ಮಂಗಳವಾರ, ಸೆಪ್ಟೆಂಬರ್ 28, 2021
21 °C
ವರ್ತೂರು ಪೊಲೀಸರಿಂದ ಆರೋಪಿ ಬಂಧನ

‘ಕಾನ್‌ಸ್ಟೆಬಲ್‌’ ಸೋಗಿನಲ್ಲಿ ವಸೂಲಿಗಿಳಿದಿದ್ದ ಕಳ್ಳ !

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಾನು ಕ್ರೈಂ ಬೀಟ್ ಕಾನ್‌ಸ್ಟೆಬಲ್’ ಎಂದು ಹೇಳಿಕೊಂಡು ಸಾರ್ವಜನಿಕರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪದಡಿ ಶಿವಕುಮಾರ್ ಎಂಬಾತನನ್ನು ವರ್ತೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.

‘ಎಲೆಕ್ಟ್ರಾನಿಕ್ ಸಿಟಿ ಠಾಣೆಯ ಎಂಒಬಿ (ಅಪರಾಧ ಹಿನ್ನೆಲೆಯುಳ್ಳವ) ಆಗಿರುವ ಶಿವಕುಮಾರ್, ಮನೆಯಲ್ಲಿ ಕಳವು ಹಾಗೂ ವಂಚನೆ ಪ್ರಕರಣದಲ್ಲಿ ಜೈಲಿಗೆ ಹೋಗಿ ಜಾಮೀನಿನಡಿ ಹೊರಬಂದಿದ್ದ. ತಾನು ಕಾನ್‌ಸ್ಟೆಬಲ್ ಎಂದು ಹೇಳಿಕೊಂಡು ಓಡಾಡುತ್ತಿದ್ದ’ ಎಂದು ವರ್ತೂರು ಪೊಲೀಸರು ಹೇಳಿದರು.

‘ಆರೋಪಿಯನ್ನು ನಗರದ ಕೆಲ ಠಾಣೆಗಳ ಪೊಲೀಸರು ಈ ಹಿಂದೆಯೂ ಹಲವು ಬಾರಿ ಬಂಧಿಸಿದ್ದರು. ಕೆಲ ಪ್ರಕರಣಗಳ ವಿಚಾರಣೆಗಾಗಿ ಆತನನ್ನು ಆಗಾಗ ಠಾಣೆಗೂ ಕರೆಸಿಕೊಳ್ಳುತ್ತಿದ್ದರು. ಅದನ್ನೇ ಬಂಡವಾಳ ಮಾಡಿಕೊಂಡ ಆರೋಪಿ, ‘ನಾನು ಕಾನ್‌ಸ್ಟೆಬಲ್. ಕ್ರೈಂ ಬೀಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ನಿತ್ಯವೂ ಠಾಣೆ ವ್ಯಾಪ್ತಿಯಲ್ಲಿ ಮಫ್ತಿಯಲ್ಲೇ ಗಸ್ತು ತಿರುಗುತ್ತೇನೆ’ ಎಂದು ಪೊಲೀಸರ ರೀತಿಯಲ್ಲೇ ವರ್ತಿಸಿ ಸಾರ್ವಜನಿಕರನ್ನು ನಂಬಿಸುತ್ತಿದ್ದ’ ಎಂದು ವಿವರಿಸಿದರು.

ಗುಜರಿ ವ್ಯಾಪಾರಿಯಿಂದ ವಸೂಲಿ: ‘ಬಳಗೆರೆ ಗ್ರಾಮದಲ್ಲಿರುವ ಜಲಮಂಡಳಿ ನೀರಿನ ಘಟಕದ ಬಳಿ ಶಿವು ಪೆರುಮಾಳ್‌ ಎಂಬುವರು ಗುಜರಿ ಅಂಗಡಿ ಇಟ್ಟುಕೊಂಡಿದ್ದಾರೆ. ಕಾನ್‌ಸ್ಟೆಬಲ್ ಸೋಗಿನಲ್ಲಿ ಅವರನ್ನು ಹೆದರಿಸಿದ್ದ ಶಿವಕುಮಾರ್, ₹ 15 ಸಾವಿರ ವಸೂಲಿ ಮಾಡಿದ್ದ’ ಎಂದು ಪೊಲೀಸರು ಹೇಳಿದರು.

‘2019ರ ಫೆಬ್ರುವರಿಯಲ್ಲಿ ಗುಜರಿ ಅಂಗಡಿಗೆ ಹೋಗಿದ್ದ ಆರೋಪಿ, ‘ಪ್ರತಿ ತಿಂಗಳು ₹ 5 ಸಾವಿರ ಮಾಮೂಲಿ ಕೊಡಬೇಕು. ಇಲ್ಲದಿದ್ದರೆ, ಅಂಗಡಿಯನ್ನು ಮುಚ್ಚಿಸುತ್ತೇನೆ. ನಿನ್ನನ್ನು ಜೈಲಿಗೆ ಕಳುಹಿಸಿ ಸಾಯುವಂತೆ ಮಾಡುತ್ತೇನೆ’ ಎಂದು ಬೆದರಿಸಿದ್ದ. ಆತ ಕಾನ್‌ಸ್ಟೆಬಲ್‌ ಇರಬಹುದು ಎಂದು ನಂಬಿದ್ದ ವ್ಯಾಪಾರಿ ಶಿವು, ಮೂರು ತಿಂಗಳು ತಲಾ ₹ 5 ಸಾವಿರ ಕೊಟ್ಟಿದ್ದರು.’

‘ಶಿವಕುಮಾರ್ ಬಗ್ಗೆ ಇತ್ತೀಚೆಗೆ ವ್ಯಾಪಾರಿಗೆ ಅನುಮಾನ ಬಂದಿತ್ತು. ಠಾಣೆಗೆ ಬಂದು ವಿಚಾರಿಸಿದ್ದಾಗ ಆತನ ನಿಜಬಣ್ಣ ಬಯಲಾಗಿತ್ತು. ನಂತರವೇ ದೂರು ನೀಡಿದ್ದರು’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು