ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮೆರಿಕದಲ್ಲಿ ರಾಜಕೀಯ ಸ್ವರೂಪ ಪಡೆದ ‘ಮಾಸ್ಕ್‌’

ಡೆಮಾಕ್ರಟಿಕ್‌ ಪಕ್ಷದ ನಿಲುವುಗಳಿಗೆ ರಿಪಬ್ಲಿಕನ್‌ರ ವಿರೋಧ
Last Updated 18 ಜುಲೈ 2020, 6:49 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ಅಮೆರಿಕದಲ್ಲಿ ಈಗ ಮಾಸ್ಕ್‌ ಧರಿಸುವುದು ರಾಜಕೀಯ ಮತ್ತು ಕಾನೂನು ಹೋರಾಟದ ಸ್ವರೂಪ ಪಡೆಯುತ್ತಿದೆ.

ಕಡ್ಡಾಯವಾಗಿ ಮಾಸ್ಕ್‌ ಧರಿಸುವಂತೆ ಕೆಲವು ಮೇಯರ್‌ಗಳು ಹೊರಡಿಸಿರುವ ಆದೇಶಕ್ಕೆ ವಿರೋಧ ವ್ಯಕ್ತವಾಗಿದೆ.

ಮಾಸ್ಕ್‌ ಧರಿಸುವುದನ್ನು ಕಡ್ಡಾಯಗೊಳಿಸಿ ಆದೇಶ ಹೊರಡಿಸಿರುವ ಜಾರ್ಜಿಯಾ ರಾಜಧಾನಿ ಅಟ್ಲಾಂಟಾದ ಮೇಯರ್‌ ವಿರುದ್ಧ ಮೊಕದ್ದಮೆ ಹೂಡುವುದಾಗಿ ಜಾರ್ಜಿಯಾ ರಾಜ್ಯದ ಗವರ್ನರ್‌ ಬ್ರಿಯಾನ್‌ ಕೆಂಪ್‌ ತಿಳಿಸಿದ್ದಾರೆ. ಬ್ರಿಯಾನ್‌ ಕೆಂಪ್‌ ರಿಪಬ್ಲಿಕ್‌ ಪಕ್ಷದವರು.

‘ಮಾಸ್ಕ್‌ ಧರಿಸುವುದು ಪರಿಣಾಮಕಾರಿ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ. ಆದರೆ, ಉತ್ತಮ ಕಾರ್ಯವನ್ನು ಕಡ್ಡಾಯವಾಗಿ ಮಾಡಿ ಎಂದು ಆದೇಶ ಹೊರಡಿಸುವುದು ಅಗತ್ಯವಿಲ್ಲ’ ಎಂದು ಕೆಂಪ್‌ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಡೆಮಾಕ್ರಟಿಕ್‌ ಪಕ್ಷದ ಅಟ್ಲಾಂಟ್‌ ಮೇಯರ್‌ ಕೀಶಾ ಲ್ಯಾನ್ಸ್‌ ಬಾಟಮ್ಸ್‌, ‘ಕೆಂಪ್‌ ಅವರ ನಿರ್ಧಾರ ರಾಜಕೀಯ ಪ್ರೇರಿತವಾಗಿದೆ’ ಎಂದು ಹೇಳಿದ್ದಾರೆ.

ಇದೇ ರೀತಿ ಸಂಘರ್ಷಗಳು ಉಳಿದೆಡೆಯೂ ನಡೆಯುತ್ತಿವೆ.

ಟೆಕ್ಸಾಸ್‌ ಗವರ್ನರ್‌ ಗ್ರೆಗ್‌ ಅಬ್ಬೊಟ್ಟ್‌ ಸಹ ಮಾಸ್ಕ್‌ ಧರಿಸುವಂತೆ ಹೊರಡಿಸಿರುವ ಆದೇಶಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ರಿಪಬ್ಲಿಕನ್‌ ಪಕ್ಷದ ಸ್ಥಳೀಯ ನಾಯಕರು ಈ ಆದೇಶದ ವಿರುದ್ಧ ನಿರ್ಣಯ ಕೈಗೊಂಡಿದ್ದಾರೆ.

ಹ್ಯೂಸ್ಟನ್‌ನಲ್ಲಿ ಡೆಮಾಕ್ರಟಿಕ್ ಪಕ್ಷದ ಮೇಯರ್‌ ಮತ್ತೆ ಲಾಕ್‌ಡೌನ್‌ ಜಾರಿಗೊಳಿಸಲು ಒಲವು ತೋರಿದ್ದಾರೆ. ಆದರೆ, ಅಲ್ಲಿನ ಗವರ್ನರ್‌ ಈ ಪ್ರಸ್ತಾವವವನ್ನು ತಿರಸ್ಕರಿಸಿದ್ದಾರೆ.

ಅಮೆರಿಕದಲ್ಲಿ ಕೋವಿಡ್‌–19 ಪ್ರಕರಣಗಳು ಅಪಾರ ಸಂಖ್ಯೆಯಲ್ಲಿ ಹೆಚ್ಚುತ್ತಿವೆ. ಕಳೆದ ವಾರದಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆಯೂ ಹೆಚ್ಚುತ್ತಿದೆ. ಅತಿ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿರುವ ಫ್ಲಾರಿಡಾದಲ್ಲಿ ಶುಕ್ರವಾರ ಒಂದೇ ದಿನ 11,000 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 128 ಮಂದಿ ಸಾವಿಗೀಡಾಗಿದ್ದಾರೆ.

ನ್ಯೂಯಾರ್ಕ್‌ನಲ್ಲಿ ಇದುವರೆಗೆ 32,000ಕ್ಕೂ ಹೆಚ್ಚು ರೋಗಿಗಳು ಸಾವಿಗೀಡಾಗಿದ್ದಾರೆ. ಈಗ ನಗರದಲ್ಲಿ ಪ್ರಕರಣಗಳು ನಿಯಂತ್ರಣಕ್ಕೆ ಬರುತ್ತಿರುವುದರಿಂದ ಕೆಲ ನಿರ್ಬಂಧಗಳನ್ನು ಸಡಿಲಿಸಲು ಮೇಯರ್‌ ಮುಂದಾಗಿದ್ದಾರೆ.

ಪ್ರಾಣಿ ಸಂಗ್ರಹಾಲಯಗಳು, ಉದ್ಯಾನಗಳನ್ನು ಕೆಲವು ನಿರ್ಬಂಧಗಳೊಂದಿಗೆ ತೆರೆಯಲು ಅವಕಾಶ ನೀಡಲಾಗುವುದು. ಅದೇ ರೀತಿ ಪ್ರೇಕ್ಷಕರಿಲ್ಲದೆಯೇ ಬೇಸ್‌ಬಾಲ್‌ ಆಟಕ್ಕೆ ಅನುಮತಿ ನೀಡಲಾಗುವುದು ಎಂದು ಮೇಯರ್‌ ಬಿಲ್‌ ಡೆ ಬ್ಲಾಸಿಯೊ ತಿಳಿಸಿದ್ದಾರೆ.

ಕೋವಿಡ್‌–19 ಬಿಕ್ಕಟ್ಟು ನಿಯಂತ್ರಿಸುವಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಕೈಗೊಂಡ ಕ್ರಮಗಳ ಬಗ್ಗೆಯೂ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೇಕಡ 38ರಷ್ಟು ಮಂದಿ ಮಾತ್ರ ಟ್ರಂಪ್‌ ಅವರ ಕಾರ್ಯನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದು, ಶೇಕಡ 51ರಷ್ಟು ಮಂದಿ ವಿರೋಧ ವ್ಯಕ್ತಪಡಿಸಿದ್ದಾರೆ ಎಂದು ವಾಷಿಂಗ್ಟನ್‌ ಪೋಸ್ಟ್‌ ನಡೆಸಿದ ಸಮೀಕ್ಷೆಯಿಂದ ತಿಳಿದು ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT