ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರಿಗೆ ಕನ್ನಡ ಅರ್ಥವಾಗುತ್ತೆ ಎಂದು ಪಂಡಿತರಿಗೆ ಮನದಟ್ಟು ಮಾಡಿಸಿದವರು

Last Updated 19 ಜುಲೈ 2019, 11:58 IST
ಅಕ್ಷರ ಗಾತ್ರ

ಬಳ್ಳಾರಿ:ದಾಸ ಸಾಹಿತ್ಯದ ಮೂಲಕ ಸಂಸ್ಕೃತದಲ್ಲಿದ್ದ ಹಲವು ಗಹನವಾದ ತತ್ವಗಳನ್ನು ಕನ್ನಡಕ್ಕೆ ತಂದವರುವ್ಯಾಸರಾಯರು. ಪಂಡಿತರು ಕುಹಕವಾಡಿದಾಗ ದೇವರಿಗೆ ಕನ್ನಡ ಅರ್ಥವಾಗುತ್ತದೆ ಎಂದು ನಿರ್ಭಿಡೆಯಿಂದಸಾರಿ ಹೇಳಿದರು.

ದಾಸ ಸಾಹಿತ್ಯ ಪರಂಪರೆಯಲ್ಲಿ ಪ್ರಖ್ಯಾತರಾಗಿರುವ ವ್ಯಾಸರಾಯರಿಗೂ ಬಳ್ಳಾರಿ ಜಿಲ್ಲೆಯ ಹಂಪಿಗೂ ಅವಿನಾಭಾವ ನಂಟು.

ಮೈಸೂರಿನಲ್ಲಿ ಹುಟ್ಟಿದ ಅವರು ನಿಧನರಾಗಿದ್ದು ಹಂಪಿಯಲ್ಲಿ. ಹಂಪಿಗೆ ಸಮೀಪದ ಆನೆಗೊಂದಿಯಲ್ಲೇ ಅವರ ನವ ಬೃಂದಾವನವನ್ನು ನಿರ್ಮಿಸಲಾಗಿತ್ತು. ಈಗ ಆ ಎಲ್ಲ ನೆನಪುಗಳು ದುಃಖದ ಭಾರವನ್ನು ಹೊತ್ತಿವೆ.

ಶ್ರೀಪಾದರಾಜರ ಬಳಿಕ ದಾಸಸಾಹಿತ್ಯ ಪರಂಪರೆಯನ್ನು ಗಟ್ಟಿ ನೆಲೆಯಲ್ಲಿ ಬೆಳೆಸಿದವರ ಪೈಕಿ ವ್ಯಾಸರಾಯರೆಂಬುದು ನಾಣ್ಣುಡಿಯ ರೀತಿಯಲ್ಲೇ ಬಳಕೆಯಲ್ಲಿದೆ. ಉಗಾಭೋಗಗಳೂ ಸೇರಿದಂತೆ, ಅವರ 119 ಕೀರ್ತನೆಗಳ ಪೈಕಿ ಬಹುತೇಕ ಕೃಷ್ಣನ ಕುರಿತಾದದ್ದು ಎಂಬುದೇ ವಿಶೇಷ. ಸಿರಿಕೃಷ್ಣ ಎಂಬುದು ಅವರ ಅಂಕಿತನಾಮ.

ಕನ್ನಡದ ಬಹಳಷ್ಟು ಲೇಖಕರನ್ನು ಪ್ರಭಾವಿಸಿದ ವ್ಯಕ್ತಿತ್ವ ಕೃಷ್ಣ . ಕೀರ್ತನೆಕಾರರು ಕೂಡ ಕೃಷ್ಣನನ್ನು ಪರಮದೈವವೆಂದು ಆರಾಧಿಸಿದವರು. ಭಕ್ತಿರಸ ಧಾರೆಯನ್ನು ಹರಿಸುವಂಥ ರಚನೆಗಳನ್ನು ಕನ್ನಡಕ್ಕೆ ಕೊಟ್ಟವರು. ದಾಸರೊಳಗೆ ಮೂಡಿದ ಧನ್ಯತೆ ಮತ್ತು ಕೃತಾರ್ಥತೆ ಎಂಬುದು ಕೃಷ್ಣನ ಮೂಲಕ ಮೂಡಿಬಂದ ಬಗೆ ವೈವಿಧ್ಯಮಯವಾದುದು. ಇಲ್ಲಿ ಕೃಷ್ಣ ಕೇವಲ ವ್ಯಕ್ತಿತ್ವವಲ್ಲ. ದೃಷ್ಟಿಕೋನ. ಬದುಕುವ ಬಗೆ. ವ್ಯಾಸರಾಯರ ಕೀರ್ತನೆಗಳನ್ನು ಒಮ್ಮೆ ಓದಿಕೊಂಡರೆ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ.

ಕೀರ್ತನೆಗಳನ್ನು ತತ್ವಪದಗಳ ರೂಪದಲ್ಲೂ ನಾವು ಗ್ರಹಿಸಬೇಕು. ದಾಸ ಪರಂಪರೆಯ ಸೀಮಿತ ವಲಯದಾಚೆಗೆ ಕೀರ್ತನೆಗಳು, ನಿರ್ದಿಷ್ಟ ಧಾರ್ಮಿಕ ಜೀವನದ ದೃಷ್ಟಿಕೋನವನ್ನು ಮೀರಿ, ಬದುಕುವ ಬಗೆಯ ಕುರಿತೂ ತಣ್ಣಗೆ ಹೇಳುತ್ತವೆ. ಸಾಮಾಜಿಕ ಚೌಕಟ್ಟುಗಳು ಅದೆಷ್ಟು ಅಪ್ರಾಮಾಣಿಕ, ಅಮಾನವೀಯ ಎಂಬುದರ ಕಡೆಗೂ ಗಮನ ಸೆಳೆಯುತ್ತವೆ.

ಹತ್ತೊಂಭತ್ತು ವರ್ಷಗಳ ಹಿಂದೆ ಕರ್ನಾಟಕ ಸಾಹಿತ್ಯ ಅಕಾಡೆಮಿಯು ಪ್ರಕಟಿಸಿರುವ ತತ್ವಪದಗಳ ಪ್ರಾತಿನಿಧಿಕ ಸಂಕಲನದಲ್ಲಿರುವ ಮೂರನೇ ತತ್ವಪದ ವ್ಯಾಸರಾಯರದ್ದು.

‘ಅಂತರಂಗದಲ್ಲಿ ಹರಿಯ ಕಾಣದವನೇಹುಟ್ಟು ಕುರುಡನೋ’–ಎಂದು ಆರಂಭವಾಗುವ ತತ್ವಪದವು ಭಕ್ತಿ ಕೇಂದ್ರಿತವಾದ ಜೀವನವನ್ನೇ ಆತ್ಯಂತಿಕವೆಂದು ಪ್ರತಿಪಾದಿಸುತ್ತದೆ. ‘ಎನ್ನ ಕಾಲೇ ಕಂಬ ದೇಹವೇ ದೇಗುಲ, ಶಿರವೇ ಹೊನ್ನ ಕಳಸವಯ್ಯ’ ಎಂಬ ಬಸವಣ್ಣನ ವಚನ ಹಾಗೂ ಅವರದ್ದೇ ಇನ್ನೊಂದು ವಚನ, ‘ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ’ ಅನ್ನು ಇದರೊಂದಿಗೆ ಇಟ್ಟು ನೋಡಿದರೆ, ವಚನ ಮತ್ತು ದಾಸಸಾಹಿತ್ಯದ ಭಿನ್ನ ದೃಷ್ಟಿಕೋನಗಳನ್ನು ಬಹಳ ಸೊಗಸಾಗಿ ತೌಲನಿಕ ವಿಶ್ಲೇಷಣೆಗೆ ಒಳಪಡಿಸಬಹುದು.
ಕೀರ್ತನೆಯ ಪೂರ್ಣಪಾಠವನ್ನು ಒಮ್ಮೆ ನೋಡೋಣ.

‘ಅಂತರಂಗದಲ್ಲಿ ಹರಿಯ ಕಾಣದವನೇ
ಹುಟ್ಟು ಕುರುಡನೋ’

ಸಂತತ ಸಿರಿಕೃಷ್ಣ ಚರಿತೆ ಕೇಳದವನೆ
ಜಡಮತಿ ಕಿವುಡನೋ ಎಂದೆಂದಿಗೂ

ಹರುಷದಲ್ಲಿ ನರಹರಿಯ ಪೂಜೆಯ
ಮಾಡದವನೆ ಕೈಮುರಿದವನೊ
ಕುರುವರಸೂತನ ಮುಂದೆ ಕೃಷ್ಣಾಯೆಂದು
ಕುಣಿಯದವನೆ ಕುಂಟನೊ
ನರಹರಿ ಚರಣೋದಕ ಧರಿಸದ ಶಿರ
ನಾಯುಂತ ಹೆಂಚು ಕಾಣೊ
ಸುರವರ ಕೃಷ್ಣಪ್ರಸಾದವಲ್ಲದ ಊಟ
ಸೂಕರ ಭೋಜನವೊ ಎಂದೆಂದಿಗೂ

ಅಮರೇಶಕೃಷ್ಣಗರ್ಪಿತವಲ್ಲದ ಕರ್ಮ
ಅಸತಿಯ ವ್ರತನೇಮವೊ
ರಮೆಯರಸಗೆ ಪ್ರೀತಿಯಿಲ್ಲದ ವಿತರಣೆ
ರಂಡೆಕೊಳರ ಸೂತ್ರವೊ
ಕಮಲನಾಭನ ಪಾಡಿ ಪೊಗಳದ ಸಂಗೀತ
ಗಾರ್ದಭ ರೋದನವೊ
ಮಮತೆಯಲ್ಲಿ ಕೇಶವಗೆ ನಮಸ್ಕಾರ
ಮಾಡದವನೆ ಮೃಗವೊ ಎಂದೆಂದಿಗು

ಜರೆಪುಟ್ಟು ಮರಣವ ತೊಡೆವ ಸುಧೆಯ ಬಿಟ್ಟು
ಸುರೆಯ ಸೇವಿಸಬೇಡವೊ
ಸುರಧೇನುವಿರಲಾಗಿ ಸೂಕರ ಮೊಲೆಹಾಲು
ಕರೆದು ಕುಡಿಯಬೇಡವೊ
ಕರಿರಥ ತುರಗವಿರಲು ಬಿಟ್ಟು ಕೆಡಹುವ
ಕತ್ತೆಯೇರಲಿ ಬೇಡವೊ
ಪರಮಪದವನೀವ ಸಿರಿಕೃಷ್ಣನಿರಲಾಗಿ
ನರರ ಸೇವಿಸಬೇಡವೊ ಎಂದೆಂದಿಗು

ಕಣ್ಣು, ಕಿವಿ, ಕಾಲು, ಶಿರ, ಊಟ, ಕೆಲಸ, ಸಂಗೀತ ಸೇರಿದಂತೆ ಮನುಷ್ಯರಿಗೆ ಅತ್ಯಗತ್ಯವಾದ ಇಂದ್ರಿಯಗಳು ಮತ್ತು ಇಂದ್ರಿಯಗಳು ಬಯಸುವ ಸೌಕರ್ಯಗಳು ಕೃಷ್ಣನಿಲ್ಲದೆ ಅನರ್ಥ, ಅಪ್ರಯೋಜಕ ಎಂಬ ನಿಲುವು ಇಲ್ಲಿನ ಕೀರ್ತನೆಯದು. ಪ್ರತಿ ಸಾಲಿನ ವಿವರಗಳನ್ನಿಟ್ಟುಕೊಂಡು ವಿಶ್ಲೇಷಣೆಗೆ ಹೊರಟರೆ ವ್ಯಾಸರಾಯರ ಅಪಾರ ಜೀವನಾನುಭವಕ್ಕೂ ಮುಖಾಮುಖಿಯಾಗಬಹುದು.

ಕೃಷ್ಣ ಒಬ್ಬೊಬ್ಬರಿಗೆ ಒಂದೊಂದು ಬಗೆಯಲ್ಲಿ ದರ್ಶನ ಕೊಡುವ ವಿಶಿಷ್ಟ ದೈವ. ಲಘು–ಘನ ಶೈಲಿಯ ವ್ಯಕ್ತಿತ್ವ. ದಾಸರಿಗೆ ಆತ ಧನ್ಯತೆಯ ದಾರಿ. ಪುಣ್ಯದ ದಾರಿ. ಗುರಿಯೂ ಅವನೇ, ದಾರಿಯೂ ಅವನೇ.

ಧಾರ್ಮಿಕ ನೆಲೆಗಳಾಚೆಗೆ ನಿಂತು, ಇಲ್ಲಿ ಮಾನವೀಯತೆ ಎಂಬುದನ್ನು, ಜಾತ್ಯತೀತ, ಧರ್ಮಾತೀತ ತತ್ವವನ್ನು ಕೃಷ್ಣನ ಜಾಗದಲ್ಲಿ ನಿಲ್ಲಿಸಿಕೊಂಡರೆ, ಈ ಕೀರ್ತನೆಗೆ ಅಪ್ಪಟ ಸಮಕಾಲೀನ ಮಹತ್ವವೂ ದೊರಕುತ್ತದೆ. ಕೃಷ್ಣ ಎಂಬುದನ್ನು ಬದಲಿಸದೇ, ನಮಗೆ ಬೇಕಾದ ರೀತಿಯಲ್ಲೂ ಇದನ್ನು ಓದಿಕೊಳ್ಳಲು ಸಾಧ್ಯವಿದೆ.

ಕೂಡುವ, ಕಟ್ಟುವ ಆಶಯಗಳಿಗಿಂತಲೂ ಒಡೆಯುವ ದುರಾಶಯಗಳೇ ವಿಜೃಂಭಿಸುತ್ತಿರುವ ಈ ಕಾಲಘಟ್ಟದಲ್ಲಿ ‘ಪರಮ ಪದವನೀವ ಸಿರಿಕೃಷ್ಣನಿರಲಾಗಿ ನರರ ಸೇವಿಸಬೇಡವೋ ಎಂದೆಂದಿಗು’ ಎಂಬ ಸಾಲು ಅತ್ಯಂತ ಮಹತ್ವದ್ದಾಗಿ ಕಾಣುತ್ತದೆ.

‘ನರರನ್ನು ಸೇವಿಸುವ’ ದುಷ್ಕರ್ಮ ಬುದ್ಧಿಯೇ ನಿಧಿಯಾಸೆಗೆವೃಂದಾವನವನ್ನು ಕೆಡಹಲು ಪ್ರಚೋದನೆ ನೀಡಿದಂತಿದೆ. ಇಂಥ ಘಟನೆಗಳು ಮರುಕಳಿಸಬಾರದು.

ವ್ಯಾಸತೀರ್ಥರ ಕಿರು ಪರಿಚಯ

ಕನ್ನಡ ಸಾಹಿತ್ಯದಲ್ಲಿ ಬರುವ ನಡುಗನ್ನಡ ಕಾಲಘಟ್ಟದಲ್ಲಿ ದಾಸ ಸಾಹಿತ್ಯ ಉತ್ತುಂಗದ ಶಿಖರದಲ್ಲಿತ್ತು. ಕನಕದಾಸರು, ಪುರಂದರದಾಸರು, ಜಗನ್ನಾಥದಾಸ, ವ್ಯಾಸತೀರ್ಥರ ಕೀರ್ತನೆಗಳು ಭಕ್ತಿಯ ಪರಾಕಷ್ಠೆಯಲ್ಲಿ ದೇವರಲ್ಲಿ ಲೀನವಾಗುವಂತಹ ಭಕ್ತಿ ಸೆಲೆಯನ್ನು ಕೀರ್ತನೆಗಳಲ್ಲಿ ಕಾಣಬಹುದು. ದಾಸಸಾಹಿತ್ಯ ಪರಂಪರೆಯಲ್ಲಿ ಹಲವಾರು ಕೀರ್ತನಕಾರರನ್ನು ನೋಡಬಹುದು.

ಶ್ರೀಪಾದರಾಜರ ಬಳಿಕ ದಾಸಸಾಹಿತ್ಯವನ್ನು ಹುಲುಸಾಗಿ ಬೆಳೆಸಿದವರು ವ್ಯಾಸತೀರ್ಥರು. ಇವರು ರಚಿಸಿದ 120 ಕೀರ್ತನೆಗಳನ್ನು ಲಭ್ಯವಾಗಿವೆ. ದೇವರನ್ನು ಒಲಿಸಿಕೊಳ್ಳುವ ಪರಿ ಮತ್ತು ಪರಮಾತ್ಮನಲ್ಲಿ ಲೀನವಾಗುವ ಪ್ರಕ್ರಿಯೆಯ ವ್ಯಾಸತೀರ್ಥರ ಒಟ್ಟು ಕೀರ್ತನೆಗಳ ಸಾರ ಎಂಬುದು ಸಾಹಿತ್ಯ ವಿಮರ್ಶಕರ ಅಭಿಪ್ರಾಯವಾಗಿದೆ ಎಂದು ಕನಕ ಅಧ್ಯಯನ ಪೀಠದ ಅಧ್ಯಕ್ಷ ಕಾ.ತ.ಚಿಕ್ಕಣ್ಣ ಹೇಳಿದರು.

ಮೈಸೂರು ಜಿಲ್ಲೆಯ ಬನ್ನೂರು ವ್ಯಾಸತೀರ್ಥರ ಮೂಲ ಸ್ಥಳ. ಕ್ರಿ.ಶ. 1447 - 1547ರ ಕಾಲಘಟ್ಟದಲ್ಲಿ ಜೀವಿಸಿದ್ದರು. ಇನ್ನು ಕೆಲ ವಿದ್ವಾಂಸರು 1447 ರಿಂದ 1539ರವರೆಗೂ ಜೀವಿಸಿದ್ದರು ಎಂದು ಇತಿಹಾಸ ಹೇಳುತ್ತದೆ. ವ್ಯಾಸತೀರ್ಥರ ತಂದೆ ರಾಮಾಚಾರ್ಯರು, ತಾಯಿ ಸೀತಾಬಾಯಿ. ಇವರ ಪೂರ್ವಾಶ್ರಮದ ಹೆಸರು ಯತಿರಾಜ.ಶ್ರೀಪಾದರಾಜರು ಇವರ ವಿದ್ಯಾಗುರುಗಳು. ಬ್ರಹ್ಮಣ್ಯತೀರ್ಥರಿಂದ ಸನ್ಯಾಸ ದೀಕ್ಷೆ ಸ್ವೀಕರಿಸಿದ್ದ ವ್ಯಾಸತೀರ್ಥರು ವಿಜಯ ನಗರ ಸಾಮ್ರಾಜ್ಯದ ರಾಜಗುರುಗಳು ಹಾಗೂ ಮಠಾಧಿಪತಿಗಳಾಗಿ ಧರ್ಮೋಪದೇಶ ನೀಡಿದ್ದರು. ವ್ಯಾಸತೀರ್ಥರನ್ನು ಶ್ರೀಕೃಷ್ಣದೇವರಾಯ ಗುರುಗಳನ್ನಾಗಿ ಸ್ವೀಕರಿಸಿದ್ದರು..

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT