ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಹಪ್ರಯಾಣಿಕನಲ್ಲಿ ಸೋಂಕು: ರೈಲು ಪ್ರಯಾಣದಲ್ಲಿ ಪ್ರಸರಣ ಸಾಧ್ಯತೆ ಹೆಚ್ಚು’

ಕನಿಷ್ಠ ಒಂದು ಮೀಟರ್‌ಗಿಂತ ಹೆಚ್ಚು ಅಂತರ ಅಗತ್ಯ– ವಿಜ್ಞಾನಿಗಳ ಸಲಹೆ
Last Updated 1 ಆಗಸ್ಟ್ 2020, 8:32 IST
ಅಕ್ಷರ ಗಾತ್ರ

ಲಂಡನ್‌: ರೈಲಿನಲ್ಲಿ ಸೋಂಕಿತ ಒಬ್ಬ ಪ್ರಯಾಣಿಕ ಇದ್ದಾಗ, ಆತನೊಂದಿಗೆ ಪ್ರಯಾಣಿಸುವವರು ಅಗತ್ಯ ಅಂತರ ಕಾಪಾಡಿಕೊಳ್ಳದಿದ್ದಲ್ಲಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಪ್ರಸರಣವಾಗುತ್ತದೆ ಎಂಬುದು ಅಧ್ಯಯನದಿಂದ ತಿಳಿದು ಬಂದಿದೆ.

ಪ್ರಯಾಣದ ಅವಧಿ ಒಂದು ಗಂಟೆಯದ್ದಾಗಿದ್ದರೂ, ಒಂದು ಮೀಟರ್‌ಗಿಂತ ಹೆಚ್ಚು ಅಂತರ ಕಾಪಾಡಿಕೊಳ್ಳುವುದು ಅಗತ್ಯ ಎಂದು ವಿಜ್ಞಾನಿಗಳು ಹೇಳಿದ್ದಾರೆ.ಈ ಅಧ್ಯಯನ ವರದಿ ‘ಕ್ಲಿನಿಕಲ್‌ ಇನ್‌ಫೆಕ್ಚಿಯಸ್ ಡಿಸೀಸ್‌’ನಲ್ಲಿ ಪ್ರಕಟವಾಗಿದೆ.

‘ಚೈನೀಸ್‌ ಸೆಂಟರ್‌ ಫಾರ್‌ ಡಿಸೀಜ್ ಕಂಟ್ರೋಲ್‌ ಆ್ಯಂಡ್‌ ಪ್ರಿವೆನ್‌ಷನ್‌’ನ ಸಂಶೋಧಕರು ಚೀನಾ ವಿವಿಧ ಮಾರ್ಗಗಳಲ್ಲಿ ಸಂಚರಿಸುವ ಹೈಸ್ಪೀಡ್‌ ರೈಲುಗಳಲ್ಲಿ ಅಧ್ಯಯನ ನಡೆಸಿದ್ದಾರೆ. ವಿಜ್ಞಾನಿಗಳು ಈ ಅಧ್ಯಯನಕ್ಕೆ ಸಂಕೀರ್ಣವಾದ ಗಣಿತ ಮಾದರಿಗಳನ್ನು ಬಳಸಿದ್ದಾರೆ.

ಇಂತಹ ರೈಲುಗಳಲ್ಲಿ ಸಂಚರಿಸುವವರ ಪೈಕಿ ಒಬ್ಬ ಸೋಂಕಿತ ಇದ್ದಾಗ, ಸೋಂಕಿತಗೆ ಹತ್ತಿರ ಇರುವ ಮೂರು ಅಡ್ಡಸಾಲು ಹಾಗೂ ಐದು ಉದ್ದ ಸಾಲಿನ ಆಸನಗಳಲ್ಲಿನ ಪ್ರಯಾಣಿಕರಿಗೆ ಸೋಂಕು ತಗುಲಿದ್ದು ದೃಢಪಟ್ಟಿತ್ತು. ಈ ಪ್ರಮಾಣ ಗರಿಷ್ಠ ಶೇ 10ರಷ್ಟಿತ್ತು ಎಂದು ಸಂಶೋಧಕರು ಹೇಳಿದ್ದಾರೆ.

ಅಧ್ಯಯನದ ಪ್ರಮುಖ ಅಂಶಗಳು

* ಪ್ರಯಾಣದ ಸಮಯದಲ್ಲಿ ಕೋವಿಡ್‌–19 ಇರುವ ವ್ಯಕ್ತಿಗಳು ಹಾಗೂ ಅವರ‍ಪಕ್ಕ, ಸಮೀಪದಲ್ಲಿ ಕುಳಿತು ಪ್ರಯಾಣಿಸಿದವರಲ್ಲಿ 14 ದಿನಗಳ ನಂತರ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿರುವುದನ್ನು ಅಧ್ಯಯನದಲ್ಲಿ ಪರಿಗಣಿಸಲಾಗಿದೆ

* ಸೋಂಕಿತ ವ್ಯಕ್ತಿಯ ಪಕ್ಕದಲ್ಲಿ ಕುಳಿತು ಪ್ರಯಾಣಿಸುವವರ ಪೈಕಿ ಶೇ 3.5ರಷ್ಟು ಜನರಿಗೆ ಸೋಂಕು ತಗಲುವ ಸಾಧ್ಯತೆ ಅಧಿಕ

* ಒಂದೇ ಸಾಲಿನಲ್ಲಿ ಕುಳಿತವರಲ್ಲಿ ಶೇ 1.5ರಷ್ಟು ಪ್ರಯಾಣಿಕರು ಸೋಂಕಿಗೆ ಒಳಗಾಗಬಹುದು

* ಸೋಂಕಿತ ವ್ಯಕ್ತಿ ಕುಳಿತಿದ್ದ ಸೀಟಿನಲ್ಲಿ ಕುಳಿತವರ ಪೈಕಿ ಶೇ 0.075ರಷ್ಟು ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ

* ಪ್ರಯಾಣದ ಅವಧಿ ಒಂದು ಗಂಟೆಗಿಂತ ಕಡಿಮೆ ಹಾಗೂ ಗರಿಷ್ಠ 8 ಗಂಟೆ

* 2019ರ ಡಿಸೆಂಬರ್‌ 19ರಿಂದ 2020ರ ಮಾರ್ಚ್‌ 6ರ ವರೆಗಿನ ಅವಧಿಯಲ್ಲಿ ಅಧ್ಯಯನ

ಕೋಟ್‌...

ರೈಲುಗಳಲ್ಲಿ ಪ್ರಯಾಣಿಸುವವರಲ್ಲಿ ಕೋವಿಡ್‌–19 ತಗುಲುವ ಅಪಾಯ ಹೆಚ್ಚು. ಆದರೆ, ಸೋಂಕಿತರಿಂದ ಎಷ್ಟು ಅಂತರ ಕಾಪಾಡಿಕೊಳ್ಳುಲಾಗುತ್ತದೆ, ಪ್ರಯಾಣದ ಸಮಯ ಈ ಸೋಂಕಿನ ಪ್ರಸರಣ ತಡೆಯುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ

– ಶೆಂಗ್ಜಿ ಲಾಯ್‌, ಬ್ರಿಟನ್‌ನ ಸೌಥಾಂಪ್ಟನ್‌ ವಿಶ್ವವಿದ್ಯಾಲಯದ ಅಧ್ಯಯನ ತಂಡ ಮುಖ್ಯ ವಿಜ್ಞಾನಿ

ಸಾರ್ವಜನಿಕ ಸಾರಿಗೆಯಲ್ಲಿ ಪ್ರಯಾಣಿಸುವವರಲ್ಲಿ ಕೋವಿಡ್‌–19 ಪ್ರಸರಣವಾಗುವ ಅಪಾಯ ಎಷ್ಟಿದೆ ಎಂಬುದನ್ನು ತಿಳಿದುಕೊಳ್ಳುವುದೇ ನಮ್ಮ ಅಧ್ಯಯನದ ಮುಖ್ಯ ಗುರಿಯಾಗಿತ್ತು.

– ಆ್ಯಂಡ್ರ್ಯೂ ಟಾಟೆಮ್‌, ಸೌಥಾಂಪ್ಟನ್‌ ವಿಶ್ವವಿದ್ಯಾಲಯದ ಅಧ್ಯಯನ ತಂಡದ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT