ವಿಧಾನಸೌಧ ಮುತ್ತಿಗೆಗೆ ಯತ್ನ; 180 ನೌಕರರು ವಶಕ್ಕೆ

7
ಪ್ರತಿಭಟನಾಕಾರರನ್ನು ಚದುರಿಸಲು ಲಘು ಲಾಠಿ ಪ್ರಹಾರ

ವಿಧಾನಸೌಧ ಮುತ್ತಿಗೆಗೆ ಯತ್ನ; 180 ನೌಕರರು ವಶಕ್ಕೆ

Published:
Updated:
Prajavani

ಬೆಂಗಳೂರು: ‘ಸಮಾನ ವೇತನ ನೀಡಿ ಹಾಗೂ ನಿವೃತ್ತಿವರೆಗೆ ಸೇವಾ ಭದ್ರತೆ ಒದಗಿಸಿ’ ಎಂದು ಆಗ್ರಹಿಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ಯತ್ನಿಸಿದ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ 180ಕ್ಕೂ ಹೆಚ್ಚು ಗುತ್ತಿಗೆ ನೌಕರರನ್ನು ಪೊಲೀಸರು ವಶಕ್ಕೆ ಪಡೆದರು.

‘ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘ’ದ ನೇತೃತ್ವದಲ್ಲಿ ನೌಕರರು, ಸ್ವಾತಂತ್ರ್ಯ ಉದ್ಯಾನದಲ್ಲಿ ಭಾನುವಾರದಿಂದ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ. ಸರ್ಕಾರದ ಪ್ರತಿನಿಧಿಗಳು ಬಂದು ಸಮಸ್ಯೆ ಆಲಿಸದಿದ್ದರಿಂದ ನೊಂದ ನೌಕರರು, ಮಂಗಳವಾರ ಸಂಜೆ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ತೀರ್ಮಾನಿಸಿ ಮೆರವಣಿಗೆ ಮೂಲಕ ಹೊರಟಿದ್ದರು.

ಮಹಾರಾಣಿ ಕಾಲೇಜು ಎದುರಿನ ಶೇಷಾದ್ರಿ ರಸ್ತೆಯಲ್ಲಿ ಪ್ರತಿಭಟನಾಕಾರರನ್ನು ತಡೆದ ಪೊಲೀಸರು, ‘ವಿಧಾನಸೌಧದಲ್ಲಿ ಅಧಿವೇಶನ ನಡೆಯುತ್ತಿದೆ. ನಿಷೇಧಾಜ್ಞೆ ಜಾರಿಯಲ್ಲಿದೆ. ಹೀಗಾಗಿ, ಮುಂದೆ ಹೋಗಲು ಬಿಡುವುದಿಲ್ಲ. ಉದ್ಯಾನಕ್ಕೆ ವಾಪಸ್‌ ಹೋಗಿ’ ಎಂದು ಕೋರಿದರು. ಅದಕ್ಕೆ ಪ್ರತಿಭಟನಾಕಾರರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಂತೆ ಪರಸ್ಪರ ಮಾತಿನ ಚಕಮಕಿ ನಡೆಯಿತು.

ಅದರ ಮಧ್ಯೆಯೇ ಪ್ರತಿಭಟನಾಕಾರರು, ವಿಧಾನಸೌಧದತ್ತ ಹೊರಡಲು ಸಜ್ಜಾದರು. ಅದೇ ವೇಳೆ ಪೊಲೀಸರು, ಲಘು ಲಾಠಿ ಪ್ರಹಾರ ನಡೆಸಿ ಪ್ರತಿಭಟನಾಕಾರರನ್ನು ಚದುರಿಸಿದರು. ಸಂಘದ ಅಧ್ಯಕ್ಷ ವಿಶ್ವಾರಾಧ್ಯ ಸಮೇತ ಹಲವರನ್ನು ವಶಕ್ಕೆ ಪಡೆದು ಬಸ್ಸಿನಲ್ಲಿ ಮೈಸೂರು ರಸ್ತೆಯ ನಗರ ಸಶಸ್ತ್ರ ಮೀಸಲು ಪಡೆಯ ಮೈದಾನಕ್ಕೆ ಕರೆದೊಯ್ದರು.

‘ಮೂರು ದಿನಗಳಿಂದ ಪ್ರತಿಭಟನೆ ಮಾಡುತ್ತಿದ್ದೇವೆ. ನಮ್ಮ ಗೋಳು ಕೇಳುವವರು ಇಲ್ಲದಂತಾಗಿದೆ. ನಮಗಾಗುತ್ತಿರುವ ಅನ್ಯಾಯ ಪ್ರಶ್ನಿಸಲು ವಿಧಾನಸೌಧಕ್ಕೆ ಹೊರಟಿದ್ದೆವು. ಅದಕ್ಕೂ ಪೊಲೀಸರು ಅಡ್ಡಿಪಡಿಸಿದರು’ ಎಂದು ಪ್ರತಿಭಟನಾಕಾರರು ಹೇಳಿದರು.

‘ರಾಜ್ಯದಲ್ಲಿ 30 ಸಾವಿರ ಗುತ್ತಿಗೆ ನೌಕರರು ಕೆಲಸ ಮಾಡುತ್ತಿದ್ದಾರೆ. ಅವರಿಗೆ, ಇಲಾಖೆಯ ಸಿಬ್ಬಂದಿಯಷ್ಟು ವೇತನ ಸಿಗುತ್ತಿಲ್ಲ. ವೇತನ ತಾರತಮ್ಯ ಸಾಕಷ್ಟಿದೆ. ದೆಹಲಿ ಮತ್ತು ಹರಿಯಾಣದಲ್ಲಿ ಗುತ್ತಿಗೆ ನೌಕರರಿಗೆ ‘ರಾಷ್ಟ್ರೀಯ ಆರೋಗ್ಯ ಮಿಷನ್‌’ ಅಡಿ ಸಮಾನ ವೇತನ ನೀಡಲಾಗುತ್ತಿದೆ. ಅದೇ ಮಾದರಿಯಲ್ಲೇ ರಾಜ್ಯದ ನೌಕರರಿಗೆ ವೇತನ ನೀಡಬೇಕು. ಜ್ಯೋತಿ ಸಂಜೀವಿನಿ ಯೋಜನೆಯನ್ನು ಗುತ್ತಿಗೆ ನೌಕರರಿಗೆ ವಿಸ್ತರಿಸಬೇಕು’ ಎಂದು ಒತ್ತಾಯಿಸಿದರು.  

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !