ಬುಧವಾರ, ಮೇ 27, 2020
27 °C
ಮನಸ್ಸು ಖಿನ್ನತೆಗೆ ಜಾರದಂತೆ ಎಚ್ಚರವಹಿಸಲು ಮನಃಶಾಸ್ತ್ರಜ್ಞರ ಸಲಹೆ

ಸಮಯ ಕಳೆಯಲು ಹಲವಾರು ಬಗೆ

ಸಂಧ್ಯಾ ಹೆಗಡೆ Updated:

ಅಕ್ಷರ ಗಾತ್ರ : | |

Prajavani

ಶಿರಸಿ: ಜಗತ್ತನ್ನೇ ನಡುಗಿಸಿರುವ ಕೋವಿಡ್‌–19 ಕಾಯಿಲೆ, ಮನುಷ್ಯರ ಚಟುವಟಿಕೆಗಳನ್ನೇ ಸ್ತಬ್ಧಗೊಳಿಸಿದೆ. ಅವ್ಯಕ್ತ ಭಯ, ಅಭದ್ರ ಭಾವದಲ್ಲಿ ಮನುಷ್ಯ ತೊಳಲಾಡುತ್ತಿದ್ದಾನೆ. ಲಾಕ್‌ಡೌನ್ ಎಂಬ ಗೃಹಬಂಧನ ಆತನನ್ನು ಖಿನ್ನತೆಯೆಡೆಗೆ ನೂಕುತ್ತಿದೆ. ಇಂತಹ ಸಂದಿಗ್ಧ ಸಂದರ್ಭವನ್ನು ಎದುರಿಸಲು ಹೆಣಗಾಡುತ್ತಿರುವವರು ಮನಃಶಾಸ್ತ್ರಜ್ಞರ ಮೊರೆ ಹೋಗುತ್ತಿದ್ದಾರೆ.

ಮನಃಶಾಸ್ತ್ರಜ್ಞರಿಗೆ ಕರೆ ಮಾಡುವ, ಆನ್‌ಲೈನ್‌, ವಾಟ್ಸ್‌ಆ್ಯಪ್‌ನಲ್ಲಿ ಸಲಹೆ ಕೇಳುವವರ ಸಂಖ್ಯೆ ದಿನೇದಿನೇ ಅಧಿಕವಾಗುತ್ತಿದೆ. ಕರೆ ಮಾಡುವ ಬಹುತೇಕರ ಪ್ರಶ್ನೆ ‘ಕೋವಿಡ್ ಭಯದಿಂದ ಹೊರಬರುವುದು ಹೇಗೆ?’ ಎಂಬುದೇ ಆಗಿದೆ. ಇಂತಹುದೇ ಹಲವಾರು ಪ್ರಶ್ನೆಗಳಿಗೆ ನಿತ್ಯ ಉತ್ತರಿಸಿ, ಪರಿಹಾರ ಹೇಳುವ ಇಲ್ಲಿನ ಮಾನಸಿಕ ಆರೋಗ್ಯ ತಜ್ಞ ಡಾ.ಗಿರಿಧರ ಅವರು, ಅಪರೂಪವಾಗಿ ಮೂರು ವಾರ ಮನೆಯಲ್ಲಿರಲು ಸಿಕ್ಕಿರುವ ಅವಕಾಶವನ್ನು ಹೇಗೆ ಸಕಾರಾತ್ಮಕವಾಗಿ ಸ್ವೀಕರಿಸಬಹುದು ಎಂಬುದನ್ನು ‘ಪ್ರಜಾವಾಣಿ’ ಜೊತೆ ಹಂಚಿಕೊಂಡಿದ್ದಾರೆ.

‘ಪ್ರತಿ ಮನುಷ್ಯನ ಮನಸ್ಸು ಭಿನ್ನವಾಗಿರುತ್ತದೆ. ಕೆಲವರಿಗೆ ಹೆಚ್ಚು ಚಟುವಟಿಕೆಯಿಂದಿರುವುದು ಇಷ್ಟ. ಅವರಿಗೆ ಓಡಾಟ, ಹೆಚ್ಚು ಜನರನ್ನು ಭೇಟಿ ಮಾಡದಿದ್ದರೆ ಚಡಪಡಿಕೆಯಾಗುತ್ತದೆ. ಅದಿಲ್ಲವೆಂದರೆ ಕಣ್ಣೆದುರು ಕಾಣುವವರ ಮೇಲೆ ಆ ಅಸಮಾಧಾನ ವ್ಯಕ್ತವಾಗಿ ಬಿಡುತ್ತದೆ. ಅಂತಹವರು ಮೊಬೈಲ್ ಕರೆ ಬಂದಾಗ, ಇಯರ್ ಫೋನ್ ಬಳಸಿ ಲಭ್ಯವಿರುವ ಜಾಗದಲ್ಲಿ ಓಡಾಡುತ್ತ ಮಾತನಾಡಬಹುದು. ಇದರಿಂದ ಲವಲವಿಕೆ ಹೆಚ್ಚುತ್ತದೆ. ಇನ್ನು ಕೆಲವರಿಗೆ ಕಡಿಮೆ ಚಟುವಟಿಕೆಯೇ ಖುಷಿ. ಅಂತಹವರು ಓದು, ಸಂಗೀತ ಕೇಳುವ, ಮೊಬೈಲ್ ನೋಡುವುದರಲ್ಲಿ ಕಾಲ ಕಳೆಯುವುದರಿಂದ, ಅವರಿಗೆ ಮನೆಯಲ್ಲಿ ಲಾಕ್ ಆಗಿರುವುದು ಅಷ್ಟು ಸಮಸ್ಯೆಯಾಗಿ ಕಾಡಲಾರದು’ ಎನ್ನುತ್ತಾರೆ ಅವರು.

‘ವೃತ್ತಿಯ ಹೊರತಾಗಿ ಬಹಳಷ್ಟು ಮಂದಿ ಉತ್ತಮ ಹವ್ಯಾಸ ಹೊಂದಿರುತ್ತಾರೆ. ಉದ್ಯೋಗದ ಜಂಜಾಟದಲ್ಲಿ ಇದಕ್ಕೆ ಸಮಯ ಮೀಸಲಿಡಲು ಆಗುವುದಿಲ್ಲ. ಅವರು ಈ ಸಂದರ್ಭವನ್ನು ಸದ್ಬಳಕೆ ಮಾಡಿಕೊಳ್ಳಬಹುದು. ಅನೇಕ ದಿನಗಳಿಂದ ಮನೆ ಸ್ವಚ್ಛತಾ ಕಾರ್ಯ ಮುಂದೂಡುತ್ತಿದ್ದವರಿಗೆ, ಕುಟುಂಬದ ಸದಸ್ಯರೆಲ್ಲ ಸೇರಿ ಹರಟೆ ಹೊಡೆಯುತ್ತ ಸರಸರನೆ ಕೆಲಸ ಮುಗಿಸಲು ಇದು ಸಕಾಲ. ನಿತ್ಯದ ಒತ್ತಡದಲ್ಲಿ ಏನೋ ಒಂದಿಷ್ಟು ಅಡುಗೆ ಮಾಡಿ ಊಟ ಮಾಡುತ್ತಿದ್ದ ದಿನಗಳನ್ನು ಮರೆತು, ಲಭ್ಯವಿರುವ ಸಾಮಗ್ರಿಗಳಲ್ಲೇ ಸೃಜನಾತ್ಮಕವಾಗಿ ಅಡುಗೆ ಸಿದ್ಧಪಡಿಸಿ, ಖುಷಿಯಿಂದ ಊಟ ಮಾಡಬಹುದು’ ಎಂದು ಗಿರಿಧರ ಸಲಹೆ ಮಾಡಿದರು. 

ಅವರು ಹೇಳಿದ ಇನ್ನೊಂದಿಷ್ಟು ಟಿಪ್ಸ್‌ಗಳು

* ಲಾಕ್‌ಡೌನ್ ಶುರುವಾದಾಗಿನಿಂದ ಹೆಂಡತಿಯರ ಮೇಲಿನ ಜೋಕ್‌ಗಳು ಜೋರಾಗಿ ಓಡಾಡುತ್ತಿವೆ. ಕೆಲಸದ ಒತ್ತಡದಲ್ಲಿ ಪರಸ್ಪರ ವ್ಯಕ್ತಪಡಿಸುವ ಭಾವಗಳು ಇಂತಹ ನಕಾರಾತ್ಮಕತೆಯ ಜೋಕ್‌ಗಳನ್ನು ಸೃಷ್ಟಿಸಿರಬಹುದು. ಆದರೆ, ಪತಿ–ಪತ್ನಿಯರ ನಡುವಿನ ಸಂಬಂಧ ಗಟ್ಟಿಗೊಳ್ಳಲು, ವೃತ್ತಿ ಒತ್ತಡವಿಲ್ಲದೇ, ಮುಕ್ತ ಮನಸ್ಸಿನಿಂದ ಪರಸ್ಪರರು ಅರಿತುಕೊಳ್ಳಲು ಇದು ಅವಕಾಶ.

* ಎಲ್ಲ ಸಂಬಂಧಗಳಲ್ಲೂ ಸಂಪರ್ಕವೇ ಬಹುಮುಖ್ಯ ಮಾಧ್ಯಮ. ಕುಟುಂಬದ ಸದಸ್ಯರೆಲ್ಲ ಮನೆಯಲ್ಲೇ ಇರುವುದರಿಂದ ಭಾವನಾತ್ಮಕ ಸಂಬಂಧಗಳು ಬಲಗೊಳ್ಳುತ್ತವೆ. ಒಂದು ದಿನದ ರಜೆಗೂ, ಮೂರು ವಾರಗಳ ನಿರಂತರ ರಜೆಗೂ ಸಾಕಷ್ಟು ವ್ಯತ್ಯಾಸವಿರುತ್ತದೆ. ಪಾಲಕರು ನಡುನಡುವೆ ಒಮ್ಮೆ ‘ಗ್ಯಾಜೆಟ್ ರಹಿತ, ಸ್ಕ್ರೀನ್ ರಹಿತ’ ದಿನವನ್ನು ಕಳೆದರೆ ಒಳಿತು. ಮಕ್ಕಳಿಗೆ ಮೊಬೈಲ್ ಮುಟ್ಟಬೇಡಿ ಎನ್ನುವ ಪಾಲಕರಿಗೂ, ಮೊಬೈಲ್ ಬಿಟ್ಟಾಗಿನ ಅನುಭವ ಅರಿವಿಗೆ ಬರುತ್ತದೆ. ಹಾಡು, ನೃತ್ಯ ಇಂತಹ ಮನರಂಜನೆ ಕೂಡ ಸಂತಸ ನೀಡುತ್ತದೆ.

* ವ್ಯಸನಿಗಳಿಗೆ ಇದು ಕಷ್ಟದ ಸಮಯ ಹೌದು. ತಂಬಾಕು, ಮದ್ಯ ಸಿಗುವುದಿಲ್ಲ. ವಿಡ್ರಾವಲ್ ಲಕ್ಷಣಗಳು ಕಂಡರೆ ಡಾಕ್ಟರ್‌ ಅನ್ನು ಸಂಪರ್ಕಿಸಬಹುದು. ವ್ಯಸನಮುಕ್ತರಾಗಲು ಬಯಸುವವರಿಗೆ ಇದು ಅನಾಯಾಸವಾಗಿ ಬಂದ ಸಂದರ್ಭ.

 ‘ಸಂಚಾರ ನಿಯಂತ್ರಣದಲ್ಲಿಟ್ಟುಕೊಳ್ಳಿ’

‘ದಿನವೂ ಹೊರಗೆ ಹೋಗುವ ಅಭ್ಯಾಸವಿದ್ದ ಹಿರಿಯ ನಾಗರಿಕರು ಮತ್ತು ಯುವಜನರಿಗೆ ಸ್ವಾತಂತ್ರ್ಯ ಕಳೆದುಕೊಂಡ ಅನುಭವವಾಗಬಹುದು. ಯುವಜನರು ನೆಟ್‌ ಜೊತೆ ಕಾಲ ಕಳೆಯುತ್ತಾರೆ. ಹಿರಿಯರು ಟಿ.ವಿ.ಗೆ ಅಂಟಿಕೊಳ್ಳದಂತೆ ಎಚ್ಚರ ವಹಿಸಬೇಕು. ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಆರೋಗ್ಯದ ಕಡೆ ಹೆಚ್ಚು ಒತ್ತು ನೀಡಿ, ಮನೆ ಸುತ್ತ, ಹಿತ್ತಲಿನಲ್ಲಿ ಓಡಾಟ ಮಾಡಿ. ಹೊರ ಪ್ರದೇಶದ ಸಂಚಾರ ನಿಯಂತ್ರಿಸಿಕೊಳ್ಳಿ. ಧಾರ್ಮಿಕ ಆಚರಣೆ, ಜಪ, ಸ್ತೋತ್ರ ಪಠಣದಲ್ಲಿ ಮೊದಲಿಗಿಂತ ಹೆಚ್ಚು ತೊಡಗಿಕೊಂಡರೆ ಮನಸ್ಸಿಗೆ ಶಾಂತಿ ಸಿಗುತ್ತದೆ’ ಎಂದು ಡಾ. ಗಿರಿಧರ ಸಲಹೆ ನೀಡಿದ್ದಾರೆ.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು