ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮದ್ಯ ಮಾರಾಟಕ್ಕೆ ಅನುಮತಿ ಕೋರಿ ಪಿಐಎಲ್‌ ಸಲ್ಲಿಸಿದ್ದ ವೈದ್ಯಗೆ ₹ 10 ಸಾವಿರ ದಂಡ

Last Updated 7 ಏಪ್ರಿಲ್ 2020, 19:48 IST
ಅಕ್ಷರ ಗಾತ್ರ

ಬೆಂಗಳೂರು: ‘ಲಾಕ್ ಡೌನ್ ವೇಳೆ ಮದ್ಯ ಮಾರಾಟಕ್ಕೆ ಅನುಮತಿ ನೀಡಲು ನಿರ್ದೇಶಿಸಬೇಕು' ಎಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದ (ಪಿಐಎಲ್) ಅರ್ಜಿದಾರ ಮನೋವೈದ್ಯರಿಗೆ ಹೈಕೋರ್ಟ್ ₹10 ಸಾವಿರ ದಂಡ ವಿಧಿಸಿದೆ.

ಈ ಕುರಿತು ಹುಬ್ಬಳ್ಳಿಯ ಮನೋವೈದ್ಯ ವಿನೋದ್ ಕುಲಕರ್ಣಿ ಸಲ್ಲಿಸಿದ್ದ ಪಿಐಎಲ್ ಅನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಎಸ್. ಓಕಾ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರಿದ್ದ ವಿಭಾಗೀಯ ನ್ಯಾಯಪೀಠ ಮಂಗಳವಾರ ವಜಾ ಮಾಡಿದೆ.

‘ಆಹಾರ, ಚಿಕಿತ್ಸೆಯ ಬಗ್ಗೆ ಆದ್ಯತೆ ನೀಡಬೇಕಾದ ಸಂದರ್ಭವಿದು. ಮದ್ಯಪಾನ ತ್ಯಜಿಸಲು ಆಪ್ತ ಸಮಾಲೋಚನೆಗೆ ಇಂಬು ನೀಡಬೇಕಾದಂಥವರು ಮದ್ಯದ ಬಗ್ಗೆ ಕಾಳಜಿ ತೋರಿದ್ದಾರೆ’ ಎಂದು ನ್ಯಾಯಪೀಠ ಅಸಮಾಧಾನ ವ್ಯಕ್ತಪಡಿಸಿದೆ.

ದಂಡದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ನೀಡುವಂತೆ ಅರ್ಜಿದಾರರಿಗೆ ಆದೇಶಿಸಿದೆ.

ಅರ್ಜಿಯಲ್ಲಿ ಏನಿತ್ತು?:‘ಹಿಂದೂ ಸಂಸ್ಕೃತಿಯ ಪ್ರಾಚೀನ ಹಸ್ತಪ್ರತಿಗಳಲ್ಲಿ ಸೋಮರಸ ಸೇವನೆಯ ಉಲ್ಲೇಖವಿದೆ. ಅಂದಿನ ಸೋಮರಸವೇ ಇಂದಿನ ಆಲ್ಕೋಹಾಲ್. ಇದರ ಸೇವನೆಯಿಂದ ದೇಹ ಮತ್ತು ಮನಸ್ಸಿಗೆ ಕೊಂಚ ನಿರಾಳತೆ ಲಭಿಸುತ್ತದೆ ಎಂಬುದನ್ನು ಮನೋವೈದ್ಯ ಶಾಸ್ತ್ರದ ಆಧಾರದಲ್ಲಿ ಗಮನಿಸಬೇಕಾದ ಅವಶ್ಯಕತೆ ಇದೆ’ ಎಂದು ಅರ್ಜಿದಾರರು ತಿಳಿಸಿದ್ದರು.

‘ಮದ್ಯಪಾನದ ಚಟ ಅಂಟಿಸಿಕೊಂಡವರುಏಕಾಏಕಿ ಸ್ಥಗಿತಗೊಳಿಸಿದರೆ ‘ಡಿಲಿರಿಯಮ್’ ಎಂಬ ಸ್ಥಿತಿಗೆ ಜಾರುತ್ತಾರೆ. ಇದು ಅವರನ್ನು ಕೊಲೆ ಅಥವಾ ಆತ್ಮಹತ್ಯೆಗೆ ಪ್ರಚೋದಿಸಬಲ್ಲದು. ಮೈನಡುಕ, ಭ್ರಮೆ, ನಿದ್ರಾಹೀನತೆಯಂತಹಸಮಸ್ಯೆಗೂ ಈಡು ಮಾಡಬಲ್ಲದು. ಫಿಟ್ಸ್ ನಂತಹ ಕಾಯಿಲೆ ಬರುವ ಸಾಧ್ಯತೆಯೂ ಇದೆ’ ಎಂದು ವಿವರಿಸಿದ್ದರು.

‘ಮದ್ಯ ನಿರಾಕರಣೆಯಿಂದ ಮಾನಸಿಕ ಖಿನ್ನತೆಗೆ ಒಳಗಾದ ಏಳು ಜನ ಮದ್ಯವ್ಯಸನಿಗಳು ಲಾಕ್ ಡೌನ್ ಅವಧಿಯಲ್ಲಿ ರಾಜ್ಯದಾದ್ಯಂತ ವಿವಿಧೆಡೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ’ ಎಂದು ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT