ಮಂಗಳವಾರ, ಫೆಬ್ರವರಿ 18, 2020
22 °C
13.61 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿದ ಶ್ರೀನಿವಾಸ ಗೌಡ

ಕರಾವಳಿ ಕಂಬಳದ ಉಸೇನ್ ಬೋಲ್ಟ್‌!: ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶ್ರೀನಿವಾಸ ಗೌಡ ಈಚೆಗೆ ಐಕಳದಲ್ಲಿ ನಡೆದ ಕಂಬಳ ಸ್ಪರ್ಧೆಯಲ್ಲಿ 145 ಮೀಟರ್‌ ದೂರವನ್ನು ಕೇವಲ 13.61 ಸೆಕೆಂಡ್‌ಗಳಲ್ಲಿ ಓಡಿ, ಕರಾವಳಿಯ ಉಸೇನ್‌ ಬೋಲ್ಟ್‌ ಎನಿಸಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಶ್ರೀನಿವಾಸ ಗೌಡರ ಓಟದ ಬಗ್ಗೆ ಮೆಚ್ಚುಗೆ ವ್ಯಕ್ತವಾಗಿದೆ.

ಫೇಸ್‌ಬುಕ್‌ ಹಾಗೂ ಇತರೆ ಜಾಲತಾಣಗಳಲ್ಲಿ ಹಲವರು ಶ್ರೀನಿವಾಸ ಗೌಡರ ಕಂಬಳ ಓಟದ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಕೆಲವರು ಉಸೇನ್‌ ಬೋಲ್ಟ್‌ ಹಾಗೂ ಶ್ರೀನಿವಾಸ ಅವರ ಫೋಟೊವನ್ನು ಹಾಕಿ ವೇಗದ ಕಂಬಳ ಓಟಗಾರ ಎಂಬ ಒಕ್ಕಣೆ ಬರೆದುಕೊಂಡಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಶ್ರೀನಿವಾಸ ಗೌಡ, ‘ಈಚೆಗೆ ಐಕಳದಲ್ಲಿ ನಡೆದ ನೇಗಿಲು ಹಿರಿಯ ವಿಭಾಗದ ಕಂಬಳ ಸ್ಪರ್ಧೆಯಲ್ಲಿ 13.61 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿದ್ದೇನೆ. ಈ ಪಂದ್ಯದ ವಿಡಿಯೋ ನೋಡಿ ಎಲ್ಲರಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ವಿಶ್ವದ ವೇಗದ ಓಟಗಾರ ಉಸೇನ್ ಬೋಲ್ಟ್‌ಗೆ ಹೋಲಿಕೆ ಮಾಡುತ್ತಿದ್ದಾರೆ ಎಂದು ಸಂತಸ ಹಂಚಿಕೊಂಡರು.

ಸಾಮಾನ್ಯವಾಗಿ ನೇಗಿಲು ಹಿರಿಯ ವಿಭಾಗದಲ್ಲಿ 15 ಸೆಕೆಂಡ್‌ಗಳ ಆಸುಪಾಸಿನಲ್ಲಿ ಸ್ಪರ್ಧಿಗಳು ಗುರಿ ಮುಟ್ಟುತ್ತಾರೆ. ಅತಿ ಕಡಿಮೆ ಅವಧಿಯಲ್ಲಿ ಓಡಿ ಸ್ಪರ್ಧೆಯನ್ನು ಗೆದ್ದಿದ್ದು ಖುಷಿ ಕೊಟ್ಟಿದೆ ಎಂದರು ಶ್ರೀನಿವಾಸ ಗೌಡ.

ಉಸೇನ್ ಬೋಲ್ಟ್‌ 100 ಮೀಟರ್‌ ಓಟವನ್ನು 9.58 ಸೆಕೆಂಡ್‌ಗಳಲ್ಲಿ ಗುರಿಮುಟ್ಟಿ ವಿಶ್ವದಾಖಲೆ ಮಾಡಿದರೆ, ಶ್ರೀನಿವಾಸ ಗೌಡ 145 ಮೀಟರ್‌ ದೂರವನ್ನು 13.61 ಸೆಕೆಂಡ್‌ಗಳಲ್ಲಿ ಓಡಿದ್ದಾರೆ. ಇಬ್ಬರ ಓಟದ ಅವಧಿ ಲೆಕ್ಕಹಾಕಿದರೆ ಶ್ರೀನಿವಾಸ ಗೌಡ ಕಡಿಮೆ (ಅಂದಾಜು 9.55) ಸಮಯದಲ್ಲಿ ಗುರಿ ಮುಟ್ಟಿದ್ದಾರೆ ಎನ್ನುತ್ತಾರೆ ಕಂಬಳ ತೀರ್ಪುಗಾರರು. ಕೆಸರಿನಲ್ಲಿ ಕೋಣಗಳೊಟ್ಟಿಗೆ ಓಡುವುದು ಸವಾಲು. ಇಂಥಹ ಪ್ರತಿಭೆಗಳು ಬೆಳಕಿಗೆ ಬರಬೇಕು ಎನ್ನುತ್ತಾರೆ ತೀರ್ಪುಗಾರರು.

ಕರಾವಳಿಯಲ್ಲಿ ಹಿಂದಿನಿಂದಲೂ ಸಾಂಪ್ರದಾಯಿಕ ಕಂಬಳ ಕ್ರೀಡೆ ನಡೆಸಿಕೊಂಡು ಬರಲಾಗುತ್ತಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಆಗಾಗ ಸ್ಪರ್ಧೆಗಳು ನಡೆಯುತ್ತಲೇ ಇರುತ್ತವೆ. ಕಂಬಳ ಸ್ಪರ್ಧೆಗೆಂದೇ ಕೋಣಗಳನ್ನು ವಿಶೇಷವಾಗಿ ಆರೈಕೆ ಮಾಡಲಾಗುತ್ತದೆ. ಕೋಣಗಳ ಮಾಲೀಕರಿಗೆ ಕಂಬಳ ಪ್ರತಿಷ್ಠೆಯೂ ಹೌದು. ಕೋಣಗಳ ಜತೆ ಕಂಬಳದ ಕರೆಯಲ್ಲಿ ಓಡುವವರೂ ವಿಶೇಷ ಪರಿಣತಿ ಹೊಂದಿರುತ್ತಾರೆ.

‘ತಾಟೆ ಮೋಡ ಜೋಡಿಗಳ ಮೋಡಿ’
‘ತಾಟೆ ಹಾಗೂ ಮೋಡ ಶ್ರೀನಿವಾಸ ಗೌಡ ಅವರಿಗೆ ಉಸೇನ್ ಬೋಲ್ಟ್‌ ಖ್ಯಾತಿ ತಂದುಕೊಟ್ಟ ಜೋಡಿ ಕೋಣಗಳು. ಈ ಕೋಣಗಳ ಮಾಲೀಕರು ಇರುವೈಲು ಪಾಣಿಲ ಬಾಡ ಪೂಜಾರಿ. ತಾಟೆ, ಮೋಡ ಕೋಣಗಳ ವೇಗಕ್ಕೆ ಸಾಟಿ ಇಲ್ಲ. ಒಂದೇ ಲಯದಲ್ಲಿ ಓಡುವ ಇವು ಹಲವು ಸ್ಪರ್ಧೆಗಳನ್ನು ಗೆದ್ದುಕೊಟ್ಟಿವೆ. ನನ್ನ ಸಾಧನೆಯ ಹಿಂದೆ ಕೋಣಗಳ ಶ್ರಮ ದೊಡ್ಡದು’ ಎನ್ನುತ್ತಾರೆ ಶ್ರೀನಿವಾಸ ಗೌಡ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು