ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ಕಮಹಾದೇವಿ ಮಹಿಳಾ ವಿವಿ ವ್ಯಾಪ್ತಿ ಮೊಟಕಿಗೆ ಆಕ್ಷೇಪ

ರಾಜ್ಯ ಸರ್ಕಾರದ ಕ್ರಮಕ್ಕೆ ಮಹಿಳಾ ಹೋರಾಟಗಾರ್ತಿಯರು, ಬರಹಗಾರ್ತಿಯರಿಂದ ವಿರೋಧ
Last Updated 27 ಮೇ 2020, 19:45 IST
ಅಕ್ಷರ ಗಾತ್ರ

ವಿಜಯಪುರ: ಮಹಿಳೆಯರಿಗಾಗಿಯೇ ಮೀಸಲಿರುವ ರಾಜ್ಯದ ಏಕೈಕ ವಿಶ್ವವಿದ್ಯಾಲಯವಾದ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಮೊಟಕುಗೊಳಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

ಬೆಂಗಳೂರಿನಲ್ಲಿ ಮಂಗಳವಾರ ನಡೆದ ಉನ್ನತ ಶಿಕ್ಷಣ ಇಲಾಖೆ ಪ್ರಗತಿ ಪರಿಶೀಲನಾ ಸಭೆಯಲ್ಲಿ, ‘ಮಹಿಳಾ ವಿಶ್ವವಿದ್ಯಾಲಯ ತನ್ನ ಸುತ್ತಮುತ್ತಲಿನ ಕಾಲೇಜುಗಳನ್ನು ಮಾತ್ರ ಸಂಯೋಜಿಸಿಕೊಳ್ಳಲಿ, ದೂರದ ಜಿಲ್ಲೆಗಳ ಕಾಲೇಜುಗಳನ್ನು ಸಂಯೋಜಿಸುವುದು ಬೇಡ’ ಎಂಬ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿಕೆಗೆ ಮಹಿಳಾ ಹೋರಾಟಗಾರರು, ಲೇಖಕಿಯರು, ಉಪನ್ಯಾಸಕಿಯರಿಂದ ವಿರೋಧ ವ್ಯಕ್ತವಾಗಿದೆ.

ಈಗಾಗಲೇ ರಾಜೀವ್‌ಗಾಂಧಿ ಆರೋಗ್ಯ ವಿಶ್ವವಿದ್ಯಾಲಯ ಹಾಗೂ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಗಳು ಇಡೀ ರಾಜ್ಯ ವ್ಯಾಪ್ತಿಯನ್ನು ಹೊಂದಿರುವಾಗ ಮಹಿಳಾ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಕೇವಲ ವಿಜಯಪುರ ಅಥವಾ ಮುಂಬೈ ಕರ್ನಾಟಕಕ್ಕಷ್ಟೇ ಸೀಮಿತಗೊಳಿಸುವುದು ಎಷ್ಟು ಸರಿ ಎಂಬ ಪ್ರಶ್ನೆ ವ್ಯಕ್ತವಾಗಿದೆ.

2003ರಲ್ಲಿ ಆರಂಭವಾದ ಈ ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಈಗಾಗಲೇ ಮುಂಬೈ ಕರ್ನಾಟಕ ಹಾಗೂ ಹೈದರಾಬಾದ್‌ ಕರ್ನಾಟಕ ಭಾಗದ 13 ಜಿಲ್ಲೆಗಳ 145ಕ್ಕೂ ಅಧಿಕ ಪ್ರಥಮ ದರ್ಜೆ ಮಹಿಳಾ ಕಾಲೇಜುಗಳು ಇದರ ವ್ಯಾಪ್ತಿಯಲ್ಲಿ ಇವೆ.

2017ರಿಂದ ವಿಶ್ವವಿದ್ಯಾಲಯದ ವ್ಯಾಪ್ತಿಯನ್ನು ಸರ್ಕಾರವು ಇಡೀ ರಾಜ್ಯಕ್ಕೆ ವಿಸ್ತರಿಸಿದ ಬಳಿಕ ಬೆಂಗಳೂರು, ಶಿವಮೊಗ್ಗ, ಚಳ್ಳಕೆರೆ, ದಾವಣಗೆರೆ ಮತ್ತು ತುಮಕೂರಿನ ಹತ್ತಾರು ಮಹಿಳಾ ಪ್ರಥಮ ದರ್ಜೆ ಕಾಲೇಜುಗಳು ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಯಾಗಿವೆ. ಅಲ್ಲದೇ, ಸಿಂಧನೂರು, ಉಡುತಡಿ, ಮಂಡ್ಯದಲ್ಲಿ ಸ್ನಾತಕೋತ್ತರ ಕೇಂದ್ರವನ್ನು ಆರಂಭಿಸಲಾಗಿದೆ. ಬೆಂಗಳೂರಿನಲ್ಲಿ ನಾಲ್ಕು ಎಕರೆ ಭೂಮಿಯನ್ನು ಖರೀದಿಸಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಸತಿಯುತ ತರಬೇತಿ ನೀಡಲು ಸಜ್ಜಾಗತೊಡಗಿದೆ.

ವಿಭಿನ್ನ ವಿಶ್ವವಿದ್ಯಾಲಯ:ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಬಿಹಾ ಭೂಮಿಗೌಡ, ‘ಸಾಮಾನ್ಯ ವಿಶ್ವವಿದ್ಯಾಲಯಗಳಿಗಿಂತ ವಿಭಿನ್ನವಾದ ಮತ್ತು ಸ್ತ್ರಿಪರವಾದ ಪಠ್ಯಕ್ರಮವನ್ನು ಮಹಿಳಾ ವಿಶ್ವವಿದ್ಯಾಲಯ ಅಳವಡಿಸಿಕೊಂಡಿದೆ. ಮಹಿಳಾ ಸಶಕ್ತಿಕರಣಕ್ಕೆ ಶ್ರಮಿಸುತ್ತಿರುವ, ಲಿಂಗತಾರತಮ್ಯ, ಅಸಮಾನತೆ ವಿರುದ್ಧ ಜಾಗೃತಿ ಮೂಡಿಸುತ್ತಿರುವ ವಿಶ್ವವಿದ್ಯಾಲಯದ ವ್ಯಾಪ್ತಿ ಮೊಟಕು ಗೊಳಿಸುವುದು ಸೂಕ್ತವಲ್ಲ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಇಡೀ ರಾಜ್ಯಕ್ಕೆ ಅಗತ್ಯ:ಮಹಿಳಾ ದೃಷ್ಟಿಕೋನವನ್ನು ಪ್ರಧಾನವಾಗಿಟ್ಟುಕೊಂಡು ಆರಂಭವಾಗಿರುವ ಈ ವಿಶ್ವವಿದ್ಯಾಲಯದ ಕಲ್ಪನೆ ಇಡೀ ರಾಜ್ಯಕ್ಕೆ ಅಗತ್ಯವಿದೆ. ಹೀಗಾಗಿ ಇದರ ವ್ಯಾಪ್ತಿಯನ್ನು ಮೊಟಕುಗೊಳಿಸುವ ಬದಲು ಆಡಳಿತಾತ್ಮಕ ತೊಂದರೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಬೆಂಗಳೂರಿನ ಪ್ರಗತಿಪರ ಹೋರಾಟಗಾರ್ತಿ ಡಾ.ಎನ್‌.ಗಾಯತ್ರಿ ಹೇಳಿದರು.

ರಾಜ್ಯದ ರ‍್ಯಾಂಕಿಂಗ್‌ ಇರುವುದಿಲ್ಲ:‘ಈಗಾಗಲೇ ಹೊಸ ಕಾಲೇಜುಗಳು ಬಿಟ್ಟರೆ ದಕ್ಷಿಣ ಕರ್ನಾಟಕದ ಎಲ್ಲ ಕಾಲೇಜುಗಳು ಮಹಿಳಾ ವಿಶ್ವವಿದ್ಯಾಲಯ ಒಳಗೊಂಡಿಲ್ಲ. ಇದು ಸರಿಯಲ್ಲ. ಒಂದೊಮ್ಮೆ ಉತ್ತರ ಕರ್ನಾಟಕ ಮಾತ್ರ ಒಳಗೊಂಡಲ್ಲಿ ವಿವಿಗೆ ರಾಜ್ಯದ ರ‍್ಯಾಂಕಿಂಗ್‌ ಇರುವುದಿಲ್ಲ. ಇದರಿಂದ ಅನುದಾನದ ಕೊರತೆ, ಅಕಾಡೆಮಿಕ್‌ ಅವಕಾಶಗಳಿಂದ ವಂಚಿತವಾಗುತ್ತದೆ’ ಎಂದು ಕಲಬುರ್ಗಿಯ ಬರಹಗಾರ್ತಿ ಕೆ.ನೀಲಾ ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT