ಗುರುವಾರ , ಜೂನ್ 24, 2021
25 °C

ಕರ್ತಾರ್‌ಪುರ ಕಾರಿಡಾರ್ ತೆರೆಯಲು ಸಿದ್ಧತೆ: ಭಾರತಕ್ಕೆ ಮಾಹಿತಿ ನೀಡಿದ ಪಾಕಿಸ್ತಾನ

ಎಎನ್‌ಐ Updated:

ಅಕ್ಷರ ಗಾತ್ರ : | |

ಇಸ್ಲಾಮಾಬಾದ್‌: ಸಿಖ್‌ ಯಾತ್ರಾರ್ಥಿಗಳಿಗೆ ಅನುಕೂಲವಾಗುವಂತೆ ಕರ್ತಾರ್‌ಪುರ ಕಾರಿಡಾರ್‌ ಅನ್ನು ಇದೇ ತಿಂಗಳ 29ರಿಂದ ತೆರೆಯಲು ಸಿದ್ಧತೆ ನಡೆಸಿರುವುದಾಗಿ ಪಾಕಿಸ್ತಾನ ಶನಿವಾರ ಭಾರತಕ್ಕೆ ತಿಳಿಸಿದೆ.

ಈ ಸಂಬಂಧ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂದ್‌ ಖುರೇಷಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

‘ಪ್ರಪಂಚದಾದ್ಯಂತ ಧಾರ್ಮಿಕ ಕೇಂದ್ರಗಳು ತೆರೆದುಕೊಳ್ಳುತ್ತಿದ್ದಂತೆ, ಕರ್ತಾರ್‌ಪುರ ಕಾರಿಡಾರ್‌ ಅನ್ನು ತೆರೆಯಲು ಪಾಕಿಸ್ತಾನ‌ ಸಜ್ಜಾಗಿದೆ. ಮಹಾರಾಜ ರಂಜೀತ್‌ ಸಿಂಗ್‌ ಅವರ ಪುಣ್ಯತಿಥಿ  ಅಂಗವಾಗಿ, ಜೂನ್‌ 29, 2020 ರಂದು ಎಲ್ಲ ಸಿಖ್‌ ಯಾತ್ರಾರ್ಥಿಗಳಿಗೆ ಕರ್ತಾರ್‌ಪುರ ಸಾಹಿಬ್‌ ಕಾರಿಡಾರ್‌ ಅನ್ನು ಮತ್ತೆ ತೆರೆಯಲು ಪಾಕಿಸ್ತಾನ ಸಿದ್ಧತೆ ನಡೆಸಿದೆ ಎಂಬುದನ್ನು ಭಾರತಕ್ಕೆ ತಿಳಿಸಲಾಗಿದೆ’ ಎಂದು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.

 

ಕಾರಿಡಾರ್‌ಅನ್ನು ಯಾತ್ರೆಗೆ ಮುಕ್ತಗೊಳಿಸುವ ಮೊದಲು ಆರೋಗ್ಯ ಸುರಕ್ಷತೆ ದೃಷ್ಟಿಯಿಂದ, ಅಗತ್ಯ ಕಾರ್ಯನಿರ್ವಹಣಾ ಮಾನದಂಡಗಳನ್ನು (ಎಸ್‌ಒಪಿ) ರೂಪಿಸುವಂತೆ ಕೈಜೋಡಿಸಲು ಪಾಕಿಸ್ತಾನ, ಭಾರತವನ್ನು ಆಹ್ವಾನಿಸಿದೆ.

ಕೋವಿಡ್‌–19 ಸೋಂಕು ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ, ಭಾರತ ಮಾರ್ಚ್‌ 16ರಂದು  ಪಾಕಿಸ್ತಾನದಲ್ಲಿರುವ ಕರ್ತಾರ್‌ಪುರ್ ಸಾಹಿಬ್‌ ಗುರುದ್ವಾರ ಯಾತ್ರೆಗೆ ನೋಂದಣಿಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿತ್ತು.

4.7 ಕಿ.ಮೀ ಉದ್ದದ ಕರ್ತಾರ್‌ಪುರ ಕಾರಿಡಾರ್‌, ಭಾರತದ ಗುರುದಾಸ್‌ಪುರದ ಡೇರಾ ಬಾಬಾ ನಾನಕ್‌ ಸಾಹಿಬ್‌ ಮತ್ತು ಪಾಕಿಸ್ತಾನದ ಕರ್ತಾರ್‌ಪುರದಲ್ಲಿರುವ ಗುರುದ್ವಾರಕ್ಕೆ ಸಂಪರ್ಕ ಕಲ್ಪಿಸುತ್ತದೆ. ಇದನ್ನು ಕಳೆದ ವರ್ಷದ ನವೆಂಬರ್‌ನಲ್ಲಿ ಉದ್ಘಾಟಿಸಲಾಗಿತ್ತು.

ಪಾಕಿಸ್ತಾನದಲ್ಲಿ ಹಂತಹಂತವಾಗಿ ಲಾಕ್‌ಡೌನ್‌ ತೆರವುಗೊಳಿಸುವುದಾಗಿ ಘೋಷಿಸಲಾಗಿದೆ. ಪ್ರಧಾನಿ ಇಮ್ರಾನ್‌ ಖಾನ್‌ ಜೂನ್‌ 1ರಂದು ಪ್ರವಾಸೋದ್ಯಮದ ಮೇಲಿನ ನಿರ್ಬಂಧ ಮುಕ್ತಗೊಳಿಸಲಾಗುವುದು ಎಂದು ಹೇಳಿದ್ದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು