ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ಸೋಂಕಿನಿಂದ ಮಿದುಳಿಗೆ ಹಾನಿ; ಸೋಂಕಿನಿಂದ ಮುಕ್ತರಾದರೂ ತಪ್ಪಿದ್ದಲ್ಲ ಕಾಟ

Last Updated 8 ಜುಲೈ 2020, 9:29 IST
ಅಕ್ಷರ ಗಾತ್ರ

ಕೊರೊನೊ ಸೋಂಕು ಮಿದುಳಿನ ಜೀವತಂತು ಮತ್ತು ನರಕೋಶಗಳನ್ನು ನಾಶ ಮಾಡುತ್ತದೆ. ಇದರಿಂದ ಸೋಂಕಿತರು ಗುಣಮುಖರಾದ ನಂತರವೂ ದೀರ್ಘಕಾಲದ ನಂತರ ನರಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ.

ಈ ಬಗ್ಗೆ ಅಧ್ಯಯನ ನಡೆಸುತ್ತಿರುವ ಲಂಡನ್‌ ವಿಶ್ವವಿದ್ಯಾಲಯ ಕಾಲೇಜು (ಯುಸಿಎಲ್‌) ಸಂಶೋಧಕರು,ಕೊರೊನಾ ಸೋಂಕಿತ ವ್ಯಕ್ತಿಗಳಲ್ಲಿ ನರಕೋಶಗಳ ಉರಿಯೂತ, ಮಾನಸಿಕ ವಿಕಾರ (ಸೈಕೋಸಿಸ್‌), ಭಾವೋದ್ರೇಕ (ಡೆಲಿರಿಯಂ) ಸಮಸ್ಯೆ ಕಾಣಿಸಿಕೊಳ್ಳುತ್ತಿವೆ ಎಂದು ಹೇಳಿದ್ದಾರೆ.

ಮಿದುಳು ಮತ್ತು ನರಮಂಡಲದ ಮೇಲೆ ಕೊರೊನಾ ಸೋಂಕಿನ ಪರಿಣಾಮಗಳ ಕುರಿತು 43 ಕೊರೊನಾ ಸೋಂಕಿತರ ಮೇಲೆ ಸಂಶೋಧಕರ ತಂಡ ಅಧ್ಯಯನ ನಡೆಸುತ್ತಿದೆ. ಆ ಪೈಕಿ ಈಗಾಗಲೇ ಒಂಬತ್ತು ಸೋಂಕಿತರಲ್ಲಿ ನರರೋಗ ಸಮಸ್ಯೆಗಳಿರುವುದು ಕಂಡುಬಂದಿದೆ.

ತಾತ್ಕಾಲಿಕ ನಿಷ್ಕ್ರಿಯ

ಈ ಪೈಕಿ ಕೆಲವು ಸೋಂಕಿತರ ಮಿದುಳು ತಾತ್ಕಾಲಿಕವಾಗಿ ನಿಷ್ಕ್ರಿಯಗೊಂಡಿದೆ. ನರಕೋಶಗಳಿಗೆ ತೀವ್ರ ಹಾನಿಯಾದ ಕಾರಣ ಪಾರ್ಶ್ವವಾಯು ಮತ್ತು ಇನ್ನಿತರ ಗಂಭೀರ ನರರೋಗ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳಿವೆ ಎಂದು ‘ಜರ್ನಲ್‌ ಬ್ರೇನ್‌’ ಪತ್ರಿಕೆಯಲ್ಲಿ ಪ್ರಕಟವಾದ ತಜ್ಞರ ವರದಿ ಹೇಳಿದೆ.

1918ರಲ್ಲಿ ವಿಶ್ವವನ್ನೇ ಕಾಡಿದ್ದ ಇನ್‌ಫ್ಲೂಯೆಂಜಾ ನಂತರದ ದಿನಗಳಲ್ಲಿ 1920 ಮತ್ತು 30ರ ದಶಕದಲ್ಲಿ ವ್ಯಾಪಕವಾಗಿ ಹರಡಿದ್ದ ಮಿದುಳಿನ ಉರಿಯೂತ (ಎನ್‌ಸೆಫಾಲಿಟಿಸ್) ಹೋಲಿಕೆಗಳಿಗೂ ಕೋವಿಡ್‌–19 ಪರಿಣಾಮಗಳಿಗೂ ಸಾಕಷ್ಟು ಸಾಮ್ಯತೆ ಇದೆ ಎಂದುಲಂಡನ್‌ ವಿಶ್ವವಿದ್ಯಾಲಯ ಕಾಲೇಜಿನ ನರರೋಗ ಸಂಸ್ಥೆಯ ಮೈಕೆಲ್‌ ಝಾಂಡಿ ಅಭಿಪ್ರಾಯಪಟ್ಟಿದ್ದಾರೆ. ಅವರು ಮಾನವನ ಮಿದುಳು ಮತ್ತು ನರಮಂಡಲದ ಮೇಲೆ ಕೋವಿಡ್–19 ವೈರಸ್‌ ದುಷ್ಪರಿಣಾಮಗಳ ಕುರಿತು ಅಧ್ಯಯನ ನಡೆಸುತ್ತಿರುವ ತಜ್ಞರ ತಂಡದ ಸಹ ನೇತೃತ್ವವನ್ನ ವಹಿಸಿದ್ದಾರೆ.‌

ಸೋಂಕಿನಿಂದ ಮುಕ್ತರಾದರೂ ತಪ್ಪದ ಕಾಟ

ಕೋವಿಡ್‌–19 ವೈರಾಣು ಮೊದಲು ಶ್ವಾಸಕೋಶದ ಮೇಲೆ ದಾಳಿ ಮಾಡಿದರೂ ಅದರ ನಂತರದ ಅಡ್ಡಪರಿಣಾಮ ಮಿದುಳಿನ ಮೇಲಾಗುತ್ತದೆ. ಈಗಾಗಲೇ ವಿಶ್ವದಾದ್ಯಂತ ಲಕ್ಷಾಂತರ ಜನರಿಗೆ ಸೋಂಕು ತಗುಲಿದೆ. ಅವರೆಲ್ಲ ಸೋಂಕಿನಿಂದ ಗುಣಮುಖರಾದ ನಂತರವೂ ನರರೋಗ ಸಮಸ್ಯೆಗಳು ಕಾಣಿಸಿಕೊಳ್ಳುವ ಸಾಧ್ಯತೆಗಳು ಹೆಚ್ಚಾಗಿವೆ. ಇದು ಅವರ ದೈನಂದಿನ ಕೆಲಸ ಮತ್ತು ಕಾರ್ಯಕ್ಷಮತೆ ಮೇಲೆ ಪರಿಣಾಮ ಬೀರುತ್ತದೆ ಎಂದು ಕೆನಡಾದ ವೆಸ್ಟರ್ನ್‌ ಯೂನಿವರ್ಸಿಟಿ ನರರೋಗ ತಜ್ಞ ಅಡ್ರಿಯಾನ್‌ ಒವೆನ್‌ಎಚ್ಚರಿಸಿದ್ದಾರೆ.

ದೀರ್ಘಕಾಲಿನ ಸಮಸ್ಯೆ ಇನ್ನೂ ಗೊತ್ತಿಲ್ಲ

ಸಾಮಾನ್ಯ ಸೋಂಕಿನಿಂದ ಬಳಲುತ್ತಿದ್ದು ಮತ್ತು ಅದರಿಂದ ನರರೋಗ ಸಮಸ್ಯೆ ಎದುರಿಸುತ್ತಿದ್ದವರು ಮೊದಲು ತಿಂಗಳಿಗೊಬ್ಬರು ಚಿಕಿತ್ಸೆಗಾಗಿ ಆಸ್ಪತ್ರಗೆ ಹೋಗುತ್ತಿದ್ದರು. ಈಗ ಕೊರೊನಾ ಸೋಂಕು ಉಲ್ಬಣಿಸಿದ ನಂತರ, ವಾರಕ್ಕೊಬ್ಬರು ನರರೋಗ ಸಮಸ್ಯೆ ಎದುರಿಸುತ್ತಿರುವವರು ಆಸ್ಪತ್ರೆಗೆ ಭೇಟಿ ನೀಡುತ್ತಿದ್ದಾರೆ ಎನ್ನುತ್ತಾರೆ ಮತ್ತೊಬ್ಬ ತಜ್ಞ ರಾಸ್ ಪ್ಯಾಟರ್‌ಸನ್‌.

ಕೊರೊನಾ ಸೋಂಕಿನಿಂದ ತಾತ್ಕಾಲಿಕ ಪರಿಣಾಮಗಳು ಮಾತ್ರ ನಮಗೆ ಗೋಚರಿಸುತ್ತಿವೆ. ಅದು ತಂದೊಡ್ಡುವ ದೀರ್ಘಕಾಲೀನ ಸಮಸ್ಯೆಗಳು ಇನ್ನೂ ನಮಗೆ ಗೊತ್ತಾಗುತ್ತಿಲ್ಲ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಸೋಂಕು ತಗುಲಿದ ಆರಂಭಿಕ ಹಂತದಲ್ಲಿಯೇ ಮಿದುಳು ಮತ್ತು ನರಮಂಡಲದ ಮೇಲೆ ಆಗುವ ಪರಿಣಾಮಗಳನ್ನು ಪತ್ತೆ ಹಚ್ಚಿದರೆ ಮುಂದೆ ಎದುರಾಗಬಹುದಾದ ಕ್ಲಿಷ್ಟ ಆರೋಗ್ಯ ಸಮಸ್ಯೆಗಳನ್ನು ತಡೆಗಟ್ಟಬಹುದು ಎಂದು ಸಲಹೆ ನೀಡಿದ್ದಾರೆ.

ಆನ್‌ಲೈನ್ ಅಭಿಯಾನ

ಕೊರೊನಾ ಸೋಂಕು ದೀರ್ಘಕಾಲದಲ್ಲಿ ತಂದೊಡ್ಡಬಹುದಾದ ನರರೋಗ ಮತ್ತು ಮಾನಸಿಕ ಸಮಸ್ಯೆಗಳ ಕುರಿತು ಜಾಗತಿಕ ಮಟ್ಟದಲ್ಲಿ ಅಧ್ಯಯನ ನಡೆಸಲು ಕೆನಡಾದ ನರರೋಗ ತಜ್ಞ ಓವನ್, ಆನ್‌ಲೈನ್‌ನಲ್ಲಿ ಅಭಿಯಾನ ಆರಂಭಿಸಿದ್ದಾರೆ.

ಸೋಂಕಿತರು covidbrainstudy.com ಈ ವಿಳಾಸಕ್ಕೆ ಕೋವಿಡ್‌–19 ಪರೀಕ್ಷಾ ವರದಿಗಳನ್ನು ಅಪ್‌ಲೋಡ್‌ ಮಾಡಬಹುದು. ಸೋಂಕಿನಿಂದ ಗುಣಮುಖರಾದ ನಂತರ ಮಿದುಳಿನ ಕಾರ್ಯಕ್ಷಮತೆಯಲ್ಲಿ ಏನಾದರೂ ಬದಲಾವಣೆಯಾಗಿದೆಯಾ ಎಂದು ತಿಳಿದುಕೊಳ್ಳಬಹುದು.

ಮೂಲ: ರಾಯಿಟರ್ಸ್‌ ಸುದ್ದಿ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT