ಸೋಮವಾರ, ಫೆಬ್ರವರಿ 17, 2020
30 °C
ಬಳಲಿದ ಆಡಳಿತ

ಇಲಾಖೆಗಳಿಗಿಲ್ಲ ಮುಖ್ಯಸ್ಥರು: 'ಹಿಂದುಳಿದ' ಚಾಮರಾಜನಗರ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಹಿಂದುಳಿದ ಜಿಲ್ಲೆ' ಎಂಬ ಹಣೆಪಟ್ಟಿ ಕಳಚಿಕೊಳ್ಳಲು ಹರಸಾಹಸಪಡುತ್ತಿರುವ ಚಾಮರಾಜನಗರದಲ್ಲಿ 10ಕ್ಕೂ ಹೆಚ್ಚು ಇಲಾಖೆಗಳಿಗೆ ಮುಖ್ಯಸ್ಥರಿಲ್ಲ. ಪ್ರಭಾರಿಗಳ ‘ಭಾರ’ದಲ್ಲಿ ನಲುಗಿರುವ ಈ ಇಲಾಖೆಗಳ ಆಡಳಿತ ಕುಂಟುತ್ತಾ ಸಾಗಿದೆ. 

ದಲಿತರು, ಪರಿಶಿಷ್ಟ ವರ್ಗದವರೇ ಹೆಚ್ಚಿನ ಸಂಖ್ಯೆಯಲ್ಲಿರುವ ಜಿಲ್ಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆಗೆ ಕಾಯಂ ಉಪನಿರ್ದೇಶಕರಿಲ್ಲ. ಬಂದವರೂ ಐದು ತಿಂಗಳಿಗಿಂತ ಹೆಚ್ಚು ಸಮಯ ಇರುತ್ತಿಲ್ಲ. ಪ್ರವಾಸೋದ್ಯಮಕ್ಕೆ ಅಪಾರ ಅವಕಾಶವಿರುವ ಜಿಲ್ಲೆಯಲ್ಲಿ ಕೆಲ ವರ್ಷಗಳಿಂದ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಹುದ್ದೆ ಖಾಲಿ ಇದೆ. ಮೈಸೂರಿನವರಿಗೆ ಇಲ್ಲಿನ ಹೊಣೆ ಹೊರಿಸಲಾಗಿದೆ.

ಚಾಮರಾಜನಗರದ ಬದನಗುಪ್ಪೆ, ಕೆಲ್ಲಂಬಳ್ಳಿ ವ್ಯಾಪ್ತಿಯಲ್ಲಿ 1,460 ಎಕರೆ ಜಾಗದಲ್ಲಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಪಡಿಸಲಾಗಿದೆ. ಕೈಗಾರಿಕೆಗಳಿಗಾಗಿ ಈ ಜಾಗ ಮೀಸಲಿಟ್ಟು ಐದು ವರ್ಷಗಳು ಉರುಳಿದರೂ, ಒಂದೇ ಒಂದು ಉದ್ದಿಮೆ ಬಂದಿಲ್ಲ. ಉದ್ಯಮಿಗಳನ್ನು ಆಕರ್ಷಿಸಲು ನಿರಂತರ ಪ್ರಯತ್ನಬೇಕು. ಅಧಿಕಾರಿಗಳು ಇರಬೇಕು. ಆದರೆ, ಜಿಲ್ಲೆಯ ಕೈಗಾರಿಕಾ ಇಲಾಖೆಯ ಜಂಟಿ ನಿರ್ದೇಶಕರ ಹುದ್ದೆ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಖಾಲಿ ಬಿದ್ದಿದೆ.

ಕೊಡಗಿನವರಿಗೆ ಇಲ್ಲಿನ ಜವಾಬ್ದಾರಿ ನೀಡಲಾಗಿದೆ. ಅಕ್ಟೋಬರ್‌ ತಿಂಗಳಲ್ಲಿ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾಗಿದ್ದವರು ನಿವೃತ್ತಿ ಹೊಂದಿದ ಬಳಿಕ, ಹೊಸಬರ ನೇಮಕವಾಗಿಲ್ಲ. ಕಾರ್ಮಿಕ ಇಲಾಖೆ,  ಅಬಕಾರಿ, ಸಹಕಾರ, ಅಲ್ಪಸಂಖ್ಯಾತರ ಅಭಿವೃದ್ಧಿ, ಅಂಗವಿಕಲರ ಇಲಾಖೆ, ವಿವಿಧ ನಿಗಮಗಳಿಗೆ ಜಿಲ್ಲಾ ಮುಖ್ಯ ಅಧಿಕಾರಿಗಳಿಲ್ಲ.

ಜಿಲ್ಲೆಗೆ ಅಧಿಕಾರಿಗಳನ್ನು ನೇಮಿಸುವಲ್ಲಿ ರಾಜ್ಯ ಸರ್ಕಾರ ದಿವ್ಯ ನಿರ್ಲಕ್ಷ್ಯ ವಹಿಸಿದೆ ಎಂಬುದು ಜಿಲ್ಲೆಯ ಹೋರಾಟಗಾರರು ಹಾಗೂ ಪ್ರಗತಿಪರ ಸಂಘಟನೆಗಳ ಮುಖಂಡರ ಆರೋಪ.

‘ಎಸ್‌ಸಿ, ಎಸ್‌ಟಿ ವಿಶೇಷ ಯೋಜನೆಯಡಿ ಸಾಕಷ್ಟು ಅನುದಾನ ಬರುತ್ತದೆ. ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರೇ ಈ ಯೋಜನೆಯ ನೋಡೆಲ್‌ ಅಧಿಕಾರಿ. ಮೂರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಪ್ರಗತಿ ಪರಿಶೀಲನೆ ನಡೆಸಬೇಕು. ಮುಖ್ಯಸ್ಥರೇ ಇಲ್ಲದಿದ್ದರೆ, ಯಾವ ಕೆಲಸವೂ ಸರಿಯಾಗಿ ಆಗುವುದಿಲ್ಲ’ ಎಂದು ದಲಿತ ಸಂಘಟನೆಗಳ ಒಕ್ಕೂಟದ ಸಂಚಾಲಕ ಸಿ.ಎಂ.ಕೃಷ್ಣಮೂರ್ತಿ ‘ಪ್ರಜಾವಾಣಿ’ಗೆ ತಿಳಿಸಿದರು.

ಉಪ ಕಾರ್ಯದರ್ಶಿ, ತಹಶೀಲ್ದಾರ್‌ ಹುದ್ದೆ ಖಾಲಿ
ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಹುದ್ದೆ ಐದು ತಿಂಗಳುಗಳಿಂದ ಖಾಲಿ ಬಿದ್ದಿದೆ. ಯಳಂದೂರು ತಾಲ್ಲೂಕು ಹಾಗೂ ಹನೂರು ತಾಲ್ಲೂಕಿನ ತಹಶೀಲ್ದಾರ್‌ ಹುದ್ದೆಯೂ ಖಾಲಿಯಾಗಿವೆ. ಯಳಂದೂರು ತಹಶೀಲ್ದಾರ್‌ ಆಗಿದ್ದವರು ಎರಡು ವಾರಗಳ ಹಿಂದೆ ಚನ್ನಪಟ್ಟಣಕ್ಕೆ ವರ್ಗವಾಗಿದ್ದಾರೆ. 

ಹನೂರನ್ನು ಪ್ರತ್ಯೇಕ ತಾಲ್ಲೂಕು ಎಂದು ಘೋಷಿಸಿ ಎರಡು ವರ್ಷವಾಗಿದೆ. ಗ್ರೇಡ್‌–1 ತಹಶೀಲ್ದಾರ್‌ ಅವರನ್ನು ಅಲ್ಲಿಗೆ ನಿಯೋಜನೆ ಮಾಡಲು ಸರ್ಕಾರ ಒಂದು ವರ್ಷ ತೆಗೆದುಕೊಂಡಿತ್ತು. ಈಗ ಮೂರು ತಿಂಗಳಿಂದ ಹುದ್ದೆ ಮತ್ತೆ ಖಾಲಿ ಇದೆ. 

*
ಇದೊಂದು ಸೂಕ್ಷ್ಮ ಜಿಲ್ಲೆ. ಆಡಳಿತ ನಡೆಸಲು ಹಲವು ಸವಾಲುಗಳಿವೆ. ಎಲ್ಲ ಇಲಾಖೆಗಳಲ್ಲಿ ಕಾಯಂ ಮುಖ್ಯಸ್ಥರಿದ್ದರೆ ಪರಿಣಾಮಕಾರಿ ಆಡಳಿತಕ್ಕೆ ಅನುಕೂಲ.
-ಬಿ.ಬಿ.ಕಾವೇರಿ, ಜಿಲ್ಲಾಧಿಕಾರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು