ಮಂಗಳವಾರ, ಜುಲೈ 14, 2020
28 °C
ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ ಮನವಿ

ತೆರಿಗೆ, ಜಿಎಸ್‌ಟಿ ರದ್ದು ಮಾಡಿ: ಪ್ರವಾಸೋದ್ಯಮ ಇಲಾಖೆ ಬೇಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಕೋವಿಡ್‌–19 ಲಾಕ್‌ಡೌನ್‌ನಿಂದಾಗಿ ಪ್ರವಾಸೋದ್ಯಮ ಕ್ಷೇತ್ರ ತೀವ್ರ ಸಂಕಷ್ಟದಲ್ಲಿ ಸಿಲುಕಿದೆ. ಆದ್ದರಿಂದ, ಜಿಎಸ್‌ಟಿ, ಪ್ರತ್ಯಕ್ಷ ಮತ್ತು ಪರೋಕ್ಷ ತೆರಿಗೆಗೆ ಒಂದು ವರ್ಷ ರಜೆ ನೀಡಬೇಕು ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.

ಪ್ರವಾಸೋದ್ಯಮ ಕ್ಷೇತ್ರದ ವಿವಿಧ ವಲಯಗಳ ಪ್ರಮುಖರ ಜತೆ ಎರಡು ಬಾರಿ ಸಭೆ ನಡೆಸಿದ ಬಳಿಕ ಅವರು  ಸಲಹೆಗಳು ಮತ್ತು ಬೇಡಿಕೆಗಳ ಪಟ್ಟಿಯನ್ನು ಸಚಿವ ರವಿ ಬುಧವಾರ ಯಡಿಯೂರಪ್ಪ ಅವರಿಗೆ ಸಲ್ಲಿಸಿದರು.

ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರ ಮೇಲೆ ವಿಧಿಸುತ್ತಿರುವ ಪ್ರವಾಸಿ ತೆರಿಗೆ, ಪರವಾನಗಿ ಶುಲ್ಕ, ನವೀಕರಣ ಶುಲ್ಕ, ಅಬಕಾರಿ ತೆರಿಗೆಯನ್ನು ರದ್ದುಪಡಿಸಬೇಕು. ಸುಮಾರು 2.50 ಲಕ್ಷ ಪ್ರವಾಸಿ ಟ್ಯಾಕ್ಸಿ ಚಾಲಕರು, ಪ್ರವಾಸಿ ಗೈಡ್‌ಗಳು ಆದಾಯವಿಲ್ಲದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇವರಿಗೆ ಆರ್ಥಿಕ ನೆರವನ್ನು ನೀಡಬೇಕು ಎಂದೂ ಮನವಿ ಮಾಡಿದರು.

ರಾಜ್ಯದ ಜಿಡಿಎಸ್‌ಪಿಗೆ ಪ್ರವಾಸೋದ್ಯಮ ಕ್ಷೇತ್ರ ಶೇ 14.8 ರಷ್ಟು ಕೊಡುಗೆ ನೀಡುತ್ತಿತ್ತು. 35 ಲಕ್ಷ ಜನ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಉದ್ಯೋಗದಲ್ಲಿದ್ದಾರೆ. ಕೋವಿಡ್‌ನಿಂದಾಗಿ ಶೇ 75 ರಷ್ಟು ಜನ ತಮ್ಮ ಊರುಗಳಿಗೆ ತೆರಳಿದ್ದಾರೆ. ಮಧ್ಯಮ ಮತ್ತು ಕೆಳಸ್ತರದ ಹೋಟೆಲ್‌ಗಳು, ಟೂರ್‌ ಮತ್ತು ಟ್ರಾವೆಲ್ಸ್‌ ಏಜೆಂಟರು ತಮ್ಮ ನೌಕರರಿಗೆ ಸಂಬಳ ಕೊಡಲು ಸಾಧ್ಯವಾಗದ ಸ್ಥಿತಿಯಲ್ಲಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಉತ್ತೇಜನಕ್ಕೆ ಕ್ರಮ: ಲಾಕ್‌ಡೌನ್‌ ಮುಗಿದ ಬಳಿಕ ಪ್ರವಾಸೋದ್ಯಮ ಕ್ಷೇತ್ರದ ಚಟುವಟಿಕೆಗಳನ್ನು ಹೆಚ್ಚಿಸಲು ಕೆಲವು ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಮುಖ್ಯವಾಗಿ, ಸ್ಥಳೀಯ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಸ್ಥಳೀಯ ಮಟ್ಟದಲ್ಲಿ ಕೆಲವು ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ‘ನೋಡು ಬಾ ನಮ್ಮೂರ’, ‘ಡೈನಿಂಗ್ ಔಟ್‌ ವಿತ್‌ ಸಿಟಿ’, ಸಿಂಗಾಪುರ‌ದಲ್ಲಿರುವ ‘ಲವ್‌ ಯುವರ್‌ ಲೋಕಲ್’ಗಳಂತಹ ವಿನೂತನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ವಿವರಿಸಿದ್ದಾರೆ.

ಅಂತರ‌ ಜಿಲ್ಲೆ ಮತ್ತು ಅಂತರ ರಾಜ್ಯ ಪ್ರವಾಸೋದ್ಯಮಕ್ಕೆ ಜನರನ್ನು ಸಜ್ಜುಗೊಳಿಸಲಾಗುವುದು. ಪ್ರವಾಸೋದ್ಯಮ ಕ್ಷೇತ್ರದ ಪುನಶ್ಚೇತನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿಕೆಯಂತಹ ಕ್ರಮ ತೆಗೆದುಕೊಳ್ಳಬೇಕಾಗಿದೆ ಎಂದೂ ಸಲಹೆ ನೀಡಿದ್ದಾರೆ. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು