ಗುರುವಾರ , ಫೆಬ್ರವರಿ 25, 2021
24 °C
ಐಷಾರಾಮಿ ಹೊಟೇಲ್‌ಗಳಲ್ಲಿ ವಾಸ್ತವ್ಯ

‘ಗೌಡಾ’ ಸ್ವೀಕಾರಕ್ಕೆ ವಿಮಾನದಲ್ಲಿ ಪ್ರಯಾಣ; ಸ್ನೇಹಿತರೊಂದಿಗೆ ಮೋಜು–ಮಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ತುಮಕೂರು: ಜಿಲ್ಲೆಯಲ್ಲಿನ ಕೆಲ ವ್ಯಾಪಾರಸ್ಥರು, ಅರ್ಚಕರು, ಉದ್ಯಮಿಗಳು, ರೈತ ಸಂಘಟನೆ ಮುಖಂಡರು, ಸಾಹಿತಿಗಳು ಸೇರಿದಂತೆ ವಿವಿಧ ವೃತ್ತಿಯ ಜನ ತರಹೇವಾರಿ ಖಾಸಗಿ ವಿಶ್ಚವಿದ್ಯಾಲಯಗಳಿಂದ ಗೌರವ ಡಾಕ್ಟರೇಟ್ (ಗೌಡಾ) ಪಡೆದು ಬೀಗುತ್ತಿದ್ದಾರೆ.

ತಮಿಳುನಾಡು, ಅಮೆರಿಕ, ಗೋವಾ ಮೂಲದ ಖಾಸಗಿ ಶಿಕ್ಷಣ ಸಂಸ್ಥೆ, ವಿವಿಗಳಿಂದ ಗೌರವ ಡಾಕ್ಟರೇಟ್ ಪಡೆದಿದ್ದಾರೆ.

ಎರಡು ವರ್ಷಗಳಲ್ಲಿ ತುಮಕೂರು ನಗರದಲ್ಲಿ ವ್ಯಾಪಾರಸ್ಥರು, ಸಾಹಿತಿಗಳು, ಉದ್ಯಮಿಗಳು ಗೌಡಾ ಪಡೆದಿದ್ದರೆ, ಕುಣಿಗಲ್ ತಾಲ್ಲೂಕಿನಲ್ಲಿ ಅರ್ಚಕರು, ವಾದ್ಯ ಕಲಾವಿದರು, ಕಬಡ್ಡಿ ಆಟಗಾರರು ‘ಗೌಡಾ’ ಪಡೆದಿದ್ದಾರೆ.

ಧಾರ್ಮಿಕ ಕ್ಷೇತ್ರದಲ್ಲಿ ತಾವು ಮಾಡಿದ ಕಾರ್ಯ ಗಮನಿಸಿ ಗೌಡಾ ಪ್ರದಾನ ಮಾಡಲಾಗಿದೆ. ಬೇರೆ ರಾಜ್ಯ, ದೇಶದವರು ಗುರುತಿಸಿ ಗೌಡಾ ಕೊಟ್ಟಿದ್ದು, ಅದನ್ನು ಹೇಗೆ ತಿರಸ್ಕರಿಸಲಾದೀತು ಎಂದು ಸ್ನೇಹಿತರು, ಭಕ್ತರೆದುರು ಹೇಳಿಕೊಂಡಿದ್ದಾರಂತೆ.

ಶಿರಾದ ಇಬ್ಬರು ನಿವೃತ್ತ ಪ್ರಾಂಶುಪಾಲರು, ನಗರಸಭೆ ಮಾಜಿ ಅಧ್ಯಕ್ಷರೊಬ್ಬರಿಗೆ ಗೌಡಾ ಪಡೆಯಬೇಕು ಎಂಬ ಅಭಿಲಾಷೆ ಇತ್ತು. ಇವೆರಲ್ಲರ ಆಸೆಯನ್ನು ಅಮೆರಿಕ ಮೂಲದ ವಿವಿ ಈಡೇರಿಸಿದೆ.

ಗೌಡಾ ಪಡೆದವರಲ್ಲಿ ಕೆಲವರು ಹೈದರಾಬಾದ್, ಚೆನ್ನೈಗೆ ವಿಮಾನದಲ್ಲಿ ಸ್ನೇಹಿತರೊಂದಿಗೆ ತೆರಳಿ ಪದವಿ ಪಡೆದಿದ್ದಾರೆ. ಜೊತೆಗೆ ಐಷಾರಾಮಿ ಹೊಟೇಲ್‌ಗಳಲ್ಲಿ ಉಳಿದುಕೊಂಡು, ಪಾರ್ಟಿ ಮಾಡಿದ್ದಾರೆ. ಇಂತಹವರಿಗೆ ಬಂಧುಗಳು, ಸ್ನೇಹಿತರು, ಸಂಘ ಸಂಸ್ಥೆಯವರು ಸನ್ಮಾನ  ಮಾಡಿದ್ದಾರೆ.

ಹೊರ ರಾಜ್ಯ, ಹೊರ ದೇಶದವರು ಗೌಡಾ ನೀಡಿ ಗೌರವಿಸಿದರೂ ಮಾಧ್ಯಮದ ಕೆಲವರು ತಮ್ಮನ್ನು  ಗುರುತಿಸಿಲ್ಲ ಎಂದು ಗೌಡಾ ಪಡೆದ ವ್ಯಕ್ತಿ ತಮ್ಮ ಬಳಿ ಹೇಳಿಕೊಂಡಿದ್ದನ್ನು ಅವರ ಸ್ನೇಹಿತರೊಬ್ಬರು ’ಪ್ರಜಾವಾಣಿ’ಗೆ ತಿಳಿಸಿದರು.

 ಪ್ರತಿ ತಾಲ್ಲೂಕಿನಲ್ಲೂ ಒಬ್ಬರು ಭಾಜನ

ರಾಯಚೂರು: ಜಿಲ್ಲೆಯಲ್ಲಿ ಖಾಸಗಿ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್‌ ಪಡೆದವರು ಪ್ರತಿ ತಾಲ್ಲೂಕಿನಲ್ಲಿ ಒಬ್ಬರು ಮತ್ತು ರಾಯಚೂರು ನಗರದಲ್ಲಿ ಇಬ್ಬರಿದ್ದಾರೆ.

ನಗರಸಭೆ ಹಿರಿಯ ಸದಸ್ಯರೊಬ್ಬರು ದುಬೈನ ಪ್ರತಿಷ್ಠಿತ ಕಿಂಗ್ಡಮ್ ಟೊಂಗಾ ಕಾಮನ್ ವೆಲ್ತ್ ಒಕೇಷನಲ್ ವಿಶ್ವವಿದ್ಯಾಲಯದಿಂದ ಕಳೆದ ವರ್ಷ ಗೌರವ ಡಾಕ್ಟರೇಟ್ ಪಡೆದಿದ್ದಾರೆ. ಶಕ್ತಿನಗರದಲ್ಲಿ ರಂಗಭೂಮಿ ಕಲಾವಿದರೊಬ್ಬರು ಬೆಂಗಳೂರಿನ ಖಾಸಗಿ ವಿಶ್ವವಿದ್ಯಾಲಯದಿಂದ ಈಚೆಗೆ ಗೌರವ ಡಾಕ್ಟರೇಟ್‌ ಪಡೆದಿದ್ದಾರೆ.

ಇವನ್ನೂ ಓದಿ:

* ಗೌರವ ಡಾಕ್ಟರೇಟ್‌ ಪದವಿ ಸಂಭ್ರಮ: ಪರಿಶ್ರಮವಿಲ್ಲದೆ ಪದವಿ ಸಂಪಾದನೆ
* ಆಸಾಮಿ ನೋಡಿ ರೇಟು ಫಿಕ್ಸ್‌
* ವರ್ಷದಲ್ಲಿ ಚಿಕ್ಕಬಳ್ಳಾಪುರಕ್ಕೆ 13 ‘ಗೌಡಾ’
* ಸ್ವಾಮೀಜಿ, ಎಫ್‌ಡಿಎ,ದಿನಸಿ ವ್ಯಾಪಾರಿಯೂ ‘ಸಾಧಕರು’!
* ಕಟೌಟ್‌ಗಳ ಭರಾಟೆ
* ಫೋನುಗಳೆಲ್ಲ ಸ್ವಿಚ್ಡ್‌ ಆಫ್!
ಗೊತ್ತಿಲ್ಲದ ವಿ.ವಿಗಳ ಗೌರವ ಡಾಕ್ಟರೇಟ್‌
* ಮೈಸೂರು ಜಿಲ್ಲೆಯಲ್ಲೂ ಆರ್ಭಟ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು