ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರ ‘ದರ್ಶನ‘ ಮಾತ್ರ; ತೀರ್ಥ, ಪ್ರಸಾದ ಇಲ್ಲ!

ಜೂನ್‌ 1ರಿಂದ ದೇವಸ್ಥಾನ ತೆರೆಯುವ ಸಾಧ್ಯತೆ * ಸುತ್ತೋಲೆಯ ಕರಡು ಸಿದ್ಧ
Last Updated 28 ಮೇ 2020, 20:29 IST
ಅಕ್ಷರ ಗಾತ್ರ

ಬೆಂಗಳೂರು: ಜೂನ್‌ 1ರಿಂದ ದೇವಸ್ಥಾನಗಳು ಬಾಗಿಲು ತೆರೆದರೂ ಪ್ರಸಾದ ಅಥವಾ ತೀರ್ಥ ವಿತರಣೆ ಮಾಡದಿರಲು ಹಾಗೂ ದೇವಾಲಯದ ಒಳಗೆ ಪ್ರವೇಶಿಸುವಾಗ ಯಾವುದೇ ಪೂಜಾ ಸಾಮಗ್ರಿಗಳನ್ನು (ಹಣ್ಣು, ಕಾಯಿ, ಹೂ, ತುಳಸಿ) ತೆಗೆದುಕೊಂಡು ಹೋಗದಂತೆ ನಿರ್ಬಂಧ ವಿಧಿಸಲು ಮುಜರಾಯಿ ಇಲಾಖೆ ಸಿದ್ಧತೆ ನಡೆಸಿದೆ.

ಕೊರೊನಾ ಹರಡುವಿಕೆ ತಡೆಯಲು ಎಲ್ಲ ದೇವಸ್ಥಾನಗಳಲ್ಲಿ ಕೈಗೊಳ್ಳಲೇಬೇಕಾದ ಮುನ್ನೆಚ್ಚರಿಕೆ ಕ್ರಮಗಳಿಗೆ ಸಂಬಂಧಿಸಿದಂತೆ ಸಿದ್ಧಪಡಿಸಿದ ಸುತ್ತೋಲೆಯ ಕರಡಿನಲ್ಲಿ ಈ ಪ್ರಸ್ತಾವವಿದೆ.

ದರ್ಶನ ಹೊರತುಪಡಿಸಿ ಯಾವುದೇ ಉತ್ಸವ ಹಾಗೂ ಸೇವೆಗಳನ್ನು ನಡೆಸಲು ಅಥವಾ ಅವುಗಳಲ್ಲಿ ಭಾಗವಹಿಸಲು ಭಕ್ತರಿಗೆ ಅವಕಾಶ ಇಲ್ಲ. ಆನ್‌ಲೈನ್‌ ಮೂಲಕ ಸೇವೆಗಳನ್ನು ಕಾಯ್ದಿರಿಸಿದ ಭಕ್ತರಿಗೆ ಕೂಡಾ ದರ್ಶನಕ್ಕೆ ಮಾತ್ರ ಅವಕಾಶ ಸಿಗಲಿದೆ. ಅಲ್ಲದೆ, ಬ್ರಹ್ಮ ರಥೋತ್ಸವ, ಜಾತ್ರೆ ಮುಂತಾದ ಹೆಚ್ಚು ಜನ ಸೇರುವ ಉತ್ಸವಗಳನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ರದ್ದುಪಡಿಸುವ ಬಗ್ಗೆಯೂ ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

ದೇವಸ್ಥಾನಗಳಲ್ಲಿ ನಡೆಸಲೇಬೇಕಾದ ಸಭೆಯನ್ನು ಸೀಮಿತ ಸಂಖ್ಯೆಯಲ್ಲಿ ಸೇರಿ, ಅಂತರ ಕಾಪಾಡಿಕೊಂಡು ಮಾಡಬೇಕು. ದೇವಸ್ಥಾನದ ಕಲ್ಯಾಣ ಮಂಟಪ, ಸಭಾಂಗಣವನ್ನು ಮದುವೆ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ನೀಡುವ ವೇಳೆ ಕೋವಿಡ್‌ 19 ಸಂಬಂಧಿಸಿದಂತೆ ಕೇಂದ್ರ– ರಾಜ್ಯ ಸರ್ಕಾರಗಳು ಹೊರಡಿಸಿರುವ ಮಾರ್ಗಸೂಚಿಗಳಲ್ಲಿ ವಿಧಿಸಿರುವ ಷರತ್ತು ಪಾಲಿಸಲೇಬೇಕು.

ಸುತ್ತೋಲೆಯ ಕರಡಿನಲ್ಲೇನಿದೆ?

* ಪೂಜಾ ಸಾಮಗ್ರಿ ಕೊಂಡೊಯ್ಯುವಂತಿಲ್ಲ

* ದೇವಸ್ಥಾನದ ಪ್ರವೇಶದ್ವಾರದಲ್ಲಿ ಉಷ್ಣತೆ ತಪಾಸಣೆ ಕಡ್ಡಾಯ

* ಉತ್ಸವ, ಸೇವೆ ನಡೆಸಲು ಅವಕಾಶ ಇಲ್ಲ

* ಭಕ್ತರು ಮಾಸ್ಕ್‌ ಅಥವಾ ಕರವಸ್ತ್ರ ಧರಿಸಿರಬೇಕು. ಎಲ್ಲರ ಕೈಗೆ ಸಾನಿಟೈಸರ್‌ ನೀಡಬೇಕು

* ಭಕ್ತರು ದೇವಸ್ಥಾನದ ಒಳಗೆ ಒಂದು ಮೀಟರ್‌ ಅಂತರ ಕಾಪಾಡಬೇಕು

* ಸ್ವಚ್ಛತೆ ಕಾಪಾಡಲು ಒಳ–ಹೊರ ಆವರಣದಲ್ಲಿ ಸೋಂಕು ನಿವಾರಕ ಬಳಸಬೇಕು

* ಅರ್ಚಕರು, ಪರಿಚಾರಕರು ಮತ್ತಿತರ ಒಳಾಂಗಣ ಸಿಬ್ಬಂದಿ ಒಳಾಂಗಣ ಹೊರತುಪಡಿಸಿ ಉಳಿದ ಕಡೆ ಮಾಸ್ಕ್‌ ಧರಿಸಬೇಕು

* ದೇವಾಲಯದ ಅಧಿಕಾರಿ, ನೌಕರರು ಕೂಡಾ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT