ಭಾನುವಾರ, ಆಗಸ್ಟ್ 1, 2021
27 °C

Covid-19 World Update: ಕೆಲ ದೇಶಗಳಲ್ಲಿ 2ನೇ ಹಂತದ ಅಲೆ, ಲಾಕ್‌ಡೌನ್‌ ವಿಸ್ತರಣೆ

ಏಜೆನ್ಸೀಸ್‌ Updated:

ಅಕ್ಷರ ಗಾತ್ರ : | |

ಜಾಗತಿಕವಾಗಿ ಕೊರೊನಾ ವೈರಸ್‌ ಹರಡುವಿಕೆ ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಇಸ್ರೇಲ್‌ ಸೇರಿಂದಂತೆ ಹಲವು ದೇಶಗಳಲ್ಲಿ ಎರಡನೇ ಹಂತದ ಅಲೆ ಅಪ್ಪಳಿಸುತ್ತಿದ್ದು ತೀವ್ರ ಆತಂಕವನ್ನು ಉಂಟುಮಾಡಿದೆ.

ಇಲ್ಲಿಯವರೆಗೂ ಜಾಗತಿಕವಾಗಿ 1.16 ಕೋಟಿ ಕೊರೊನಾ ಪ್ರಕರಣಗಳು ದಾಖಲಾಗಿದ್ದು 5.38 ಲಕ್ಷ ಜನರು ಕೋವಿಡ್‌–19ಗೆ ಬಲಿಯಾಗಿದ್ದಾರೆ. ಅಮೆರಿಕದಲ್ಲಿ 29.3 ಲಕ್ಷ, ಬ್ರೆಜಿಲ್‌ನಲ್ಲಿ 16.2 ಲಕ್ಷ, ಭಾರತದಲ್ಲಿ 7.19 ಲಕ್ಷ,  ರಷ್ಯಾದಲ್ಲಿ 6.86 ಲಕ್ಷ ಜನರಿಗೆ ಸೋಂಕು ತಗುಲಿದೆ. ಸೋಂಕಿತ ರಾಷ್ಟ್ರಗಳ ಪೈಕಿ ಅಮೆರಿಕ ಮೊದಲ ಸ್ಥಾನದಲ್ಲಿ, ಬ್ರೆಜಿಲ್‌ 2ನೇ ಸ್ಥಾನದಲ್ಲಿ ಮತ್ತು ಭಾರತ 3ನೇ ಸ್ಥಾನದಲ್ಲಿದೆ. ಅಮೆರಿಕದಲ್ಲಿ ಹೆಚ್ಚು ಸಾವು ಸಂಭವಿಸಿದ್ದು ಇಲ್ಲಿಯವರೆಗೂ 1.30 ಲಕ್ಷ ಜನರು ಕೊರೊನಾ ವೈರಸ್‌ಗೆ ಬಲಿಯಾಗಿದ್ದಾರೆ. ಬ್ರೆಜಿಲ್‌ನಲ್ಲಿ 65 ಸಾವಿರ, ಬ್ರಿಟನ್‌ನಲ್ಲಿ 44 ಸಾವಿರ, ಇಟಲಿಯಲ್ಲಿ 34 ಸಾವಿರ ಹಾಗೂ ಭಾರತದಲ್ಲಿ 20 ಸಾವಿರ ಜನರು ಸಾವನ್ನಪ್ಪಿದ್ದಾರೆ.

ಇಸ್ರೇಲ್‌ ಸೇರಿದಂತೆ ಹಲವು ದೇಶಗಳಲ್ಲಿ ಎರಡನೇ ಹಂತದ ಅಲೆ ಅಪ್ಪಳಿಸಿದೆ. ಸ್ಪೇನ್‌ನಲ್ಲಿ ಎರಡನೇ ಹಂತದ ಲಾಕ್‌ಡೌನ್‌ ಹೇರಲಾಗಿದೆ. ಆಸ್ಟ್ರೇಲಿಯಾ, ಇರಾನ್‌, ಸೌದಿ ಅರೇಬಿಯಾ, ಯುಎಇ ದೇಶಗಳಲ್ಲಿನ ಕೋವಿಡ್‌–19 ಹಾಟ್‌ಸ್ಪಾಟ್‌ ಪ್ರದೇಶಗಳಲ್ಲಿ ಲಾಕ್‌ಡೌನ್‌ ಮುಂದುವರೆಸಲಾಗಿದೆ.

ಸ್ಪೇನ್‌ ದೇಶದ ಗ್ಯಾಲಿಸಿಯಾ ಪಟ್ಟಣದಲ್ಲಿ ಸೋಂಕು ಹೆಚ್ಚಳವಾಗುತ್ತಿರುವುದರಿಂದ ಲಾಕ್‌ಡೌನ್‌ ಮುಂದುವರೆಸಲಾಗಿದೆ. ಆಸ್ಟ್ರೇಲಿಯಾದ ಮೆಲ್ಬೋರ್ನ್‌ ವಸತಿ ಸಮುಚ್ಛಯಗಳನ್ನು ಲಾಕ್‌ಡೌನ್‌ ಮಾಡಲಾಗಿದ್ದು ಜನರ ಹೊರ ಬರದಂತೆ ಪೊಲೀಸರನ್ನು ನಿಯೋಜಿಸಲಾಗಿದೆ.

ಸ್ಪೇನ್‌ನಲ್ಲಿ 2.51 ಲಕ್ಷ ಜನರಿಗೆ ಸೋಂಕು ತಗುಲಿದ್ದು 28 ಸಾವಿರ ಜನರು ಮೃತಪಟ್ಟಿದ್ದಾರೆ. ಗ್ಯಾಲಿಸಿಯಾ ಪಟ್ಟಣದಲ್ಲಿ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಸ್ಪೇನ್‌ ಪ್ರಧಾನಿಯವರು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಮನವಿ ಮಾಡಿದ್ದಾರೆ.

ಆಸ್ಟ್ರೇಲಿಯಾದಲ್ಲಿ ವಿಕ್ಟೋರಿಯಾ, ಮೆಲ್ಬೋರ್ನ್‌ನಲ್ಲಿ ಸೋಂಕಿನ ಪ್ರಮಾಣ ತೀವ್ರಗೊಂಡಿದ್ದು ವಸತಿ ಪ್ರದೇಶಗಳನ್ನು ಲಾಕ್‌ಡೌನ್‌ ಮಾಡಲಾಗಿದೆ. ಕಾಂಗೂರು ನಾಡಿನಲ್ಲಿ ಇಲ್ಲಿಯವರೆಗೂ 8 ಸಾವಿರ ಜನರಿಗೆ ಸೋಂಕು ತಗುಲಿದ್ದು 108 ಜನರು ಸಾವನ್ನಪ್ಪಿದ್ದಾರೆ.

ಸೌದಿ ಅರೇಬಿಯಾದಲ್ಲಿ 2.13 ಲಕ್ಷ ಜನರಿಗೆ ಸೋಂಕು ತಗುಲಿದ್ದು, 1900 ಜನರು ಮೃತಪಟ್ಟಿದ್ದಾರೆ. ಯುಎಇಯಲ್ಲಿ ಸೋಂಕಿತರ ಸಂಖ್ಯೆ 50 ಸಾವಿರ ದಾಟಿದೆ. ಈ ನಡುವೆ ದುಬೈ ನಗರದಲ್ಲಿ ಇಂದಿನಿಂದ ಲಾಕ್‌ಡೌನ್‌ ತೆರವು ಮಾಡಲಾಗಿದೆ.

ಇಸ್ರೇಲ್‌ನಲ್ಲಿ ಸೋಮವಾರ ಒಂದೇ ದಿನ ಸಾವಿರ ಪ್ರಕರಣಗಳು ವರದಿಯಾಗಿವೆ. ಈ ಬಗ್ಗೆ ಮಾತನಾಡಿರುವ ಇಸ್ರೇಲ್‌ ಪ್ರಧಾನಿ, ನಾವು ಎರಡನೇ ಹಂತದ ಅಲೆಯನ್ನು ಎದುರಿಸಬೇಕಾಗಿದೆ. ಇದು ತೀವ್ರ ಮಾರಕವಾದ ಪರಿಣಾಮಗಳನ್ನು ಉಂಟುಮಾಡಲಿದ್ದು ಜನರು ಎಚ್ಚರಿಕೆಯಿಂದ ಇರಬೇಕು ಎಂದು ಹೇಳಿದ್ದಾರೆ.

ಇರಾನ್‌ನಲ್ಲೂ ತೀವ್ರ ನಿಗಾ ವಹಿಸಲಾಗಿದೆ. ಮಾಸ್ಕ್‌ ಹಾಕದ ನಾಗರಿಕರಿಗೆ ಸರ್ಕಾರಿ ಸೌಲಭ್ಯಗಳನ್ನು ಕಡಿತ ಮಾಡುವುದು, ಮಾಸ್ಕ್‌ ಧರಿಸದ ಸರ್ಕಾರಿ ನೌಕರರಿಗೆ ಗೈರು ಹಾಜರಿ ಹಾಕುವಂತಹ ಕ್ರಮಗಳನ್ನು ಇರಾನ್‌ ಸರ್ಕಾರ ಕೈಗೊಂಡಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು