ಶುಕ್ರವಾರ, ಏಪ್ರಿಲ್ 10, 2020
19 °C

ಪಶ್ಚಿಮ ಬಂಗಾಳ ಬಾಂಬ್ ಸ್ಫೋಟ ಪ್ರಕರಣ: ದೊಡ್ಡಬಳ್ಳಾಪುರದಲ್ಲಿ ಶಂಕಿತ ಉಗ್ರ ಸೆರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದೊಡ್ಡಬಳ್ಳಾಪುರ: ಪಶ್ಚಿಮ ಬಂಗಾಳದ ಬುರ್ದ್ವಾನ್‌ನ ಖಗ್ರಾಗಡದಲ್ಲಿ 2014ರಲ್ಲಿ ಸಂಭವಿಸಿದ್ದ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿ ಹಬೀಬುಲ್ ರೆಹಮಾನ್‌ (30) ಎಂಬಾತನನ್ನು ದೊಡ್ಡಬಳ್ಳಾಪುರದಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್‍ಐಎ) ಮಂಗಳವಾರ ಬೆಳಿಗ್ಗೆ ಬಂಧಿಸಿದೆ.

ಬಂಧಿತ ‘ಜಮಾತ್ ಉಲ್ ಮುಜಾಹಿದೀನ್, ಬಾಂಗ್ಲಾದೇಶ’ ಎಂಬ ಉಗ್ರ ಸಂಘಟನೆಯ ಸದಸ್ಯ ಎಂದು ಎನ್‍ಐಎ ತಿಳಿಸಿದೆ. 2014ರ ಅ. 2ರಂದು ಖಗ್ರಾಗಡದ ಹಸನ್ ಚೌಧರಿ ಎಂಬುವವರ ಮನೆಯಲ್ಲಿ ಕಚ್ಚಾ ಬಾಂಬ್ ತಯಾರಿಸುತ್ತಿದ್ದಾಗ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಮೃತಪಟ್ಟು, ಒಬ್ಬರು ಗಾಯಗೊಂಡಿದ್ದರು. ಘಟನೆ ಬಗ್ಗೆ ಆರಂಭದಲ್ಲಿ ಬುರ್ದ್ವಾನ್‌ ಪೊಲೀಸರು ತನಿಖೆ ನಡೆಸಿದ್ದು, ನಂತರ ಪಶ್ಚಿಮ ಬಂಗಾಳದ ಸಿಐಡಿ ತನಿಖೆ ನಡೆಸಿತ್ತು. ಬಳಿಕ ಎನ್‍ಐಎಗೆ ವರ್ಗಾಯಿಸಲಾಗಿತ್ತು.

ಬಳಿಕ ತನಿಖೆಯನ್ನು ಎನ್‍ಐಎಗೆ ವರ್ಗಾಯಿಸಲಾಗಿತ್ತು. ‘ಖಚಿತ ಮಾಹಿತಿ ಮೇರೆಗೆ ಮಂಗಳವಾರ ಬೆಳಿಗ್ಗೆ 10.30ರಿಂದ 11.40ರ ನಡುವೆ ಕಾರ್ಯಾಚರಣೆ ನಡೆಯಿತು. ದೊಡ್ಡಬಳ್ಳಾಪುರದ ಚಿಕ್ಕಪೇಟೆ ಮಸೀದಿಯ ಮೌಲ್ವಿ ಅನ್ವರ್‌ ಹುಸೇನ್ ಇಮಾಮ್ ಆರೋಪಿಗೆ ಆಶ್ರಯ ನೀಡಿದ್ದ. ಮಸೀದಿಯಲ್ಲಿ ಇರುವಾಗಲೇ ಆರೋಪಿಯನ್ನು ಬಂಧಿಸಲಾಗಿದೆ’ ಎಂದು ಎನ್‍ಐಎ ಮೂಲಗಳು ತಿಳಿಸಿವೆ.

ಆರೋಪಿಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗಾಗಿ ಕೋಲ್ಕತ್ತದ ಎನ್‍ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಅನುಮತಿ ನೀಡಬೇಕು ಎಂದು ಬೆಂಗಳೂರಿನ ಎನ್‍ಐಎ ವಿಶೇಷ ನ್ಯಾಯಾಲಯಕ್ಕೆ ಎನ್‌ಐಎ ತಂಡ ಮನವಿ ಮಾಡಲಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಅಸ್ಸಾಂ ಮೂಲದ ಮೌಲ್ವಿ

ಚಿಕ್ಕಪೇಟೆಯಲ್ಲಿನ ಮಸೀದಿಯಲ್ಲಿ ಒಂದು ವರ್ಷದಿಂದ ಮೌಲ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವ ಅನ್ವರ್‌ ಹುಸೇನ್ ಇಮಾಮ್ ಅಸ್ಸಾಂ ರಾಜ್ಯದವರು. ಅವರಿಗೆ ರಾಯಚೂರಿನ ಯುವತಿ ಜತೆ ವಿವಾಹವಾಗಿತ್ತು. ಹಬೀಬುಲ್ ರೆಹಮಾನ್‌ಗೆ ಮೌಲ್ವಿಯವರು ಸ್ನೇಹಿತರ ಮೂಲಕ ಪರಿಚಯವಾಗಿ ಇಲ್ಲಿಗೆ ಆಶ್ರಯ ಪಡೆಯಲು ಬಂದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

ಇಸ್ಲಾಂಪುರದಲ್ಲಿ ಬಾಡಿಗೆ ಮನೆ: ‘ಬಾಂಗ್ಲಾದೇಶದವನಾದ ಬಂಧಿತ ಆರೋಪಿ ಹಬೀಬುಲ್ ರೆಹಮಾನ್‌ ನಗರದ ಇಸ್ಲಾಂಪುರ ಪ್ರದೇಶದಲ್ಲಿ ಮೂರು ದಿನಗಳ ಹಿಂದೆ ಪುಟ್ಟ ಮನೆಯೊಂದನ್ನು ಬಾಡಿಗೆ ಪಡೆಯಲು ಪ್ರಯತ್ನಿಸಿದ್ದ. ₹ 2 ಸಾವಿರ ಮುಂಗಡ ಹಾಗೂ ತಿಂಗಳಿಗೆ ₹ 900 ಬಾಡಿಗೆ ನೀಡುವುದಾಗಿ ಮಾತುಕತೆ ನಡೆಸಿದ್ದ. ಆದರೆ, ಇನ್ನೂ ಬಾಡಿಗೆ ಮನೆಗೆ ವಾಸ್ತವ್ಯ ಬದಲಿಸಿರಲಿಲ್ಲ. ಹಬೀಬುಲ್ ರೆಹಮಾನ್‌ ಇಲ್ಲಿಗೆ ಬಂದು ಒಂದೆರಡು ವಾರಗಳಷ್ಟೇ ಆಗಿದ್ದು, ಶಾಂತಿನಗರ ಪ್ರದೇಶದಲ್ಲಿ ಪಾನಿಪುರಿ ಅಂಗಡಿ ನಡೆಸಿಕೊಂಡು ಇರಲು ಯೋಜನೆ ರೂಪಿಸಿದ್ದ’ ಎಂದು ಮಾಹಿತಿ ಲಭಿಸಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು