ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಕೋವಿಡ್-19 ನಾಗಾಲೋಟ, 93ಕ್ಕೇರಿದ ಸೋಂಕಿತರ ಸಂಖ್ಯೆ

ಮುಂಬೈನಿಂದ ವಲಸೆ ಕಾರ್ಮಿಕರು ವಾಪಾಸ್: ಮೂರು ದಿನಗಳಲ್ಲಿ ಗಗನಮುಖಿಯಾದ ಸೋಂಕಿತರ ಸಂಖ್ಯೆ
Last Updated 23 ಮೇ 2020, 9:28 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಂಬೈನಿಂದ ಇತ್ತೀಚೆಗಷ್ಟೇ ಜಿಲ್ಲೆಗೆ ವಾಪಸಾಗಿರುವ ವಲಸೆ ಕಾರ್ಮಿಕರ ಪೈಕಿ ಶನಿವಾರ ಬಾಗೇಪಲ್ಲಿ ತಾಲ್ಲೂಕಿನ 8 ಮತ್ತು‌ ಗೌರಿಬಿದನೂರು ತಾಲ್ಲೂಕಿನ 12 ಜನರಲ್ಲಿ ಕೋವಿಡ್ ದೃಢಪಟ್ಟಿದೆ. ಇದರಿಂದ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 93ಕ್ಕೆ ಏರಿದೆ.
ಮಹಾರಾಷ್ಟ್ರ ರಾಜ್ಯದಿಂದ ವಾಪಸಾದವರಿಂದ ಜಿಲ್ಲೆಯಲ್ಲಿ ಮೂರು ದಿನಗಳಲ್ಲಿ ಕೋವಿಡ್‌– 19 ಪ್ರಕರಣಗಳು ಗಗನಮುಖಿಯಾಗಿವೆ.

ಮುಂಬೈನಿಂದ ಮೇ 19 ರಂದು ಜಿಲ್ಲೆಗೆ ಗೌರಿಬಿದನೂರು ತಾಲ್ಲೂಕಿನ 138 ಮತ್ತು ಬಾಗೇಪಲ್ಲಿ ತಾಲ್ಲೂಕಿನ 109 ಜನರು ಸೇರಿದಂತೆ 247 ಜನರು ವಾಪಸಾಗಿದ್ದಾರೆ. ಅವರನ್ನೆಲ್ಲ ಜಿಲ್ಲಾಡಳಿತ ತುಂಬಾ ಮುತುವರ್ಜಿಯಿಂದ ವಿವಿಧೆಡೆ ಕ್ವಾರಂಟೈನ್‌ಗೆ ಒಳಪಡಿಸಿದೆ.

ಇವರ ಪೈಕಿ ಎರಡು ದಿನಗಳಲ್ಲಿ ಗೌರಿಬಿದನೂರು ತಾಲ್ಲೂಕಿನ 47 ಜನರಿಗೆ ಕೋವಿಡ್‌ ತಗುಲಿರುವುದು ಪತ್ತೆಯಾಗಿತ್ತು. ಇದೀಗ ಮತ್ತೆ 15 ಪುರುಷರು ಮತ್ತು 5 ಮಹಿಳೆಯರಲ್ಲಿ ಕೋವಿಡ್ ಪತ್ತೆಯಾಗಿರುವುದು ಜಿಲ್ಲೆಯ ಜನರನ್ನು ಬೆಚ್ಚಿ ಬೀಳಿಸಿದೆ‌.

ಎರಡು ದಿನಗಳಲ್ಲಿ ವರದಿಯಾದ ಮುಂಬೈ ವಾಪಸ್ಸಿಗರ ಪ್ರಕರಣಗಳಲ್ಲಿ 25 ಪುರುಷರು ಮತ್ತು 22 ಮಹಿಳೆಯರು ಸೇರಿದ್ದಾರೆ. ಆತಂಕದ ವಿಚಾರವೆಂದರೆ ಒಂದು ವರ್ಷ ಹೆಣ್ಣು ಮಗು ಸೇರಿದಂತೆ ಆರೇಳು ಮಕ್ಕಳಲ್ಲಿ ಕೂಡ ಕೋವಿಡ್‌ ಪತ್ತೆಯಾಗಿದೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಈಗಾಗಲೇ ಮುಂಬೈನಿಂದ ವಾಪಸ್ಸಾದವರ ಗಂಟಲು ದ್ರವದ ಮಾದರಿಗಳನ್ನು ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಿದ್ದು, ಈವರೆಗೆ 63 ಜನರಲ್ಲಿ ಯಾವುದೇ ಸೋಂಕು ಪತ್ತೆಯಾಗಿಲ್ಲ. ಇನ್ನೂ 139 ಜನರ ಮಾದರಿಗಳ ಫಲಿತಾಂಶವನ್ನು ಅಧಿಕಾರಿಗಳು ಎದುರು ನೋಡುತ್ತಿದ್ದು, ಅದರಲ್ಲಿ ಎಷ್ಟು ಜನರಿಗೆ ಕೋವಿಡ್‌ ತಗುಲಿರುತ್ತದೆ ಎಂಬ ಭೀತಿ ಆವರಿಸಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರು, ಚಿಕ್ಕಬಳ್ಳಾಪುರ ಮತ್ತು ಚಿಂತಾಮಣಿಯಲ್ಲಿ ಮಾತ್ರ ಕೋವಿಡ್‌ ಪ್ರಕರಣಗಳು ವರದಿಯಾಗಿದ್ದವು. ಇದೀಗ ವಲಸಿಗರ ವಾಪಸ್ಸಾತಿಯಿಂದ ಬಾಗೇಪಲ್ಲಿ ತಾಲ್ಲೂಕಿನಲ್ಲಿ ಕೂಡ ಕೋವಿಡ್‌ ಕಾಣಿಸಿಕೊಂಡಿದೆ.

ಜಿಲ್ಲೆಯಲ್ಲಿ ಈವರೆಗೆ ಗೌರಿಬಿದನೂರಿನ 71, ಚಿಕ್ಕಬಳ್ಳಾಪುರದ 9, ಚಿಂತಾಮಣಿಯ 5 ಮತ್ತು ಬಾಗೇಪಲ್ಲಿಯ 8 ಜನರು ಸೇರಿದಂತೆ 93 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದೆ. ಕೆಲವೇ ದಿನಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 150 ಗಡಿ ದಾಟಲಿದೆ ಎಂಬ ಅಂದಾಜು ಆರೋಗ್ಯ ಇಲಾಖೆ ಸಿಬ್ಬಂದಿ ಮತ್ತು ಜಿಲ್ಲಾಡಳಿತದ ನಿದ್ದೆಗೆಡಿಸಿದೆ.

ಈವರೆಗೆ ಜಿಲ್ಲೆಯಲ್ಲಿ ಕೋವಿಡ್‌ನಿಂದ ಇಬ್ಬರು (ಗೌರಿಬಿದನೂರು, ಚಿಕ್ಕಬಳ್ಳಾಪುರದ ತಲಾ ಒಬ್ಬರು) ಮೃತಪಟ್ಟಿದ್ದಾರೆ. ಉಳಿದಂತೆ 18 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸದ್ಯ ಜಿಲ್ಲಾ ಆಸ್ಪತ್ರೆಯ ಕೋವಿಡ್‌ ವಾರ್ಡ್‌ನಲ್ಲಿ 73 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT