ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಗ್ರ ಮೀಸಲಾತಿಗೆ ಹೋರಾಟ ನಡೆಯಲಿ: ವೀರಭದ್ರ ಚನ್ನಮಲ್ಲ ಸ್ವಾಮೀಜಿ ಸಲಹೆ

ನಿಡುಮಾಮಿಡಿ ಮಠದ ಸ್ವಾಮೀಜಿ
Last Updated 9 ಫೆಬ್ರುವರಿ 2019, 16:52 IST
ಅಕ್ಷರ ಗಾತ್ರ

ಮೈಸೂರು: ದೇಶದ ಜನರು ಸಮಗ್ರ ಮೀಸಲಾತಿಗೆ ಹೋರಾಟ ನಡೆಸಲು ಕಾಲ ಸನ್ನಿಹಿತವಾಗಿದೆ ಎಂದು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಇಲ್ಲಿ ಶನಿವಾರ ಹೇಳಿದರು.

ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ವತಿಯಿಂದ ಆಯೋಜಿಸಿದ್ದ ‘ಭಾರತೀಯ ಸಂವಿಧಾನ– ಸಾಮಾಜಿಕ ನ್ಯಾಯ, ಸಾಮೂಹಿಕ ಜವಾಬ್ದಾರಿ’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಜನಸಂಖ್ಯೆ ಆಧರಿಸಿ ಎಲ್ಲ ಸಮುದಾಯಗಳಿಗೂ ಮೀಸಲಾತಿ ನೀಡಿ ಎಂಬ ಮಾನದಂಡ ಮುಂದಿಟ್ಟು
ಕೊಂಡು ಹೋರಾಟ ಆರಂಭಿಸಬೇಕಿದೆ. ಜನಸಂಖ್ಯೆಗೆ ಅನುಗುಣವಾಗಿ ಆಯಾ ಸಮುದಾಯಗಳಿಗೆ ಮೀಸಲಾತಿ ಕೊಟ್ಟರೆ ಎಲ್ಲರಿಗೂ ಸಾಮಾಜಿಕ ನ್ಯಾಯ ತಲುಪಿಸಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.

ಅಲ್ಪ ಸ್ವಲ್ಪ ಮೀಸಲಾತಿ ಮೂಲಕ ರಾಜಕೀಯ ಲಾಭ ಪಡೆಯಬಹುದೇ ಹೊರತು, ಜನಕಲ್ಯಾಣ ಸಾಧ್ಯವಿಲ್ಲ. ಜನಸಂಖ್ಯೆಗೆ ಅನುಗುಣವಾಗಿ ಎಲ್ಲ ಸಮುದಾಯಗಳಿಗೂ ರಾಜಕೀಯ, ಶೈಕ್ಷಣಿಕ, ಆರ್ಥಿಕ ಕ್ಷೇತ್ರಗಳಲ್ಲಿ ಮೀಸಲಾತಿ ಸಿಗಲಿ ಎಂದು ಒತ್ತಾಯಿಸಿದರು.

ಮೇಲ್ವರ್ಗದವರ ಮತಗಳು ಕೈತಪ್ಪಬಹುದು ಎಂಬ ಭಯದಿಂದ ಎಲ್ಲ ರಾಜಕೀಯ ಪಕ್ಷಗಳು ಮೇಲ್ಜಾತಿಗೆ ಶೇ 10ರಷ್ಟು ಮೀಸಲಾತಿ ನೀಡಲು ಒಪ್ಪಿಗೆ ಸೂಚಿಸಿವೆ. ಆದರೆ ಮೂರು ದಶಕಗಳಿಂದ ನನೆಗುದಿಗೆ ಬಿದ್ದಿರುವ ಮಹಿಳಾ ಮೀಸಲಾತಿ ಮಸೂದೆಗೆ ಏಕೆ ಸಮ್ಮತಿ ಸೂಚಿಸಿಲ್ಲ ಎಂದು ಪ್ರಶ್ನಿಸಿದರು.

ಅಪಾಯದ ದಿನಗಳು ಬರಲಿವೆ: ದೇಶವನ್ನು ಆಳುವ ವರ್ಗಗಳು ತಮ್ಮ ಜನ ಸಮುದಾಯದ ಹಿತಾಸಕ್ತಿಗಳನ್ನು ಮಾತ್ರ ರಕ್ಷಿಸಲು ಹೊರಟರೆ ಆ ಆಡಳಿತದಿಂದ ಎಲ್ಲರಿಗೂ ನ್ಯಾಯ ಸಿಗದು. ಅಂತಹ ಪರಿಸ್ಥಿತಿಯನ್ನು ಕಳೆದ ಎರಡು ಮೂರು ದಶಕಗಳಲ್ಲಿ ಹೆಚ್ಚಾಗಿ ಕಾಣುತ್ತಾ ಇದ್ದೇವೆ ಎಂದರು.

ಸಂವಿಧಾನದ ಮೂಲ ಸ್ವರೂಪವನ್ನು ಬದಲಿಸುವ ಪ್ರಯತ್ನ ನಡೆಯುತ್ತಿದೆ. ಸಂವಿಧಾನದ ಆಶಯಕ್ಕೆ ಧಕ್ಕೆ ಬಂದರೆ ದೇಶ ಅಪಾಯದ ದಿನಗಳನ್ನು ಎದುರಿಸಲಿದೆ. ಅಂತಹ ಪ್ರಯತ್ನವನ್ನು ಒಗ್ಗಟ್ಟಿನಿಂದ ತಡೆಯಬೇಕಿದೆ ಎಂದು ಕರೆ ನೀಡಿದರು.

ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಎಚ್‌.ಕಾಂತರಾಜ ಮಾತನಾಡಿ, ಹಿಂದುಳಿದ ವರ್ಗಗಳಲ್ಲಿ ಒಳ ವರ್ಗೀಕರಣ ಮಾಡಿ ಮೀಸಲಾತಿ ಕಲ್ಪಿಸಿದರೆ ಮಾತ್ರ ಈ ವರ್ಗದವರಿಗೆ ಸಾಮಾಜಿಕ ನ್ಯಾಯ ದೊರೆಯಲು ಸಾಧ್ಯ ಎಂದರು.

**

ಒಳಮೀಸಲಾತಿಯೊಂದಿಗೆ ಸಮಗ್ರ ಮೀಸಲಾತಿಗೆ ಒತ್ತಾಯಿಸಿದರೆ ದೇಶದಲ್ಲಿ ಅದ್ಭುತ ಕಾಂತ್ರಿ ಉಂಟಾಗಲಿದೆ.
ವೀರಭದ್ರ ಚನ್ನಮಲ್ಲ ಸ್ವಾಮೀಜಿ.

- ನಿಡುಮಾಮಿಡಿ ಮಠ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT