ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ ಎಲ್ಲರಿಗೂ ಶೌಚಾಲಯ ಇದೆ!

ದಾಖಲೆಯಲ್ಲಷ್ಟೇ ಬಯಲು ಶೌಚಮುಕ್ತ
Last Updated 5 ಅಕ್ಟೋಬರ್ 2019, 20:00 IST
ಅಕ್ಷರ ಗಾತ್ರ

‘ಭಾರತ ಬಯಲು ಶೌಚಮುಕ್ತ’ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಘೋಷಿಸಿದ್ದಾರೆ. ಆದರೆ, ರಾಜ್ಯದಲ್ಲಿ ಈಗಲೂ ನಸುಕಿನಲ್ಲೇ ಕೈಯಲ್ಲಿ ತಂಬಿಗೆ ಹಿಡಿದು ಮಹಿಳೆಯುರು, ಪುರುಷರು, ಮಕ್ಕಳು ಬಯಲ ಕಡೆಗೆ ಹೋಗುವುದು ಮಾಮೂಲಿ ದೃಶ್ಯ. ಸರ್ಕಾರದ ದಾಖಲೆಗಳಲ್ಲಿ ಮಾತ್ರ ಬಯಲು ಶೌಚಮುಕ್ತವಾಗಿದೆ. ಈ ಕುರಿತು ‘ಪ್ರಜಾವಾಣಿ’ ಇಲ್ಲಿ ಬೆಳಕು ಚೆಲ್ಲಿದೆ.

ಬೆಂಗಳೂರು: ರಾಜ್ಯ ಸರ್ಕಾರದ ದಾಖಲೆಗಳ ಪ್ರಕಾರ ರಾಜ್ಯದ ಗ್ರಾಮೀಣ ಪ್ರದೇಶದ ಬಹುತೇಕರು ವೈಯಕ್ತಿಯ ಶೌಚಾಲಯ ಹೊಂದಿದ್ದು, ಸುಮಾರು 4 ಸಾವಿರ ಕೋಟಿ ವೆಚ್ಚದಲ್ಲಿ 37.32 ಲಕ್ಷ ಕುಟುಂಬಗಳಿಗೆ ಗೃಹ ಶೌಚಾಲಯ ನಿರ್ಮಿಸಿಕೊಡಲಾಗಿದೆ.

2018 ನವೆಂಬರ್ 19ರ ವಿಶ್ವ ಶೌಚಾಲಯ ದಿನದಂದು 176 ತಾಲ್ಲೂಕುಗಳ 6,022 ಗ್ರಾಮ ಪಂಚಾಯಿತಿ ವ್ಯಾಪ್ತಿಯ 26,935 ಗ್ರಾಮಗಳು ‘ಬಯಲು ಬಹಿರ್ದೆಸೆ ಮುಕ್ತ’ ಎಂದು ರಾಜ್ಯ ಸರ್ಕಾರ ಘೋಷಿಸಿತ್ತು. ಇನ್ನೂ ಕೆಲವೇ ದಿನಗಳಲ್ಲಿ ಶೌಚಾಲಯ ಹೊಂದದವರು ಯಾರೂ ಇರುವುದಿಲ್ಲ ಎಂದು ಆಗ ಹೇಳಿಕೊಂಡಿತ್ತು. ಈಗ ಆ ಸಾಧನೆ ಮಾಡಿರುವುದಾಗಿ ಸರ್ಕಾರ ಹೇಳುತ್ತಿದೆ. ಯೋಜನೆ ಜಾರಿ ಹೊಣೆಹೊತ್ತಿರುವ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿರುವ ‘ಸ್ವಚ್ಛ ಭಾರತ್ ಮಿಷನ್’ ಪ್ರಕಾರ ರಾಜ್ಯದಲ್ಲಿ ಪ್ರಸ್ತುತ ವೈಯಕ್ತಿಕ ಶೌಚಾಲಯ ಹೊಂದದವರು ಯಾರೂ ಇಲ್ಲ!

ಎಲ್ಲ ಕುಟುಂಬಗಳು ಶೌಚಾಲಯ ಹೊಂದಿವೆಯೆ? ಬಳಕೆಯೂ ಆಗುತ್ತಿವೆಯೆ? ವಾಸ್ತವವಾಗಿ ಇಷ್ಟೊಂದು ನಿರ್ಮಾಣವಾಗಿವೆಯೆ? ಎಂಬ ಪ್ರಶ್ನೆಗೆ ಪರಿಶೀಲನೆಯಿಂದಷ್ಟೇ ಉತ್ತರ ಸಿಗಬೇಕಿದೆ. ಆದರೆ ದಾಖಲೆಗಳಿಗೂ, ವಾಸ್ತವ ಸ್ಥಿತಿಗೂ ಸಾಕಷ್ಟು ವ್ಯತ್ಯಾಸವಿದೆ. ಸಮೀಕ್ಷೆ ಸಮಯದಲ್ಲಿ ಬಿಟ್ಟುಹೋಗಿರುವ, ನಿರ್ಮಿಸಿಕೊಳ್ಳಲು ಮುಂದೆ ಬಾರದವರು ಇನ್ನೂ ಶೌಚಾಲಯ ಹೊಂದಿಲ್ಲ ಎಂದು ಮೂಲಗಳು ತಿಳಿಸಿವೆ.

ದಾಖಲೆಗಳಲ್ಲಿ ಇರುವಷ್ಟು ಶೌಚಾಲಯಗಳು ನಿರ್ಮಾಣವಾಗಿಲ್ಲ. ಗೋಡೆ ಕಟ್ಟಿದಂತೆ ಮಾಡಿ, ಮೇಲೆ ಶೀಟು ಹಾಕಿ ಶೌಚಾಲಯ ನಿರ್ಮಿಸಿದ್ದೇವೆ ಎಂದು ಹೇಳಿಕೊಂಡು ಹಣ ಪಡೆದವರೂ ಇದ್ದಾರೆ. ಹಲವೆಡೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಶಾಮೀಲಾಗಿದ್ದು, ಶೌಚಾಲಯ ನಿರ್ಮಾಣವಾಗದಿದ್ದರೂ ಬಿಲ್ ಮಾಡಿಕೊಂಡು ಹಣ ಜೇಬಿಗೆ ಇಳಿಸಿದ್ದಾರೆ. ದಾಖಲೆ ಪುಸ್ತಕದಲ್ಲಿ ಸಂಖ್ಯೆ ಮಾತ್ರ ಏರಿಕೆಯಾಗಿದೆ.

ಯೋಜನೆಗೆ ಬಹುಪಾಲು ಹಣ ನೀಡುತ್ತಿರುವ ಕೇಂದ್ರ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ‘ಶೇ ನೂರರಷ್ಟು ಗುರಿ ತಲುಪಬೇಕು. ಶೀಘ್ರ ಕಾರ್ಯಗತಗೊಳಿಸಬೇಕು’ ಎಂದು ಒತ್ತಡ ಹಾಕತೊಡಗಿತ್ತು. ಇದರ ಪರಿಣಾಮವಾಗಿ ಸ್ವಚ್ಛ ಭಾರತ್ ಮಿಷನ್ ಸಹ ಗ್ರಾಮ ಪಂಚಾಯಿತಿಗಳ ಮೇಲೆ ಒತ್ತಡ ಹಾಕಿತ್ತು. ಕಾರ್ಯದರ್ಶಿಗಳು, ಅಭಿವೃದ್ಧಿ ಅಧಿಕಾರಿಗಳ ಮೇಲೆ ಒತ್ತಡ ಹೆಚ್ಚಾದಂತೆ ಗುರಿ ಸಾಧನೆಯಾಗಿದೆ ಎಂಬುದನ್ನು ತೋರಿಸಲು ದಾಖಲೆ ಸರಿಪಡಿಸುವ ಕೆಲಸ ನಡೆಯಿತು. ಶೌಚಾಲಯ ನಿರ್ಮಾಣಕ್ಕೆ ನೋಂದಾಯಿಸಿಕೊಂಡಿದ್ದವರ ಹೆಸರು ಕೈಬಿಟ್ಟು, ಬಹುತೇಕ ಗುರಿ ಸಾಧಿಸಲಾಗಿದೆ ಎಂದು ದಾಖಲೆಯಲ್ಲಿ ನಮೂದಿಸಿ ಸಾಧನೆ ಮೆರೆದಿದ್ದಾರೆ ಎನ್ನಲಾಗಿದೆ.

ಗ್ರಾಮೀಣ ಪ್ರದೇಶದಲ್ಲಿ ಶೌಚಾಲಯ ಇಲ್ಲದ ಒಟ್ಟು ಕುಟುಂಬಗಳಲ್ಲಿ ಶೇ 70ರಷ್ಟು ಮಂದಿ ನಿರ್ಮಿಸಿಕೊಂಡಿದ್ದರೆ. ದಾಖಲೆ ಬಿಟ್ಟು ವಾಸ್ತವಿಕ ನೆಲೆಗಟ್ಟಿನಲ್ಲಿ ನೋಡಬೇಕು. ಉಳಿದವರಿಗೂ ಶೌಚಾಲಯ ನಿರ್ಮಿಸಿಕೊಡುವ ಪ್ರಯತ್ನಿಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಪ್ರಸನ್ನ ಒತ್ತಾಯಿಸುತ್ತಾರೆ.

ಇನ್ನೂ ಉಳಿದಿವೆ

ಈ ವರ್ಷ ಮತ್ತೆ ಸಮೀಕ್ಷೆ ನಡೆಸಲಾಗಿದ್ದು, 3.48 ಲಕ್ಷ ಕುಟುಂಬಗಳು ಗೃಹ ಶೌಚಾಲಯ ಹೊಂದದಿರುವುದು ಪತ್ತೆಯಾಗಿದೆ. ಅದರಲ್ಲಿ 1.8 ಲಕ್ಷ ಶೌಚಾಲಯಗಳ ನಿರ್ಮಾಣ ಪೂರ್ಣಗೊಂಡಿದ್ದು, ಉಳಿದವು ಪ್ರಗತಿ ಹಂತದಲ್ಲಿವೆ.

ನಿರ್ಮಾಣಕ್ಕೆ ₹12 ಸಾವಿರ

ಪ್ರತಿ ಶೌಚಾಲಯ ನಿರ್ಮಾಣಕ್ಕೆ ₹12 ಸಾವಿರ ಹಾಗೂ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ₹15 ಸಾವಿರ (ರಾಜ್ಯ ಸರ್ಕಾರ ಹೆಚ್ಚುವರಿಯಾಗಿ ₹ 3 ಸಾವಿರ ಸೇರಿ) ನೀಡಲಾಗುತ್ತಿದೆ.

ಬಿಪಿಎಲ್ ವ್ಯಾಪ್ತಿಯಲ್ಲಿ ಬರುವ ಕುಟುಂಬಗಳು, ಪರಿಶಿಷ್ಟ ಜಾತಿ ಹಾಗೂ ವರ್ಗದ ಕುಟುಂಬಗಳು ವೈಯಕ್ತಿಕ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರೋತ್ಸಾಹ ಧನ ಕೊಡಲಾಗುತ್ತಿದೆ. ಕೇಂದ್ರ ಸರ್ಕಾರ ₹7200 ಹಾಗೂ ರಾಜ್ಯ ಸರ್ಕಾರ ₹4800 ಸೇರಿ ಒಟ್ಟು ₹12 ಸಾವಿರ ನೀಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT