ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Covid-19 World Update: ಅಮೆರಿಕದಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕ

ಅಕ್ಷರ ಗಾತ್ರ
ADVERTISEMENT
""

ವಿಶ್ವದ ವಿವಿಧೆಡೆ ಈವರೆಗೆ ಕೊರೊನಾ ವೈರಸ್‌ ಸೋಂಕಿಗೆ ಒಟ್ಟು 5.15 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 1.06 ಕೋಟಿ ಮೀರಿದೆ. ಪ್ರತಿದಿನ ಸರಾಸರಿ 1 ಲಕ್ಷಕ್ಕೂ ಹೆಚ್ಚು ಹೊಸ ಸೋಂಕು ಪ್ರಕರಣಗಳು ವರದಿಯಾಗುತ್ತಿವೆ.

ಬುಧವಾರ ಮಟ್ಟಿಗೆ ಬ್ರಿಜಿಲ್ ದಾಖಲೆ ಬರೆದಿದೆ. ಅಲ್ಲಿ ಒಂದೇ ದಿನ 32 ಸಾವಿರ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಅಮೆರಿಕದಲ್ಲಿಯೂ ಹೊಸದಾಗಿ 25 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಕೊರೊನಾ ಪಿಡುಗು ಕಾಣಿಸಿಕೊಂಡ ನಂತರ ಈ ಪ್ರಮಾಣದಲ್ಲಿ ಸೋಂಕಿತರು ಒಂದೇ ದಿನ ಅಮೆರಿಕದಲ್ಲಿ ಪತ್ತೆಯಾಗಿದ್ದು ಇದೇ ಮೊದಲು. 'ಸೋಂಕು ತಡೆಯುವ ಪ್ರಯತ್ನಗಳಿಗೆ ಕೇಂದ್ರ ಸರ್ಕಾರ ಒತ್ತು ನೀಡದಿದ್ದರೆ ಸೋಂಕಿನಿಂದ ಸಾಯುವವರ ಸಂಖ್ಯೆ ದಿನಕ್ಕೆ 10 ಸಾವಿರ ದಾಟೀತು' ಎಂದು ಅಮೆರಿಕದ ರಾಷ್ಟ್ರೀಯ ಸೋಂಕು ಕಾಯಿಲೆಗಳ ಸಂಸ್ಥೆಯ ಮುಖ್ಯಸ್ಥ ಡಾ.ಆಂತೊಣಿ ಫೌಸಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಅವರ ಕಿವಿ ಹಿಂಡಿದ್ದಾರೆ.

ಕೊರೊನಾ ವೈರಸ್‌ನಿಂದಾಗಿ 2020ರ ದ್ವಿತೀಯ ತ್ರೈಮಾಸಿಕದಲ್ಲಿ (ಜುಲೈನಿಂದ ಸೆಪ್ಟೆಂಬರ್) ಸುಮಾರು 4 ಕೋಟಿ ಪೂರ್ಣಾವಧಿ ನೌಕರರು ಕೆಲಸ ಕಳೆದುಕೊಳ್ಳಬಹುದು ಎಂದು ವಿಶ್ವ ಕಾರ್ಮಿಕ ಸಂಘಟನೆ ಭೀತಿ ವ್ಯಕ್ತಪಡಿಸಿದೆ. ಅಂದಾಜು ಮಾಡಿದ್ದಕ್ಕಿಂತಲೂ ಹೆಚ್ಚಿನ ಹಾನಿ ಕೊರೊನಾ ಪಿಡುಗಿನಿಂದ ಉಂಟಾಗಿದೆ. ಮುಂದಿನ 6 ತಿಂಗಳ ಅವಧಿಯಲ್ಲಿ ಉದ್ಯೋಗಗಳ ಸಂಖ್ಯೆ ಸುಧಾರಿಸುವ ಲಕ್ಷಣಗಳಿಲ್ಲ ಎಂದು ವಿಶ್ವ ಕಾರ್ಮಿಕ ಸಂಘಟನೆ ಹೇಳಿದೆ.

ಪಾಕಿಸ್ತಾನದಲ್ಲಿ ಈವರೆಗೆ 2.13 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಸತ್ತವರ ಸಂಖ್ಯೆ 4,395ಕ್ಕೆ ಏರಿದೆ.

ದೇಶವಾರು ಸೋಂಕಿತರು ಮತ್ತು ಸೋಂಕಿನಿಂದ ಮೃತರ ಅಂಕಿಅಂಶ (ಕೃಪೆ:worldometers.info)

ದೊಡ್ಡಣ್ಣನ ಅತಿಯಾಸೆ

ಕೊರೊನಾ ವೈರಸ್‌ಗೆ ಅಮೆರಿಕದಲ್ಲಿ ಈವರೆಗೆ 1.30 ಲಕ್ಷ ಮಂದಿ ಮೃತಪಟ್ಟಿದ್ದಾರೆ. ಸೋಂಕಿತರ ಒಟ್ಟು ಸಂಖ್ಯೆ 27 ಲಕ್ಷ ದಾಟಿದೆ. ಕ್ಯಾಲಿಫೋರ್ನಿಯಾ, ಟೆಕ್ಸಾಸ್ ಮತ್ತು ಅರಿಜೊನಾ ಪ್ರಾಂತ್ಯಗಳಲ್ಲಿ ಗಣನೀಯ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ವರದಿಯಾಗಿವೆ.

ಕೋವಿಡ್-19ರ ಚಿಕಿತ್ಸೆಗೆ ಲೈಸೆನ್ಸ್ ಪಡೆದ ಏಕೈಕ ಔಷಧ ಎನಿಸಿಕೊಂಡ ರೆಮ್‌ಡೆಸಿವಿರ್‌ನ (remdesivir) ಸೆಪ್ಟೆಂಬರ್‌ವರೆಗಿನ ಉತ್ಪಾದನೆಯನ್ನು (5 ಲಕ್ಷ ಚಿಕಿತ್ಸೆ) ತಮ್ಮ ದೇಶಕ್ಕಷ್ಟೇ ಸೀಮಿತಗೊಳಿಸುವ ಒಪ್ಪಂದವೊಂದನ್ನು ಅಮೆರಿಕ ಅಧ್ಯಕ್ಷರು ಮಾಡಿಕೊಂಡಿದ್ದಾರೆ. ಈ ಒಪ್ಪಂದವು ಆರೋಗ್ಯ ತಜ್ಞರ ಕೆಂಗಣ್ಣಿಗೆ ಗುರಿಯಾಗಿದೆ.

'ಇತರ ದೇಶಗಳ ಬಗ್ಗೆ ಅಮೆರಿಕ ಅದೆಂಥ ಧೋರಣೆ ಹೊಂದಿದೆ ಎಂಬುದಕ್ಕೆ ಅಧ್ಯಕ್ಷರ ಈ ನಡೆಯೇ ಸಾಕ್ಷಿ' ಎಂದು ಸಸೆಕ್ಸ್ ವಿವಿಯ ಹಿರಿಯ ಉಪನ್ಯಾಸಕ ಓಹಿಡ್ ಯಾಕುಬ್ ಟೀಕಿಸಿದ್ದಾರೆ.

ಆಫ್ರಿಕಾದಲ್ಲಿ 4 ಲಕ್ಷ ದಾಟಿತು ಸೋಂಕಿತರ ಸಂಖ್ಯೆ

ಆಫ್ರಿಕಾ ಖಂಡದಲ್ಲಿ ಸೋಂಕಿತರ ಸಂಖ್ಯೆ 4 ಲಕ್ಷ ದಾಟಿದೆ. ಮೃತರ ಸಂಖ್ಯೆ 10 ಸಾವಿರ ಮೀರಿದೆ. 54 ದೇಶಗಳಿರುವ ಆಫ್ರಿಕಾ ಖಂಡದಲ್ಲಿ ಸೋಂಕು ತಪಾಸಣಾ ಉಪಕರಣಗಳ ಕೊರತೆಯಿಂದಾಗಿ ಟೆಸ್ಟಿಂಗ್ ನಿರೀಕ್ಷಿತ ಮಟ್ಟದಲ್ಲಿ ನಡೆಯುತ್ತಿಲ್ಲ.

ದಕ್ಷಿಣ ಆಫ್ರಿಕಾದ 1.51 ಲಕ್ಷ ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಈ ಪೈಕಿ ಶೇ 28ರಷ್ಟು ಜನರು ಜೋಹನ್ಸ್‌ಬರ್ಗ್‌ ಆಸುಪಾಸಿನಲ್ಲಿಯೇ ಇದ್ದಾರೆ.

ನಿರ್ಬಂಧ ಸಡಿಲಿಸಿದ ಜರ್ಮನಿ

ಐರೋಪ್ಯ ಒಕ್ಕೂಟದಿಂದ ಹೊರಗಿರುವ 11 ದೇಶಗಳಿಗೆ ತನ್ನ ದೇಶದ ಪ್ರಜೆಗಳು ಭೇಟಿ ನೀಡುವುದಕ್ಕೆ ಜರ್ಮನಿ ಬುಧವಾರ ಅನುಮತಿ ನೀಡಿದೆ. ಆಸ್ಟ್ರೇಲಿಯಾ, ಕೆನಡಾ, ಮಾಂಟೆನೆಗರೊ, ನ್ಯೂಝಿಲೆಂಡ್, ಥಾಯ್ಲೆಂಡ್, ಟ್ಯುನಿಶಿಯಾ ಮತ್ತು ಉರುಗ್ವೆ ದೇಶದ ಜನರು ಯಾವುದೇ ನಿರ್ಬಂಧಗಳಿಲ್ಲದೆ ಜರ್ಮನಿಗೆ ಭೇಟಿ ನೀಡಬಹುದಿದೆ. ಜಪಾನ್ ಮತ್ತು ದಕ್ಷಿಣ ಕೋರಿಯಾಗಳಿಗೂ ಜರ್ಮನಿ ರಿಯಾಯ್ತಿ ಘೋಷಿಸಿದೆ.

ತನ್ನ ದೇಶದ ಪ್ರಜೆಗಳಿಗೆ ಪ್ರವೇಶ ನೀಡುವಂತೆ ನಿಯಮಗಳನ್ನು ರೂಪಿಸಿದರೆ ಮಾತ್ರ, ಈ ದೇಶದ ಪ್ರಜೆಗಳಿಗೆ ಹೊಸ ನಿಯಮದಡಿ ಜರ್ಮನಿ ಪ್ರವೇಶಿಸಲು ಅವಕಾಶ ಸಿಗುತ್ತದೆ ಎಂದು ಜರ್ಮನ್ ಸರ್ಕಾರ ಹೇಳಿದೆ.

ಸುಧಾರಿಸಿತು ನ್ಯೂಜಿಲೆಂಡ್

ಎರಡು ದಿನಗಳ ಹಿಂದಷ್ಟೇ 2 ಪಾಸಿಟಿವ್ ಪ್ರಕರಣ ವರದಿಯಾಗಿದ್ದು ಹೊರತುಪಡಿಸಿದರೆ, ಕಳೆದ 24 ದಿನಗಳಿಂದ ನ್ಯೂಜಿಲೆಂಡ್‌ನಲ್ಲಿ ಹೊಸ ಸೋಂಕು ಪ್ರಕರಣಗಳು ವರದಿಯಾಗಿಲ್ಲ. ದೇಶದಲ್ಲಿ ಪ್ರಸ್ತುತ 22 ಸಕ್ರಿಯ ಪ್ರಕರಣಗಳಿವೆ. ಈ ಪೈಕಿ 21 ಮಂದಿ ಸಾಂಸ್ಥಿಕ ಕ್ವಾರಂಟೈನ್ ಕೇಂದ್ರಗಳಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT