ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಯಡಿಯೂರಪ್ಪರಂಥ 10 ಸಿಎಂಗಳು ಬೇಡ ಎಂದರೂ ಟಿಪ್ಪು ಜಯಂತಿ ಆಚರಿಸುವುದು ಶತಸಿದ್ಧ'

ರಾಜ್ಯ ಟಿಪ್ಪು ಅಭಿಮಾನಿಗಳ ವೇದಿಕೆ ವೇದಿಕೆ ಅಧ್ಯಕ್ಷ ಟಿಪ್ಪುಖಾಸಿಂ ಆಲಿ ಹೇಳಿಕೆ
Last Updated 2 ನವೆಂಬರ್ 2019, 9:54 IST
ಅಕ್ಷರ ಗಾತ್ರ

ಚಿತ್ರದುರ್ಗ: ‘ಮುಖ್ಯಮಂತ್ರಿ ಯಡಿಯೂರಪ್ಪ ಅವರಂತೆ ಟಿಪ್ಪು ಜಯಂತಿಯನ್ನು ವಿರೋಧಿಸುವ ಹತ್ತಾರು ಮಂದಿ ರಾಜ್ಯದ ಮುಖ್ಯಮಂತ್ರಿಗಳಾದರೂ ಟಿಪ್ಪು ಜಯಂತಿ ಆಚರಿಸುವುದು ಶತಸಿದ್ಧ’ ಎಂದು ಟಿಪ್ಪು ಅಭಿಮಾನಿಗಳ ಮಹಾವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಟಿಪ್ಪುಖಾಸಿಂ ಆಲಿ ತಿಳಿಸಿದರು.

‘ಈ ಮೊದಲು ಸರ್ಕಾರದಿಂದಲೇ ನ. 10ರಂದು ಟಿಪ್ಪು ಜಯಂತಿ ಆಚರಿಸಲಾಗುತ್ತಿತ್ತು. ರದ್ದುಗೊಳಿಸಿರುವ ಹಿನ್ನಲೆಯಲ್ಲಿ ಈ ಬಾರಿ ಅಂದೇ ಈದ್ ಮಿಲಾದ್ ಹಬ್ಬವಿರುವ ಕಾರಣ 16 ಅಥವಾ 20ರಂದು ರಾಜ್ಯದಾದ್ಯಂತ ಖಾಸಗಿಯಾಗಿ ಆಚರಿಸುವಂತೆ ಸ್ಥಳೀಯ ಮುಖಂಡರಿಗೆ ಈಗಾಗಲೇ ಸೂಚನೆ ನೀಡಿದ್ದೇವೆ. ಅದರಂತೆ ಚಿತ್ರದುರ್ಗದಲ್ಲೂ ನಡೆಯಲಿದೆ’ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಈ ಹಿಂದೆ ಬಿಜೆಪಿ, ಆರ್‌ಎಸ್‌ಎಸ್‌ನ ಕೆಲ ಮುಖಂಡರು ಟಿಪ್ಪು ಕುರಿತು ಉತ್ತಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅದರಲ್ಲಿ ಯಡಿಯೂರಪ್ಪ ಅವರು ಹೊರತಾಗಿಲ್ಲ. ಆದರೆ, ಈಗರಾಜಕೀಯ ಹಿತಾಸಕ್ತಿಗಾಗಿ ವಿರೋಧಿಸುವ ಮೂಲಕ ಸರ್ಕಾರದಿಂದ ಆಚರಣೆ ರದ್ದುಗೊಳಿಸಿ, ಕೈಬಿಟ್ಟಿರುವುದು ಉತ್ತಮ ಬೆಳವಣಿಗೆಯಲ್ಲ’ ಎಂದರು.

‘ಜಯಂತಿ ಆಚರಣೆಗೆ ಶೇ 90ರಷ್ಟು ಹಿಂದೂಗಳ ವಿರೋಧವಿಲ್ಲ. ರಾಜ್ಯದಲ್ಲಿ ಹಿಂದೂ-ಮುಸ್ಲಿಮರು ಅಣ್ಣತಮ್ಮಂದಿರಂತೆ ಬಾಳುತ್ತಿದ್ದಾರೆ. ಇದನ್ನು ಬಿಜೆಪಿ ಮುಖಂಡರು ಅರ್ಥ ಮಾಡಿಕೊಳ್ಳುತ್ತಿಲ್ಲ. ಕೆಲವರ ಹಿತಾಸಕ್ತಿಗಾಗಿ ಸ್ವಾತಂತ್ರ್ಯ ಹೋರಾಟಗಾರ ಟಿಪ್ಪುವಿನ ಜಯಂತಿ ರದ್ದುಗೊಳಿಸಿರುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

‘ಜಯಂತಿ ರದ್ದುಗೊಳಿಸಿರುವ ಸರ್ಕಾರದ ಕ್ರಮ ಖಂಡಿಸಿ ಹಾಗೂ ಟಿಪ್ಪು ಕುರಿತ ಇತಿಹಾಸವನ್ನು ಪಠ್ಯ ಕ್ರಮದಿಂದಲೂ ತೆಗೆದು ಹಾಕಿಸಲು ತೀರ್ಮಾನಿಸುತ್ತಿರುವ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ರಾಜ್ಯದಾದ್ಯಂತ ಎಲ್ಲ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಮುಂಬರುವ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು’ ಎಂದು ಎಚ್ಚರಿಸಿದರು.

ಕಾಂಗ್ರೆಸ್ ಮುಖಂಡ ಎಂ. ಜಯಣ್ಣ, ‘ಟಿಪ್ಪು ಓರ್ವ ಮುಸ್ಲಿಂ ಸಮುದಾಯದ ರಾಜ ಎಂಬ ಒಂದೇ ಕಾರಣಕ್ಕೆ ಆತನ ಜಯಂತಿಯನ್ನು ಯಡಿಯೂರಪ್ಪ ಅವರು ರದ್ದುಗೊಳಿಸಿದ್ದಾರೆ. ಬಿಜೆಪಿ ಕೋಮುವಾದಿ ಪಕ್ಷ ಎಂಬುದಕ್ಕೆ ಇದಕ್ಕಿಂತಲೂ ಉತ್ತಮ ಉದಾಹರಣೆ ಬೇಕಿಲ್ಲ. ಅದು ಜಾತಿವಾದಿ ಪಕ್ಷವಾಗಿದ್ದು, ಜಾತ್ಯತೀತ ನಿಲುವನ್ನು ಎಂದಿಗೂ ಒಪ್ಪಿಕೊಳ್ಳುವುದಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ನೆರೆ ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಲು ಯಡಿಯೂರಪ್ಪ ಅವರ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ. ಲಕ್ಷಾಂತರ ಮಂದಿ ಮನೆಗಳನ್ನು ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಮೊದಲು ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಯತ್ನ ಪಡುವುದನ್ನು ಬಿಟ್ಟು, ಕೋಮುಸೌಹಾರ್ದತೆ ಹಾಳು ಮಾಡುವಂಥ ನಿರ್ಧಾರ ಕೈಗೊಂಡಿರುವುದು ಸರಿಯಲ್ಲ’ ಎಂದರು.

‘ಟಿಪ್ಪು ಜಯಂತಿ ಸರ್ಕಾರದಿಂದ ಆಚರಿಸಬೇಕೆ, ಬೇಡವೇ ಎಂಬ ವಿಚಾರವನ್ನು ವಿಧಾನಸಭೆ ಅಧಿವೇಶನದಲ್ಲಿ ಪ್ರಸ್ತಾಪಿಸಿ ನಂತರ ನಿರ್ಧಾರ ಕೈಗೊಳ್ಳುವುದು ಉತ್ತಮ. ಅದನ್ನು ಬಿಟ್ಟು ಯಡಿಯೂರಪ್ಪ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ’ ಎಂದು ಅಸಮಧಾನ ವ್ಯಕ್ತಪಡಿಸಿದರು.

ಅಹಿಂದ ಮುಖಂಡ ಮುರುಘರಾಜೇಂದ್ರ ಒಡೆಯರ್, ‘ಟಿಪ್ಪು ಒಬ್ಬ ದೇಶಪ್ರೇಮಿ. ಆತನ ಇತಿಹಾಸ ಬಿಜೆಪಿಯವರಿಗೂ ಗೊತ್ತಿದೆ. ಹೀಗಿದ್ದರೂ ಅದನ್ನು ತಿರುಚುವ ಕೆಲಸಕ್ಕೆ ಮುಂದಾಗುತ್ತಿದ್ದಾರೆ. ಜಯಂತಿಯನ್ನು ಸರ್ಕಾರದಿಂದಲೇ ನಡೆಸುವವರೆಗೂ ಹೋರಾಟ ಮುಂದುವರೆಸುತ್ತೇವೆ’ ಎಂದರು. ಮುಖಂಡರಾದ ಜಮೀರ್, ಶಬ್ಬೀರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT