ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇಂದು ಭೂಮಿದಿನ: ಹೇ ಭೂಮಾತೆ, ನಿನ್ನ ಮೇಲೆ ಕಾಲಿಟ್ಟು ನೋಯಿಸುತ್ತಿದ್ದೇವೆ, ಕ್ಷಮಿಸು

ಪ್ರಾಚೀನರು ಕಂಡಂತೆ ಪೃಥ್ವಿ
Last Updated 22 ಏಪ್ರಿಲ್ 2019, 14:09 IST
ಅಕ್ಷರ ಗಾತ್ರ

ನೀವು ಶಾಲಾ ದಿನಗಳಲ್ಲೇ ಅಟ್ಲಸ್ ನೋಡಿರಬಹುದು. ಅದು ಭೂಪಟ, ಅಲ್ಲಿ ಎಲ್ಲ ಖಂಡಗಳ ಬಗ್ಗೆಯೂ ವಿವರವಿರುತ್ತದೆ. ನದಿ, ಬೆಟ್ಟ, ಸಮುದ್ರ, ಮೈದಾನ, ಪ್ರಸ್ಥಭೂಮಿ, ಕಣಿವೆ ಇತ್ಯಾದಿ. ಅಟ್ಲಸ್ ಹೆಸರಿನ ಹಿಂದೆ ಸಾಹಸದ ಕಥೆಯೊಂದಿದೆ. ಇದು ಗ್ರೀಕ್ ಪುರಾಣದಲ್ಲಿ ವರ್ಣಿತವಾಗಿದೆ. ಒಮ್ಮೆ ದೇವ–ದಾನವರಿಗೆ ಯುದ್ಧವಾದಾಗ ಇಡೀ ಸ್ವರ್ಗವನ್ನು ಆಕ್ರಮಿಸಲು ಮುಂದಾಳತ್ವ ವಹಿಸಿದ್ದವನು ದಾನವ ಅಟ್ಲಸ್. ಭೀಕರ ಹೋರಾಟದ ನಂತರ ದಾನವರು ಸೋಲುತ್ತಾರೆ. ಸ್ಯೂಸ್ ದೇವ, ಅಟ್ಲಸ್‌ನನ್ನು ಸೆರೆಹಿಡಿದು ಶಿಕ್ಷೆ ವಿಧಿಸುತ್ತಾನೆ. ಶಿಕ್ಷೆ ಏನೆಂದರೆ ತನ್ನ ಬೆನ್ನಮೇಲೆ ಇಡೀ ಸ್ವರ್ಗವನ್ನು ಹೊತ್ತು ಮಂಡಿಯೂರಿ ಕೂತಿರಬೇಕು. ಇದು ಬಲು ಘೋರ ಶಿಕ್ಷೆ. ಸ್ವರ್ಗದ ಇಡೀ ಭಾರವನ್ನು ಹೊರುವುದು ಹೇಗೆ? ಅವನಿಗೂ ಹೊತ್ತೂ ಹೊತ್ತೂ ಸಾಕಾಗಿತ್ತು. ಆ ಹೊತ್ತಿಗೆ ಗ್ರೀಕ್‌ನ ಮಹಾವೀರ ಹರ್ಕ್ಯುಲಸ್ ಬಂದ. ಈಗಲೂ ಮಹಾ ಕಠಿಣ ಸವಾಲನ್ನು ಹೇಳುವಾಗ ‘ಹರ್ಕ್ಯೂಲಿಯನ್ ಟಾಸ್ಕ್’ ಎನ್ನುವುದುಂಟು. ಗ್ರೀಕ್‌ನಲ್ಲಿ ಇವನ ಹೆಸರು ಹೆರಾಕ್ಲೀಸ್.

ಸ್ಯೂಸ್ ದೇವತೆ, ಅಲ್ಕ್‌ಮೀನ ಎಂಬ ಪರಮಸುಂದರಿಯ ಮೋಹಕ್ಕೆ ಒಳಗಾಗಿ ಅವಳ ಗಂಡನಿಗೂ ತಿಳಿಯದಂತೆ ಅವಳನ್ನು ಕೂಡಿ ಹುಟ್ಟಿದ ಮಗನೇ ಹರ್ಕ್ಯುಲಸ್. ಹುಟ್ಟಿನಿಂದಲೇ ಪರಾಕ್ರಮಶಾಲಿ, ಅವನು ಗ್ರೀಸ್ ದೇಶಕ್ಕೆ ಪ್ರಭುವಾಗುವ ಲಕ್ಷಣವಿತ್ತು. ಸ್ಯೂಸ್‌ನ ಮಡದಿ ಹೀರಾಗೆ ಸವತಿಯ ಮಗ ಹರ್ಕ್ಯುಲಸ್ ಕಂಡರೆ ಮಹಾ ಮತ್ಸರ. ಅವನನ್ನು ನಾಶಮಾಡುವ ಸಲುವಾಗಿ ಅವನು ಮಲಗುವ ಮನೆಗೆ ಘಟಸರ್ಪಗಳನ್ನು ಬಿಡುತ್ತಾಳೆ. ಆ ಹೊತ್ತಿಗೆ ಸ್ಯೂಸ್‌ಗೆ ಇದು ತಿಳಿದು, ದಿವ್ಯ ಬೆಳಕನ್ನು ಬಿಡುತ್ತಾನೆ. ತಾಯಿ ಬಂದು ನೋಡುತ್ತಾಳೆ. ಮಗು ಎರಡೂ ಘಟಸರ್ಪಗಳನ್ನು ಕೈಯಿಂದ ಹಿಚುಕಿಬಿಟ್ಟಿದ್ದಾನೆ. ಮುಂದೆ ಧೀರನಾಗಿ ಬೆಳೆದು ಅದ್ವಿತೀಯ ಬಿಲ್ಲುಗಾರನಾಗಿ, ಅಸಾಧಾರಣ ಕುಸ್ತಿಪಟುವಾಗಿ ರಾಜನಾಗುವ ಹಂತವನ್ನೂ ತಲುಪುತ್ತಾನೆ. ಇದನ್ನರಿತ ಹೀರಾ, ಮೈಕಿನೀ–ಟಿರೆನ್ಸ್ ಮತ್ತು ಮಿಡಿಯ ನಗರಗಳ ರಾಜ ಯೂರಿಸ್ಯೂಸ್ ಎಂಬುವನ ನೆರವು ಪಡೆದು ಅವನನ್ನು ಮುಗಿಸಲು ಯತ್ನಿಸುತ್ತಾಳೆ. ಹರ್ಕ್ಯುಲಸ್‌ನನ್ನು ಹುಚ್ಚನಾಗುವಂತೆ ಮಾಡುತ್ತಾಳೆ. ಆ ಹುಚ್ಚಿನಲ್ಲಿ ತನ್ನ ಮಕ್ಕಳನ್ನೇ ಕೊಂದ ಪಾಪ ಕಟ್ಟಿಕೊಳ್ಳುತ್ತಾನೆ. ಯೂರಿಸ್ಯೂಸ್‌ನ ಬಳಿ ದಾಸನಾಗುತ್ತಾನೆ. ಅವನು ಹರ್ಕ್ಯುಲಸ್‌ಗೆ ಹತ್ತು ಭಯಂಕರ ಸವಾಲನ್ನು ಒಡ್ಡಿ ಅದರಲ್ಲಿ ಗೆದ್ದು ಬಾ ಎಂಬ ಷರತ್ತನ್ನು ಹಾಕುತ್ತಾನೆ. ನಿಮಿಯ ಎಂಬಲ್ಲಿ ದೈತ್ಯಬಲದ ಸಿಂಹವನ್ನು ಕೊಲ್ಲುವುದು ಹತ್ತು ಸವಾಲುಗಳಲ್ಲಿ ಒಂದು. ಇಷ್ಟನ್ನೂ ಅವನು ಮುಗಿಸಿದ ಮೇಲೆ ಇನ್ನೆರಡು ಷರತ್ತುಗಳನ್ನು ಒಡ್ಡುತ್ತಾನೆ. ಹೀರಾಳ ತೋಟದಿಂದ ಚಿನ್ನದ ಸೇಬುಗಳನ್ನು ತರುವುದು ಅವನಿಗೊಡ್ಡಿದ ಸವಾಲು. ಏಕೆಂದರೆ ಘಟಸರ್ಪ ಅದರ ಮೇಲೆ ಕಣ್ಣಿಟ್ಟಿರುತ್ತದೆ. ಇನ್ನೊಂದು ಸವಾಲು, ಅಧೋಲೋಕಕ್ಕೆ ಹೋಗಿ ಅಲ್ಲಿಯ ಕಾವಲುನಾಯಿಯನ್ನು ಜೀವಂತ ಹಿಡಿದುಕೊಂಡು ಬರುವುದು.

ಹರ್ಕ್ಯುಲಸ್‌ನ ಹನ್ನೊಂದನೆಯ ಸಾಹಸದಲ್ಲಿ ಅಟ್ಲಸ್‌ನನ್ನು ಭೇಟಿಯಾಗುತ್ತಾನೆ. ಆ ಹೊತ್ತಿಗೆ ಇಡೀ ಸ್ವರ್ಗವನ್ನು ಬೆನ್ನಮೇಲೆ ಹೊತ್ತು ಮಂಡಿಯೂರಿ ಕುಳಿತಿರುತ್ತಾನೆ. ಹರ್ಕ್ಯುಲಸ್, ಅಟ್ಲಸ್‌ನನ್ನು ಕೇಳಿದ ಮೊದಲ ನೆರವು – ‘ಆ ಹಾವನ್ನು ಕೊಲ್ಲು, ಅನಂತರ ನಾನು ಸೇಬು ತರುತ್ತೇನೆ’ ಎಂದು. ‘ಹಾಗಾದರೆ ನನ್ನ ಮೇಲೆ ಹೊತ್ತಿರುವ ಸ್ವರ್ಗದ ಭಾರವನ್ನು ಇಳಿಸಿ, ಕ್ಷಣಕಾಲ ನೀನು ಹೊತ್ತುಕೋ’ ಎಂದು ಹೇಳಿ ಒಡನೆಯೇ ಸ್ವರ್ಗವನ್ನು ವರ್ಗಾಯಿಸಿ ಚಿನ್ನದ ಸೇಬನ್ನು ತರುತ್ತಾನೆ. ತಾನೇ ಆ ಸೇಬನ್ನು ಯೂರಿಸ್ಯೂಸ್‌ಗೆ ನೀಡಲು ಮುಂದಾಗುತ್ತಾನೆ. ಇವನ ಕಪಟನಾಟಕವನ್ನು ಅರಿತ ಹರ್ಕ್ಯುಲಸ್ ಆಗಲಿ ಎಂದವನೇ ‘ಈ ಭಾರವನ್ನು ಹೊರಲು ನಾನು ತಲೆಯ ಮೇಲೆ ಸಿಂಬೆ ಸುತ್ತಿಕೊಳ್ಳಬೇಕು’ ಎಂದು ಹೇಳಿ ನೋಡನೋಡುತ್ತಲೇ ಮರೆಯಾಗಿ ಹೋಗಿಬಿಡುತ್ತಾನೆ. ಅಟ್ಲಸ್ ಆ ಭಾರವನ್ನು ಇನ್ನೂ ಹೊರುತ್ತಿದ್ದಾನಂತೆ. ಆ ಜಾಗ ಯಾವುದು? ಅದು ಇಂದು ಆಫ್ರಿಕದ ವಾಯುವ್ಯ ಭಾಗದಲ್ಲಿರುವ ಅಟ್ಲಾಸ್ ಪರ್ವತಶ್ರೇಣಿ.

ಸ್ವರ್ಗದ ಭಾರವನ್ನು ಭೂಮಿಯ ಮೇಲಿರುವ ಈ ಪರ್ವತಗಳು ತಾಳಿಕೊಳ್ಳಬೇಕಲ್ಲ? ಮಹಾಕವಿ ಹೋಮರ್ ತನ್ನ ಮಹಾಕಾವ್ಯ ‘ಒಡಿಸ್ಸಿ’ಯಲ್ಲಿ ಅಟ್ಲಸ್ ಕುರಿತು, ‘ಅವನೊಬ್ಬ ಮಹಾವೀರ, ಎಲ್ಲ ಸಮುದ್ರದ ಆಳವೂ ಅವನಿಗೆ ಗೊತ್ತಿತ್ತು. ಭೂಮಿ, ಸಾಗರಗಳ ಮಧ್ಯೆ ಮಹಾಸ್ತಂಭ ಕಟ್ಟಿದ್ದು ಅಟ್ಲಾಂಟಿಸ್ ಎಂಬ ಸಾಗರದಲ್ಲಿ’ ಎಂದು ವರ್ಣಿಸುತ್ತಾನೆ. ಆ ಸಾಗರಕ್ಕೆ ಅಟ್ಲಾಂಟಿಕ್ ಎಂದು ಹೆಸರು ಬಂದದ್ದು ಕೂಡ ಅಟ್ಲಸ್‌ನಿಂದಲೇ. ತತ್ತ್ವಜ್ಞಾನಿ ಪ್ಲೇಟೋ, ಅಟ್ಲಸ್‌ನನ್ನು ದ್ವೀಪದ ಒಡೆಯ ಎಂದು ವರ್ಣಿಸಿದ್ದಾನೆ. ಅಟ್ಲಸ್ ಹೊತ್ತದ್ದು ಸ್ವರ್ಗವನ್ನು. ಆದರೆ ಸ್ವರ್ಗಕ್ಕೆ ಆಕಾರ ಬೇಡವೆ? ಗುಂಡನೆಯ ಚೆಂಡಿನಂತೆ ಸ್ವರ್ಗವನ್ನು ಕಲ್ಪಿಸಲಾಯಿತು. ಆದರೆ ಕಲಾವಿದರು ಕೊಟ್ಟ ತಿರುವೇ ಬೇರೆ. ಇಟಲಿಯ ನೇಪಲ್ಸ್‌ನಲ್ಲಿರುವ ಪುರಾತತ್ತ್ವ ವಸ್ತು ಸಂಗ್ರಹಾಲಯದಲ್ಲಿ ಅಟ್ಲಸ್ ಭೂಮಿಯನ್ನು ಹೊತ್ತು ಹಿಡಿದಂತೆ ಕುಳಿತಿದ್ದಾನೆ. ಇದು ಎರಡನೆಯ ಶತಮಾನದ ಶಿಲ್ಪ. ಸ್ವರ್ಗ ಭೂಮಿಯಾಯಿತು, ಅಲ್ಲಿಂದ ಮುಂದೆ ನಾವು ಕಾಣುವುದು ಮಂಡಿಯೂರಿ ಬೆನ್ನಮೇಲೆ ಭೂಮಿಯನ್ನು ಹೊತ್ತ ಅಟ್ಲಸ್‌ನನ್ನು.

ಪುರಾಣಗಳ ಕಲ್ಪನಾವಿಲಾಸ
ಈ ಸಂಗತಿ ಗ್ರೀಕ್ ಪುರಾಣದಲ್ಲಿ ಬರುವ ಸಾವಿರಾರು ಪ್ರಸಂಗದಲ್ಲಿ ಒಂದು. ಪುರಾಣಗಳೇ ಹೀಗೆ. ವ್ಯಕ್ತಿಗಳನ್ನು ಅವರ ಶಕ್ತಿಗಳನ್ನು ವೈಭವೀಕರಿಸುತ್ತವೆ. ದೇವ–ದಾನವರ ಯುದ್ಧಪ್ರಸಂಗ ಬಹುತೇಕ ಪ್ರಪಂಚದ ಎಲ್ಲ ಪುರಾಣಗಳಲ್ಲೂ ಇದೆ. ಯುದ್ಧ, ಅಪಹರಣ, ಮೋಹ ಜೊತೆಗೆ ಷಡ್ರಸಗಳನ್ನು ಪಾತ್ರಗಳಲ್ಲಿ ಹೊರತರುತ್ತವೆ. ಹೀಗೆ ಮಾಡುವಾಗ ಸಹಜವಾಗಿಯೇ ಎಲ್ಲ ದೇಶಗಳಲ್ಲೂ ಸ್ವರ್ಗ, ಮರ್ತ್ಯ, ಪಾತಾಳ ಎಂಬ ಪರಿಕಲ್ಪನೆ ಬಂದು ಕೂಡುತ್ತದೆ; ಓದುವಾಗ ಮುದಕೊಡುತ್ತವೆ. ತಮ್ಮ ಧರ್ಮಗಳಿಗೆ ಅನುಗುಣವಾಗಿ ಅವುಗಳ ಪಾತ್ರ ಕಾರ್ಯನಿರ್ವಹಿಸುತ್ತವೆ. ಭಾರತೀಯ ಪರಿಕಲ್ಪನೆಯಲ್ಲಿ ಈ ಮೂರಕ್ಕೂ ತಕ್ಕುದಾದ ಸ್ಥಾನವಿದೆ. ಸ್ವರ್ಗ ದೇವತೆಗಳ ಸ್ವತ್ತು, ಮರ್ತ್ಯ ಮನುಷ್ಯರದು, ಇನ್ನು ಪಾತಾಳ? ಅದು ಅಗೋಚರವಾದ್ದರಿಂದ ಇಲ್ಲಿ ಕಲ್ಪನೆಗಳನ್ನು ವಿಸ್ತರಿಸಲು ನೂರಾರು ಅವಕಾಶಗಳಿವೆ.

ನಮ್ಮ ಅಷ್ಟಾದಶ ಪುರಾಣಗಳನ್ನೇ ನೋಡಿ, ಇದರಲ್ಲಿ ‘ಬ್ರಹ್ಮಾಂಡ ಪುರಾಣ’ವೂ ಒಂದು. ‘ಬಹುಶಃ ಅಷ್ಟಾದಶ ಪುರಾಣಗಳೆಲ್ಲವೂ ಒಂದನೇ ಶತಮಾನದಿಂದ ಈಚಿನವು’ ಎನ್ನುತ್ತಾರೆ ಸ್ವಾಮಿ ಹರ್ಷಾನಂದ. ಬ್ರಹ್ಮಾಂಡ ಪುರಾಣದಲ್ಲಿ ಹಿರಣ್ಯಾಕ್ಷನನ್ನು ವಿಷ್ಣು ಸಂಹರಿಸಿ ಭೂಮಿ ನೀರಿನೊಳಗೆ ಮುಳುಗಿಹೋಗಿದ್ದರಿಂದ ಅದನ್ನು ಮೇಲೆತ್ತಲು ವರಾಹವನ್ನು ಕಳಿಸುತ್ತಾನೆ. ವರಾಹವಾದರೋ ಭಾರಿ ಗಾತ್ರದ್ದು. ಹತ್ತು ಯೋಜನ ವಿಸ್ತಾರ, ನೂರು ಯೋಜನ ಉದ್ದ. ಅದೇ ಒಂದು ಮಹಾಪರ್ವತದಂತಿತ್ತು. ಮುಳುಗುತ್ತಿದ್ದ ಭೂಮಿಯನ್ನು ಎತ್ತಿ ಹಿಡಿಯಲು ಇಷ್ಟು ಶಕ್ತಿ ಬೇಕು ಎಂದು ಪುರಾಣ ರಚನೆಕಾರರು ಭಾವಿಸಿದ್ದಿರಬೇಕು. ಭೂಮಿಯನ್ನು ದೃಢವಾಗಿ ನಿಲ್ಲಿಸಲು ಪ್ರಜಾಪತಿ ಬೆಟ್ಟಗಳನ್ನು ಹುಟ್ಟುಹಾಕಿದನಂತೆ. ಸಮುದ್ರಜೀವಿಗಳಿಗೆ ಇನಿತೂ ಹಾನಿಯಾಗದಂತೆ ಸಮುದ್ರದಲ್ಲೇ ಇರಿಸಿದ ಎನ್ನುತ್ತದೆ ಈ ಪುರಾಣ. ಪೃಥ್ವಿಯನ್ನು ಎತ್ತಲು ವರಾಹ ರಸಾತಲ ಪ್ರವೇಶಿಸಿತಂತೆ. ಯಾವುದು ಈ ರಸಾತಲ? ಭೂಮಿಯೊಳಗಿನ ಏಳು ಅಧೋಲೋಕಗಳಲ್ಲಿ ಇದೂ ಒಂದು. ಕ್ರಮವಾಗಿ ಅತಲ, ವಿತಲ, ಸುತಲ, ರಸಾತಲ, ತಲಾತಲ, ಮಹಾತಲ, ಪಾತಾಲ. ಈ ಒಂದೊಂದು ಲೋಕವೂ ಹತ್ತು ಸಾವಿರ ಯೋಜನದಷ್ಟು ವಿಸ್ತಾರವಿವೆ. ಇವು ಪುರಾಣಕಲ್ಪಿತ ಅಧೋಲೋಕಗಳು. ನಾವು ಈಗ ಪಾತಾಳವನ್ನು ರೂಪಕವಾಗಿ ಬಳಸುತ್ತೇವೆ. ಬಾವಿಯ ನೀರು ‘ಪಾತಾಳಕ್ಕೆ ಹೋಗಿದೆ’ ಎನ್ನುವುದು ಸರ್ವಸಾಮಾನ್ಯ ಮಾತು. ಬಾವಿಗೆ ಬಿದ್ದ ಬಿಂದಿಗೆಗಳನ್ನು ಎತ್ತಲು ಪಾತಾಳಗಂಗೆ (ಪಾತಾಳಗರಡಿ) ಎಂಬ ಕೊಕ್ಕಿರುವ ಸಾಧನ ಬಳಸುತ್ತಿದ್ದ ಕಾಲವೂ ಇತ್ತು.

ಅಗೋಚರ ಭೂಮಿಯ ಅಂತರಾಳವನ್ನು ನಮ್ಮ ಪ್ರಾಚೀನರು ಬಗೆಬಗೆಯಲ್ಲಿ ಕಲ್ಪಿಸಿದರು. ಬ್ರಹ್ಮಾಂಡ ಪುರಾಣದಲ್ಲಿ ನಿರೂಪಿಸಿದಂತೆ ‘ಅತಲ’ ರಾಕ್ಷಸೇಂದ್ರರ ಸಾಮ್ರಾಜ್ಯ. ‘ವಿತಲ’ ಮಹಾತ್ಮ ಪ್ರಹ್ಲಾದ ನೆಲೆಸಿರುವ ಲೋಕ. ‘ಸುತಲ’ ನಾಗ–ದಾನವರು ಒಟ್ಟಿಗೇ ಇರುವ ಲೋಕ, ‘ರಸಾತಲ’ ಕಾಲನೇಮಿ, ಗಜಕರ್ಣ, ಕುಂಜರ ಎಂಬ ರಾಕ್ಷಸರು ಇರುವ ಲೋಕ. ‘ತಲಾತಲ’ ರಾಕ್ಷಸ ಪಟ್ಟಣಗಳು ಯಥೇಚ್ಛವಾಗಿ ಇರುವ ಲೋಕ, ‘ಮಹಾತಲ’ ವಾಸುಕಿ, ಸರ್ಪರಾಜನ ಆವಾಸ, ‘ಪಾತಾಳ’ ಬಲಿಚಕ್ರವರ್ತಿಯ ನಗರ, ವಿಷ್ಣು ವಾಮನನಾಗಿ ಬಲಿಯನ್ನು ತುಳಿದದ್ದು ಪಾತಾಳಕ್ಕೆ. ಈ ಕಲ್ಪನೆಗಳನ್ನೆಲ್ಲ ಯಾರು ಯಾರಿಗೆ ಹೇಳಿದರು ಎನ್ನುವುದು ಕೂಡ ಕುತೂಹಲಕಾರಿಯೇ. ಮೊದಲು ಬ್ರಹ್ಮ–ವಸಿಷ್ಠನಿಗೆ, ವಸಿಷ್ಠ–ಪರಾಶರನಿಗೆ, ಅವನು ಜಾತೂಕರ್ಣ್ಯನಿಗೆ, ಅವನು ದ್ವೈಪಾನನಿಗೆ, ಈತ ಐದು ಜನ ತನ್ನ ಶಿಷ್ಯಂದಿರಿಗೆ (ಜೈಮಿನಿ, ಸುಮಂತು, ವೈಶಂಪಾಯನ, ಪೈಲಪ, ರಮಹರ್ಷಣ) ಅಲ್ಲಿಂದ ಸೂತಮುನಿಗಳಿಗೆ, ಎಲ್ಲೂ ಲೋಪ ಬರದಂತೆ ಕಥೆ ಒಬ್ಬರಿಂದ ಇನ್ನೊಬ್ಬರಿಗೆ ತಟಾಯಿಸಿದೆ. ಎಲ್ಲೂ ಪಾತ್ರಗಳು ಬದಲಾಗಿಲ್ಲ, ಕಲ್ಪನೆಗಳು ಬದಲಾಗಿಲ್ಲ, ಎಲ್ಲವೂ ನದಿಯಂತೆ ಸಲೀಸು ಎನ್ನುತ್ತಾರೆ ಪುರಾಣಪ್ರಿಯರು.

ಇನ್ನು ‘ಶಿವಪುರಾಣ’ ವಿಷ್ಣುವನ್ನು ಗೇಲಿಮಾಡುತ್ತದೆ. ಸಮುದ್ರಮಥನವಾದ ನಂತರ ವಿಷ್ಣು ದಾನವರನ್ನು ಹುಡುಕುತ್ತ ಪಾತಾಳಕ್ಕೆ ಬರುತ್ತಾನೆ. ಅಲ್ಲಿ ಸುಂದರ ಸ್ತ್ರೀಯರಲ್ಲಿ ಮೋಹಗೊಂಡು ಅಲ್ಲೇ ಉಳಿದುಬಿಡುತ್ತಾನೆ. ಮಕ್ಕಳು ಹುಟ್ಟುತ್ತಾರೆ, ಅವರೋ ಮಹಾ ಫಟಿಂಗರು. ದೇವತೆಗಳನ್ನು ಸ್ವರ್ಗದಲ್ಲೂ ಪೀಡಿಸುತ್ತಾರೆ. ಇವರ ಕಾಟ ತಡೆಯಲೆಂದು ಶಿವ, ವೃಷಭರೂಪ ತಳೆದು ಪಾತಾಳಕ್ಕೆ ಇಳಿದಾಗ, ಸ್ತ್ರೀಲೋಲನಾಗಿ ವಿಷ್ಣು ಮೈಮರೆತಿರುತ್ತಾನೆ. ವೃಷಭದ ಮೇಲೆ ವಿಷ್ಣು ಬಾಣದ ಮಳೆಗರೆಯುತ್ತಾನೆ. ಶಿವ ಅವೆಲ್ಲವನ್ನೂ ನುಂಗಿಹಾಕಿಬಿಡುತ್ತಾನೆ. ಆ ವೃಷಭ, ಶಿವನಲ್ಲದೆ ಬೇರಾರೂ ಅಲ್ಲ ಎಂದು ತಿಳಿದು ವಿಷ್ಣು ಶರಣಾಗುತ್ತಾನೆ. ಶಿವನೊಡನೆ ಮೇಲೆ ಬರುವಾಗ ತನ್ನ ಚಕ್ರವನ್ನೇ ಮರೆತುಬಿಡುತ್ತಾನೆ. ಕನಿಕರಗೊಂಡ ಶಿವ ಬೇರೊಂದು ಚಕ್ರವನ್ನು ದಯಪಾಲಿಸುತ್ತಾನೆ. ವಿಷ್ಣುಭಕ್ತರನ್ನು ಗೇಲಿ ಮಾಡಲೆಂದೇ ‘ಶಿವಪುರಾಣ’ ರಚನೆಯಾದಂತಿದೆ. ಪುರಾಣವೆಂದರೆ ನಮ್ಮ ಈಗಿನ ಮಾತಿನಲ್ಲಿ ಅದು ಸದರದ ಮಾತು. ‘ಕಂತೆ ಪುರಾಣ’ ಎಂಬ ಔದಾಸೀನ್ಯವನ್ನು ಈ ಕುರಿತು ಕಾಣಬಹುದು.

ಆಕಾಶದಂತೆ ಪಾತಾಳವೂ ನಮ್ಮ ದೃಷ್ಟಿಗೆ ನಿಲುಕಿದ್ದರೆ ಬಹುಶಃ ಇಷ್ಟೊಂದು ಕಲ್ಪನೆಗಳು ಅರಳುತ್ತಿರಲಿಲ್ಲ. ದೃಷ್ಟಿಗೆ ಗೋಚರಿಸುವುದಕ್ಕಿಂತ ಗೋಚರಿಸದಿರುವ ಕಡೆಗೇ ನಮ್ಮ ಗಮನ. ಆಕಾಶಕಾಯಗಳನ್ನು ಬರಿಗಣ್ಣಿನಿಂದಲೇ ವೀಕ್ಷಿಸಿ ದಾಖಲಿಸಿದ ನಮ್ಮ ಪ್ರಾಚೀನರು ಸೂರ್ಯ–ಚಂದ್ರರ ಚಲನೆಯನ್ನು, ಋತುಮಾನಗಳ ಬದಲಾವಣೆಯನ್ನೂ ಸುದೀರ್ಘವಾಗಿ ವೀಕ್ಷಿಸಿ ದಾಖಲಿಸಿದ್ದರು. ಅದು ಒಂದು ಕಾಲದಲ್ಲಿ ಆದ ಜ್ಞಾನದ ಸ್ಫೋಟವಲ್ಲ, ಭಾರತೀಯರಿಗೆ ಇವೆಲ್ಲವೂ ವೇದಗಳ ರೂಪದಲ್ಲಿ ಲಭ್ಯವಾಗಿವೆ. ಮೊದಲ ಬಾರಿಗೆ ಅಥರ್ವ ವೇದದಲ್ಲಿ (ರಚನೆ ಬಹುಶಃ ಕ್ರಿ.ಪೂ. 1600) 27 ನಿತ್ಯನಕ್ಷತ್ರಗಳ ಪಟ್ಟಿಯನ್ನು ಕಾಣಬಹುದು. ಇವೆಲ್ಲ ಬರಿಗಣ್ಣಿಗೆ ಕಂಡ ವಾಸ್ತವ ಚಿತ್ರಣ. ಹಾಗೆಯೇ ಹನ್ನೆರಡು ರಾಶಿಚಕ್ರಗಳು ಕೂಡ ನಮಗೆ ಪೂರ್ವಿಕರಿಂದ ಬಂದ ಬಳುವಳಿ. ಆದರೆ ಭೂಮಿಯ ಒಳಗೆ ಇಣುಕಿ ನೋಡಲು ಯಾವುದೇ ಅವಕಾಶವಿಲ್ಲ. ಅದು ಈಗಲೂ ಅಗೋಚರ. ಹೀಗಾಗಿಯೇ ಪ್ರಾಚೀನ ಭಾರತೀಯರು ಭೂಮಿ ಕುರಿತು ಅನೇಕ ಕಲ್ಪನೆಗಳನ್ನು ಕಂಡಿದ್ದರು. ಭೂಮಿಯನ್ನು ಆದಿಶೇಷಗಳ ಮೇಲೆ ನಿಂತಿರುವ ಅಷ್ಟದಿಗ್ಗಜಗಳು ಹೊತ್ತಿರುವುದಾಗಿ ತಲತಲಾಂತರದಿಂದ ನಂಬಿಕೆ ಇದೆ. ಇಂದ್ರ, ಅಗ್ನಿ, ಯಮ, ನಿರ್ಯತಿ, ವರುಣ, ವಾಯು, ಕುಬೇರ, ಈಶ್ವರ ಇವರನ್ನು ಅಷ್ಟ ದಿಕ್ಪಾಲಕರು ಎಂದು ಗುರುತಿಸಲಾಗಿದೆ.

ಭೂಮಿ ಹೊತ್ತಿರುವ ಆನೆಗಳ ಹೆಸರು ಕುತೂಹಲಕಾರಿಯಾಗಿದೆ. ಅವು ಒಂದೊಂದೂ ಗಂಡು–ಹೆಣ್ಣು ಆನೆಗಳ ಜೋಡಿ. ಪೂರ್ವದಲ್ಲಿ ಐರಾವತ–ಅಭ್ರಮು, ಆಗ್ನೇಯದಲ್ಲಿ ಪುಂಡರೀಕ–ಕಪಿಲ, ದಕ್ಷಿಣದಲ್ಲಿ ವಾಮನ–ಪಿಂಗಳ, ನೈಋತ್ಯದಲ್ಲಿ ಕುಮುದ–ಅನುಪಮ, ಪಶ್ಚಿಮದಲ್ಲಿ ಅಂಜನ–ತಾಮ್ರಕರ್ಣಿ, ವಾಯುವ್ಯದಲ್ಲಿ ಪುಷ್ಪದಂತ–ಶುಭ್ರದಂತಿ, ಉತ್ತರದಲ್ಲಿ ಸಾರ್ವಭೌಮ–ಅಂಗದ, ಈಶಾನ್ಯದಲ್ಲಿ ಸುಪ್ರತೀಕ–ಅಂಜನಾವತಿ. ಇದೊಂದು ಅದ್ಭುತ ಕಲ್ಪನೆಯೇ ಸರಿ. ಭೂಭಾರವನ್ನು ಹೊರಲು ಪ್ರಾಣಿಗಳಲ್ಲಿ ಶಕ್ತಿಶಾಲಿಯಾದ ಆನೆಗಳೇ ಸಮರ್ಥವಾದವು ಎಂಬ ತರ್ಕದೊಡನೆ ಈ ಚಿತ್ರಣವನ್ನು ಕೊಟ್ಟಿದೆ. ಆದರೆ ತರ್ಕ ಎಲ್ಲ ಕಡೆಯೂ ಒಪ್ಪುವುದಿಲ್ಲ. ಹಾಗೆ ನೋಡಿದರೆ ಪುರಾಣಗಳಲ್ಲಿ ಹೆಚ್ಚಿನ ತರ್ಕಕ್ಕೆ ಅವಕಾಶವಿಲ್ಲ. ಈ ಆದಿಶೇಷ ಯಾವುದರ ಮೇಲೆ ನಿಂತಿದೆ? ಇಂಥ ಪ್ರಶ್ನೆಗೆ ಪುರಾಣ ಉತ್ತರಿಸುವುದಿಲ್ಲ. ಆದರೆ ನಮ್ಮ ಪ್ರಾಚೀನ ಗಣಿತಜ್ಞರು, ಖಗೋಳಜ್ಞರು ಇಂಥ ಜಟಿಲ ಪ್ರಶ್ನೆಯನ್ನು ತಮ್ಮ ದರ್ಶನಗಳ ಮೂಲಕ ಉತ್ತರಿಸಲು ಪ್ರಯತ್ನಿಸಿದ್ದಾರೆ. ಐದನೇ ಶತಮಾನದಲ್ಲಿದ್ದ ಮಹಾಮೇಧಾವಿ ಆರ್ಯಭಟ ತನ್ನ ‘ಆರ್ಯಭಟೀಯ’ ಎಂಬ ಕೃತಿಯ ಗೋಲಾಧ್ಯಾಯದಲ್ಲಿ ಅಚ್ಚರಿಯ ನೋಟವೊಂದನ್ನು ಕೊಟ್ಟಿದ್ದಾನೆ: ‘ಭೂಗೋಲವು ನೀರು, ಭೂಮಿ, ಅಗ್ನಿ ಮತ್ತು ವಾಯುಗಳನ್ನು ಒಳಗೊಂಡಿದೆ. ಅದು ಗೋಲಾಕಾರವಾಗಿದೆ. ಯಾವುದರ ಮೇಲೂ ಅವಲಂಬಿಸಿಲ್ಲ. ಸ್ವತಂತ್ರವಾಗಿ ನಿಂತಿವೆ. ಅದರ ಸುತ್ತ ಬೇರೆ ಗ್ರಹಗಳು ತಮ್ಮ ಕಕ್ಷೆಯಲ್ಲಿ ಸುತ್ತುತ್ತಿವೆ.’ ಇದೊಂದು ಕ್ರಾಂತಿಕಾರಿ ನೋಟವೇ ಸರಿ. ಅಷ್ಟೇ ಅಲ್ಲ, ಋತುಮಾನಗಳಿಗೆ ಅನುಗುಣವಾಗಿ ಬದಲಾಗುತ್ತಿದ್ದ ಆಕಾಶಕಾಯಗಳ ವಿನ್ಯಾಸ, ವಿಶೇಷವಾಗಿ ನಕ್ಷತ್ರಗಳ ಚಲನೆ ಆಧರಿಸಿ ‘ಭೂಮಿ ತನ್ನ ಅಕ್ಷದ ಮೇಲೆ ಸುತ್ತುತ್ತಿದೆ’ ಎಂದು ಖಚಿತವಾಗಿ ಹೇಳಿದ ಆರ್ಯಭಟನನ್ನು ಜಗತ್ತು ಮರೆಯುವುದಿಲ್ಲ. ಏನೇ ಆಗಲಿ, ‘ಆನೆಗಳು ಹೊತ್ತಿದ್ದ ಭೂಭಾರವನ್ನು ಆರ್ಯಭಟ ಇಳಿಸಿದ!’ ಎನ್ನುವುದು ಕುಹಕರ ಮಾತಲ್ಲ. ಇದರ ಹಿಂದೆ ವೈಜ್ಞಾನಿಕ ತರ್ಕವಿದೆ. ಆ ಕಾಲಕ್ಕೂ ಮೀರಿದ ಯೋಚನೆ ಇದೆ.

ಇತ್ತೀಚೆಗಂತೂ, ಡಿವಿಜಿಯವರು ರಚಿಸಿದ ‘ಮಂಕುತಿಮ್ಮನ ಕಗ್ಗ’ದ ಬಗ್ಗೆ ವ್ಯಾಪಕವಾದ ವಾಚನ ಮತ್ತು ವ್ಯಾಖ್ಯಾನ ನಡೆದಿದೆ. ಒಂದು ಹೆಜ್ಜೆ ಮುಂದೆ ಹೋಗಿ ಇದನ್ನು ವೇದಾಂತದ ಗುಂಪಿಗೆ ಸೇರಿಸುವ ಅಭಿಮಾನಿಗಳೂ ಇದ್ದಾರೆ. ನೊಂದು ಹೋದ ಮನಗಳಿಗೆ ಕಗ್ಗದಲ್ಲಿ ಸಾಂತ್ವನ ನೀಡುವ ಯತ್ನ ಎದ್ದುಕಾಣುತ್ತದೆ. ಹೀಗಾಗಿಯೇ ಅದು ಸಾಮಾನ್ಯ ಓದುಗರಲ್ಲೂ ಆಕರ್ಷಣೆ ಹುಟ್ಟಿಸಿದೆ. ಕಗ್ಗದ ಒಂದೆಡೆ ಡಿವಿಜಿ ಹೇಳುತ್ತಾರೆ:

‘ಅಷ್ಟದಿಗ್ಗಜನೆ ನೀಂ
ಆದಶೇಷನೆ ನೀಂ,
ಕಷ್ಟಭಾರವಿದೆಂದು ನಿಟ್ಟುಸಿರಬಿಡುವೆ.’

ಪುರಾಣೋಕ್ತಿಗಳು ಆಧುನಿಕ ಕಾಲದಲ್ಲೂ ಒಂದು ಬಗೆಯ ಸಾಂತ್ವನ ಕೊಡುತ್ತವೆನ್ನುವುದಕ್ಕೆ ಕಗ್ಗವೇ ಸಾಕ್ಷಿ.

ಆಕಾಶ- ಭೂಮಿಯ ನಂಟು
ಆಕಾಶ–ಭೂಮಿ, ಪ್ರಕೃತಿ–ಪುರುಷ ಎಂಬುದರ ರೂಪಕ ನಮ್ಮ ಭಾರತಕ್ಕಷ್ಟೇ ಸೀಮಿತವಾಗಿತ್ತೆ? ಹಾಗೇನಿಲ್ಲ. ಗ್ರೀಕ್ ಪುರಾಣಗಳಲ್ಲಿ ಭೂದೇವಿಯ ಹೆಸರು ಗಿಯಾ (ಗಯಾ, ಗೇಯ ಎಂಬ ರೂಪ ಭೇದಗಳೂ ಇವೆ). ಭೂದೇವಿ ಗಿಯಾ ಭೂಮಿಯಿಂದ ಎದ್ದು ಬಂದಂತೆ ಕಲಾವಿದರು ಚಿತ್ರಗಳನ್ನು ಸೃಷ್ಟಿಸಿದ್ದಾರೆ. ಇವಳ ಗಂಡ ಯುರೇನಸ್. ಒಲಂಪಸ್ ದೇವತೆಗಳಲ್ಲಿ ಸ್ಥಾನ ಪಡೆದವನು. ಆದರೆ ಭಾರತದ ಭೂದೇವಿಯಂತೆ ಆಕೆ ಕ್ಷಮಾಶೀಲಳಲ್ಲ. ಯುರೇನಸ್‌ನಿಂದ ಹುಟ್ಟಿದ ಮಕ್ಕಳು ವಕ್ರರೂಪಿಗಳಾಗಿದ್ದರು. ಶತಬಾಹುಗಳಾಗಿದ್ದರು (ನಮ್ಮಲ್ಲಿ ದಶಕಂಠ ರಾವಣನ ಕಲ್ಪನೆ ಇದ್ದಹಾಗೆ). ಈ ವಕ್ರ ಮಕ್ಕಳನ್ನು ಕಂಡ ಯುರೇನಸ್ ಜಿಗುಪ್ಸೆಗೊಂಡು, ಅವರನ್ನು ಉಗ್ರನರಕಕ್ಕೆ ತಳ್ಳುತ್ತಾನೆ. ಅನಂತರ ಹುಟ್ಟಿದ ಮಕ್ಕಳು ಮೂರು ಜನ ಸೈಕ್ಲೋಪರ್, ಇವರೆಲ್ಲ ಒಕ್ಕಣ್ಣಿನವರು. ಅವರಿಗೆ ಹಣೆಯ ಮಧ್ಯೆ ಬಂಡಿಗಾತ್ರದ ಕಣ್ಣಿತ್ತಂತೆ. ಅನಂತರ ಹುಟ್ಟಿದ ಹನ್ನೆರಡು ಮಂದಿ ಮಕ್ಕಳೂ ಕೂಡ ದಾನವರೇ. ಅವರನ್ನು ಯುರೇನಸ್ ಬಂಧನದಲ್ಲಿಡುತ್ತಾನೆ. ಗಿಯಾ ಪರಿಪರಿಯಾಗಿ ಬೇಡಿಕೊಂಡರೂ ಅವರನ್ನು ಬಿಡುಗಡೆಮಾಡಲು ಯುರೇನಸ್ ಒಪ್ಪುವುದಿಲ್ಲ. ಕೊನೆಗೆ ಮಗ ಕ್ರೋನಸ್ ಅಪ್ಪನ ಶಿಶ್ನವನ್ನೇ ಕತ್ತರಿಸುತ್ತಾನೆ. ಅದು ಸಮುದ್ರದಲ್ಲಿ ಬೀಳುತ್ತದೆ. ಆ ಬಿಳ್ನೊರೆಯಲ್ಲಿ ಅಪ್ರತಿಮ ಸುಂದರಿ ಅಪ್ರೊಡಿಟ್ ಹುಟ್ಟುತ್ತಾಳೆ. ಕಥೆ ಎಂಥೆಂಥದೋ ತಿರುವುಗಳನ್ನು ಪಡೆಯುತ್ತದೆ. ಸಾರಾಂಶವಿಷ್ಟೇ, ಗ್ರೀಕರ ಭೂದೇವಿ ಬಗ್ಗೆ ಪ್ರಶಂಸಿಸುವ ಸಂಗತಿ ಯಾವುದೂ ಇಲ್ಲ. ಆಕೆಯಿಂದ ಜನೋಪಕಾರವಾದದ್ದು ಕಡಿಮೆ.

ಈಜಿಪ್ಟ್‌ನಲ್ಲಿ ಗೆಬ್, ಭೂಮಿಯ ದೇವತೆ, ಅವನು ಪುರುಷ. ತಲೆಯ ಮೇಲೆ ವಿಷಸರ್ಪ ಇಲ್ಲವೇ ಬಾತುಕೋಳಿ ಇರುವುದು ಅವನ ಲಾಂಛನ. ಅವನು ಜೋರಾಗಿ ನಕ್ಕರೆ ಭೂಕಂಪನವಾಗುತ್ತದೆಂದು ಪ್ರಾಚೀನರು ಭಯಮಿಶ್ರಿತ ಭಾವನೆಯಿಂದ ಅವನನ್ನು ಕಂಡಿದ್ದಾರೆ. ಗೆಬ್, ವಾಯುದೇವತೆ ‘ಶೂ’ನ ಪಾದಸ್ಪರ್ಶ ಮಾಡುವಂತೆ ಕೆಲವು ಚಿತ್ರಗಳಿವೆ. ಇದಕ್ಕೆ ವ್ಯತಿರಿಕ್ತವಾಗಿ ಆಕಾಶ ದೇವತೆ ನಟ್, ಆಕೆ ಮಳೆ ಸುರಿಸುತ್ತಾಳೆ. ಆದರೆ ಈಜಿಪ್ಟಿನಲ್ಲಿ ನೈಲ್ ನದಿ ಧಾರಾಳವಾಗಿ ಹರಿಯುವುದರಿಂದ ಪ್ರಾಚೀನರು ಮಳೆ ದೇವತೆಗೆ ಹೆಚ್ಚೇನೂ ಪ್ರಾಶಸ್ತ್ಯ ಕೊಟ್ಟಿಲ್ಲ. ಪ್ರತಿದಿನ ಸಂಜೆ ನಟ್ ಸೂರ್ಯನನ್ನು ನುಂಗುವುದು, ಬೆಳಗ್ಗೆ ಉಗುಳುವುದು ಅವಳಿಗೆ ಪ್ರಿಯವಾದ ಕಾಯಕ.

ಭೂಮಿಯ ಲಕ್ಷಣಗಳು ಪ್ರಾಚೀನರಿಗೆ ಒಂದೊಂದು ಬಗೆಯ ಊಹೆಗೂ, ಅದನ್ನು ವಿಸ್ತರಿಸಲು ಅವಕಾಶವನ್ನೂ ಕೊಟ್ಟಿದೆ. ಚಿಲಿ ಮತ್ತು ಇಟಲಿಗಳು ಜ್ವಾಲಾಮುಖಿಗೆ ಪ್ರಸಿದ್ಧ. ಈಗಲೂ ಚಿಲಿಯಲ್ಲಿ ಕ್ರಿಯಾಶೀಲ ಜ್ವಾಲಾಮುಖಿಗಳಿವೆ. ಇದನ್ನು ಕಣ್ಣಾರೆಕಂಡ ಆ ಜನ ಜ್ವಾಲಾಮುಖಿಯೊಳಗೆ ತಿಮಿಂಗಿಲವಿದೆ ಎಂದು ನಂಬಿದ್ದರು. ಅದು ಮಹಾದೈತ್ಯನೆಂದು ಅವರ ಭಾವನೆ. ಜಪಾನೀಯರು ಜ್ವಾಲಾಮುಖಿಯೊಳಗೆ ಬಹು ದೊಡ್ಡ ಜೇಡವಿದೆ ಎಂದು ಭಾವಿಸಿದ್ದರು. ಹೊಂಟೋಬೋಗೋ ಎಂಬ ಘಟಸರ್ಪ ಜ್ವಾಲಾಮುಖಿಯೊಳಗೆ ಮನೆ ಮಾಡಿ ತನ್ನ ಹೆಡೆಯೊಳಗೆ ಇಡೀ ಜಗತ್ತನ್ನು ಎತ್ತಿ ಹಿಡಿದಿದೆ ಎಂದು ಇಂಡೋನೇಷ್ಯದ ಪೂರ್ವಜರು ಕಲ್ಪಿಸಿದ್ದರು. ಚಲಿಸಿದರೆ ಭೂಮಿ ನಡುಗುತ್ತದೆ, ಜ್ವಾಲಾಮುಖಿಗಳು ಕೆರಳಿದರೆ ದೇವತೆಗಳೂ ಭೀತಿಗೊಳ್ಳುತ್ತಾರೆ ಎಂದು ಊಹಿಸಿದ್ದರು. ಭೂತತೃಪ್ತಿಗಾಗಿ ಪ್ರಾಣಿಗಳನ್ನು ಬಲಿಕೊಡುವ ಸಂಪ್ರದಾಯ ಫಿಲಿಪ್ಪೀನ್ಸ್‌ನ ಬಗೋಟ ಎಂಬ ಬುಡಕಟ್ಟಿನಲ್ಲಿತ್ತು.

ಸಿಸಿಲಿಯ ಎಟ್ನಾ ಜ್ವಾಲಾಮುಖಿಯನ್ನು ಗಗನಸ್ತಂಭವೆಂದೇ ವರ್ಣಿಸಲಾಗಿದೆ. ಮಹಾಕವಿ ಹೋಮರ್‌ನ ‘ಒಡಿಸ್ಸಿ’ಯಲ್ಲಿ ಬರುವ ಸೈಕ್ಲೋಪ್ ಮತ್ತು ಟೈಟಾನರ ವರ್ಣನೆಗೆ ಆ ದೇಶದ ಜ್ವಾಲಾಮುಖಿಗಳೇ ಪ್ರೇರಣೆಕೊಟ್ಟಿವೆ. ಸೈಕ್ಲೋಪ್ ಒಕ್ಕಣ್ಣ ರಾಕ್ಷಸ, ಜ್ವಾಲಾಮುಖಿಯ ತಳದಲ್ಲಿ ಕೂತು ಜೋವ್ ಅಂದರೆ ಜ್ಯುಪಿಟರ್‌ಗೆ ಸಿಡಿಲು ಹುಟ್ಟಿಸುವುದರಲ್ಲಿ ಸಹಾಯ ಮಾಡುತ್ತಿದ್ದನಂತೆ. ಈ ಕಮ್ಮಾರನನ್ನು ರೋಮನ್ನರು ವಲ್ಕಾನ್ ಎಂದರು. ವಲ್ಕಾನ್, ಜ್ಯುಪಿಟರ್ ಮತ್ತು ಜೂನೋ ಇವರ ಮಗನಂತೆ. ಅವನನ್ನು ಸ್ವರ್ಗದಿಂದ ಎಸೆದಾಗ ವಲ್ಕಾನ್ ಹೆಳವನಾದ, ಇಟಲಿಯ ಜ್ವಾಲಾಮುಖಿಯೊಂದರಲ್ಲಿ ಬಿದ್ದ. ಅವನ ಕಮ್ಮಟದ ಕುಲುಮೆಯಿಂದ ಹೊರಬರುವ ಬೆಂಕಿಗೆ ಈ ಹಿನ್ನೆಲೆಯನ್ನು ಕಲ್ಪಿಸಿದ್ದಾರೆ. ಈಗಲೂ ಆಗಸ್ಟ್ 23ನೆಯ ದಿನ ವಲ್ಕಾನನನ್ನು ಪೂಜಿಸಲು ಇಟಲಿಯಲ್ಲಿ ವಿಶೇಷ ಹಬ್ಬ ಆಚರಿಸಲಾಗುತ್ತದೆ. ಬೆಂಕಿಯಿಂದ ರಕ್ಷಿಸಲು ಪ್ರಾರ್ಥನೆ ಸಲ್ಲಿಸುತ್ತಾರೆ.

ವೇದ ವಾಙ್ಮಯದಲ್ಲಿ ಭೂಮಿ
ಖಚಿತತೆಯ ದೃಷ್ಟಿಯಿಂದ ಪುರಾಣಗಳನ್ನು ಗಂಭೀರವಾಗಿ ಪರಿಗಣಿಸುವುದು ಕಡಿಮೆ. ಪುರಾಣಗಳನ್ನು ರಚಿಸುವಾಗ ಇದ್ದ ಧರ್ಮ ಸಂಘರ್ಷಗಳನ್ನು ಕೂಡ ಅರ್ಥಮಾಡಿಕೊಳ್ಳಬೇಕಾಗುತ್ತದೆ. ಆದರೆ ವೇದಗಳ ಬಗ್ಗೆ ಈ ಮಾತುಗಳನ್ನು ಹೇಳಲು ಸಾಧ್ಯವಿಲ್ಲ. ವೇದಗಳನ್ನು ಪ್ರಮಾಣಗ್ರಂಥಗಳು ಎಂದೇ ಭಾರತೀಯರು ಭಾವಿಸಿದ್ದಾರೆ. ಅದರಲ್ಲಿ ಹೇಳಿರುವುದೇ ಅಂತಿಮ ಎಂಬ ಮನಸ್ಥಿತಿಯೂ ಉಂಟು. ಅದೇನೇ ಇರಲಿ, ವೇದ ರಚನೆಯ ಕಾಲಕ್ಕೆ ಪ್ರಕೃತಿಗೂ ಮನುಷ್ಯನಿಗೂ ಇರುವ ನಂಟು ಗಾಢವಾಗಿತ್ತು ಎಂಬುದನ್ನು ಋಗ್ವೇದವೇ ಸಾರುತ್ತದೆ. ಪ್ರಕೃತಿಯ ಕೃಪೆಯಿಂದಲೇ ನಮ್ಮ ಬದುಕು ಎಂಬುದು ಸಮಾಜಕ್ಕೆ ಅರ್ಥವಾಗಿತ್ತು. ಏಕೆಂದರೆ ವೇದ ರಚಿಸುವ ಕಾಲಕ್ಕೆ (ಅಂದಾಜು ಕ್ರಿ.ಪೂ. 1600) ಅಲೆಮಾರಿಯಾಗಿದ್ದ ಮನುಷ್ಯ ಒಂದೆಡೆ ನೆಲೆ ನಿಂತಿದ್ದ. ಕೃಷಿಯುಗ ಪ್ರಾರಂಭವಾಗಿ ಆರೇಳು ಸಾವಿರ ವರ್ಷಗಳೇ ಆಗಿದ್ದವು. ಭೂಮಿ ಇಲ್ಲದೆ ಕೃಷಿ ಎಂತು? ಭೂಮಿಯೇ ಸರ್ವಸ್ವ. ಇತರ ಜೀವಿಗಳೊಡನೆ ಮನುಷ್ಯ ಬದುಕು ಹಂಚಿಕೊಂಡಿದ್ದ ಎಂಬ ಸತ್ಯ ಆಗಲೇ ಗೋಚರಿಸಿತ್ತು. ಭೂಸಂಪತ್ತನ್ನು ಪಡೆಯಲು, ರೋಗಾದಿಗಳಿಂದ ಬಾಧೆ ಆಗದಂತೆ ಇರಲು ಗೋವುಗಳನ್ನು ನೀಡು ಎಂದು, ಶತ್ರುಗಳಿಂದ ಆಕ್ರಮಣವಾಗದಿರಲಿ ಎಂದು ಪ್ರಾರ್ಥಿಸಿರುವ ಋಕ್ಕುಗಳೇ ಋಗ್ವೇದದಲ್ಲಿ ಪ್ರಧಾನ. ಕೃಷಿಪ್ರಧಾನವಾದ ಕಾಲಘಟ್ಟದಲ್ಲಿ ವೇದಕಾಲೀನ ತಜ್ಞರು ಜಲಚಕ್ರವನ್ನೂ ಗಮನಿಸಿದ್ದರು. ಆಕಾಶ ಮತ್ತು ಭೂಮಿಗೆ ಇರುವ ನಂಟು ಅರ್ಥವಾಗಿತ್ತು. ಆಕಾಶ ದ್ಯಾವ, ಭೂಮಿ ಪೃಥವಿ, ಮಳೆಬಿದ್ದು ಭೂಮಿ ಫಲವತ್ತಾಗಬೇಕು, ಆಹಾರ ಬೆಳೆಯಬೇಕು ಎನ್ನುವ ಸರಳ ಸತ್ಯದಿಂದಲೇ ಸೃಷ್ಟಿಸಿದ ಕಲ್ಪನೆ ‘ದ್ಯಾವ–ಪೃಥವಿ’. ಆಕಾಶ ಪುರುಷನಾದರೆ, ಭೂಮಿ ಪ್ರಕೃತಿ ಅಂದರೆ ಸ್ತ್ರೀ ರೂಪ. ಆಕಾಶದಿಂದ ಸುರಿಯುವ ಮಳೆ, ಭೂಮಿ ಗರ್ಭಕಟ್ಟಲು ಬಿತ್ತಿದ ಬೀಜ. ದ್ಯಾವ–ಪೃಥವಿಯ ಪರಿಕಲ್ಪನೆ ಮುಂದಿನ ವೇದಗಳಿಗೂ ವಿಸ್ತರಿಸಿದೆ.

ಅಥರ್ವ ವೇದದಲ್ಲಿ ಭೂಮಿಗೆ ವಿಶೇಷ ಗೌರವ ಸಂದಿದೆ. ಈ ವೇದದ 12ನೇ ಕಾಂಡ, ಒಂದನೇ ಸೂಕ್ತ, ‘ಭೂಸೂಕ್ತ’ವೆಂದೇ ಹೆಸರುವಾಸಿ. ಮನುಷ್ಯರನ್ನು ಒಟ್ಟುಗೂಡಿಸಿ ಪೋಷಿಸುತ್ತಿರುವವಳೇ ಭೂಮಿ. ವನಸ್ಪತಿ, ಓಷಧಿ ಅವಳ ಕರುಣೆ. ಸಮುದ್ರ, ನದಿ, ಸರೋವರಗಳಿಗೂ, ಅನ್ನ–ಆಹಾರಗಳಿಗೂ ಅಷ್ಟೇ ಏಕೆ, ಉಸಿರಾಡುವ ಎಲ್ಲ ಜೀವಿಗಳಿಗೂ ಆಧಾರವಾದವಳು ಭೂಮಿ.

‘ಹೇ ಭೂಮಿ, ನಮಗೆ ಸಂಪತ್ತನ್ನು ಕರುಣಿಸು, ಪ್ರವಹಿಸುವ ಜಲಧಾರೆ ಎಲ್ಲ ಜೀವಿಗಳಿಗೂ ಹಂಚಿಕೆಯಾಗಲಿ’ ಎನ್ನುವ ಭಾವಭಕ್ತಿಯ ಪ್ರಾರ್ಥನೆ ಈ ಸೂಕ್ತಗಳಲ್ಲಿ ನಿಚ್ಚಳವಾಗಿ ಕಾಣುತ್ತದೆ. ‘ಕಲ್ಲು ಬಂಡೆ, ದೂಳು, ಖನಿಜ ಇವುಗಳನ್ನೆಲ್ಲ ಚೆನ್ನಾಗಿ ಧರಿಸಿ ತಾನೂ ಧನ್ಯಳಾಗಿರುವ ಬಂಗಾರದ ಒಡಲಿನಿಂದ ಕೂಡಿರುವ ಭೂದೇವಿಗೆ ನಮಸ್ಕಾರ’ ಎನ್ನುತ್ತದೆ ಒಂದು ಪ್ರಾರ್ಥನೆ. ಇಲ್ಲಿನ ಇನ್ನೊಂದು ಪ್ರಾರ್ಥನೆ ವೇದಕಾಲದಲ್ಲಿದ್ದ ಬಹುತ್ವದ ಬಗ್ಗೆ ಉದಾರನೀತಿಯನ್ನು ಪ್ರಕಟಿಸುತ್ತದೆ: ‘ವಿವಿಧ ಭಾಷೆಗಳನ್ನಾಡುವ, ವಿವಿಧ ಧರ್ಮಗಳನ್ನು ಆಚರಿಸುವ, ನಾನಾ ವಿಧದ ಜನರಿಗೆಲ್ಲ ಅವರ ಅನುಕೂಲಕ್ಕೆ ತಕ್ಕಂತೆ ನೆಲೆ ನೀಡಿರುವ ಭೂಮಿಯು ನಿರಂತರ ಹಾಲು ಕರೆಯುವ ಕಾಮಧೇನುವಿನಂತೆ ಸಾವಿರ ಬಗೆಯ ಸಂಪತ್ತನ್ನು ನೀಡಲಿ.’

ಎಲ್ಲವನ್ನೂ ದಯಪಾಲಿಸಿರುವ ಭೂಮಿಗೆ ಕೃತಜ್ಞತೆಗಳನ್ನು ಹೇಗೆ ಸಲ್ಲಿಸಬೇಕು? ಅದನ್ನೂ ‘ಭೂಸೂಕ್ತ’ ಸೊಗಸಾಗಿ ಹೇಳುತ್ತದೆ: ಓ ಭೂಮಿಯೇ, ಯಾವಾಗ ನಿನ್ನಲ್ಲಿ ಹಳ್ಳ ತೋಡುವೆವೋ, ಅದು ಕೂಡಲೇ ಮುಚ್ಚಿಕೊಳ್ಳಲಿ, ನಿನ್ನ ಮರ್ಮಸ್ಥಾನವನ್ನು, ಹೃದಯವನ್ನು ನಾವು ಹಾನಿಮಾಡದಂತಾಗಲಿ.’ ಎಂಥ ದಯೆ, ಪಶ್ಚಾತ್ತಾಪ, ಭಯ ವೇದಕಾಲೀನ ಜನರದ್ದು!

‘ನಿದ್ದೆ ಮಾಡುವಾಗ ನಾವು ಎಡಕ್ಕೂ ಬಲಕ್ಕೂ ಹೊರಳುತ್ತೇವೆ. ಅಂಗಾತನಾಗಿ ನಿನ್ನ ಮೇಲೆ ಮಲಗುತ್ತೇವೆ, ಹೀಗೆ ನಿದ್ರಿಸುವಾಗ ಎಲ್ಲರಿಗೂ ನೀನೇ ಆಧಾರ. ಓ ಭೂಮಿಯೇ ನಮಗೆ ಸೋಲನ್ನುಂಟುಮಾಡಬೇಡ’ ಎಂಬುದು ಮತ್ತೊಂದು ಪ್ರಾರ್ಥನೆ. ಇನ್ನು ತಾಯಿಗೆ ಹಾನಿಮಾಡುವುದುಂಟೆ? ನಮ್ಮ ನಡೆನುಡಿಗಳು ಯಾವವೂ ಪೋಷಿಸುವ ಭೂಮಿಯನ್ನು ನೋಯಿಸಬಾರದು: ಏಳುವಾಗ, ಕುಳಿತುಕೊಳ್ಳುವಾಗ, ನಿಂತಾಗ, ನಡೆಯುವಾಗ ಹಾಗೂ ಎಡ ಅಥವಾ ಬಲ ಕಾಲುಗಳನ್ನು ಊರುವಾಗ, ಭೂಮಿಗೆ ನೋವಾಗದಿರಲಿ ಎಂಬ ಸೂಕ್ಷ್ಮ ಸಂವೇದನೆ ಇನ್ನೊಂದು ಪ್ರಾರ್ಥನೆಯಲ್ಲಿದೆ.

ಪ್ರಾಚೀನರು ಭೂಮಿಗೆ ತೋರಿದ ಕೃತಜ್ಞತೆ ಇದು. ಈಗ ನಾವೇನು ಮಾಡುತ್ತಿದ್ದೇವೆ? ನಾವೂ ಕ್ಷಮೆ ಕೇಳುತ್ತಿದ್ದೇವೆಯೆ?

‘ಹೇ ಭೂಮಿಯೇ, ನಿನ್ನ ಹಸಿರು ಸೀರೆಯನ್ನೆಲ್ಲ ಕಿತ್ತು ಒಗೆದು ನಿನ್ನನ್ನು ವಿರೂಪಗೊಳಿಸುತ್ತಿದ್ದೇವೆ.
ಹೇ ಭೂಮಾತೆ, ನಿನ್ನ ವಕ್ಷಸ್ಥಲಗಳನ್ನು ಬಗೆದು ನಿನ್ನ ಅಮೂಲ್ಯ ಸಂಪತ್ತನ್ನೆಲ್ಲ ಎತ್ತಿ ನಿನ್ನ ಮೈಯನ್ನೇ ರಾಡಿಮಾಡಿದ್ದೇವೆ.
ಹೇ ಪೃಥ್ವಿಯೇ, ನಿನ್ನ ನದಿ, ತೊರೆಗಳನ್ನೆಲ್ಲ ಮಾಲಿನ್ಯಮಾಡಿ ನೀನಂತಿರಲಿ, ನಾವೂ ಕುಡಿಯದಂತೆ ಕಲುಷಿತಗೊಳಿಸಿದ್ದೇವೆ.
ಹೇ ವಸುಧೆ, ನಿನ್ನ ಮುಖವನ್ನೆಲ್ಲ ಪ್ಲಾಸ್ಟಿಕ್ ತುಂಡುಗಳಲ್ಲಿ ಮುಚ್ಚಿದ್ದೇವೆ, ನೀನು ಉಸಿರಾಡುವುದಾದರೂ ಎಂತು?
ಹೇ ಧಾತ್ರಿ, ನೀನು ಕಳುಹಿಸಿದ ಮೆಲು ಗಾಳಿಯನ್ನೆಲ್ಲ ಸೇವನೆ ಮಾಡದಂತೆ ಮಾಡಿ, ಅಟ್ಟಹಾಸ ಬೀರಿದ್ದೇವೆ.
ಹೇ ಧರಣಿ, ನಿನ್ನ ಕೈಗಳನ್ನು ಕತ್ತರಿಸಿ ದಶದಿಕ್ಕುಗಳಲ್ಲಿ ಚೆಲ್ಲಿ ಕೇಕೆ ಹಾಕಿದ್ದೇವೆ.
ಹೇ ಧರಿತ್ರಿ, ನೀನು ಕೊಟ್ಟ ಸಂಪನ್ಮೂಲವನ್ನೇ ಬಳಸಿ, ನಿನ್ನನ್ನೇ ಸುಡುತ್ತಿದ್ದೇವೆ.’

ಹೇ ಕ್ಷಮಯಾಧರಿತ್ರಿ,

ನಾವು ಮಾಡಿರುವ ಪಾಪಕೃತ್ಯಗಳನ್ನೆಲ್ಲ ನೀನು ಕ್ಷಮಿಸುವುದಿಲ್ಲವೆಂದು ಗೊತ್ತು. ಅದಕ್ಕಾಗಿಯೇ ನಿನಗೆ ಯಾವ ಪ್ರಾರ್ಥನೆಯನ್ನೂ ಸಲ್ಲಿಸಲಾರೆವು.

ತರ್ಕದ ಮೂಸೆಯಲ್ಲಿ ಭೂಮಿ
ಒಂದೇ ಕಾಲದ ಸಮಾಜದಲ್ಲಿ ಎಷ್ಟೊಂದು ಬಗೆಯ ಜನ! ಈಗಿನ ಜಗತ್ತನ್ನೇ ನೋಡಿ, ಜನಸಾಮಾನ್ಯ, ರೈತ, ಕಾರ್ಮಿಕ, ನೌಕರ, ವ್ಯಾಪಾರಿ, ಪಂಡಿತ, ಪಾಮರ, ಕವಿ, ಕಲಾವಿದ, ವಿಜ್ಞಾನಿ, ತತ್ತ್ವಜ್ಞಾನಿ, ಸಮಾಜ ಸುಧಾರಕ – ಎಲ್ಲರೂ ಒಟ್ಟಿಗೆ ಬಾಳುತ್ತಿದ್ದಾರೆ. ಎಲ್ಲ ಕಾಲಕ್ಕೂ ಇಂಥವರಿದ್ದರು. ಒಂದೆಡೆ ಭೂಮಿಯನ್ನು ಕುರಿತು ಬಗೆಬಗೆಯ ಕಲ್ಪನೆಗಳನ್ನು ಮಾಡುತ್ತಿದ್ದವರು ಕೆಲವರು, ಅದೇ ಕಾಲಕ್ಕೆ ನಿಶಿತಮತಿಗಳು ತಮ್ಮ ತರ್ಕಗಳನ್ನು ಬಳಸಿ ಭೂಮಿಯನ್ನು ಕುರಿತು ಆಳವಾಗಿ ಯೋಚಿಸುತ್ತಿದ್ದರು.

ಕ್ರಿ.ಪೂ. ಏಳನೇ ಶತಮಾನದ ಈಜಿಪ್ಟ್ ದೊರೆ ನೆಹೋ, ಆಫ್ರಿಕಾ ಸಮುದ್ರ ತೀರದಿಂದ ಒಂದಷ್ಟು ನೌಕೆಗಳನ್ನು ಕಳಿಸಿ, ಅವರಿಗೊಂದು ಸೂಚನೆ ಕೊಟ್ಟಿದ್ದ. ನೌಕೆಗಳು ಸತತ ಪ್ರಯಾಣ ಮಾಡುತ್ತಲೇ ಇರಬೇಕು, ಕೊನೆಮುಟ್ಟುವವರೆಗೂ ಎಂದಿದ್ದ. ಇವನ ಒಳಗಿನ ಆಸೆಯೆಂದರೆ ಭೂಮಿ ಚಪ್ಪಟೆಯಾಗಿದೆಯೋ ಗುಂಡಗಿದೆಯೋ ಎಂಬ ಪರೀಕ್ಷೆ. ನಾವಿಕರು ಬೇರೆ ಬೇರೆ ದಿಕ್ಕಿನಿಂದ ಹೊರಟರು, ಅಂತಿಮವಾಗಿ ಹೊರಟ ಸ್ಥಾನಕ್ಕೇ ಮರಳಿದರು. ಭೂಮಿ ಗುಂಡಗಿದೆ ಎಂಬುದನ್ನು ಪ್ರಯೋಗ ಮಾಡಿದ ಮೊದಲ ಸಂಗತಿ ಇದು. ಆದರೆ ಇತಿಹಾಸದಲ್ಲಿ ಅಷ್ಟೇನೂ ಸುದ್ದಿಮಾಡಲಿಲ್ಲ.

ಭೂಮಿ ಚಪ್ಪಟೆಯಾಗಿಲ್ಲ ಎಂದು ಸಾಧಿಸಲು ಕ್ರಿ.ಪೂ. ಮೂರನೇ ಶತಮಾನದಲ್ಲಿದ್ದ ಎರಟಾಸ್ಥನಿಸ್ ಎಂಬ ಕುಶಲಮತಿ (ಬಹುಶಃ ನಮ್ಮ ಕೌಟಲ್ಯನ ಸಮಕಾಲೀನ) ಒಂದು ಸರಳ ಪ್ರಯೋಗವನ್ನು ಮಾಡಿದ. ಸಿಯೆನ್ ನಗರ ಮತ್ತು ಅಲೆಕ್ಸಾಂಡ್ರಿಯ ನಡುವೆ 5000 ಸ್ಟೇಡಿಯಂ ದೂರವಿದೆ (ಒಂದು ಸ್ಟೇಡಿಯಮ್ ಎಂದರೆ 185.25 ಮೀಟರ್) ಎಂದು ಒಂಟೆ ಸವಾರಿ ಮಾಡುವವರು ಅಳೆದು ನೋಡಿದ್ದರು. ಎರಟಾಸ್ಥನಿಸ್‌ಗೆ ಗೊತ್ತಿತ್ತು. ಕರ್ಕಾಟಕ ಸಂಕ್ರಾಂತಿ ದಿನದಂದು ಅಂದರೆ ಸೂರ್ಯಕಿರಣ ನೇರವಾಗಿ ಭೂಮಿಯ ಮೇಲೆ ಬೀಳುವಾಗ ಅಲೆಕ್ಸಾಂಡ್ರಿಯದಲ್ಲೊಂದು ಕೋಲನ್ನು, ಸಿಯೆನ್‌ನಲ್ಲಿ ಒಂದು ಕೋಲನ್ನು ನೆಟ್ಟು ಗಮನಿಸಿದಾಗ, ಸಿಯೆನ್‌ನ ಕೋಲು ನೆರಳು ಮೂಡಿಸಿರಲಿಲ್ಲ. ಅಲೆಕ್ಸಾಂಡ್ರಿಯದ ಕೋಲಿನ ನೆರಳು ವಾಲಿತ್ತು. ಇದರ ಆಧಾರದ ಮೇಲೆ 360 ಡಿಗ್ರಿ ಕೋನಕ್ಕೆ ಲೆಕ್ಕ ಹಾಕಿ ಭೂಮಿಯ ಸುತ್ತಳತೆ ಈಗಿನ ಲೆಕ್ಕದಲ್ಲಿ 41,400 ಕಿಲೋ ಮೀಟರ್ ಎಂದು ಅಳತೆಮಾಡಿದ. ಈಗ ವೈಜ್ಞಾನಿಕವಾಗಿ ಅಳೆದು ನೋಡಿದರೆ ಭೂಮಿಯ ಸುತ್ತಳತೆ 40,077 ಕಿಲೋ ಮೀಟರ್. ಅಂಥ ದೊಡ್ಡ ವ್ಯತ್ಯಾಸವೇನೂ ಅಲ್ಲ. ಅಷ್ಟು ತೀಕ್ಷ್ಣಮತಿಯಾಗಿದ್ದ ಎರಟಾಸ್ಥನಿಸ್.

ಗ್ರಹಣಗಳ ಬಗ್ಗೆ ಅತ್ಯಂತ ಖಚಿತವಾದ ಮಾಹಿತಿ ಕೊಟ್ಟವನು ನಮ್ಮ ಭಾರತದಲ್ಲಿ ಐದನೆಯ ಶತಮಾನದಲ್ಲಿದ್ದ ಆರ್ಯಭಟ. ಅವನ ‘ಆರ್ಯಭಟೀಯಂ’ ಕೃತಿಯ ‘ಗೋಲಾರ್ಧ’ ಅಧ್ಯಾಯದಲ್ಲಿ ಅವನು ಹೇಳಿರುವ ಅಂಶಗಳು ಇವು: ‘ಸೂರ್ಯಗ್ರಹಣದಲ್ಲಿ ಚಂದ್ರನು ಸೂರ್ಯನನ್ನು ಮರೆಮಾಡುತ್ತಾನೆ, ಚಂದ್ರಗ್ರಹಣದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂಮಿಯ ನೆರಳು ಚಂದ್ರನನ್ನು ಮರೆಮಾಡುತ್ತದೆ.’ ಆರ್ಯಭಟ ಅದ್ವಿತೀಯ ಗಣಿತಜ್ಞ ಮತ್ತು ಖಗೋಲ ವಿಜ್ಞಾನಿ ಎಂಬುದಕ್ಕೆ ಅವನ ಇಂಥ ಹತ್ತಾರು ಕಾಣಿಕೆಗಳನ್ನು ಉಲ್ಲೇಖಿಸಬಹುದು.

ಭೂಮಿತಾಯಿಗೆ ಎಷ್ಟೊಂದು ಹೆಸರು!
ಮನುಷ್ಯ ಮತ್ತು ಭೂಮಿಯ ಸಂಬಂಧ, ತಾಯಿ ಮಕ್ಕಳ ಸಂಬಂಧ; ಮರ್ತ್ಯರು ಮತ್ತು ದೇವತೆಗಳ ಸಂಬಂಧ. ಇದಕ್ಕೆ ನಿದರ್ಶನವೆಂಬಂತೆ ಭೂಮಿಗೆ ಸಂದಿರುವ ಹಲವು ಹೆಸರುಗಳನ್ನು ಗಮನಿಸಬಹುದು.

ಇಲ, ಇಳೆ, ಇಲೆ,ಈಡ, ಉರ್ಬರೆ, ಉರ್ವಿ, ಕರಣ, ಕ್ಷಮ,ಕ್ಷಯ, ಕಾಂತಾ, ಕಾಶ್ಯಪ, ಕ್ಷಿತಿ, ಕ್ಷಿತಿವಧು, ಕುಂಬಿನಿ, ಕುವ, ಕುವಲಯ, ಕ್ಷೋಣಿ,ಗಂಧವತಿ,ಗಹ್ವರಿ,ಗ್ರಹ,ಗೋತ್ರೆ, ಚತುರಂತ, ಜಗತಿ,ಜಮೀನ,ಜಲರಶನೆ, ತಿರ‍್ಯಕ್‌ಲೋಕ, ತಿರೆ, ಧನಸ್, ಧನ್ವಾ, ಧರಣಿ, ಧರಣೀಚಕ್ರ, ಧರಣಿತಲ, ಧರಣಿಮಂಡಲ, ಧರಾ, ಧರಾಗ್ರ, ಧರಾತಲ,ಧರಾಧಾರೆ, ಧರೆ, ಧರಿತ್ರಿ, ಧಾತ್ರಿ, ಧೇನು, ನಗಧರೆ, ನಿಪತ್ಸೆ, ನೆಲ, ಪರಿಗ್ರಹ, ಪೃಥಿ, ಪೃಥು, ಪ್ರಶ್ನಿ, ಪುಣ್ಯಭೂಮಿ, ಪೊಡವಿ, ಬುವಿ, ಭುವನ, ಭೂ, ಭುಗೋಳ, ಭೂತಲ, ಭೂತಧಾತ್ರಿ, ಭೂದೇವಿ, ಭೂಮ, ಭೂಮಿಕೆ, ಭೂಮಂಡಲ, ಮಟ್ಟಿ, ಮಣ್ಣು, ಮರ್ತ್ಯಲೋಕ ಮೃತ, ಮೃತ್ತಿಕಾ,ಮಹೀಮಂಡಲ, ಮಹೀತಲ, ಮಾತೃ, ಮಾತೆ, ಮಾಧವಿ, ಮೇದಿನಿ, ರತ್ನಗರ್ಭ, ರನ್ನವಸಿರ್, ರಸನೆ, ರಸಾ, ರಸೆ, ರೂಢಿ, ರೋಧಸಿ, ವಲ್ಲಿ, ವಸುಂಧರ, ವಸುಧಾ, ವಸುಮತಿ, ವಾಸವಿ, ವಿಪುಲ, ಶಾರ್ವರಿ, ಶೈಲಧರೆ, ಸಮುದ್ರವಸನ, ಸರ್ವಂಸಹ, ಸ್ಥಂಡಿಲ, ಸಾಗರಾಂಭಾರ, ಸಾರಂಗ, ಸ್ಥಿರ, ಹಲಾಹಲೆ, ಹಾಳು, ಹಿರಣ್ಯಗರ್ಭೆ, ಹೇಮಗರ್ಭೆ.

ಕೃಪೆ: ಸುಧಾ, ವಾರಪತ್ರಿಕೆ, ಏಪ್ರಿಲ್ 25ರ ಸಂಚಿಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT