ಯಡಿಯೂರಪ್ಪ ಎಲ್ಲಿ ಮಲಗುತ್ತಾರೆ ಗೊತ್ತು: ದಿನೇಶ್ ಗುಂಡೂರಾವ್

7
‘ಸತೀಶ ಜಾರಕಿಹೊಳಿ ತಮಾಷೆ ಮಾಡುತ್ತಾರೆ’ ಎಂದ ಕೆಪಿಸಿಸಿ ಅಧ್ಯಕ್ಷ 

ಯಡಿಯೂರಪ್ಪ ಎಲ್ಲಿ ಮಲಗುತ್ತಾರೆ ಗೊತ್ತು: ದಿನೇಶ್ ಗುಂಡೂರಾವ್

Published:
Updated:

ಕೊಪ್ಪಳ: 'ಯಡಿಯೂರಪ್ಪ ಏನ್ ಸತ್ಯ ಹರಿಶ್ಚಂದ್ರನಾ? ಅವರು ಎಲ್ಲಿ ಇರ್ತಾರೆ, ಎಲ್ಲಿ ಮಲಗುತ್ತಾರೆ ಎಂಬುದು ನಮಗೂ ಗೊತ್ತು. ಅದು ಅವರ ವೈಯಕ್ತಿಕ ವಿಷಯ. ಹೀಗಾಗಿ ನಾವು ಆ ಬಗ್ಗೆ ಹೇಳುವುದಿಲ್ಲ. ಅಧಿಕಾರದಲ್ಲಿದ್ದಾಗ ಅವರು ಏನೇನ್ ಮಾಡಿದ್ದಾರೆ ಎಂಬುದು ಎಲ್ಲರಿಗೂ ಗೊತ್ತಿದೆ' ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

'ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಫೈವ್ ಸ್ಟಾರ್ ಹೋಟೆಲ್‌ನಲ್ಲಿ ಕುಳಿತು ವರ್ಗಾವಣೆ ದಂಧೆ‌ ಮಾಡುತ್ತಾರೆ' ಎಂಬ ಯಡಿಯೂರಪ್ಪ ಅವರ ಆರೋಪಕ್ಕೆ 'ಯಡಿಯೂರಪ್ಪಗೆ ಮಾತನಾಡಲು ಬೇರೆ ವಿಷಯವಿಲ್ಲ. ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡುವ ಅಗತ್ಯವಿಲ್ಲ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

‘ಕಾಂಗ್ರೆಸ್ ಶಾಸಕರು ತಮ್ಮ ಸಂಪರ್ಕದಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಿರುವುದು ಸುಳ್ಳು. ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ. ಸುಳ್ಳು ಹೇಳುವುದೇ ಬಿಜೆಪಿಯವರ ಜಾಯಮಾನ' ಎಂದು ಲೇವಡಿ ಮಾಡಿದರು.

‘ಜಾರಕಿಹೊಳಿ ತಮಾಷೆ ಮಾಡುತ್ತಾರೆ’
'ಶಾಸಕ ಸತೀಶ್ ಜಾರಕಿಹೊಳಿ ಅವರು ಏಳೆಂಟು ಶಾಸಕರೊಂದಿಗೆ ಬಿಜೆಪಿ ಸಂಪರ್ಕದಲ್ಲಿದ್ದಾರೆ ಎನ್ನುವುದಕ್ಕೆ ಗಮನ ಕೊಡಬೇಕಾಗಿಲ್ಲ. ಏಕೆಂದರೆ ಸತೀಶ್‌ ಆಗಾಗ ತಮಾಷೆ‌ ಮಾಡುತ್ತಿರುತ್ತಾರೆ’ ಎಂದು ವ್ಯಂಗ್ಯವಾಡಿದರು.

‘ಇದೇ 22 ರಂದು ಸಚಿವ ಸಂಪುಟ ವಿಸ್ತರಣೆಯಾಗಲಿದೆ. ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಆದ್ಯತೆ ನೀಡಲಾಗುವುದು’ ಎಂದ ಅವರು, ‘ಮೈತ್ರಿ ಸರ್ಕಾರ ಉತ್ತರ ಕರ್ನಾಟಕವನ್ನು ನಿರ್ಲಕ್ಷ್ಯ ಮಾಡಿಲ್ಲ. ಕೆಲಸದ ಒತ್ತಡದಿಂದ ಮುಖ್ಯಮಂತ್ರಿ ಈ ಕಡೆ ಹೆಚ್ಚು ಬರಲು ಸಾಧ್ಯವಾಗಿಲ್ಲ. ನಂತರ ದಿನಗಳಲ್ಲಿ ಇದನ್ನು ಸರಿಪಡಿಸುತ್ತೇವೆ’ ಎಂದು ಹೇಳಿದರು.

‘ಆನಂದಸಿಂಗ್ ನಮ್ಮ ಜೊತೆಗೇ ಇದ್ದಾರೆ’

‘ಹೊಸಪೇಟೆಯಲ್ಲಿ ನಡೆದ ಆರ್‌ಎಸ್ಎಸ್ ಕಾರ್ಯಕ್ರಮದಲ್ಲಿ ವಿಜಯನಗರ ಶಾಸಕ ಆನಂದ್ ಸಿಂಗ್ ಅವರು ಕಲ್ಲಡ್ಕ ಪ್ರಭಾಕರ ಭಟ್ ಅವರೊಂದಿಗೆ ಇಡೀ ದಿನ ಪಾಲ್ಗೊಂಡಿರುವ ಕುರಿತು ಮಾಹಿತಿ ಇಲ್ಲ. ಆನಂದಸಿಂಗ್ ಅವರು ನಮ್ಮ ಜೊತೆಗೇ ಇದ್ದಾರೆ. ಈ ಬಗ್ಗೆ ಅವರನ್ನು ಸಂಪರ್ಕಿಸಿ ಮಾಹಿತಿ ಪಡೆಯುತ್ತೇನೆ’ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಅಮರೇಗೌಡ ಬಯ್ಯಾಪುರ ಮತ್ತು ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಶಿವರಾಜ ತಂಗಡಗಿ ಈ ಸಂದರ್ಭದಲ್ಲಿ ಇದ್ದರು.

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 5

  Angry

Comments:

0 comments

Write the first review for this !