ಭಾನುವಾರ, ಏಪ್ರಿಲ್ 18, 2021
31 °C

ಫಲಿತಾಂಶ ವಿಶ್ಲೇಷಣೆ | ಉಳಿಯುತ್ತಾ, ಉರುಳುತ್ತಾ ರಾಜ್ಯದ ಮೈತ್ರಿ ಸರ್ಕಾರ

ವೈ.ಗ.ಜಗದೀಶ್ / ಎಸ್.ರವಿಪ್ರಕಾಶ್ Updated:

ಅಕ್ಷರ ಗಾತ್ರ : | |

ಫಲಿತಾಂಶ ಕೊನೆಯ ಘಟ್ಟಕ್ಕೆ ಬಂದಿದೆ. ರಾಜ್ಯದಲ್ಲಿ ಬಿಜೆಪಿಗೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದ್ದರೆ, ಜೆಡಿಎಸ್‌ ಮತ್ತು ಕಾಂಗ್ರೆಸ್‌ ಹೀನಾಯವಾಗಿ ಸೋತಿವೆ. ಈ ಫಲಿತಾಂಶ ರಾಜ್ಯ ರಾಜಕಾರಣದ ಮೇಲೆ ಮತ್ತು ಮೈತ್ರಿ ಸರ್ಕಾರದ ಮೇಲೆ ಬೀರಬಹುದಾದ ಪರಿಣಾಮಗಳ ಬಗ್ಗೆ ವಿಶ್ಲೇಷಿಸಿದ್ದಾರೆ ‘ಪ್ರಜಾವಾಣಿ’ ವರದಿಗಾರರ ವಿಭಾಗದ ಮುಖ್ಯಸ್ಥರಾದ ವೈ.ಗ.ಜಗದೀಶ್ ಮತ್ತು ಮುಖ್ಯ ವರದಿಗಾರ ಎಸ್.ರವಿಪ್ರಕಾಶ್

ರಾಜ್ಯದಲ್ಲಿ ಬಿಜೆಪಿ ಸಾಧಿಸಿರುವ ಮುನ್ನಡೆ ಮೈತ್ರಿ ಸರ್ಕಾರಕ್ಕೆ ಕಂಟಕವಾಗಬಹುದು ಎಂದು ಈ ತಕ್ಷಣ ಅಂತಿಮ ನಿರ್ಣಯಕ್ಕೆ ಬರಲು ಆಗುವುದಿಲ್ಲ. ಕಳೆದ ಒಂದು ವರ್ಷದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕೆಲಸ ಮಾಡಿದೆ. ಇದು ಅಪವಿತ್ರ ಮೈತ್ರಿ ಅಂತ ಬಿಜೆಪಿ ಟೀಕೆ ಮಾಡ್ತಾನೇ ಬಂದಿದೆ. ಜನರ ಆದೇಶಕ್ಕೆ ಕಾರಣ ಏನೇ ಇರಬಹುದು. ಒಟ್ಟು 28 ಕ್ಷೇತ್ರಗಳ ಪೈಕಿ 25ರಲ್ಲಿ ಬಿಜೆಪಿ ಜಯಗಳಿಸಿದೆ. ಒಂದು ಕಡೆ ಮಾತ್ರ ಜಡಿಎಸ್, ಒಂದು ಕಡೆ ಮಾತ್ರ ಕಾಂಗ್ರೆಸ್, ಒಂದು ಕಡೆ ಮಾತ್ರ ಪಕ್ಷೇತರ ಅಭ್ಯರ್ಥಿ ಜಯಗಳಿಸಿದ್ದಾರೆ.

ಗೆಲುವು ಅಥವಾ ಒಳಿತಾದಾಗ ಹೇಗೆ ಸಾಮೂಹಿಕ ನಾಯಕತ್ವವನ್ನು ಕೊಂಡಾಡುತ್ತಾರೋ ಹಾಗೆ ಸೋಲಿಗೂ ಎಲ್ಲರೂ ಹೊಣೆಗಾರರು. ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ, ನಾಯಕರಾದ ಎಚ್‌.ಡಿ.ದೇವೇಗೌಡ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಸೇರಿದಂತೆ ಎಲ್ಲರೂ ಹೊಣೆಗಾರರೇ. ಇವರಿಷ್ಟೂ ಜನ ಮೈತ್ರಿ ಸರ್ಕಾರದ ಮುಂಚೂಣಿಯಲ್ಲಿದ್ದವರು. ಮೈತ್ರಿ ಸರ್ಕಾರದ ಮೇಲೆ ಫಲಿತಾಂಶದ ಪರಿಣಾಮವನ್ನು ಈ ಕ್ಷಣ ಹೇಳುವುದು ಕಷ್ಟ. ಸೋಲಿನ ಬಗ್ಗೆ ರಾಜ್ಯ ನಾಯಕರು ಚರ್ಚಿಸಿ ಯಾರ ಮೇಲೆ ಹೊಣೆ ಹೊರಿಸ್ತಾರೆ, ಗೂಬೆ ಕೂರಿಸ್ತಾರೆ ಅನ್ನೋದು ನಾಳೆ ಬೆಳಕು ಹರಿದ ನಂತರ ಸಿಗುವ ಚಿತ್ರಣ. ಇದು ಬಿಜೆಪಿಗೆ ಅನುಕೂಲಕಾರಿ ವಾತಾವರಣ ನಿರ್ಮಾಣ ಮಾಡಿದೆ ಅಂತ ಸದ್ಯದ ಮಟ್ಟಿಗೆ ಹೇಳಬಹುದು.

ಮಲ್ಲಿಕಾರ್ಜುನ ಖರ್ಗೆ ಮತ್ತು ಕಾಂಗ್ರೆಸ್ ಪಕ್ಷದ ಭದ್ರಕೋಟೆಯಾಗಿದ್ದ ಚಿಂಚೋಳಿಯಲ್ಲಿ ಬಿಜೆಪಿ ಗೆದ್ದಿದೆ. ಲೋಕಸಭೆ ಮತ್ತು ಉಪಚುನಾವಣೆಯ ಗೆಲುವು ಜನರ ಒಲವು ಬಿಜೆಪಿ ಪರ ಇರುವುದನ್ನುತೋರಿಸುತ್ತೆ. ಕುಂದಗೋಳದಲ್ಲಿ ಕಾಂಗ್ರೆಸ್ ಗೆದ್ದಿದೆ. ಬಿಜೆಪಿ ಪರ ಒಲವು, ಜೆಡಿಎಸ್‌ ಕಾಂಗ್ರೆಸ್‌ಗೆ ವಿರೋಧ ಅಂತ ಹೇಳಲು ಆಗುವುದಿಲ್ಲ. ಒಂದು ತಿಂಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಬಹುದು ಎನ್ನುವ ಲೆಕ್ಕಾಚಾರ ಸದ್ಯದ ಮಟ್ಟಿಗೆ ನಡೆಯುತ್ತಿದೆ. 

ಮತ್ತೊಮ್ಮೆ ಆಪರೇಷನ್ ಕಮಲ

ಬಿಜೆಪಿಗೆ ಇದು ಭೀಮಬಲ ತಂದುಕೊಟ್ಟಿರುವ ಈ ಫಲಿತಾಂಶ ಆಪರೇಷನ್ ಕಮಲಕ್ಕೆ ಮತ್ತೊಮ್ಮೆ ನಾಂದಿ ಹಾಡಬಹುದೇ ಎನ್ನುವ ಪ್ರಶ್ನೆಯನ್ನೂ ಹುಟ್ಟುಹಾಕಿದೆ.

ಕಾಂಗ್ರೆಸ್‌ನಲ್ಲಿರುವ 6ರಿಂದ 10 ಮಂದಿ ಅತೃಪ್ತರಿಗೆ ಈ ಫಲಿತಾಂಶ ಎಷ್ಟರಮಟ್ಟಿಗೆ ಬಲ ತಂದುಕೊಟ್ಟಿದೆ ಎನ್ನುವುದು ಈಗ ಊಹೆಗೆ ಸಿಗದ ಸಂಗತಿ. ಈ ಸಂದರ್ಭ ಬಳಸಿಕೊಂಡು ಅತೃಪ್ತರನ್ನು ಸೆಳೆದು ಬಿಜೆಪಿ ಸರ್ಕಾರ ರಚಿಸುವ ಪ್ರಯತ್ನ ಮಾಡಬಹುದು. ಚಿಂಚೋಳಿಯಲ್ಲಿ ಜಯ ಗಳಿಸಿದ ಕಾರಣ ಬಿಜೆಪಿ ಶಾಸಕರ ಸಂಖ್ಯೆ ಹೆಚ್ಚಾಗಿದೆ. ಆರು ಸದಸ್ಯರ ರಾಜೀನಾಮೆ ಕೊಡಿಸಿಯಾದರೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚಿಸಬೇಕು ಎನ್ನುವ ಅಪೇಕ್ಷೆ ಮತ್ತು ಆಶಯ ರಾಜ್ಯ ಬಿಜೆಪಿ ನಾಯಕರಲ್ಲಿದೆ. ಕೇಂದ್ರದಲ್ಲಿ ಬಿಜೆಪಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎನ್ನುವಂತಿದೆ. ಇಂಥ ಹೊತ್ತಿನಲ್ಲಿ ಇಲ್ಲಿರುವ ಸರ್ಕಾರ ಕೆಡವಿ, ದೇಶದಲ್ಲಿ ಮೈತ್ರಿ ಸರ್ಕಾರ ಕೆಡವಿದ ಅಪವಾದಕ್ಕೆ ಈಡಾಗುವುದು ಬೇಡ ಎಂದು ಕೇಂದ್ರ ನಾಯಕರು ಹೇಳಿದರೆ ಮತ್ತೆ ಮುಖ್ಯಮಂತ್ರಿಯಾಗಬೇಕು ಎನ್ನುವ ಯಡಿಯೂರಪ್ಪ ಆಶಯ ಫಲಿಸುವುದಿಲ್ಲ.

ಸೋತರು ಘಟಾನುಘಟಿಗಳು

ಸೋತವರ ಪಟ್ಟಿಯನ್ನು ಒಮ್ಮೆ ನೋಡಿ. ನಿಖಿಲ್ ಕುಮಾರಸ್ವಾಮಿ, ಎಚ್‌.ಡಿ.ದೇವೇಗೌಡ, ಕೆ.ಎಚ್‌.ಮುನಿಯಪ್ಪ, ವೀರಪ್ಪ ಮೊಯಿಲಿ, ಮಲ್ಲಿಕಾರ್ಜುನ ಖರ್ಗೆ... ಹೀಗೆ ಎರಡೂ ಪಕ್ಷಗಳ ಘಟನಾನುಘಟಿಗಳು ಸೋತಿದ್ದಾರೆ. ಮಂಡ್ಯದಲ್ಲಿದ್ದ ನಿಖಿಲ್ ಕುಮಾರಸ್ವಾಮಿಯನ್ನು ಘಟನಾನುಘಟಿ ಎನ್ನಲು ಆಗದು. ಆದರೆ ಸ್ವತಃ ಮುಖ್ಯಮಂತ್ರಿಯೇ ನಾನು ಅಲ್ಲಿ ಸ್ಪರ್ಧಿ ಅಂದಿದ್ರು. ಹೀಗಾಗಿ ಅದು ಮಹತ್ವ ಪಡೆದುಕೊಂಡಿತ್ತು. ಅದೇ ಹೊತ್ತಿಗೆ ಸಿದ್ದರಾಮಯ್ಯ ಅವರ ಪ್ರಭಾವ ಇರುವ ಮೈಸೂರಿನಲ್ಲಿಯೂ ಕಾಂಗ್ರೆಸ್ ಸೋತಿದೆ.

ತನಗೆ ಬಲವಿರುವ ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್ ಗೆದ್ದಿಲ್ಲ. ಇದಕ್ಕೆ ಮೈತ್ರಿ ಮಾಡಿಕೊಂಡಿದ್ದೇ ಹೊಣೆ ಅಂತ ಇಬ್ಬರೂ ಪರಸ್ಪರ ದೂರಲು ಆರಂಭಿಸಿದರೆ ಸಿಟ್ಟು, ಅಸಹನೆ ಸ್ಫೋಟಗೊಂಡರೆ ಅವರವರೇ ಕಚ್ಚಾಡಿಕೊಂಡು ಬೀಳ್ತಾರೆ. ಆಗ ಮಧ್ಯಪ್ರವೇಶಿಸಿ ಸರ್ಕಾರ ರಚಿಸುವುದು ಅಥವಾ ಚುನಾವಣೆಗೆ ಹೋಗುವುದು ಸೂಕ್ತ ಎನ್ನುವುದು ಬಿಜೆಪಿ ಹಿರಿಯ ನಾಯಕರ ಲೆಕ್ಕಾಚಾರ.

ಪಕ್ಷ ಮೂರು, ಲೆಕ್ಕಾಚಾರ ಹತ್ತಾರು

ರಾಜ್ಯದಲ್ಲಿ 22 ಸ್ಥಾನ ಗೆಲ್ಲುವುದು (ಮಿಷನ್ 22) ಯಡಿಯೂರಪ್ಪ ಅವರ ಎದುರು ಇದ್ದ ಗುರಿ. ಈ ಲೆಕ್ಕದಲ್ಲಿ ನೋಡಿದರೆ ಅವರದು ಗುರಿ ಮೀರಿದ ಸಾಧನೆ. ಹೀಗಾಗು ಉತ್ಸಾಹ ಇಮ್ಮಡಿಯಾಗಿರುವ ಯಡಿಯೂರಪ್ಪ, ವರಿಷ್ಠರ ಏನು ಬೇಕಾದರೂ ಹೇಳಲಿ, ರಾಜ್ಯದಲ್ಲಿ ಸರ್ಕಾರ ರಚಿಸಲು ಮುಂದಾಗಬಹುದು ಎನ್ನುವ ಮತ್ತೊಂದು ಲೆಕ್ಕಾಚಾರವೂ ರಾಜ್ಯ ರಾಜಕೀಯ ವಲಯದಲ್ಲಿ ಚಾಲ್ತಿಯಲ್ಲಿದೆ.

ಇತ್ತ ಕಾಂಗ್ರೆಸ್ ಕಡೆ ನೋಡೋಣ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು, ಉಸ್ತುವಾರಿಗಳ ಮೇಲೆಲ್ಲಾ ಟೀಕಾ ಪ್ರಹಾರ ಮಾಡಿರುವ ಹಲವು ಅತೃಪ್ತ ಮನಸ್ಸುಗಳು ಕಾಂಗ್ರೆಸ್‌ನಲ್ಲಿವೆ. ಕಾಂಗ್ರೆಸ್‌ನಲ್ಲಿ ಅಂಥ ಮೂರ್ನಾಲ್ಕು ಗುಂಪುಗಳಿವೆ. ತಮಗೆ ಬೆಂಗಳೂರು ಕೇಂದ್ರದಿಂದ ಲೋಕಸಭೆ ಸ್ಪರ್ಧಿಸಲು ಅವಕಾಶ ಮಾಡಿಕೊಡಲಿಲ್ಲ, ಮಂತ್ರಿಯಾಗಲು ಸಾಧ್ಯವಾಗಲಿಲ್ಲ ಎನ್ನುವುದು ರೋಷನ್ ಬೇಗ್‌ ಅವರಂಥ ನಾಯಕರ ಸಿಟ್ಟಿನ ಮೂಲ. 

ಕಾಂಗ್ರೆಸ್‌ನ ಬಹುತೇಕ ಶಾಸಕರಲ್ಲಿ ‘ಮೈತ್ರಿಯಿಂದ ನಮಗಾಗಲೀ, ಪಕ್ಷಕ್ಕಾಗಲೀ ಅನುಕೂಲವಾಗಿಲ್ಲ‘ ಎನ್ನುವ ಸಿಟ್ಟು ಇದೆ. ಸುಧಾಕರ, ಸೋಮಶೇಖರ್ ಅವರಂಥವರು ಇದೇ ಮಾತು ಹೇಳ್ತಾರೆ. ‘ಮೈತ್ರಿ ಬೇಕಿರಲಿಲ್ಲ‘ ಎನ್ನುವ ಅಭಿಪ್ರಾಯವೂ ಹಲವು ಶಾಸಕರಲ್ಲಿದೆ. ‘ರಾಜ್ಯಕ್ಕೆ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿರಬಹುದು. ನಮಗೆ ಮಾತ್ರ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ’ ಎಂದು ಹಲವರು ಅಸಹನೆ ಹೊರಹಾಕಿದ್ದಾರೆ. 

ದೇವೇಗೌಡರು ಸ್ಪರ್ಧಿಸುವ ತೀರ್ಮಾನ ಹೊರಬಿದ್ದ ನಂತರ ತುಮಕೂರಿನಲ್ಲಿ ಏನೆಲ್ಲಾ ಆಯ್ತು ಅನ್ನೋದು ಇಷ್ಟು ಬೇಗ ಯಾರಿಗೂ ಮರೆತಿರಲ್ಲ. ಸ್ಥಳೀಯ ಕಾಂಗ್ರೆಸ್ ನಾಯಕ ಕೆ.ಎನ್.ರಾಜಣ್ಣ ‘ದೇವೇಗೌಡರಿಗೆ ಕ್ಷೇತ್ರ ಬಿಟ್ಟುಕೊಡೋದು ಬೇಡ’ ಅಂತ ನೇರವಾಗಿ ಹೇಳಿದ್ದರು. ಇಂಥ ಹತ್ತುಹಲವು ಕಾರಣಗಳಿಂದ ಅಸಹನೆ ಕ್ರೋಡೀಕರಣಗೊಂಡರೆ ಮೈತ್ರಿ ಸರ್ಕಾರ ಉಳಿಯುವುದು ಕಷ್ಟವಾಗಬಹುದು. ಇದನ್ನು ರಾಜಕೀಯ ದಾಳವಾಗಿ ಬಿಜೆಪಿ ಬಳಸಿಕೊಳ್ಳಬಹುದು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿರುವ ಯಡಿಯೂರಪ್ಪ ಅವರನ್ನು ಮತ್ತೊಂದು ವರ್ಷಕ್ಕೆ ಮುಂದುವರಿಸುವ ಚರ್ಚೆ ಪಕ್ಷದ ವಲಯದಲ್ಲಿತ್ತು. ಒಂದು ವೇಳೆ ಮೈತ್ರಿ ಸರ್ಕಾರ ಬಿದ್ದರೆ ಯಡಿಯೂರಪ್ಪ ಮುಖ್ಯಮಂತ್ರಿ ಆಗ್ತಾರೆ ಅನ್ನೋದು ಲೆಕ್ಕಾಚಾರ. ಅದಕ್ಕಿನ್ನೂ ಕಾಲ ಕೂಡಿ ಬರಬೇಕಿದೆ. ಸದ್ಯದ ಮಟ್ಟಿಗೆ ಹೇಳುವುದಾದರೆ ಯಡಿಯೂರಪ್ಪ ಅವರ ಸ್ಥಾನ ಭದ್ರವಾಗಿದೆ. ಯಡಿಯೂರಪ್ಪ ಅವರನ್ನು ಬಿಟ್ಟು ರಾಜ್ಯ ರಾಜಕಾರಣದಲ್ಲಿ ಬಿಜೆಪಿ ಸದ್ಯದ ಮಟ್ಟಿಗೆ ಮುನ್ನಡೆ ಸಾಧಿಸಲು ಅಗುವುದಿಲ್ಲ.

ಕುಟುಂಬ ರಾಜಕಾರಣಕ್ಕೆ ಜನರ ತಿರಸ್ಕಾರ

ಈ ಫಲಿತಾಂಶದಿಂದಾಗಿ ಜೆಡಿಎಸ್‌ನಲ್ಲಿ ಕುಟುಂಬ ರಾಜಕಾರಣದ ಕಲಹ ಜಾಸ್ತಿ ಆಗಬಹುದು ಅಂತ ನೇರವಾಗಿ ಹೇಳಲು ಆಗಲ್ಲ. ದೇವೇಗೌಡರೇ ಸೋತಿದ್ದಾರೆ. ಒಂದು ವೇಳೆ ದೇವೇಗೌಡ, ಪ್ರಜ್ವಲ್ ಗೆದ್ದು ನಿಖಿಲ್ ಮಾತ್ರ ಸೋಲನುಭವಿಸಿದ್ದರೆ ಆಂಥ ಮಾತಿಗೆ ಅವಕಾಶ ಇರುತ್ತಿತ್ತೇನೋ. ಜೆಡಿಎಸ್‌ ಕೇವಲ ದೇವೇಗೌಡರ ಕುಟುಂಬದ ಪಕ್ಷ ಎನ್ನುವ ಚಿಂತನೆಯಿಂದ ಆ ಕುಟುಂಬ ಹೊರಬರಬೇಕಿದೆ ಎನ್ನುವ ಸಂದೇಶವನ್ನು ಮತದಾರ ಈ ಬಾರಿ ನೀಡಿದ್ದಾನೆ. ದೇವೇಗೌಡರ ಕುಟುಂಬಕ್ಕೆ ಮಾತ್ರ ರಾಜಕಾರಣ ಬೇಕಾ? ಬೇರೆಯವರಿಗೆ ಅವಕಾಶ ಬೇಡ್ವಾ ಎನ್ನುವ ನಿಷ್ಠಾವಂತ ಕಾರ್ಯಕರ್ತರ ಪ್ರಶ್ನೆಯೂ ಮುಂಚೂಣಿಗೆ ಬರುತ್ತಿದೆ.

ನಮ್ಮ ಪಕ್ಷವನ್ನು ಕಾಪಾಡಿದ್ದು ನಮ್ಮ ಕುಟುಂಬವೇ ಅಂತ ಕುಮಾರಸ್ವಾಮಿ ಯಾವಾಗಲೂ ಹೇಳಿಕೊಳ್ಳುತ್ತಿದ್ದರು. ಅದು ವಾಸ್ತವ ಅಲ್ಲ. ಜನರು ಬೆಂಬಲಿಸಿದರೆ ಮಾತ್ರ ಯಾರಾದರೂ ಗೆಲ್ತಾರೆ. ಕುಟುಂಬ ರಾಜಕಾರಣವನ್ನು ನಾನು ಬೆಂಬಲಿಸುವುದಿಲ್ಲ ಅಂತ ಜನರು ಈ ಬಾರಿ ನಿಷ್ಠುರವಾಗಿ ಹೇಳಿದ್ದಾರೆ. ಮಂಡ್ಯದಲ್ಲಿ ದೇವೇಗೌಡರು ಸ್ಪರ್ಧಿಸದೆ ನಿಖಿಲ್‌ ಅವರನ್ನು ಮಾತ್ರ ನಿಲ್ಲಿಸಿದ್ದರೆ, ಮಂಡ್ಯದಲ್ಲಿ ನಿಖಿಲ್ ಬದಲು ಸ್ಥಳೀಯ ಕಾರ್ಯಕರ್ತರಿಗೆ ಅವಕಾಶ ಕೊಟ್ಟಿದ್ದರೆ ಒಟ್ಟಾರೆ ಚಿತ್ರಣವೇ ಬದಲಾಗುತ್ತಿತ್ತು. ಬೇರೆಯದ್ದೇ ಆದ ಫಲಿತಾಂಶ ಬರುತ್ತಿತ್ತು.

ಕಾಂಗ್ರೆಸ್‌ ಪಂಜಾಬ್ ಬಿಟ್ಟರೆ ಮಧ್ಯಪ್ರದೇಶ, ರಾಜಸ್ಥಾನದಲ್ಲಿ ಮಾತ್ರ ಅಧಿಕಾರದಲ್ಲಿದೆ. ರಾಜ್ಯದಲ್ಲಿ ಅವರಿಗೆ ಮೈತ್ರಿ ರೂಪದಲ್ಲಿ ಹಾಗೂಹೀಗೂ ಅಧಿಕಾರವಿದೆ. ಇಲ್ಲಿ ಒಮ್ಮೆ ಸರ್ಕಾರ ಉರುಳಿದರೆ ಮತ್ತೆ ಸರ್ಕಾರ ಬರುತ್ತೆ ಎನ್ನುವ ವಾತಾವರಣ ಇಲ್ಲ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಮಗ, ಅಪ್ಪ ಇಬ್ಬರೂ ಈ ಬಾರಿ ಸೋತಿದ್ದಾರೆ. ಇನ್ನೊಂದೆಡೆ ಅತೃಪ್ತ ಶಾಸಕರೆಲ್ಲರೂ ಸಿದ್ದರಾಮಯ್ಯ ಜೊತೆಗೆ ಉತ್ತಮ ಒಡನಾಟ ಹೊಂದಿರುವವರು. ಇವರನ್ನು ನಿರ್ವಹಿಸಲು ಸಿದ್ದರಾಮಯ್ಯ ಸೂಕ್ತ ಆಯ್ಕೆ ಎನ್ನುವ ಅಭಿಪ್ರಾಯ ಕಾಂಗ್ರೆಸ್‌ ಉನ್ನತ ನಾಯಕತ್ವದಲ್ಲಿದೆ. ಕಾಲಕೂಡಿ ಬಂದರೆ ಸಿದ್ದರಾಮಯ್ಯ ಅವರನ್ನೇ ಮುಖ್ಯಮಂತ್ರಿ ಮಾಡಿ ಜೆಡಿಎಸ್ ಬೆಂಬಲ ಪಡೆಯುವುದು ಕಾಂಗ್ರೆಸ್ ಲೆಕ್ಕಾಚಾರ. ಆದರೆ ಇದಕ್ಕೆ ಜೆಡಿಎಸ್ ಯಾವ ಪ್ರತಿತಂತ್ರ ಹೂಡುತ್ತೋ ನೋಡಬೇಕು. ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಗಾದಿಗೆ ಬಂದರೆ ಪಕ್ಷದ ಸಂಘಟನೆಗೂ ಬಲ ಸಿಗುತ್ತದೆ ಎನ್ನುವ ವಾದವೂ ಚಾಲ್ತಿಯಲ್ಲಿದೆ.

ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ದೇವೇಗೌಡರು ಬಿಡ್ತಾರಾ ಎನ್ನುವುದು ಮತ್ತೊಂದು ಪ್ರಶ್ನೆ. ಬಿಜೆಪಿ ಪರವಾಗಿರುವ ಈ ಲೋಕಸಭೆ ಚುನಾವಣೆಯ ಫಲಿತಾಂಶ ರಾಜ್ಯ ರಾಜಕಾರಣದ ನಿರ್ದಿಷ್ಟವಾಗಿ ಇಂಥದ್ದೇ ಪರಿಣಾಮ ಬೀರುತ್ತೆ ಎಂದು ಹೇಳಲು ಆಗದು. 

ಆದರೆ ಇಷ್ಟಂತೂ ನಿಜ. ರಾಜ್ಯದ ಫಲಿತಾಂಶ ಬಿಜೆಪಿಗೆ ಅನಿರೀಕ್ಷಿತ, ಕಾಂಗ್ರೆಸ್‌ಗೆ ಆಘಾತ. ರಾಜ್ಯ ಸರ್ಕಾರದ ಮೇಲೆ ಎಂಥ ಪರಿಣಾಮ ಬೇಕಾದ್ರೂ ಬೀರಬಹುದು. ಏನು ಬೇಕಾದ್ರೂ ಆಗಬಹುದು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು