ಪಶ್ಚಿಮ ಘಟ್ಟದ 177 ಹೆಕ್ಟೇರ್‌ ಕಾಡು ನಾಶ?

ಮಂಗಳವಾರ, ಜೂಲೈ 23, 2019
26 °C
ಗೋವಾಕ್ಕೆ ಹೊಸ ವಿದ್ಯುತ್‌ ಮಾರ್ಗ l ಪ್ರಸ್ತಾವ ಕೈಬಿಡಲು ಒತ್ತಾಯ

ಪಶ್ಚಿಮ ಘಟ್ಟದ 177 ಹೆಕ್ಟೇರ್‌ ಕಾಡು ನಾಶ?

Published:
Updated:

ಬೆಂಗಳೂರು: ಗೋವಾ ರಾಜ್ಯಕ್ಕೆ ಹೆಚ್ಚುವರಿ ವಿದ್ಯುತ್ ಒದಗಿಸಲು ರಾಜ್ಯದ ಪಶ್ಚಿಮ ಘಟ್ಟಗಳ ಮೂಲಕ ವಿದ್ಯುತ್ ಮಾರ್ಗ ನಿರ್ಮಿಸುವ ಪ್ರಸ್ತಾವ ಸರ್ಕಾರದ ಮುಂದಿದೆ. ಇದು ಜಾರಿಯಾದರೆ, ಕರ್ನಾಟಕ ರಾಜ್ಯದ ಪಶ್ಚಿಮ ಘಟ್ಟ ಪ್ರದೇಶದ 177 ಹೆಕ್ಟೇರ್‌ ದಟ್ಟ ಕಾಡು ನಾಶವಾಗಲಿದೆ.

ಧಾರವಾಡ ಜಿಲ್ಲೆಯ ನರೇಂದ್ರದಿಂದ ಗೋವಾಕ್ಕೆ ವಿದ್ಯುತ್ ಮಾರ್ಗ ನಿರ್ಮಿಸಲು ಮುಂದಾಗಿರುವ ‘ಗೋವಾ ತಮ್ನಾರ್ ಟ್ರಾನ್ಸ್‌ಮಿಷನ್ ಪ್ರಾಜೆಕ್ಟ್ ಲಿಮಿಟೆಡ್’ ಸಂಸ್ಥೆಯು ಅರಣ್ಯ ಪ್ರದೇಶವನ್ನು ಅರಣ್ಯೇತರ ಬಳಕೆಗೆ ಅವಕಾಶ ನೀಡುವಂತೆ ಕೋರಿದೆ. ಧಾರವಾಡ ಜಿಲ್ಲೆಯಲ್ಲಿ 4.7 ಹೆಕ್ಟೇರ್, ಬೆಳಗಾವಿ ಜಿಲ್ಲೆಯಲ್ಲಿ 101 ಹೆಕ್ಟೇರ್ ಹಾಗೂ ಉತ್ತರ ಕನ್ನಡ ಜಿಲ್ಲೆಯಲ್ಲಿ 70 ಹೆಕ್ಟೇರ್ ಅರಣ್ಯ ಪ್ರದೇಶಗಳ ಪರಿವರ್ತನೆಗೆ ಅನುಮತಿ ಕೋರಿ ಪ್ರಸ್ತಾವನೆ ಸಲ್ಲಿಸಿದೆ. ಈ ಪ್ರಸ್ತಾವವನ್ನು ಆರಂಭಿಕ ಹಂತದಲ್ಲೇ ಕೈಬಿಡುವಂತೆ ವನ್ಯಜೀವಿ ಕಾರ್ಯಕರ್ತರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಉದ್ದೇಶಿತ ವಿದ್ಯುತ್ ಮಾರ್ಗವು ಬೆಳಗಾವಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ದಾಂಡೇಲಿ ಆನೆ ಧಾಮ, ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಭೀಮಗಡ ಅಭಯಾರಣ್ಯದ ಡೀಮ್ಡ್ ಪರಿಸರ ಸೂಕ್ಷ್ಮವಲಯ, ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಪ್ರದೇಶದ ಡೀಮ್ಡ್ ಪರಿಸರ ಸೂಕ್ಷ್ಮವಲಯ ಹಾಗೂ ದಾಂಡೇಲಿ ಅಭಯಾರಣ್ಯಗಳ ಮೂಲಕ ಹಾದುಹೋಗಲಿದೆ.

ಕಾಡು ಪ್ರಾಣಿಗಳಿಗೆ ಆಪತ್ತು

‘ಉದ್ದೇಶಿತ ವಿದ್ಯುತ್‌ ಮಾರ್ಗ ಹಾದುಹೋಗುವ ಪ್ರದೇಶಗಳು ಹುಲಿ, ಚಿರತೆ, ಆನೆ, ಕೆನ್ನಾಯಿ, ಕಾಳಿಂಗ ಸರ್ಪ, ಮಂಗಟ್ಟೆ ಹಕ್ಕಿ (ಹಾರ್ನ್‌ಬಿಲ್) ಮುಂತಾದ ಅಳಿವಿನಂಚಿನಲ್ಲಿರುವ ಕಾಡುಪ್ರಾಣಿಗಳ ಆಶ್ರಯ ತಾಣಗಳಾಗಿವೆ. ಈ ಯೋಜನೆ ಜಾರಿಯಾದರೆ ಈ ಕಾಡುಪ್ರಾಣಿಗಳು ಆಪತ್ತುಎದುರಿಸಲಿವೆ. ಮಾನವ– ವನ್ಯಜೀವಿ ಸಂಘರ್ಷವೂ ಹೆಚ್ಚಲಿದೆ’ ಎಂದು ವನ್ಯಜೀವಿ ಕಾರ್ಯಕರ್ತ ಗಿರಿಧರ ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.

‘ಹಲವಾರು ನದಿ, ಹಳ್ಳ-ಕೊಳ್ಳಗಳ ಮೂಲವನ್ನು ಹೊಂದಿರುವ ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಾಡುಗಳು ರಾಷ್ಟ್ರೀಯ ಹೆದ್ದಾರಿ 4ಎ, ರೈಲು ಮಾರ್ಗ, ಅಳ್ನಾವರ್- ರಾಮನಗರ ರಾಜ್ಯ ಹೆದ್ದಾರಿ ಸೇರಿದಂತೆ ಹಲವಾರು ಯೋಜನೆಗಳಿಂದಾಗಿ ಈಗಾಗಲೇ ಹಾನಿಗೊಳಗಾಗಿವೆ. ಇಲ್ಲಿ ಹೊಸ ವಿದ್ಯುತ್ ಮಾರ್ಗಕ್ಕೆ ಅನುಮತಿ ನೀಡಿದಲ್ಲಿ ಅಳಿದುಳಿದ ಕಾಡುಗಳ ಮೇಲೂ ಗಂಭೀರ ಪರಿಣಾಮ ಉಂಟಾಗಲಿದೆ’ ಎಂದರು.

‘ಉತ್ತರ ಕನ್ನಡ: ಕ್ಷೀಣಿಸುತ್ತಿದೆ ಕಾಡು’

ರಾಜ್ಯದಲ್ಲೇ ಅತೀ ಹೆಚ್ಚು ಕಾಡು ಇರುವ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾದ ಉತ್ತರ ಕನ್ನಡದಲ್ಲಿ ಹಸಿರು ಸಂಪತ್ತು ಭಾರಿ ಪ್ರಮಾಣದಲ್ಲಿ ಕಣ್ಮರೆಯಾಗುತ್ತಿದೆ.

1980ಕ್ಕೂ ಮೊದಲೇ ಜಿಲ್ಲೆಯ ಸಾವಿರಾರು ಹೆಕ್ಟೇರ್ ಕಾಡನ್ನು ಅರಣ್ಯೇತರ ಚಟುವಟಿಕೆಗೆ ಉಪಯೋಗಿಸಲಾಗಿತ್ತು. 1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದ ಬಳಿಕವೂ ಜಿಲ್ಲೆಯ 9,600 ಹೆಕ್ಟೇರ್‌ಗೂ ಹೆಚ್ಚಿನ ಕಾಡನ್ನು ಅರಣ್ಯೇತರ ಉದ್ದೇಶಗಳಿಗೆ ಬಳಸಲಾಗಿದೆ. ಕದ್ರಾ ಹಾಗೂ ಶರಾವತಿ ಟೇಲ್ ರೇಸ್ ಜಲ ವಿದ್ಯುತ್ ಯೋಜನೆಗಳು, ಸೀಬರ್ಡ್ ನೌಕಾನೆಲೆ, ಕೈಗಾ ಅಣು ವಿದ್ಯುತ್ ಸ್ಥಾವರ ಸೇರಿದಂತೆ ಹಲವಾರು ಅರಣ್ಯೇತರ ಚಟುವಟಿಕೆಗೆ ಕಾಡನ್ನು ಬಳಸಲು ಒಪ್ಪಿಗೆ ನೀಡಲಾಗಿದೆ. ಈ ಕುರಿತು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದಿಂದ ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳು ‘ಪ್ರಜಾವಾಣಿ’ಗೆ ಲಭ್ಯವಾಗಿವೆ.

ಪ್ರಮುಖ ಯೋಜನೆಗಳಿಗೆ ನೀಡಿರುವ ಅರಣ್ಯ ಭೂಮಿ (1980ರಿಂದ)

* ಕದ್ರಾ ಜಲ ವಿದ್ಯುತ್ ಯೋಜನೆ; 3051 ಹೆಕ್ಟೇರ್

* ಸೀಬರ್ಡ್ ನೌಕಾನೆಲೆ; 2259 ಹೆಕ್ಟೇರ್

* ಕೈಗಾ ಅಣು ವಿದ್ಯುತ್ ಸ್ಥಾವರ; 732 ಹೆಕ್ಟೇರ್

* ಶರಾವತಿ ಟೇಲ್ ರೇಸ್ ಜಲವಿದ್ಯುತ್ ಯೋಜನೆ; 700 ಹೆಕ್ಟೇರ್

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !