ಬುಧವಾರ, ಮಾರ್ಚ್ 3, 2021
23 °C
25 ಲಕ್ಷ ಖರ್ಚು ಮಾಡಿ ಲೀಲಾ ಪ್ಯಾಲೆಸ್‌ ಹೋಟೆಲ್‌ನಲ್ಲಿ ಸಭೆ ಆಯೋಜಿಸಿದ್ದ ಸರ್ಕಾರ

ಬರ ಚರ್ಚೆಗೆ ಐಷಾರಾಮಿ ಹೋಟೆಲ್‌: ವಿರೋಧ ಪಕ್ಷಗಳ ಟೀಕೆ, ಸಂಸದರ ಸಭೆ ಸ್ಥಳ ಬದಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬರದ ಚರ್ಚೆ ನಡೆಸಲು ಐಷಾರಾಮಿ ಹೋಟೆಲ್‌ನಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡುತ್ತಿರುವ ಬಗ್ಗೆ ವಿಪಕ್ಷಗಳಿಂದ ವಿರೋಧ ವ್ಯಕ್ತವಾಗುತ್ತಿದ್ದಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ, ಸಭೆಯನ್ನು ಕರ್ನಾಟಕ ಭವನಕ್ಕೆ ಸ್ಥಳಾಂತರಿಸಿ ಸಂದೇಶ ರವಾನಿಸಿದ್ದಾರೆ.  

ರಾಜ್ಯದಲ್ಲಿನ ಬರದ ಸಮಸ್ಯೆ, ಮುಂಗಾರು ವೈಫಲ್ಯದಿಂದ ಉಂಟಾಗಿರುವ ಹಾನಿ ಕುರಿತು ಸಮಾಲೋಚನೆಗೆ ನವದೆಹಲಿಯ ಪಂಚತಾರಾ ಹೋಟೆಲ್‌ನಲ್ಲಿ ಸಭೆ ಆಯೋಜಿಸಿ ಸರ್ವ ಪಕ್ಷಗಳ ಸಂಸದರನ್ನು ಆಹ್ವಾನಿಸಲಾಗಿತ್ತು. ಲೀಲಾ ಪ್ಯಾಲೆಸ್‌ ಹೋಟೆಲ್‌ನಲ್ಲಿ ಸಭೆ ಆಯೋಜಿಸುವ ಮೂಲಕ ದುಂದುವೆಚ್ಚ ಮಾಡುತ್ತಿರುವುದಾಗಿ ವಿಪಕ್ಷಗಳ ಮುಖಂಡರು ಜರಿದಿದ್ದರು. ಈ ಬಗ್ಗೆ ಪ್ರಜಾವಾಣಿ ವಿಶೇಷ ವರದಿ ಪ್ರಕಟಿಸಿತ್ತು. 

ಭಾನುವಾರ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಂಸದರಿಗೆ ಕಳುಹಿಸಿರುವ ಸಂದೇಶದಲ್ಲಿ ’ಆಗಸ್ಟ್‌ 6ರಂದು ಸಂಜೆ ಏಳು ಗಂಟೆಗೆ  ಸಭೆ ಮತ್ತು ರಾತ್ರಿ ಭೋಜನಕ್ಕೆ ನಿಗದಿಪಡಿಸಿದ್ದ ಸ್ಥಳ ಬದಲಾವಣೆ ಮಾಡಲಾಗಿದೆ. ದಿ ಲೀಲಾ ಪ್ಯಾಲೆಸ್‌ ಹೋಟೆಲ್‌ ಬದಲು ಚಾಣಕ್ಯಪುರಿಯ ಕೌಟಿಲ್ಯ ಮಾರ್ಗ್‌ನಲ್ಲಿರುವ ಕರ್ನಾಟಕ ಭವನ(ಕಾವೇರಿ)ದಲ್ಲಿ ಆಯೋಜಿಸಲಾಗಿದೆ’ ಎಂದು ತಿಳಿಸಲಾಗಿದೆ. 

ಲೋಕಸಭೆ ಮತ್ತು ರಾಜ್ಯಸಭೆಯ ಸದಸ್ಯರೊಂದಿಗೆ ಮುಖ್ಯಮಂತ್ರಿ ರಾಜ್ಯದ ಅಭಿವೃದ್ಧಿ ಸಂಬಂಧ ಚರ್ಚೆ ನಡೆಸಲು ಉದ್ದೇಶಿಸಿದ್ದಾರೆ. ರಾಜ್ಯದಲ್ಲಿ ಬಾಕಿ ಉಳಿದಿರುವ ಯೋಜನೆಗಳು, ಕೇಂದ್ರದಿಂದ ಬರಬೇಕಾದ ಅನುದಾನ ಹಾಗೂ 100ಕ್ಕೂ ಹೆಚ್ಚು ತಾಲ್ಲೂಕುಗಳಲ್ಲಿ ಉಂಟಾಗಿರುವ ಬರ ಸ್ಥಿತಿಯನ್ನು ಎದುರಿಸಲು ಕೇಂದ್ರದಿಂದ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಒತ್ತಡ ಹೇರಲು ಸಂಸದರಲ್ಲಿ ಮನವಿ ಮಾಡಲು ಮುಖ್ಯಮಂತ್ರಿ ಸಭೆ ಕರೆದಿದ್ದಾರೆ. 

ಎರಡು ಗಂಟೆಗಳ ಸಭೆಯಲ್ಲಿ ಲೋಕಸಭೆಯ 28 ಹಾಗೂ ರಾಜ್ಯಸಭೆಯ 12 ಸದಸ್ಯರು ಸೇರಿದಂತೆ ರಾಜ್ಯದ ಒಟ್ಟು 40 ಸಂಸದರು ಭಾಗವಹಿಸುವ ಸಭೆಯಲ್ಲಿ ಅವರ ಸಹಾಯಕರು, ಅಧಿಕಾರಿಗಳು ಮತ್ತು ಅವರ ಸಹಾಯಕರು, ಮಾಧ್ಯಮ ಪ್ರತಿನಿಧಿಗಳು ಸೇರಿದಂತೆ ಕನಿಷ್ಠ 200 ಜನ ಭಾಗವಹಿಸುವ ನಿರೀಕ್ಷೆ ಇದೆ. ಪಂಚತಾರಾ ಹೊಟೇಲ್‌ನಲ್ಲಿ ಇದಕ್ಕೆ ಸುಮಾರು ₹25 ಲಕ್ಷ ವೆಚ್ಚವಾಗುತ್ತದೆ, ಇಂಥ ಅನವಶ್ಯಕ ವೆಚ್ಚ ಯಾವ ಕಾರಣಕ್ಕೆ? ಎಂದು ವಿಪಕ್ಷಗಳ ಸಂಸದರು ಪ್ರಶ್ನಿಸಿದ್ದರು. 

'ರಾಜ್ಯದ ಆರ್ಥಿಕ ಸ್ಥಿತಿ ಸರಿಯಿಲ್ಲ ಎಂದು ಹೇಳುವ ಮುಖ್ಯಮಂತ್ರಿಯವರೇ ಪಂಚತಾರಾ ಹೋಟೆಲ್‌ನಲ್ಲಿ ಸಭೆ ನಡೆಸಲು ಮುಂದಾಗಿರುವುದು ಸರಿಯಲ್ಲ' ಎಂದು ಜೆಡಿಎಸ್‌ ಪಕ್ಷದ ಸಂಸದ ಪ್ರಜ್ವಲ್‌ ರೇವಣ್ಣ ವಿರೋಧ ವ್ಯಕ್ತಪಡಿಸಿದ್ದರು.

'ಸಭೆಯನ್ನು ಪಂಚತಾರಾ ಹೋಟೆಲ್‌ನಲ್ಲಿ ಆಯೋಜಿಸಿದ್ದು ಏಕೆ ಎಂಬುದು ಅರ್ಥವಾಗುತ್ತಿಲ್ಲ. ಕರ್ನಾಟಕ ಭವನದಲ್ಲೇ ಸಭೆ ನಡೆಸಿದ್ದರೆ ದುಂದು ವೆಚ್ಚ ತಪ್ಪಿಸಬಹುದಿತ್ತು' ಎಂದು ರಾಜ್ಯಸಭೆ ಸದಸ್ಯ ಕೆ.ಸಿ. ರಾಮಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು