ಬುಧವಾರ, ಅಕ್ಟೋಬರ್ 21, 2020
25 °C

ಸಾರಿಗೆ ನೌಕರರ ಜೂನ್ ತಿಂಗಳ ಅರ್ಧ ವೇತನ ಸರ್ಕಾರದಿಂದ ಪಾವತಿ: ಲಕ್ಷ್ಮಣ ಸವದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

prajavani

ಬಾಗಲಕೋಟೆ: ಸಾರಿಗೆ ನಿಗಮಗಳ ನೌಕರರ ಜೂನ್ ತಿಂಗಳ ವೇತನ ಬಾಬ್ತು ₹ 326 ಕೋಟಿಯಲ್ಲಿ ಅರ್ಧಭಾಗ ಸರ್ಕಾರದಿಂದಲೇ ಪಾವತಿಸಲಾಗುವುದು ಎಂದು ಸಾರಿಗೆ ಸಚಿವರೂ ಆದ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.

ಮುಧೋಳದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್-19 ಹಿನ್ನೆಲೆಯಲ್ಲಿ ಜನರು ಬಸ್‌ಗಳನ್ನು ಹತ್ತಲು ಇನ್ನೂ ಹಿಂಜರಿಯುತ್ತಿದ್ದಾರೆ. ಜೊತೆಗೆ ಸುರಕ್ಷಿತ ಅಂತರ ಕಾಯ್ದುಕೊಳ್ಳಲು  ಬಸ್‌ಗಳಲ್ಲಿ ಆಸನ ಸಾಮರ್ಥ್ಯಕ್ಕಿಂತ ಕಡಿಮೆ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯಲಾಗುತ್ರಿದೆ. ಹೀಗಾಗಿ ರಾಜ್ಯದ ನಾಲ್ಕು ಸಾರಿಗೆ ನಿಗಮಗಳು ನಷ್ಟದಲ್ಲಿವೆ. ಸರ್ಕಾರದ ನೆರವು ಪಡೆಯುವುದು ಅನಿವಾರ್ಯ ಎಂದರು.

ಕೋವಿಡ್-19 ಲಾಕ್‌ಡೌನ್ ಅವಧಿಯಲ್ಲಿ ನಾಲ್ಕು ನಿಗಮಗಳಿಗೆ ₹ 2300 ಕೋಟಿ ನಷ್ಟವಾಗಿದೆ. ಅದರಿಂದಲೂ ಚೇತರಿಸಿಕೊಳ್ಳಬೇಕಿದೆ. ಕೋವಿಡ್-19 ಸಂಕಷ್ಟ ಸಂಪೂರ್ಣ ಪರಿಹಾರವಾಗಿ ಸಾರಿಗೆ ಸಂಸ್ಥೆಯ ದೈನಂದಿನ ವಹಿವಾಟು ಸಹಜ ಸ್ಥಿತಿಗೆ ಬರುವವರೆಗೂ ನೌಕರರ ವೇತನ ಪಾವತಿಸಲು ಸರ್ಕಾರದ ನೆರವು ಪಡೆಯುವ ಬಗ್ಗೆ ಅದಕ್ಕೆ ವಿಶೇಷ ನಿಧಿ ಸ್ಥಾಪಿಸುವ ಕುರಿತು ಸಿಎಂ ಜೊತೆ ಚರ್ಚಿಸಿ ಶೀಘ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಜೂನ್ ತಿಂಗಳು ಸೇರಿದಂತೆ ಮುಂದಿನ ದಿನಗಳಲ್ಲಿ ವೇತನದ ಬಗ್ಗೆ ಸಾರಿಗೆ ಸಂಸ್ಥೆ ನೌಕರರು ಚಿಂತಿಸುವ ಅಗತ್ಯವಿಲ್ಲ. ಯಾರಿಗೂ ಸಂಬಳ ಕಡಿತ ಮಾಡುವುದಿಲ್ಲ. ಎಲ್ಲರಿಗೂ ನಿಗದಿತ ಅವಧಿಯಲ್ಲಿಯೇ ಸಂಬಳ ನೀಡಲಾಗುವುದು ಎಂದು ಭರವಸೆ ನೀಡಿದರು.

ಸಾರಿಗೆ ಸಂಸ್ಥೆಯಲ್ಲಿ ವೆಚ್ಚ ಕಡಿತದ ಕಾರಣಕ್ಕೆ ಸಿಬ್ಬಂದಿ ಕಡಿತಗೊಳಿಸುವ ಇಲ್ಲವೇ ಗುತ್ತಿಗೆ ನೌಕರರನ್ನು ಮನೆಗೆ ಕಳಿಸುವ ಯಾವುದೇ ಪ್ರಸ್ತಾಪ ಇಲ್ಲ. ಎಲ್ಲರೂ ನಿಶ್ಚಿಂತೆಯಾಗಿ ಕೆಲಸ ಮಾಡಬಹುದು ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು