಕುಂಬಳ ಬೆಳೆಗಾರರನ್ನು ಕೊರೊನಾ ವೈರಸ್ ಕಾಡುತ್ತಿರುವಾಗಲೇ ಯುವ ಉದ್ಯಮಿ ಕುಂಟುವಳ್ಳಿ ವಿಶ್ವನಾಥ್ ಸಂಕಷ್ಟದಲ್ಲಿದ್ದ ರೈತರಿಗೆ ನೆರವಾಗಿದ್ದಾರೆ. ರೈತರಿಗೆ ಬಣ್ಣ, ಬಣ್ಣದ ಆಗ್ರಾ ಪೇಠಾದ ಸವಿಯುಣಿಸಿದ್ದಾರೆ.

ಮಲೆನಾಡಿನ ರೈತರಿಗೆ ಯಂತ್ರದ ನಂಟು ಬೆಸೆದ ಕುಂಟುವಳ್ಳಿ ವಿಶ್ವನಾಥ್ ತಾಲ್ಲೂಕಿನ ಮೇಳಿಗೆ ಎಂಬ ಗ್ರಾಮದಲ್ಲಿ ಕೃಷಿಗೆ ಪೂರಕವಾಗಿ ‘ವಿಶ್ವವಿದ್ಯಾಲಯ’ವನ್ನೇ ತೆರೆದಿದ್ದಾರೆ.

ವಿವಿಧೆಡೆ ಇದ್ದ ಬೇಡಿಕೆ ಹಿನ್ನೆಲೆಯಲ್ಲಿ ತೀರ್ಥಹಳ್ಳಿ ತಾಲ್ಲೂಕಿನ ಆರಗ, ಸರಳ, ಕೈಮರ, ಮೇಳಿಗೆ ಇನ್ನಿತರ ಕಡೆಗಳಲ್ಲಿ ನೂರಾರು ಟನ್ ಬೂದುಗುಂಬಳ ಬೆಳೆ ಕೊರೊನಾ ಲಾಕ್‌ಡೌನ್ ನಿಂದಾಗಿ ಮಾರಾಟವಾಗದೇ ಕೊಳೆಯಹತ್ತಿತ್ತು. ತಾಲ್ಲೂಕು ಆಡಳಿತ ಬೆಳೆಗಾರರ ರಕ್ಷಣೆಗೆ ಮುಂದಾದರೂ ಕುಂಬಳ ರಾಶಿ ಕೊಂಡು ಏನು ಮಾಡುವುದು? ಎಲ್ಲಿ ಹಂಚುವುದು? ಎಂಬ ಚಿಂತೆಯಲ್ಲಿ ಮುಳುಗಿತು.

ಇದೇ ಹೊತ್ತಿನಲ್ಲಿ ಸ್ಥಳೀಯ ಶಾಸಕ ಆರಗ ಜ್ಞಾನೇಂದ್ರ ಹಾಗೂ ತಹಶೀಲ್ದಾರ್ ಡಾ.ಎಸ್.ಬಿ.ಶ್ರೀಪಾದ್ ಅವರು ಕುಂಟುವಳ್ಳಿ ವಿಶ್ವನಾಥ್ ಅವರಲ್ಲಿ ಕುಂಬಳದ ಮೌಲ್ಯವರ್ಧನೆ ಕುರಿತು ಪ್ರಸ್ತಾಪಿಸಿದರು.

ಆಗ್ರಾಗೆ ಕುಂಬಳವನ್ನು ಸಾಗಿಸುವುದು ಈಗ ಕಷ್ಟ. ಹೀಗಾಗಿ ಬೇಡಿಕೆಯಿರುವ ಆಗ್ರಾ ಪೇಠಾವನ್ನು ಇಲ್ಲಿಯೇ ತಯಾರಿಸಿ ಮಾರುಕಟ್ಟೆ ವೃದ್ಧಿಸಬಹುದು ಎಂದು ಮನಗಂಡರು. ಇಲ್ಲಿನ ಬೂದುಕುಂಬಳದ ಬಣ್ಣವನ್ನು ಪೇಠಾ ಆಗಿ ಪರಿವರ್ತಿಸಿದರು. ಕುಂಬಳ ಬೆಳೆದ ರೈತರ ಕೈಗೆ ಕಾಸು ಬರುವಂತೆ ನೋಡಿಕೊಳ್ಳುವ ಮೂಲಕ ಹತ್ತಾರು ಕೈಗಳಿಗೆ ಕೆಲಸ ನೀಡಿದರು. ಈಗಾಗಲೇ ಸುಮಾರು 20 ಕ್ವಿಂಟಲ್ ಪೇಠಾ ಸಿದ್ಧಪಡಿದ್ದಾರೆ. ರಾಸಾಯನಿಕ ಬೆರೆಸದೇ ಸ್ಥಳೀಯವಾಗಿ ಹೆಚ್ಚು ಬಳಕೆಯಲ್ಲಿರುವ ಅನಾನಸ್, ಕೋಕಂ ಪರಿಮಳವನ್ನು ಬೆರೆಸಿ ಸಿದ್ಧಪಡಿಸಿ ಸ್ವಾದ ಹೆಚ್ಚಿಸಿದ್ದಾರೆ.

ಲಾಕ್‌ಡೌನ್‌ಗಿಂತ ಮುಂಚೆ ಹರಿಯಾಣಕ್ಕೆ ಸುಮಾರು 600 ಟನ್ ಕುಂಬಳವನ್ನು ಪ್ರತಿ ಕೆ.ಜಿಗೆ ಮೂರು, ಮೂರೂವರೆ ರೂಪಾಯಿಗೆ ಮಾರಾಟ ಮಾಡಲಾಗಿತ್ತು. ಸುಮಾರು 1 ಸಾವಿರಕ್ಕೂ ಹೆಚ್ಚು ಟನ್ ಕುಂಬಳ ರೈತರ ಬಳಿಯೇ ಉಳಿದಿದೆ.

ಮೇಳಿಗೆ ಎಂಬ ಪುಟ್ಟ ಊರಿನಲ್ಲಿ ಉದ್ಯಮ ಆರಂಭಿಸಿದ ವಿಶ್ವನಾಥ್ ಅಡಿಕೆ ಸುಲಿಯುವ ಯಂತ್ರವನ್ನು ಆವಿಷ್ಕರಿಸಿ ಮನೆ ಮಾತಾಗಿದ್ದರು. ಈಗ ‘ಇಬ್ಬನಿ ಫುಡ್ ಪ್ರೊಡಕ್ಷನ್’ ಯೋಜನೆಯಲ್ಲಿ ಅವರು ನಿರತರಾಗಿದ್ದಾರೆ.

**

ಪ್ರತಿದಿನ ರೈತರಿಂದ 10 ಟನ್ ಖರೀದಿಸುವ ಸಿದ್ಧತೆ ನಡೆದಿದೆ. ರೈತರಿಗೆ ಪೂರಕವಾಗುವ ಬೆಲೆಯಲ್ಲಿ ಖರೀದಿಸಲಾಗುವುದು.
-ಕುಂಟುವಳ್ಳಿ ವಿಶ್ವನಾಥ್, ಉದ್ಯಮಿ

**

ಕುಂಬಳ ಬೆಳೆದು ಕೈಸುಟ್ಟುಕೊಳ್ಳುವ ಪರಿಸ್ಥಿತಿಯಲ್ಲಿ ವಿಶ್ವನಾಥ್ ನಮ್ಮ ಕೈಹಿಡಿದಿದ್ದಾರೆ. ನನ್ನಿಂದ 1 ಟನ್ ಗೆ ₹ 5 ಸಾವಿರದಂತೆ ಅವರು ಕುಂಬಳವನ್ನು ಖರೀದಿಸಿದ್ದಾರೆ.
-ಕುಳಗೇರಿ ಕಿರಣ್, ಆರಗ ಸಮೀಪದ ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT