ಭಾನುವಾರ, ಮಾರ್ಚ್ 29, 2020
19 °C

ನಾವು ಕಳ್ಳೇಪುರಿ ತಿನ್ನಲು ಬಂದಿಲ್ಲ: ಸಿದ್ದರಾಮಯ್ಯ ವಿರುದ್ಧ ಮಾಧುಸ್ವಾಮಿ ಕಿಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಸಿದ್ದರಾಮಯ್ಯ ನೀವು ಕಾನೂನಿಗಿಂತ ಮಿಗಿಲಲ್ಲ. ಸದನ ನಡೆಸಲು ಬಿಡೊಲ್ಲ ಎಂದು ಹೊರಗೆ ಹೇಳಿದ್ದೀರಿ, ನಾವು ಇಲ್ಲಿ ಕಳ್ಳೇಪುರಿ ತಿನ್ನಲು ಬಂದು ಕುಳಿತಿಲ್ಲ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಕಿಡಿಕಾರಿದರು.

ದೊರೆಸ್ವಾಮಿ ಅವರನ್ನು ನಿಂದಿಸಿದ ವಿಷಯಕ್ಕೆ ಸಂಬಂಧಿಸಿದಂತೆ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಮಧ್ಯೆ ಮಾತಿನ ಜಟಾಪಟಿ ನಡೆಯಿತು.

‘ಈ ಸರ್ಕಾರ ಪ್ರಜಾಪ್ರಭುತ್ವ ವಿರೋಧಿ. ಸರ್ವಾಧಿಕಾರಿ ಧೋರಣೆಯಿಂದ ಆಡಳಿತ ನಡೆಸುತ್ತಿದೆ. ಸ್ವಾತಂತ್ರ್ಯಕ್ಕಾಗಿ ಹೋರಾಟ ಮಾಡಿದ ದೊರೆಸ್ವಾಮಿಯವರನ್ನು ಟೀಕಿಸಿದವರ ಸಮರ್ಥನೆ ಮಾಡಿಕೊಳ್ಳುತ್ತಿದೆ. ಯತ್ನಾಳ್‌ ಅವರನ್ನು ಸದನದಿಂದ ಸಸ್ಪೆಂಡ್‌ ಮಾಡಬೇಕು ಎಂದು ಸಿದ್ದರಾಮಯ್ಯ ಹರಿಹಾಯ್ದರು.

‘ಸದನ ನಡೆಯಬಾರದು ಎಂಬುದು ಸಂಘ ಪರಿವಾರದ ಹುನ್ನಾರ. ಹೀಗಾಗಿ ಬಿಜೆಪಿ ನಾಯಕರು ದೊರೆಸ್ವಾಮಿ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ವಿಧಾನಪರಿಷತ್‌ ಸದಸ್ಯ ರವಿಕುಮಾರ್‌ ಅವರು ಧಿಕ್ಕಾರ ಹಾಕಿರುವುದೂ ಇದೇ ಕಾರಣಕ್ಕೆ’ ಎಂದು ತರಾಟೆಗೆ ತೆಗೆದುಕೊಂಡರು.

ಈ ಮಾತು ಮಾಧುಸ್ವಾಮಿಯವರನ್ನು ಕೆರಳಿಸಿತು. ‘ಸಿದ್ದರಾಮಯ್ಯ ಕಾನೂನಿಗಿಂತ ದೊಡ್ಡವರಲ್ಲ. ಈ ಸದನ ನಡೆಸಲು ಬಿಡುವುದಿಲ್ಲ ಎಂದು ಕೆಲವು ದಿನಗಳ ಹಿಂದೆ ಹೇಳಿದ್ದಾರೆ. ಸಭಾಧ್ಯಕ್ಷ ಸಣ್ಣ ಹುಡುಗ ಇದ್ದಾನೆ ಎಂದೂ ತಿಳಿಸಿದ್ದಾರೆ. ಇಂತಹ ಮಾತುಗಳು ಖಂಡನೀಯ. ಮೈಂಡ್‌ ಯುವರ್‌ ಟಂಗ್‌’ ಎಂದು ಬಿಸಿ ಮುಟ್ಟಿಸಿದರು.

ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಮಾತನಾಡಿ, ‘ಈ ದೇಶದಲ್ಲಿ ತುರ್ತುಪರಿಸ್ಥಿತಿ ಹೇರಿದ ಮತ್ತು ಚುನಾವಣೆಯಲ್ಲಿ ಅಂಬೇಡ್ಕರ್‌ ಅವರನ್ನು ಸೋಲಿಸಿದ ನಿಮ್ಮಿಂದ ನಾವು ಪಾಠ ಕಲಿಯಬೇಕಾಗಿಲ್ಲ. ಕಾಂಗ್ರೆಸ್‌ ಅನ್ನು ಭಗವಂತ ಬಂದರೂ ರಿಪೇರಿ ಮಾಡಲು ಆಗಲ್ಲ’ ಎಂದು ಛೇಡಿಸಿದರು.

ಸಂಘಪರಿವಾರ ಎಳೆದು ತರಬೇಡಿ: ಸಿದ್ದರಾಮಯ್ಯ ಅವರು ಸಂಘಪರಿವಾರದ ಬಗ್ಗೆ ಪ್ರಸ್ತಾಪಿಸಿದಾಗ, ‘ಎಲ್ಲ ವಿಷಯಗಳಿಗೂ ಸಂಘಪರಿವಾರವನ್ನು ಎಳೆದು ತರಬೇಡಿ’ ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಮತ್ತು ಸಚಿವ ಸೋಮಣ್ಣ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಆಗ ಮಧ್ಯ ಪ್ರವೇಶಿಸಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ‘ಪ್ರಧಾನಿ ಅವರನ್ನು ನರಹಂತಕ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಯ ಬಗ್ಗೆಯೂ ಚರ್ಚೆ ಆಗಲಿ’ ಎಂದರು. ಇದಕ್ಕೆ ಧ್ವನಿಗೂಡಿಸಿದ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ, ‘ಸಾವರ್ಕರ್‌ ಮತ್ತು ಪ್ರಧಾನಿ ಮೋದಿ ವಿರುದ್ಧ ಹೇಳಿಕೆ ನೀಡಿದ ಸಿದ್ದರಾಮಯ್ಯ ಅವರನ್ನೂ ಸದನದಿಂದ ಸಸ್ಪೆಂಡ್‌ ಮಾಡಬೇಕು’ ಎಂದು ಒತ್ತಾಯಿಸಿದರು.

‘ದೊರೆಸ್ವಾಮಿ ಬಗ್ಗೆ ಹೇಳಿಕೆ ನೀಡಿದವರು ಮತ್ತು ಸಾವರ್ಕರ್‌ ವಿರುದ್ಧ ಹೇಳಿಕೆ ನೀಡಿದವರಿಗೆ ಒಂದೇ ರೀತಿ ಶಿಕ್ಷೆ ಆಗಬೇಕು’ ಎಂದು ಸಿ.ಟಿ.ರವಿ ಆಗ್ರಹಿಸಿದರು.

ಮುಗಿಯದ ಧರಣಿ: ಕಲಾಪದ ಕೊನೆಯವರೆಗೂ ಕಾಂಗ್ರೆಸ್‌ ಶಾಸಕರು ಧರಣಿ ಮುಂದುವರಿಸಿದರು. ಬುಧವಾರವೂ ಧರಣಿ ಮುಂದುವರಿಸುವುದಾಗಿ ಸಿದ್ದರಾಮಯ್ಯ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

‘ದೊರೆಸ್ವಾಮಿ ರಾಜಕಾರಣಿ’
ಕಾಂಗ್ರೆಸ್‌ ಸದಸ್ಯರ ಗದ್ದಲ ಮತ್ತು ಧರಣಿಯ ಮಧ್ಯೆ ವಿಷಯ ಪ್ರಸ್ತಾಪಿಸಿದ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ, ‘ದೊರೆಸ್ವಾಮಿಯವರು 100 ವರ್ಷ ತುಂಬಿದ ರಾಜಕಾರಣಿ’ ಎಂದರು.

‘ಸರಿಯಾಗಿ ಹೇಳಿದೆ ಅಣ್ಣ’ ಎಂದು ಬಿಜೆಪಿ ಸದಸ್ಯರು ಹೇಳಿದರು.

ತಕ್ಷಣವೇ ತಮ್ಮ ತಪ್ಪಿನ ಅರಿವಾಗಿ, ರಾಜಕಾರಣಿ ಅಲ್ಲ ಸ್ವಾತಂತ್ರ್ಯ ಹೋರಾಟ ಎಂದು ಸರಿಪಡಿಸಿಕೊಂಡರು. ‘ಅವರು ರಾಜಕಾರಣಿಯಂತೆಯೇ ಆಗಿದ್ದಾರೆ’ ಎಂದು ಕೆಲವು ಶಾಸಕರು ಹೇಳಿದರು. ಈ ಹಂತದಲ್ಲಿ ಕಾಂಗ್ರೆಸ್‌ ಶಾಸಕರ ‘ಸಂವಿಧಾನ ಉಳಿಸಿ’ ಎಂಬ ಘೋಷಣೆಯ ಅಬ್ಬರ ಹೆಚ್ಚಾಯಿತು. ‘ಇವರು ಯಾವ ಸಂವಿಧಾನ ಉಳಿಸ್ತಾರಂತೆ’ ಎಂದು ಗೊಣಗಿಕೊಂಡು ಕುಳಿತರು.

‘ಸಾವರ್ಕರ್‌– ದೊರೆಸ್ವಾಮಿ ಹೋಲಿಕೆ ಬೇಡ’
ಸಾವರ್ಕರ್‌ ಅವರು ಅಂಡಮಾನ್‌ನಲ್ಲಿ ಸುದೀರ್ಘ ಕಾಲ ಕರಿ ನೀರಿನ ಶಿಕ್ಷೆ ಅನುಭವಿಸಿದವರು. ದೊರೆಸ್ವಾಮಿ 1 ತಿಂಗಳು ಜೈಲಿಗೆ ಹೋದವರು. ಇಬ್ಬರನ್ನು ಒಂದೇ ತಕ್ಕಡಿಯಲ್ಲಿ ತೂಗಬಾರದು ಎಂದು ವಿಧಾನಪರಿಷತ್‌ ಸದಸ್ಯ ಎನ್‌.ರವಿಕುಮಾರ್‌ ಅವರು ಹೇಳಿದ್ದಾರೆ.

‘ಪಾಕಿಸ್ತಾನ ಜಿಂದಾಬಾದ್‌’ ಎಂದು ಹೇಳುವವರು ಮತ್ತು ನಕ್ಸಲಿಯರ ಜತೆ ದೊರೆಸ್ವಾಮಿ ಗುರುತಿಸಿಕೊಂಡಿದ್ದಾರೆ. ಬೇರೆ ಯಾವುದೇ ಸ್ವಾತಂತ್ರ್ಯ ಹೋರಾಟಗಾರರು ಹೀಗೆ ಮಾಡುತ್ತಿಲ್ಲ. ಆದ್ದರಿಂದ ಧಿಕ್ಕಾರ ಕೂಗಿದ್ದೇನೆ. ಅದಕ್ಕಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ’ ಎಂದು ಅವರು ಮಾಧ್ಯಮ ಪ್ರತಿನಿಧಿಗಳು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು