ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯಪುರ: ವಾರದಲ್ಲಿ ಎರಡು ದಿನ ಒಣದ್ರಾಕ್ಷಿ ಇ–ಟ್ರೇಡಿಂಗ್‌

ಪ್ರತಿ ಕ್ವಿಂಟಲ್‌ ದ್ರಾಕ್ಷಿಗೆ ₹ 5 ಸಾವಿರ ಬೆಂಬಲ ನಿಗದಿಗೆ ಆಗ್ರಹ
Last Updated 20 ಜೂನ್ 2020, 14:34 IST
ಅಕ್ಷರ ಗಾತ್ರ

ವಿಜಯಪುರ: ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯಲ್ಲಿ ಒಣದ್ರಾಕ್ಷಿ ಇ–ಟ್ರೇಡಿಂಗ್‌ ಅನ್ನು ಯಾವುದೇ ಕಾರಣಕ್ಕೂ ಸ್ಥಗಿತಗೊಳಿಸದೇ ಇನ್ನು ಮುಂದೆ ವಾರದಲ್ಲಿ ಎರಡು ದಿನ ನಡೆಸಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ಸುರೇಶಗೌಡ ಐ.ಬಿರಾದಾರ ಮತ್ತು ಕರ್ನಾಟಕ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ ಹೇಳಿದರು.

ನಗರದಲ್ಲಿ ಶನಿವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸದ್ಯ ಶನಿವಾರ ಮಾತ್ರ ಒಣದ್ರಾಕ್ಷಿ ಇ–ಟ್ರೇಡಿಂಗ್‌ ನಡೆಯುತ್ತಿದ್ದು, ಬೆಳೆಗಾರರ ಹಿತದೃಷ್ಟಿಯಿಂದ ಇನ್ನು ಮುಂದೆ ಪ್ರತಿ ಮಂಗಳವಾರವೂ ಇ–ಟ್ರೇಡಿಂಗ್‌ ನಡೆಸಲಾಗುವುದು ಎಂದು ತಿಳಿಸಿದರು.

ಈ ಮೊದಲು ಒಣದ್ರಾಕ್ಷಿ ವ್ಯಾಪಾರ ವಹಿವಾಟು ಬಹಿರಂಗ ಹರಾಜು ಪ್ರಕ್ರಿಯೆಯಲ್ಲಿ ನಡೆಯುತ್ತಿತ್ತು. ದ್ರಾಕ್ಷಿ ಬೆಳೆಗಾರರ ಒತ್ತಾಸೆಯ ಮೇರೆಗೆ ಹಾಗೂ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಪ್ರಯತ್ನದಿಂದ ಇ–ಟ್ರೇಡಿಂಗ್‌ ಮೂಲಕ ವ್ಯಾಪಾರ ನಡೆದಿದ್ದು, ಇದರಿಂದ ಬೆಳೆಗಾರರಿಗೆ ಹೆಚ್ಚು ಲಾಭವಾಗುತ್ತಿದೆ. ಇದರಿಂದ ಯಾರಿಗೂ ಮೋಸವಾಗದು. ಪಾರದರ್ಶಕವಾಗಿ ನಡೆಯುತ್ತಿದೆ ಎಂದರು.

ವ್ಯಾಪಾರಿಗಳು ತಮ್ಮ ಸ್ವಾರ್ಥ, ಲಾಭಕ್ಕಾಗಿ ಇ–ಟ್ರೇಡಿಂಗ್‌ ವ್ಯಾಪಾರವನ್ನು ನಿಲ್ಲಿಸಲು ಹವಣಿಸುತ್ತಿದ್ದಾರೆ. ಬಹಿರಂಗ ಹರಾಜಿನ ಮೂಲಕ ವ್ಯಾಪಾರ ನಡೆಸಲು ಯತ್ನಿಸುತ್ತಿದ್ದಾರೆ. ಆದರೆ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಮತ್ತು ದ್ರಾಕ್ಷಿ ಬೆಳೆಗಾರರು ಇದಕ್ಕೆ ಸಮ್ಮತಿಸಿಲ್ಲ ಎಂದು ತಿಳಿಸಿದರು.

ಬೆಳೆಗಾರರು ಎಚ್ಚೆತ್ತುಕೊಂಡು ಇ–ಟ್ರೇಡಿಂಗ್‌ ಮೂಲಕವೇ ಒಣದ್ರಾಕ್ಷಿ ಮಾರಾಟಕ್ಕೆ ಬದ್ಧರಾಗಬೇಕು. ಇದರಿಂದ ಲಾಭವಾಗಲಿದೆ. ಈ ವ್ಯವಸ್ಥೆಯಲ್ಲಿ ಎಳ್ಳಷ್ಟೂ ಮೋಸವಾಗದು ಎಂದು ಹೇಳಿದರು.

ಇ–ಟ್ರೇಡಿಂಗ್‌ನಿಂದಾಗಿ ಜಿಲ್ಲೆಯ ಮತ್ತು ಅಕ್ಕಪಕ್ಕದ ಜಿಲ್ಲೆಯ ರೈತರು ಭಾಗವಹಿಸಿ ತಮ್ಮ ಉತ್ಪನ್ನಕ್ಕೆ ಹೆಚ್ಚಿನ ಬೆಲೆ ದೊರೆಯುವುದನ್ನು ಸ್ವಾಗತಿಸಿದ್ದಾರೆ. ಆದ ಕಾರಣ ಬಹಿರಂಗ ಹರಾಜು ಪ್ರಕ್ರಿಯೆಯನ್ನು ಮುಂದುವರಿಸಲು ತೀರ್ಮಾನಿಸಲಾಗಿದೆ ಎಂದರು.

ಇ–ಟೆಂಡರ್‌ನಲ್ಲಿ ರೈತರ ಒಣದ್ರಾಕ್ಷಿ ಉತ್ಪನ್ನದ ಲಾಟ್‌ ಮಾಡಿದ ತಕ್ಷಣ ಟೆಂಡರ್‌ ಘೋಷಣೆಯಾದ ನಂತರ ಎಸ್‌ಎಂಎಸ್‌ ಮೂಲಕ ಮಾಹಿತಿಯನ್ನು ಕಳುಹಿಸಲಾಗುತ್ತಿರುವುದರಿಂದ ತಮ್ಮ ಉತ್ಪನ್ನಕ್ಕೆ ದಾಖಲಾಗಿರುವ ಧಾರಣೆಯ ಮಾಹಿತಿ ತಲುಪುವುದರಿಂದ ದರದಲ್ಲಿ ವರ್ತಕರು ಮೋಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಹೇಳಿದರು.

ಬೆಂಬಲ ಬೆಲೆಗೆ ಆಗ್ರಹ:

ಕೊರೊನಾ ಲಾಕ್‌ಡೌನ್‌ ಅವಧಿಯಲ್ಲಿ ಜಿಲ್ಲೆಯ ದ್ರಾಕ್ಷಿ ಬೆಳೆಗಾರರಿಗೆ ತೊಂದರೆಗೆ ಒಳಗಾಗಿದ್ದು, ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಆದ ಕಾರಣ ದ್ರಾಕ್ಷಿ ಬೆಳೆಗೆ ಬೆಂಬಲ ಬೆಲೆ ರೂಪದಲ್ಲಿ ಪ್ರತಿ ಕ್ವಿಂಟಲ್‌ಗೆ ₹ 5000 ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಪೀರಗೊಂಡ ಎಂ.ಗದ್ಯಾಳ, ಎಸ್‌.ಎಚ್‌.ನಾಡಗೌಡ, ಎಂ.ಎಸ್‌.ರುದ್ರಗೌಡ ಮತ್ತು ಕೆ.ಎಚ್‌.ಮುಂಬಾರೆಡ್ಡಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT