ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೋಟೆಲ್‌, ವಸತಿ ಗೃಹಗಳಲ್ಲಿ ನೀರಿಲ್ಲ: ಉಡುಪಿ– ಪ್ರವಾಸೋದ್ಯಮಕ್ಕೆ ಹೊಡೆತ

ಟ್ಯಾಂಕರ್ ನೀರಿನ ಅವಲಂಬನೆ
Last Updated 11 ಮೇ 2019, 4:55 IST
ಅಕ್ಷರ ಗಾತ್ರ

ಉಡುಪಿ: ಕರಾವಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಪ್ರವಾಸೋದ್ಯಮಕ್ಕೆ ದೊಡ್ಡ ಪೆಟ್ಟು ಬಿದ್ದಿದೆ. ಹೋಟೆಲ್‌ಗಳು, ವಸತಿಗೃಹಗಳಲ್ಲಿ ನೀರಿಲ್ಲದೆ ಬಾಗಿಲು ಮುಚ್ಚುವ ಹಂತ ತಲುಪಿವೆ.

ಧಾರ್ಮಿಕ ಹಾಗೂ ಸಾಂಸ್ಕೃತಿಕವಾಗಿ ಶ್ರೀಮಂತವಾಗಿರುವ ಉಡುಪಿಗೆಪ್ರತಿವರ್ಷ ಲಕ್ಷಾಂತರ ಪ್ರವಾಸಿಗರು ಭೇಟಿ ನೀಡುತ್ತಾರೆ. ಪ್ರವಾಸೋದ್ಯಮ ಕರಾವಳಿಯ ಆರ್ಥಿಕತೆಯ ಬೆನ್ನೆಲುಬು. ಆದರೆ, ನೀರಿನ ಸಮಸ್ಯೆಯಿಂದ ಪ್ರವಾಸೋದ್ಯಮ ಸಂಕಷ್ಟಕ್ಕೆ ಸಿಲುಕಿದೆ.

ಉಡುಪಿ ನಗರ, ಮಲ್ಪೆ, ಮಣಿಪಾಲ್ ವ್ಯಾಪ್ತಿಯಲ್ಲಿ 600ಕ್ಕೂ ಹೆಚ್ಚು ಹೋಟೆಲ್‌ಗಳಿವೆ. ನಗರಕ್ಕೆ ನೀರು ಪೂರೈಸುವ ಬಜೆ ಜಲಾಶಯ ಬರಿದಾಗಿರುವುದರಿಂದ ಐದಾರು ದಿನಗಳಿಂದ ನಗರಸಭೆಯಿಂದ ನೀರು ಪೂರೈಕೆಯಾಗುತ್ತಿಲ್ಲ. ಪರಿಣಾಮ ಬಹುತೇಕ ಹೋಟೆಲ್‌ಗಳು ಟ್ಯಾಂಕರ್ ನೀರಿನ ಮೇಲೆ ಅವಲಂಬಿತವಾಗಿವೆ ಎನ್ನುತ್ತಾರೆ ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ.

ಹೋಟೆಲ್‌ವೊಂದಕ್ಕೆ ನಿತ್ಯ ಕನಿಷ್ಠ 2 ಟ್ಯಾಂಕರ್ ನೀರು ಅಗತ್ಯವಿದ್ದು, 12 ಸಾವಿರ ಲೀಟರ್ ಸಾಮರ್ಥ್ಯದ ಟ್ಯಾಂಕರ್‌ಗೆ ₹3 ಸಾವಿರದಿಂದ ₹5 ಸಾವಿರ ಭರಿಸಬೇಕಿದೆ. ಲಾಭವೆಲ್ಲ ನೀರಿಗೆ ವ್ಯಯವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೋಟೆಲ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.

ಪರ್ಯಾಯ ನೀರಿನ ಮೂಲಗಳಾಗಿದ್ದ ಬಾವಿಗಳು, ಬೋರ್‌ವೆಲ್‌ಗಳು ಬರಿದಾಗಿವೆ. ಟ್ಯಾಂಕರ್ ನೀರಿಗೆ ದುಬಾರಿ ದರ ತೆರಲು ಸಿದ್ಧವಾಗಿದ್ದರೂ ನೀರಿನ ಮೂಲಗಳು ಸಿಗುತ್ತಿಲ್ಲ ಎಂದು ಜೀವಜಲದ ಸಮಸ್ಯೆಯನ್ನು ತೆರೆದಿಟ್ಟರು.

ವಸತಿ ಗೃಹಗಳಲ್ಲೂ ಪ್ರವಾಸಿಗರಿಗೆ ನೀರು ಒದಗಿಸಲು ಲಾಡ್ಜ್‌ ಮಾಲೀಕರು ಹರಸಾಹಸ ಪಡುತ್ತಿದ್ದಾರೆ. ನೀರನ್ನು ಮಿತವಾಗಿ ಬಳಸುವಂತೆ ಗ್ರಾಹಕರಿಗೆ ಮೌಖಿಕವಾಗಿ ಸೂಚನೆ ನೀಡಲಾಗುತ್ತಿದೆ. ನಿರ್ದಿಷ್ಟ ಸಮಯದಲ್ಲಿ ಮಾತ್ರ ನೀರು ಬಿಡಲಾಗುತ್ತಿದೆ ಎನ್ನುತ್ತಾರೆ ಅಲ್ಲಿನ ಸಿಬ್ಬಂದಿ.

ಕಳೆದ ಮಳೆಗಾಲದಲ್ಲಿ ಹಿಂಗಾರು ಕೈಕೊಟ್ಟ ಕಾರಣ ಕುಡಿಯುವ ನೀರಿನ ಸಮಸ್ಯೆ ಗಂಭೀರವಾಗಿದೆ. ಮಳೆ ಬಿದ್ದರೆ ಮಾತ್ರ ಸಮಸ್ಯೆ ಬಗೆಹರಿಯಲಿದೆ ಎನ್ನುತ್ತಾರೆ ಹೋಟೆಲ್ ಮಾಲೀಕರು.

ಕೃಷ್ಣಮಠಕ್ಕೂ ತಟ್ಟಿದ ನೀರಿನ ಸಮಸ್ಯೆ ಬಿಸಿ
ಪ್ರತಿದಿನ ಕೃಷ್ಣ ಮಠಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ದಾಸೋಹದ ವ್ಯವಸ್ಥೆ ಮಾಡಲು ನೀರಿನ ಸಮಸ್ಯೆ ಎದುರಾಗಿದೆ. ಮಠದಲ್ಲಿರುವ ಬಾವಿಗಳ ನೀರನ್ನು ಅನ್ನಪ್ರಸಾದಕ್ಕೆ ಬಳಸಲಾಗುತ್ತಿದೆ. ಆದರೂ ನೀರು ಸಾಲುತ್ತಿಲ್ಲ. ಪ್ರತಿದಿನ ಮೂರ್ನಾಲ್ಕು ಟ್ಯಾಂಕರ್ ನೀರು ಖರೀದಿಸಲಾಗುತ್ತಿದೆ ಎಂದು ಪಲಿಮಾರು ಮಠದ ಸಾರ್ವಜನಿಕ ಸಂಪರ್ಕಾಧಿಕಾರಿ ಶ್ರೀಶ ಭಟ್ ಕಡೆಕಾರ್ ತಿಳಿಸಿದರು.

ಮಂಗಳೂರು: ನೀರಿಗೆ ರೇಷನಿಂಗ್‌
ಮಂಗಳೂರು: ತುಂಬೆ ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಕುಸಿದಿರುವ ಕಾರಣದಿಂದ ನಗರದಲ್ಲಿ ನೀರು ಪೂರೈಕೆಯಲ್ಲಿ ರೇಷನಿಂಗ್‌ ಜಾರಿಯಲ್ಲಿದೆ. ಶುಕ್ರವಾರ ಅಣೆಕಟ್ಟೆಯಲ್ಲಿನ ನೀರಿನ ಸಂಗ್ರಹ 4.1 ಮೀಟರ್‌ಗೆ ಇಳಿದಿದ್ದು, ಮಳೆ ಬಾರದಿದ್ದಲ್ಲಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುವ ಸಾಧ್ಯತೆ ಇದೆ.

ಈಗ ನಿರಂತರ ನಾಲ್ಕು ದಿನಗಳ ಕಾಲ ನೀರು ಪೂರೈಸಿ, ಎರಡು ದಿನಗಳ ಕಾಲ ಸತತ ಬಿಡುವು ನೀಡುವ ರೇಷನಿಂಗ್‌ ವ್ಯವಸ್ಥೆ ಜಾರಿಯಲ್ಲಿದೆ. ನೀರಿನ ಮಟ್ಟದ ಕುಸಿತ ಮುಂದುವರಿದಲ್ಲಿ ಜಿಲ್ಲಾಧಿಕಾರಿ ಅವರ ಜೊತೆ ಚರ್ಚಿಸಿ ನೀರು ಪೂರೈಕೆಗೆ ಬಿಡುವು ನೀಡುವ ಅವಧಿಯನ್ನು ವಿಸ್ತರಿಸುವ ಕುರಿತು ತೀರ್ಮಾನಕ್ಕೆ ಬರಲಾಗುವುದು ಎಂದು ಮಹಾನಗರ ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.

**
ಪಾತ್ರೆ ತೊಳೆಯಲು ಹೆಚ್ಚು ನೀರು ಬೇಕಾಗಿರುವ ಕಾರಣ ಸ್ಟೀಲ್‌ ತಟ್ಟೆ, ಲೋಟದ ಬದಲಾಗಿ ಕಾಗದದ ಲೋಟ, ಬಾಳೆ ಎಲೆ ಬಳಸಲಾಗುತ್ತಿದೆ.
-ರಾಘವೇಂದ್ರ, ಹೋಟೆಲ್‌ ಮಾಲೀಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT