ಶನಿವಾರ, 24 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಸಿಡ್ ದಾಳಿ | ಚಿಗುರಿಕೊಳ್ಳಲು ನೂರಾರು ದಾರಿ; ಕತ್ತರಿಸುವವನಿಗೆ ಒಂದೇ ಕತ್ತಿ

ನಗೆ_ಹೂವು ಬಾಡದಿರಲಿ
Last Updated 19 ಫೆಬ್ರುವರಿ 2020, 9:46 IST
ಅಕ್ಷರ ಗಾತ್ರ
ADVERTISEMENT
""
""
""
""
""
""

ಹೆಣ್ಣಿನ ಮುಖವನ್ನು ಆಕೆಯ ಸೃಜನಶೀಲತೆಯ ಸುಂದರ ಅಭಿವ್ಯಕ್ತಿ ಎಂದು ಭಾವಿಸಲಾಗುತ್ತದೆ. ಅಂಥ ಹೆಣ್ಣನ್ನು ಕುರೂಪಗೊಳಿಸುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಕುಟುಂಬದ ಹಾಗೂ ಸಮಾಜದ ಆರೋಗ್ಯದ ಅಭಿವ್ಯಕ್ತಿಯ ರೂಪದಲ್ಲೂ ನೋಡಬಹುದಾದ ಹೆಣ್ಣಿನ ಮುಖದ ಮೇಲೆ ಆ್ಯಸಿಡ್‌‌ ಎರಚುವ ವಿಕೃತಿ ಸಮಾಜದಲ್ಲಿದೆ. ಬಹುತೇಕ ಬಂಧುಮಿತ್ರರಿಂದಲೇ ನಡೆಯುವ ಈ ದಾಳಿಗಳು, ಹೆಣ್ಣನ್ನು ಜೀವನಪೂರ್ತಿ ಯಾತನೆಯಕೂಪಕ್ಕೆ ತಳ್ಳುತ್ತವೆ. ದುರಂತದ ನಂತರವೂ ಕೆಲವು ಹೆಣ್ಣುಮಕ್ಕಳು ಬದುಕನ್ನು ಕಟ್ಟಿಕೊಳ್ಳುವ ದಿಟ್ಟತನ ಪ್ರದರ್ಶಿಸಿದ್ದಾರೆ. ಅಂಥ ಹೆಣ್ಣುಮಕ್ಕಳ ಸಾಹಸದ ಕಥೆಯೊಂದಿಗೆ, ಆ್ಯಸಿಡ್‌‌ ದಾಳಿಯ ಜಾಗತಿಕ ವಿಕೃತಿಯನ್ನು ಚಿತ್ರಿಸುವ ಈ ಬರಹದ ಆಶಯ ಇಷ್ಟೇ – ಚೆಲುವನ್ನು ಕೊನೆಗೊಳಿಸುವ ಪ್ರಯತ್ನಗಳು ಇನ್ನಾದರೂ ನಿಲ್ಲಲಿ; ನಗು ಚಿರಾಯುವಾಗಿರಲಿ.

ಮಾನವೀಯತೆಯ ಬಗ್ಗೆ ಪದೇ ಪದೇ ಅಪನಂಬಿಕೆ ಉಂಟುಮಾಡುವಂತಹ ಸಂಗತಿಗಳಲ್ಲೊಂದು, ಆ್ಯಸಿಡ್‌‌ ಎರಚುವಿಕೆ. ಯಾರೋ ಒಬ್ಬರು ಮತ್ತೊಬ್ಬ ವ್ಯಕ್ತಿಯ ಮುಖವನ್ನು ಆ್ಯಸಿಡ್‌‌ನಿಂದ ಸುಡುತ್ತಾರೆ ಎಂದು ಕಲ್ಪಿಸಿಕೊಳ್ಳುವುದೇ ಅಸಹನೀಯ. ಆದರೆ, ಕುರೂಪಗೊಳಿಸುವ ಮೂಲಕ ಹೆಣ್ಣನ್ನು ಯಾತನೆಯ ಕೂಪಕ್ಕೆ ನೂಕುವ ಅಸಹನೀಯ ಕಲ್ಪನೆಗಳು ಮನುಕುಲದ ಚರಿತ್ರೆಯುದ್ದಕ್ಕೂ ಮತ್ತೆ ಮತ್ತೆ ನಿಜಗೊಳ್ಳುತ್ತಲೇ ಬಂದಿವೆ.

ರೇಷ್ಮಾ ಖುರೇಶಿ ಎನ್ನುವ ಹೆಣ್ಣುಮಗಳ ಕಥೆ ಕೇಳಿ. ಆ್ಯಸಿಡ್‌‌ ದಾಳಿಗೊಳಗಾದಾಗ ಆಕೆಗಿನ್ನೂ ಹದಿನೇಳರ ಹರಯ. ಅಕ್ಕನೊಂದಿಗೆ ರಸ್ತೆಯಲ್ಲಿ ನಡೆದುಹೋಗುವಾಗ, ಸೋದರ ಸಂಬಂಧಿಯೊಬ್ಬ ತನ್ನ ಗೆಳೆಯರೊಂದಿಗೆ ಸೇರಿಕೊಂಡು ಆ್ಯಸಿಡ್‌‌ ಎರಚಿದ. ಅಕ್ಕನಿಗೆ ಸಣ್ಣಪುಟ್ಟ ಗಾಯಗಳಾದವು. ಆದರೆ, ರೇಷ್ಮಾ ದಾರುಣವಾಗಿ ಗಾಯಗೊಂಡರು. ಒಂದು ಕಣ್ಣಿನ ದೃಷ್ಟಿ ಆಮ್ಲದ ತೀವ್ರತೆಯಲ್ಲಿ ಸೀದುಹೋಯಿತು.

ರೇಷ್ಮಾ ಅದೆಷ್ಟು ಮುಗ್ಧ ಹುಡುಗಿಯೆಂದರೆ, ವ್ಯಕ್ತಿಯೊಬ್ಬ ಮತ್ತೊಬ್ಬ ಮನುಷ್ಯನ ಮೇಲೆ ಹೀಗೆ ಆ್ಯಸಿಡ್‌‌ ಎರಚಬಹುದೆನ್ನುವ ಕಲ್ಪನೆಯೂ ಅವರಿಗಿರಲಿಲ್ಲ. ಘಟನೆ ನಡೆದ ನಂತರವೇ, ತನ್ನಂತಹ ನತದೃಷ್ಟರು ದೇಶದಲ್ಲಿ ಸಾಕಷ್ಟು ಮಂದಿಯಿದ್ದಾರೆ ಹಾಗೂ ದಿನದಿಂದ ದಿನಕ್ಕೆ ಅವರ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಅವರಿಗೆ ತಿಳಿದದ್ದು. ಮುಖವೇನೋ ಸುಟ್ಟುಹೋಯಿತು, ಆದರೆ ದೀರ್ಘ ಬದುಕು ಎದುರಿಗಿತ್ತು. ಸಾಮಾನ್ಯವಾಗಿ ಆ್ಯಸಿಡ್‌‌ ದಾಳಿಗೊಳಗಾದ ಹೆಣ್ಣುಮಕ್ಕಳು ಸೆರಗಿನ ಹಿಂದೆ ಮುಖವನ್ನು ಅವಿತಿಟ್ಟುಕೊಳ್ಳುತ್ತಾರೆ, ಬೆಳಕಿನಲ್ಲಿ ಕಾಣಿಸಿಕೊಳ್ಳಲು ಹಿಂಜರಿಯುತ್ತಾರೆ. ಆದರೆ, ಬದುಕನ್ನು ದಿಟ್ಟತನದಿಂದ ಎದುರಿಸಲು ರೇಷ್ಮಾ ನಿರ್ಧರಿಸಿದರು. ನೌಕರಿಯೊಂದನ್ನು ಪಡೆಯಲು ಪಟ್ಟ ಅವರ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಉದ್ಯೋಗದಾತರು ಕೆಲಸ ಮಾಡುವ ಸಾಮರ್ಥ್ಯವನ್ನು ಅಳೆಯುವ ಬದಲು, ಮುಖದ ಅಂದವನ್ನು ಮಾನದಂಡವಾಗಿ ಪರಿಗಣಿಸತೊಡಗಿದರು. ಅಂದಗೇಡಿ ಮುಖದ ಹುಡುಗಿ ತಮ್ಮ ಕೆಲಸದ ಪರಿಸರಕ್ಕೆ ಹೊಂದುವುದಿಲ್ಲ ಎನ್ನುವುದು ಅವರ ಯೋಚನೆಯಾಗಿತ್ತು. ಕೊನೆಗೆ, ಆ್ಯಸಿಡ್‌‌ ದಾಳಿಗೊಳಗಾದವರ ಪುನರ್ವಸತಿಗೆ ಪ್ರಯತ್ನಿಸುವ ಹಾಗೂ ಸಂತ್ರಸ್ತರಿಗೆ ಕಾನೂನು ಬೆಂಬಲ ನೀಡುವ ‘Make Love Not Scars’ ಎನ್ನುವ ದೆಹಲಿಯ ಸ್ವಯಂಸೇವಾ ಸಂಸ್ಥೆಯ ಜೊತೆ ಗುರ್ತಿಸಿಕೊಂಡರು; ತನ್ನಂತೆಯೇ ಮುಖ ಸುಟ್ಟುಕೊಂಡ ಹುಡುಗಿಯರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸದಲ್ಲಿ ತೊಡಗಿಕೊಂಡರು.

ಆ್ಯಸಿಡ್‌‌ ಆಯುಧ

ಗಾಜಿನ ಸೀಸೆಯಲ್ಲಿ ತಣ್ಣಗೆ ಕಾಣಿಸುವ ಆ್ಯಸಿಡ್‌‌, ಸಮಾಜಘಾತುಕರ ಕೈಯಲ್ಲಿ ಆಯುಧದಂತೆ ಬಳಕೆಯಾಗುತ್ತದೆ. ‘ಈ ಮಾರಣಾಂತಿಕ ದ್ರಾವಣ ಎಗ್ಗಿಲ್ಲದೆ ಬಳಕೆಯಾಗುವುದಕ್ಕೆ ಕಾನೂನಿನ ಲೋಪಗಳೂ ಕಾರಣ’ ಎನ್ನುತ್ತಾರೆ, ‘Make Love Not Scars’ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ತಾನಿಯಾ ಸಿಂಗ್‌. ‘ಎಲ್ಲಿಯವರೆಗೆ ಆ್ಯಸಿಡ್‌‌ ಎಲ್ಲೆಡೆಯೂ ಸುಲಭವಾಗಿ ದೊರೆಯುವುದೋ ಅಲ್ಲಿಯವರೆಗೂ ಅಮಾನುಷ ಕೃತ್ಯಗಳು ಕಡಿಮೆಯಾಗುವುದಿಲ್ಲ’ ಎನ್ನುವುದು ಅವರ ಸ್ಪಷ್ಟಮಾತು. ಭಾರತದಂತೆ ಬಾಂಗ್ಲಾದೇಶದಲ್ಲಿ ಕೂಡ ಆ್ಯಸಿಡ್‌‌ ಮಾರಕಾಸ್ತ್ರದಂತೆ ಬಳಕೆಯಾಗುತ್ತದೆ. ಆ್ಯಸಿಡ್‌‌ ಎರಚುವವರಿಗೆ ಮರಣದಂಡನೆ ವಿಧಿಸಲು ಅವಕಾಶ ಕಲ್ಪಿಸಿದ ಬಾಂಗ್ಲಾ ಸರ್ಕಾರ, ಆ್ಯಸಿಡ್‌‌ ಮಾರಾಟಕ್ಕೆ ಹಲವು ನಿರ್ಬಂಧಗಳನ್ನು ಹೇರಿದ ಮೇಲೆ ಅಲ್ಲಿ ಆ್ಯಸಿಡ್‌‌ ದಾಳಿಗಳು ಕಡಿಮೆಯಾಗಿರುವುದನ್ನು ತಾನಿಯಾ ತಮ್ಮ ಮಾತಿಗೆ ಉದಾಹರಣೆಯಾಗಿ ನೆನಪಿಸುತ್ತಾರೆ. 2002ರಲ್ಲಿ ಬಾಂಗ್ಲಾದೇಶ ಆ್ಯಸಿಡ್‌‌ ಮಾರಾಟ ನಿಯಂತ್ರಣ ಕಾಯ್ದೆಯನ್ನು ಜಾರಿಗೊಳಿಸಿತು. ಆಗ ವರ್ಷಕ್ಕೆ 360ರಷ್ಟು ದಾಖಲಾಗುತ್ತಿದ್ದ ‍ಪ್ರಕರಣಗಳ ಸಂಖ್ಯೆ, 2009ರ ವೇಳೆಗೆ 116ಕ್ಕೆ ಇಳಿದಿತ್ತು. ಅಂಥ ಕಠಿಣ ಕಾನೂನು ಭಾರತಕ್ಕೂ ಬೇಕಾಗಿದೆ.

ಸದ್ಯಕ್ಕೆ ನಮ್ಮ ಕಾನೂನಿನಲ್ಲಿ ಆ್ಯಸಿಡ್‌‌ ದಾಳಿಕೋರರಿಗೆ ಗರಿಷ್ಠ 10 ವರ್ಷಗಳ ಜೈಲುಶಿಕ್ಷೆ ವಿಧಿಸಲು ಅವಕಾಶವಿದೆ. ವಿಪರ್ಯಾಸವೆಂದರೆ, ಕೆಳ ಕೋರ್ಟುಗಳಲ್ಲಿ ಗರಿಷ್ಠ ಶಿಕ್ಷೆ ಪಡೆದ ಅಪರಾಧಿಗಳು, ಮೇಲಿನ ಕೋರ್ಟುಗಳಿಗೆ ಹೋಗಿ ತಮ್ಮ ಶಿಕ್ಷೆ ತಗ್ಗಿಸಿಕೊಂಡಿರುವುದಿದೆ. 2013ಕ್ಕೆ ಮೊದಲಂತೂ ಆ್ಯಸಿಡ್‌‌ ದಾಳಿಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಶಿಕ್ಷಿಸಲು ನಿರ್ದಿಷ್ಟ ಕಾನೂನು ಮಾರ್ಗದರ್ಶಿ ಸೂತ್ರಗಳೇ ಭಾರತದಲ್ಲಿ ಇರಲಿಲ್ಲ. 2016ರಲ್ಲಿ ಆ್ಯಸಿಡ್‌‌ ದಾಳಿಗೆ ಒಳಗಾದವರನ್ನು ಅಂಗವಿಕಲರ ಪಟ್ಟಿಗೆ ಸೇರಿಸಿ, ಅವರಿಗೆ ಶಿಕ್ಷಣ ಮತ್ತು ಉದ್ಯೋಗದ ಅವಕಾಶಗಳಲ್ಲಿ ಆದ್ಯತೆ ನೀಡಲಾಗುತ್ತಿದೆ. ಪ್ರಸ್ತುತ ಸರ್ಕಾರಿ ನೌಕರಿಗಳಲ್ಲಿ ಶೇ.3ರ ಮೀಸಲಾತಿ ಸಂತ್ರಸ್ತರಿಗೆ ದೊರೆಯುತ್ತಿದೆ.

ಆ್ಯಸಿಡ್ ಮಾರಾಟ ನಿಷೇಧಕ್ಕೆ ಆಗ್ರಹಿಸಿ ಮುಂಬೈನ ಥಾಣೆಯಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತರ ಫ್ಯಾಷನ್ ಶೋ

ಆ್ಯಸಿಡ್‌‌ ದಾಳಿಯನ್ನು ಜಾಮೀನುರಹಿತ ಅಪರಾಧವೆಂದು ಪರಿಗಣಿಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶನ ನೀಡಿದೆ. ದಾಳಿಗೊಳಗಾದವರಿಗೆ ಮೂರು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ರಾಜ್ಯ ಸರ್ಕಾರಗಳಿಗೆ ಸೂಚಿಸಿದೆ. ಆದರೆ, ಈ ಮೊತ್ತ ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆಯಿದ್ದಂತೆ. ಆ್ಯಸಿಡ್‌‌ ದಾಳಿಗೆ ಒಳಗಾದವರಿಗೆ ಯಾವ ಆಸ್ಪತ್ರೆಯೂ ಚಿಕಿತ್ಸೆಯನ್ನು ನಿರಾಕರಿಸುವಂತಿಲ್ಲ ಹಾಗೂ ಕೇಂದ್ರ ಸರ್ಕಾರದ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡಬೇಕು ಎನ್ನುವ ಕಾನೂನಿದೆ. ಆದರೆ, ಇದೆಲ್ಲ ಪ್ರಾಥಮಿಕ ಚಿಕಿತ್ಸೆಗೆ ಸಂಬಂಧಿಸಿದ್ದಾಯಿತು. ಚರ್ಮಕಸಿ ಎನ್ನುವುದು ದುಬಾರಿ ಬಾಬತ್ತಿನ ದೀರ್ಘಕಾಲಿಕ ಚಿಕಿತ್ಸೆ. ಮುಖ ಸುಟ್ಟುಕೊಂಡವರು ಅನೇಕ ಬಾರಿ ಚರ್ಮಕಸಿ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗುತ್ತದೆ. ಚಿಕಿತ್ಸೆಯ ವೆಚ್ಚವನ್ನು ಭರಿಸುವುದು ಬಡವರಿಗೆ ಸಾಧ್ಯವಾಗದ ಮಾತು. ಆ ಕಾರಣದಿಂದಲೇ, ಇದೆಲ್ಲ ಹಣೆಬರಹ ಎಂದುಕೊಂಡು ಕುರೂಪದ ಮುಖ ಹೊತ್ತುಕೊಂಡು ಕತ್ತಲಲ್ಲಿ ಉಳಿಯುವವರೂ ಸಾಕಷ್ಟು ಮಂದಿಯಿದ್ದಾರೆ.

ಆ್ಯಸಿಡ್‌‌ ಮಾರಾಟಕ್ಕೆ ಸಂಬಂಧಿಸಿದಂತೆ ಒಂದಿಷ್ಟು ನಿಯಮಾವಳಿಗಳು ನಮ್ಮಲ್ಲಿವೆ. ಆ್ಯಸಿಡ್‌‌ ಮಾರುವಾಗ ಗುರುತಿನ ಚೀಟಿ ಕೇಳಬೇಕು, ಗ್ರಾಹಕರ ವಿಳಾಸವನ್ನು ದಾಖಲಿಸಿಕೊಳ್ಳಬೇಕು ಎನ್ನುವ ನಿಯಮಾವಳಿಯಿದೆ. ಆದರೆ, ಹಾಲಿನ ಪ್ಯಾಕೆಟ್‌ಗಳಷ್ಟು ಸಲೀಸಾಗಿ ಇಪ್ಪತ್ತು ಮೂವತ್ತು ರೂಪಾಯಿಗೊಂದು ಸೀಸೆ ಆ್ಯಸಿಡ್‌‌ ಪೇಟೆಯಲ್ಲಿ ಲಭ್ಯ. ವಾಣಿಜ್ಯ ಮತ್ತು ವೈಜ್ಞಾನಿಕ ಉದ್ದೇಶಗಳನ್ನು ಹೊರತುಪಡಿಸಿ ಆ್ಯಸಿಡ್‌‌ ಮಾರಾಟವನ್ನು ನಿಷೇಧಿಸಬೇಕು ಎಂದು 2009ರಲ್ಲಿ ಕಾನೂನು ಆಯೋಗ ತನ್ನ ವರದಿಯಲ್ಲಿ ತಿಳಿಸಿದೆ. ಆದರೆ, ಸರ್ಕಾರ ಮಾತ್ರ ಆ್ಯಸಿಡ್‌‌ ಮಾರಾಟಕ್ಕೆ ಅಂಕುಶ ಹಾಕಲು ಈವರೆಗೆ ಪರಿಣಾಮಕಾರಿ ಕ್ರಮಗಳನ್ನೇ ಕೈಗೊಂಡಿಲ್ಲ.

‘ಆ್ಯಸಿಡ್‌‌ ಎಲ್ಲೆಡೆ ಸುಲಭವಾಗಿ ದೊರೆಯುತ್ತಿದೆ. ಅದಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಕೂಡ ನಾವು ಸಂಗ್ರಹಿಸಿದ್ದೇವೆ. ಆದರೆ, ಇದರಿಂದ ಏನೂ ಉಪಯೋಗವಿಲ್ಲ’ ಎನ್ನುತ್ತಾರೆ ಲಕ್ಷ್ಮಿ ಅಗರವಾಲ್‌. ಅವರು ಕೂಡ ಆ್ಯಸಿಡ್‌‌ ದೌರ್ಜನ್ಯಕ್ಕೆ ಒಳಗಾದವರೇ. ಈಗ ತನ್ನಂತಹ ನತದೃಷ್ಟೆಯರ ಕಣ್ಣೀರು ಒರೆಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಲಕ್ಷ್ಮಿ ಅವರ ಸಾಹಸಗಾಥೆಯನ್ನು ಆಧರಿಸಿಯೇ ‘ಛಪಾಕ್‌’ ಸಿನಿಮಾ ರೂಪುಗೊಂಡಿರುವುದು.

ಸುಪ್ರೀಂ ಕೋರ್ಟ್‌ನ ಕಟ್ಟುನಿಟ್ಟಾದ ಸೂಚನೆಗಳ ನಂತರವೂ ಭಾರತದಲ್ಲಿ ದೌರ್ಜನ್ಯಗಳ ಸಂಖ್ಯೆಯೇನೂ ಕಡಿಮೆಯಾಗಿಲ್ಲ. ಸುಪ್ರೀಂ ಕೋರ್ಟು ತೀರ್ಪು ನೀಡಿದ 2013ರಲ್ಲಿ ಆ್ಯಸಿಡ್‌‌ ದಾಳಿಗಳ ಪ್ರಮಾಣ 116ರಷ್ಟಿದ್ದರೆ, 2014ರಲ್ಲಿ ಆ ಸಂಖ್ಯೆ 225 ದಾಟಿತು. ಈಗ ವಾರ್ಷಿಕ ಸರಾಸರಿ 300ರ ಆಸುಪಾಸಿನಲ್ಲಿರುವುದು, ಕಾನೂನಿನ ಅನುಷ್ಠಾನ ಸಮರ್ಪಕವಾಗಿ ಆಗುತ್ತಿಲ್ಲ ಎನ್ನುವುದನ್ನು ಸೂಚಿಸುವಂತಿದೆ. ಘಟನೆಗಳು ನಡೆದಾಗ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಮಹಿಳಾ ಆಯೋಗಗಳು ಪೊಲೀಸರಿಗೆ, ಸರ್ಕಾರಕ್ಕೆ ಪತ್ರ ಬರೆಯುತ್ತವೆ. ಮತ್ತೊಂದು ಘಟನೆ ನಡೆದಾಗ ಮತ್ತೊಂದು ಪತ್ರ.

ಕರ್ನಾಟಕದಲ್ಲಿ ಕೂಡ ಆ್ಯಸಿಡ್‌‌ ದಾಳಿಗಳು ಆಗಾಗ ವರದಿಯಾಗುತ್ತಲೇ ಇವೆ. ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್‌ ನಿರ್ವಾಹಕಿಯೊಬ್ಬರ ಮೇಲೆ ಕರ್ತವ್ಯದಲ್ಲಿದ್ದಾಗಲೇ ಆ್ಯಸಿಡ್‌‌ ದಾಳಿ ನಡೆದ ಘಟನೆ ಇತ್ತೀಚೆಗಷ್ಟೇ ವರದಿಯಾಗಿದೆ. ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ, ಮೈಸೂರು, ಹಾಸನ, ಬಳ್ಳಾರಿ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ದಕ್ಷಿಣ ಕನ್ನಡ ಜಿಲ್ಲೆಗಳಿಂದಲೂ ದಾಳಿಗಳ ಪ್ರಕರಣಗಳು ವರದಿಯಾಗಿವೆ. ದಾಖಲಾಗದ ಪ್ರಕರಣಗಳು ಎಲ್ಲೆಲ್ಲಿವೆಯೋ?

‘ಛಪಾಕ್’ ಚಿತ್ರದಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತೆ ಲಕ್ಷ್ಮೀ ಅಗರ್‌ವಾಲ್ ಪಾತ್ರದಲ್ಲಿ ನಟಿ ದೀಪಿಕಾ ಪಡುಕೋಣೆ

ಗಟ್ಟಿಗಿತ್ತಿಯರ ಮಾದರಿ

ಲಕ್ಷ್ಮಿ ಆ್ಯಸಿಡ್‌‌ ದಾಳಿಗೆ ತುತ್ತಾಗಿದ್ದು ಹದಿನಾರರ ವಯಸ್ಸಿನಲ್ಲಿ, 2005ರಲ್ಲಿ. ತನ್ನನ್ನು ಮದುವೆಯಾಗುವಂತೆ ದುಂಬಾಲು ಬಿದ್ದಿದ್ದ ಹುಡುಗನೊಬ್ಬ ದುಷ್ಕೃತ್ಯವೆಸಗಿದ್ದ. ಮೆಚ್ಚಿದ ಹುಡುಗಿಯ ಮುಖಕ್ಕೇ ಆ್ಯಸಿಡ್‌‌ ಸುರಿದಿದ್ದ. ದೆಹಲಿಯ ಖಾನ್‌ ಮಾರ್ಕೆಟ್‌ಗೆ ಸಮೀಪದಲ್ಲಿ, ಜನನಿಬಿಡ ಪ್ರದೇಶದಲ್ಲಿಯೇ ದಾಳಿ ನಡೆದಿತ್ತು. ಅದಾಗಿ ಕೆಲವು ತಿಂಗಳ ನಂತರ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಂಡಾಗ ಲಕ್ಷ್ಮಿ ಕುಸಿದುಹೋಗಿದ್ದರು. ಆದರೆ, ಆಕೆ ಎಂಥ ಗಟ್ಟಿಗಿತ್ತಿಯೆಂದರೆ, ಮುರಿದ ಬದುಕನ್ನು ಮತ್ತೆ ಧೈರ್ಯವಾಗಿ ಕಟ್ಟಿಕೊಳ್ಳಲು ಪ್ರಯತ್ನಿಸಿ ಅದರಲ್ಲಿ ಯಶಸ್ವಿಯೂ ಆದರು. ಆ್ಯಸಿಡ್‌‌ ದಾಳಿಗೆ ಒಳಗಾದ ಹೆಣ್ಣುಮಕ್ಕಳ ನೋವಿಗೆ ಮಿಡಿಯುವ ಅಲೋಕ್‌ ದೀಕ್ಷಿತ್‌ ಎನ್ನುವ ಸಾಮಾಜಿಕ ಕಾರ್ಯಕರ್ತನೊಂದಿಗೆ ಅವರ ಮದುವೆಯೂ ಆಯಿತು. ಈಗವರಿಗೆ ಮುದ್ದಾದ ಮಗಳೂ ಇದ್ದಾಳೆ. ಆಭರಣ ಕಂಪನಿಯೊಂದರ ರಾಯಭಾರಿಯಾಗಿಯೂ ಲಕ್ಷ್ಮಿ ಕಾರ್ಯನಿರ್ವಹಿಸಿದ್ದಾರೆ. ಇಂಥ ಅದೃಷ್ಟ ಎಷ್ಟು ಮಂದಿಗೆ ದೊರಕೀತು? ‘ನನ್ನ ಕನಸುಗಳನ್ನು ಸುಟ್ಟುಹಾಕುವಲ್ಲಿ ದಾಳಿಕೋರ ಸೋತುಹೋಗಿದ್ದಾನೆ’ ಎನ್ನುವ ಲಕ್ಷ್ಮಿ ಅವರ ಮಾತು, ದೌರ್ಜನ್ಯಕ್ಕೆ ಒಳಗಾಗುವ ಎಲ್ಲ ಹೆಣ್ಣುಮಕ್ಕಳಿಗೂ ಸ್ಫೂರ್ತಿಯಾಗಬೇಕು.

ಲಕ್ಷ್ಮಿ ಅವರಂತೆಯೇ ರೇಷ್ಮಾ ಖುರೇಷಿ ಕೂಡ ಗಟ್ಟಿಗಿತ್ತಿ ಹಾಗೂ ಅದೃಷ್ಟವಂತೆ. ಅವರ ಹೋರಾಟಕ್ಕೆ ಸಂದ ಬಹುದೊಡ್ಡ ಗೌರವ – 2016ರಲ್ಲಿ ನ್ಯೂಯಾರ್ಕ್‌ನಲ್ಲಿ ನಡೆದ ಫ್ಯಾಷನ್‌ ಕಾರ್ಯಕ್ರಮಕ್ಕೆ ದೊರೆತ ಆಹ್ವಾನ. ಸೌಂದರ್ಯದ ಸಿದ್ಧಮಾದರಿಗಳನ್ನು ಮುರಿಯಬೇಕೆನ್ನುವ ಉದ್ದೇಶದಿಂದ ಆಯೋಜಕರು ರೇಷ್ಮಾ ಅವರನ್ನು ಆಹ್ವಾನಿಸಿದ್ದರು. ವಿದೇಶಿ ವೇದಿಕೆಯಲ್ಲವರು ರೂಪದರ್ಶಿಯಾಗಿ ರ‍್ಯಾಂಪ್‌ ಮೇಲೆ ಹೆಜ್ಜೆ ಹಾಕುವ ಮೂಲಕ ತಮ್ಮ ಆತ್ಮಸ್ಥೈರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಂಡರು. ‘ಈ ವೇದಿಕೆ ಖಂಡಿತವಾಗಿಯೂ ನನ್ನ ಜೀವನವನ್ನೇ ಬದಲಿಸಲಿದೆ’ ಎಂದವರು ನ್ಯೂಯಾರ್ಕ್‌ನಲ್ಲಿ ಸಂತಸದಿಂದ ಉದ್ಗರಿಸಿದ್ದರು.

‘ನಮ್ಮ ಬದುಕಲ್ಲಿ ಏನೆಲ್ಲ ಸಂಭವಿಸಿತೋ ಅದರಲ್ಲಿ ನಮ್ಮ ತಪ್ಪೇನೂ ಅಲ್ಲ. ಮಾಡದ ತಪ್ಪಿಗಾಗಿ ನಾವು ನಮ್ಮ ಜೀವನವನ್ನೇಕೆ ಬಲಿ ಕೊಡಬೇಕು? ಬದುಕನ್ನು ನಾವು ಏಕೆ ಆನಂದಿಸಬಾರದು?’ ಎಂದು ರೇಷ್ಮಾ ಪ್ರಶ್ನಿಸುತ್ತಾರೆ. ‘ನಮ್ಮನ್ನು ನಾವು ಮಬ್ಬುಬೆಳಕಿನಲ್ಲಿ ನೋಡಿಕೊಳ್ಳಬಾರದು. ಹೊರಗೆ ಬರಬೇಕು, ಯಾವುದಾದರೊಂದು ಕೆಲಸವನ್ನು ಹುಡುಕಿಕೊಂಡು ದುಡಿಯಬೇಕು’ ಎನ್ನುವುದು ಸಂತ್ರಸ್ತ ಹೆಣ್ಣುಮಕ್ಕಳಿಗೆ ಅವರು ನೀಡುವ ಕರೆ.

ಲಕ್ಷ್ಮಿ ಅಗರವಾಲ್‌ ನ್ಯಾಯಾಲಯವನ್ನು ಎಡತಾಕಿದ್ದು ತನಗೆ ನ್ಯಾಯ ದೊರಕಿಸಿಕೊಳ್ಳಲು ಮಾತ್ರವಲ್ಲ; ಆ್ಯಸಿಡ್‌‌ ದಾಳಿಗೆ ಸಂಬಂಧಿಸಿದಂತೆ ಕಠಿಣ ಕಾನೂನು ರೂಪಿಸಬೇಕು ಎನ್ನುವುದು ಆಕೆಯ ಕಾನೂನು ಹೋರಾಟದ ಬಹುಮುಖ್ಯ ಭಾಗವಾಗಿದೆ. ಆ್ಯಸಿಡ್‌‌ ದೌರ್ಜನ್ಯಗಳ ಕುರಿತಂತೆ ದೇಶದಲ್ಲಿ ಅಭಿಯಾನವೊಂದನ್ನು ರೂಪಿಸಿದ ಕೀರ್ತಿ ಲಕ್ಷ್ಮಿ ಹಾಗೂ ರೇಷ್ಮಾ ಅವರಂಥ ಹೆಣ್ಣುಮಕ್ಕಳಿಗೆ ಸಲ್ಲಬೇಕು.

ಸಂತಾ ಸರೋಜ್ ಸಾಹು ಅವರ ಜೊತೆಗೆ ಆ್ಯಸಿಡ್ ದಾಳಿ ಸಂತ್ರಸ್ತೆ ಪ್ರಮೋದಿನಿ

ಸೌಜನ್ಯದ ಅಭಾವ

ಭಾರತದಲ್ಲಿ ಕೆಂಪು ತುಟಿಬಣ್ಣ ದೊರೆತಷ್ಟೇ ಸಲೀಸಾಗಿ ಆ್ಯಸಿಡ್‌‌ ಕೂಡ ದೊರೆಯುತ್ತದೆ ಎಂದು ರೇಷ್ಮಾ ವಿಷಾದದಿಂದ ಹೇಳುತ್ತಾರೆ. ‘ಮುಖವನ್ನು ಮುಚ್ಚಿಕೊಳ್ಳದೆ ರಸ್ತೆಯಲ್ಲಿ ನಡೆಯುವಾಗ ಜನ ವಿಚಿತ್ರವಾಗಿ ನೋಡುತ್ತಾರೆ. ನಿನ್ನ ಮುಖವೇಕೆ ಹೀಗಾಗಿದೆ ಎಂದು ಪ್ರಶ್ನೆಗಳನ್ನು ಮುಖಕ್ಕೆ ರಾಚುವಂತೆ ಒರಟಾಗಿ ಕೇಳುತ್ತಾರೆ’ ಎನ್ನುವಾಗ, ಸಂತ್ರಸ್ತರನ್ನು ನಾವು ಇನ್ನಷ್ಟು ಸಹಾನುಭೂತಿಯಿಂದ ನಡೆಸಿಕೊಳ್ಳಬೇಕಾದ ಅಗತ್ಯವನ್ನು ಅವರ ಮಾತು ಸೂಚಿಸುತ್ತದೆ. ರೇಷ್ಮಾ ಅವರಿಗೆ ಅಮೆರಿಕದಲ್ಲಿ ಆದ ಅನುಭವ ಬೇರೆ ರೀತಿಯದು. ರಸ್ತೆಗಳಲ್ಲಿ ಎದುರಾಗುವ ಅಲ್ಲಿನ ಜನ ಮುಗುಳ್ನಗೆಯನ್ನು ವಿನಿಮಯ ಮಾಡಿಕೊಳ್ಳುತ್ತಿದ್ದರೇ ಹೊರತು ಪ್ರಶ್ನೆಗಳನ್ನಲ್ಲ. ‘ನಿನ್ನ ಮುಖಕ್ಕೇನಾಯಿತು ಎನ್ನುವ ಪ್ರಶ್ನೆಯನ್ನು ಅಮೆರಿಕನ್ನರೆಂದೂ ಕೇಳುವುದಿಲ್ಲ’ ಎನ್ನುವುದು ಅವರ ಅನುಭವದ ಮಾತು.

ಸಂತ್ರಸ್ತ ಹೆಣ್ಣುಮಕ್ಕಳು ಜೀವನವನ್ನು ಧೈರ್ಯದಿಂದ ಹಾಗೂ ಘನತೆಯಿಂದ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ರೇಷ್ಮಾ ಅವರು ಮಾತನಾಡಿರುವ ವಿಡಿಯೊಗಳು ಯೂಟ್ಯೂಬ್‌ನಲ್ಲಿವೆ. ದೌರ್ಜನ್ಯಕ್ಕೆ ಒಳಗಾದ ಹೆಣ್ಣುಮಕ್ಕಳಿಗೆ ಅವರು ಬ್ಯೂಟಿ ಟಿಪ್ಸ್‌ಗಳನ್ನೂ ನೀಡಿದ್ದಾರೆ. ‘ತುಟಿಗಳನ್ನು ಕೆಂಪು ಮಾಡಿಕೊಳ್ಳುವುದು ಹೇಗೆ?’ ಎನ್ನುವ ಅವರ ವಿಡಿಯೊ (bit.ly/3aGSVOj) ಜನಪ್ರಿಯವೂ ಮಾನವೀಯವೂ ಆದುದು.

ಹಾಗಾದರೆ, ಹೆಣ್ಣುಮಕ್ಕಳ ಮೇಲೆ ಆ್ಯಸಿಡ್‌‌ ದಾಳಿ ನಡೆಸುವವರಾದರೂ ಯಾರು? ಯಾರೋ ಅಪರಿಚಿತ ದುಷ್ಕರ್ಮಿಗಳಲ್ಲ; ಪರಿಚಿತರೇ ಈ ದುಷ್ಕೃತ್ಯ ಎಸಗುತ್ತಾರೆ. ಅದರಲ್ಲೂ ಗೆಳತಿಯರಿಗೆ ಗೆಳೆಯರು, ಹೆಂಡತಿಯರಿಗೆ ಗಂಡಂದಿರು ಆ್ಯಸಿಡ್‌‌ ಎರಚಿರುವುದೇ ಹೆಚ್ಚು.

ಅಪರೂಪಕ್ಕೆ ಆ್ಯಸಿಡ್‌‌ ಸಂತ್ರಸ್ತರ ಜಾಗದಲ್ಲಿ ಗಂಡು ಕಾಣಿಸಿಕೊಳ್ಳುವುದಿದೆ. ಮದುವೆಯಾಗಲು ನಿರಾಕರಿಸಿದ ಗೆಳೆಯನಿಗೆ ಯುವತಿಯೊಬ್ಬಳು ಆ್ಯಸಿಡ್‌‌ ಎರಚಿದ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಪ್ರೇಮಿಸಿದ ಯುವಕ ತನ್ನಿಂದ ದೂರವಾಗತೊಡಗಿದಾಗ ಸಿಟ್ಟಿಗೆದ್ದ ಹುಡುಗಿ, ಬೀದಿಯಲ್ಲೇ ಆ್ಯಸಿಡ್‌‌ ದಾಳಿ ಎಸಗಿದ್ದಾಳೆ.

ಭಾರತದಲ್ಲೇ ಹೆಚ್ಚು

ಭಾರತದಲ್ಲಿನ ಅತ್ಯಾಚಾರ ಪ್ರಕರಣಗಳು ಅಂತರರಾಷ್ಟ್ರೀಯ ಗಮನಸೆಳೆದಿವೆ. ಇತ್ತೀಚಿನ ವರ್ಷಗಳಲ್ಲಿ ಹೆಚ್ಚಾಗಿರುವ ಸಾಮೂಹಿಕ ಅತ್ಯಾಚಾರ–ಕೊಲೆ ಪ್ರಕರಣಗಳು ಮಾನವೀಯತೆಗೆ ಬಳಿಯುತ್ತಿರುವ ಮಸಿಯಂತೆ ಕಾಣಿಸುತ್ತಿವೆ. ಈ ಅತ್ಯಾಚಾರ ಪ್ರಕರಣಗಳ ಮತ್ತೊಂದು ರೂಪದಲ್ಲಿ ಆ್ಯಸಿಡ್‌‌ ದಾಳಿಗಳು ನಡೆಯುತ್ತಿವೆ. ಲಖನೌದಲ್ಲಿ ನಡೆದ ಘಟನೆಯೊಂದನ್ನು ನೋಡಿ. ಮೂವತ್ತೈದು ವರ್ಷದ ಮಹಿಳೆಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ನಡೆಯಿತು. ಅದರ ಬೆನ್ನಿಗೆ ಆ್ಯಸಿಡ್‌‌ ದಾಳಿಯೂ ನಡೆಯಿತು. ಒಂದು ಬಾರಿಯಲ್ಲ, ಮತ್ತೆ ಮತ್ತೆ ಆಕೆ ಆ್ಯಸಿಡ್‌‌ ದಾಳಿಗೆ ಒಳಗಾಗಬೇಕಾಯಿತು. ‘ಈ ಹೆಣ್ಣುಮಗಳ ಮೇಲೆ ದೌರ್ಜನ್ಯ ಎಸಗಿದವರ ಕ್ರೌರ್ಯವನ್ನು ಅರ್ಥ ಮಾಡಿಕೊಳ್ಳುವುದೇ ಕಷ್ಟ. ಮತ್ತೆ ಮತ್ತೆ ಆಕೆ ದೌರ್ಜನ್ಯಕ್ಕೊಳಗಾಗುತ್ತಿರುವುದು ನಮಗೆ ಆತಂಕ ಉಂಟುಮಾಡಿದೆ’ ಎಂದು ನಿಟ್ಟುಸಿರುಬಿಡುತ್ತಾರೆ, ‘ಸ್ಟಾಪ್‌ ಆ್ಯಸಿಡ್‌‌ ಅಟ್ಯಾಕ್‌’ ಎನ್ನುವ ಆಂದೋಲನವನ್ನು ಹುಟ್ಟುಹಾಕಿರುವ ಆಶಿಶ್‌ ಶುಕ್ಲಾ. ನಿರಂತರ ದಾಳಿಯಿಂದ ತತ್ತರಿಸಿರುವ ಆ ನತದೃಷ್ಟೆ, ತನ್ನ ಮೇಲೆ ದೌರ್ಜನ್ಯ ಎಸಗುತ್ತಿರುವವರ ವಿರುದ್ಧ ದೂರು ನೀಡಲು ಕೂಡ ಭಯಪಡುತ್ತಿದ್ದಾಳಂತೆ.

ಭಾರತದಲ್ಲಿ ಪ್ರತಿ ವರ್ಷ 300 ಜನರು ಆ್ಯಸಿಡ್‌‌ ದಾಳಿಗೆ ಒಳಗಾಗುತ್ತಿದ್ದಾರೆ ಎನ್ನುತ್ತದೆ ಅಂಕಿಅಂಶ. ಈ ಪ್ರಮಾಣ ವಿಶ್ವದಲ್ಲೇ ಅತ್ಯಂತ ಹೆಚ್ಚು. ಇವೆಲ್ಲವೂ ದಾಖಲಾದ ಪ್ರಕರಣಗಳಷ್ಟೇ. ಕತ್ತಲಲ್ಲಿಯೇ ಉಳಿದ ಪ್ರಕರಣಗಳನ್ನೂ ಲೆಕ್ಕಕ್ಕೆ ಹಿಡಿದರೆ ಸಂತ್ರಸ್ತರ ಸಂಖ್ಯೆ 1000 ದಾಟುತ್ತದೆ ಎನ್ನುವ ಅಂದಾಜಿದೆ. ದೌರ್ಜನ್ಯಕ್ಕೆ ಒಳಗಾದ ಅನೇಕರು ದೂರು ನೀಡುವುದಕ್ಕೆ ಹೋಗುವುದಿಲ್ಲ. ಬಹುತೇಕ ಪ್ರಸಂಗಗಳಲ್ಲಿ ಅಪರಾಧ ಎಸಗಿದವರು ಪ್ರಭಾವಿಗಳಾಗಿರುವುದರಿಂದ, ಇನ್ನಷ್ಟು ಅಪಾಯವನ್ನು ಆಹ್ವಾನಿಸುವುದು ಬೇಡವೆಂದು, ಜೀವನದುದ್ದಕ್ಕೂ ನೋವಿನ ನಂಜುಣ್ಣುತ್ತ ಮೌನವಾಗಿ ಇರುವವರು ಸಾಕಷ್ಟು ಮಂದಿಯಿದ್ದಾರೆ. ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಗಾಯಗೊಂಡು, ಸಾಮಾಜಿಕವಾಗಿ ಗಾಸಿಗೊಂಡು ಭೂಗತರಂತೆ ಬದುಕುವವರೂ ಇದ್ದಾರೆ. ಓರ್ವ ಹೆಣ್ಣುಮಗಳಂತೂ ತನ್ನ ಮೇಲೆ ಮೂರು ಬಾರಿ ಆ್ಯಸಿಡ್‌‌ ಎರಚಿದ ಗಂಡನೊಂದಿಗೆ ಈಗಲೂ ಬಾಳುತ್ತಲೇ ಇದ್ದಾಳೆ.

ಬಿಹಾರದ ಹಾಜಿಪುರದಲ್ಲಿ ಒಂದೇ ಕುಟುಂಬದ 16 ಸದಸ್ಯರ ಮೇಲೆ ಆ್ಯಸಿಡ್‌‌ ದಾಳಿ ನಡೆಸಲಾಗಿತ್ತು. ಮಕ್ಕಳಿಗೆ ಸಂಬಂಧಿಸಿದ ಕ್ಷುಲ್ಲಕ ವಿಚಾರ, ಕುಟುಂಬಗಳ ನಡುವಣ ಸಂಘರ್ಷವಾಗಿ ಈ ದಾಳಿ ನಡೆದಿತ್ತು.

ನಿರಂತರ ಸಂಘರ್ಷಗಳೊಂದಿಗೆ ಬದುಕು

ಆ್ಯಸಿಡ್‌‌ ದಾಳಿಗೊಳಗಾದ ಸಂತ್ರಸ್ತರ ಪಾಲಿಗೆ ಯಾತನೆ ಎನ್ನುವುದು ಯಾವುದೋ ಕ್ಷಣವೊಂದಕ್ಕೆ ಸೀಮಿತವಾದುದಲ್ಲ. ಅದು ಅನುದಿನ, ಅನುಕ್ಷಣ ಜೊತೆಯಾಗಿ ಇರುವಂತಹದ್ದು. ಸೋನಿ ದೇವಿ ಎನ್ನುವ ಮತ್ತೊಬ್ಬ ನತದೃಷ್ಟ ಹೆಣ್ಣುಮಗಳ ಕಥೆ ಕೇಳಿ. ಆಕೆಯದು ಪೊಲೀಸ್‌ ಅಧಿಕಾರಿಯಾಗುವ ಕನಸು. ಆದರೆ, ಮನೆಯವರಿಗೆ ಮಗಳಿಗೆ ಮದುವೆ ಮಾಡಿ ಜವಾಬ್ದಾರಿಯಿಂದ ಕಳಚಿಕೊಳ್ಳುವುದೇ ಮುಖ್ಯವಾಗಿತ್ತು. ಗಂಡನ ಮನೆ ಸೇರಿದ ವಧು ಹೊಸ ಕನಸುಗಳಿಗೆ ಮೈಮನಗಳನ್ನು ತೆರೆದುಕೊಂಡಿದ್ದಾಯಿತು. ಆದರೆ, ಅಲ್ಲಿ ಕಾದಿದ್ದುದು ಸುಂದರ ಸ್ವಪ್ನಗಳಲ್ಲ, ಬರಿಯ ದುಃಸ್ವಪ್ನಗಳಷ್ಟೇ. ಮದುವೆಯ ಸಮಯದಲ್ಲಿ ಪಡೆದ ವರದಕ್ಷಿಣೆ ಗಂಡ ಮತ್ತವನ ಕುಟುಂಬದ ದಾಹ ತಣಿಸಲಿಲ್ಲ. ಮತ್ತಷ್ಟು ವರದಕ್ಷಿಣೆಗಾಗಿ ಒತ್ತಾಯಿಸತೊಡಗಿದರು. ಪಾತ್ರೆ ತೊಳೆಯುವ ಬದಲು ಸೋಪನ್ನೇ ಹೆಚ್ಚು ತೊಳೆಯುತ್ತಾಳೆಂದು ಅತ್ತೆ ದಂಡಿಸಿದರು. ಸ್ನಾನ ಮಾಡಲು ನೀರಿನಂತೆ ಶಾಂಪೂ ಬಳಸುತ್ತಾಳೆಂದು ಗಂಡ ನಿದ್ದೆಯಲ್ಲಿದ್ದ ಹೆಂಡತಿಯ ತಲೆಗೂದಲನ್ನು ಕತ್ತರಿಸಿದ. ಈ ಹಿಂಸೆ ಕೊನೆಗೊಂಡಿದ್ದು, ಮುಖಕ್ಕೆ ಆ್ಯಸಿಡ್‌‌ ಸುರಿಯುವ ಮೂಲಕ.

‘ಪೊಲೀಸ್‌ ಅಧಿಕಾರಿಣಿಯಾಗಬೇಕೆಂದು ನಾನು ಸದಾ ಕನಸು ಕಾಣುತ್ತಿದ್ದೆ. ಅದೊಂದು ಕೈಗೆಟುಕದ ಕನಸಾಗಿಯೇ ಉಳಿಯಿತು’ ಎಂದು ಸೋನಿ ದೇವಿ ವಿಷಾದದಿಂದ ಹೇಳುತ್ತಾರೆ. ಮುಖ ಮತ್ತು ಕತ್ತಿನಲ್ಲಿನ ಮಾಂಸ ಬೆಂದುಹೋಗಿ ವಿಕಾರಗೊಂಡಿದ್ದನ್ನು ತಕ್ಕಮಟ್ಟಿಗೆ ಸರಿಪಡಿಸಿಕೊಳ್ಳಲಿಕ್ಕಾಗಿ ಅವರು ಹದಿನಾರು ಸರ್ಜರಿಗಳಿಗೆ ತಮ್ಮನ್ನೊಡ್ಡಿಕೊಳ್ಳಬೇಕಾಯಿತು. ಸುಮಾರು ಹತ್ತು ವರ್ಷಗಳ ಕಾಲ ಅಮ್ಮನ ಮನೆಯಲ್ಲಿ, ಕೋಣೆಯೊಂದರಲ್ಲಿ ಬಂದಿಯಂತೆ ಕಾಲಕಳೆಯಬೇಕಾಯಿತು. ಮನೆಗೆ ಬಂಧುಮಿತ್ರರು ಆಗಮಿಸಿದರೆ, ಅವರಿಗೆ ತನ್ನ ಅಂದಗೆಟ್ಟ ಮುಖ ತೋರಿಸಲು ಅಳುಕಿ ಕೋಣೆಯಿಂದ ಹೊರಬರುತ್ತಲೇ ಇರಲಿಲ್ಲ. ಹತಾಶೆಯಿಂದ ಕಂಗೆಟ್ಟು ಜೀವ ಕಳೆದುಕೊಳ್ಳುವ ಯೋಚನೆಯನ್ನೂ ಮಾಡಿದ್ದುಂಟು. ನೌಕರಿಗೆ ಸೇರಿಕೊಂಡು, ದುಡಿಮೆಯಲ್ಲಿ ಎಲ್ಲವನ್ನೂ ಮರೆಯೋಣವೆಂದರೆ, ಉದ್ಯೋಗ ಕೊಡುವುದಾದರೂ ಯಾರು? ಉದ್ಯೋಗದಾತರಷ್ಟೇ ಸೋನಿ ಅವರನ್ನು ನಿರಾಕರಿಸಲಿಲ್ಲ; ಶಿಕ್ಷಣ ಮುಂದುವರಿಸಲು ಯೋಚಿಸಿದರೆ ಕಾಲೇಜು ಬಾಗಿಲು ಕೂಡ ತೆರೆದುಕೊಳ್ಳಲಿಲ್ಲ. ‘ನಿಮಗೆ ಪ್ರವೇಶ ಕೊಟ್ಟರೆ ನಮ್ಮ ಕಾಲೇಜಿನ ಪ್ರತಿಷ್ಠೆಗೆ ಮುಕ್ಕಾಗುತ್ತದೆ’ ಎಂದು ಎಡತಾಕಿದ ಮೂರ್ನಾಲ್ಕು ಕಾಲೇಜಿನವರು ಮುಖಕ್ಕೆ ಹೊಡೆದಂತೆಯೇ ಪ್ರತಿಕ್ರಿಯಿಸಿದರು. ಎಲ್ಲ ಬಾಗಿಲುಗಳೂ ಮುಚ್ಚಿದ ಪರಿಸ್ಥಿತಿಯಲ್ಲಿ ಸೋನಿ ದೇವಿ ಉತ್ತರಪ್ರದೇಶದ ತನ್ನ ಹಳ್ಳಿಯನ್ನು ತೊರೆದು ದೆಹಲಿಗೆ ಬಂದರು. ಅಲ್ಲಿನ ಸ್ವಯಂ ಸೇವಾ ಸಂಸ್ಥೆಯೊಂದರ ನೆರವಿನಿಂದ ಬದುಕನ್ನು ಕಟ್ಟಿಕೊಂಡಿದ್ದಾರೆ.

ಬದುಕು ಕಟ್ಟಿಕೊಳ್ಳುವುದು ಒಂದು ಹೋರಾಟವಾದರೆ, ಕಾನೂನು ಹೋರಾಟದ್ದು ಬೇರೆಯದೇ ಕಥೆ. ತನ್ನ ಮೇಲೆ ಆ್ಯಸಿಡ್‌‌ ಸುರಿದವನಿಗೆ ಶಿಕ್ಷೆ ಕೊಡಿಸಲು ಅವರು ಮತ್ತೆ ಮತ್ತೆ ಕೋರ್ಟ್‌ಗೆ ಅಲೆಯಬೇಕಾಯಿತು. ಕೊನೆಗೂ ಪ್ರಮುಖ ಆರೋಪಿಗೆ ಏಳು ವರ್ಷಗಳ ಸಜೆಯಾಯಿತು. ‘ನಿಜವಾದ ಶಿಕ್ಷೆಯಾದುದು ನನಗೆ. ಸಮಾಜದಿಂದ ನಾನು ಬಹಿಷ್ಕೃತಳಾಗಬೇಕಾಯಿತು. ನಿರಂತರ ಹಿಂಸೆ ಅನುಭವಿಸಬೇಕಾಯಿತು’ ಎನ್ನುತ್ತಾರೆ ಸೋನಿ ದೇವಿ.

ಆ್ಯಸಿಡ್‌‌ ದಾಳಿಗಳು ನಡೆಯುವುದಕ್ಕೆ ಕಾರಣಗಳೇನು? ಅಭಿವೃದ್ಧಿಶೀಲ ದೇಶಗಳಲ್ಲಿ ವರದಕ್ಷಿಣೆಯ ಕಾರಣಕ್ಕಾಗಿ ಹೆಚ್ಚಿನ ದೌರ್ಜನ್ಯಗಳು ನಡೆಯುತ್ತಿವೆ ಎನ್ನುತ್ತಾರೆ ಸಮಾಜಶಾಸ್ತ್ರಜ್ಞರು. ಪ್ರತೀಕಾರದ ರೂಪದಲ್ಲೂ ಆ್ಯಸಿಡ್‌‌ ಎರಚಲಾಗುತ್ತದೆ. ಹೆಣ್ಣುಮಕ್ಕಳ ಮುಖವನ್ನು ವಿರೂಪಗೊಳಿಸುವ ಮೂಲಕ ಖುಷಿಪಡುವ ವಿಕೃತ ಮನಸ್ಸುಗಳಿವೆ. ವ್ಯಾಪಾರ, ಜೂಜು, ಒಣಪ್ರತಿಷ್ಠೆ ಕೂಡ ಅಪರಾಧ ಪ್ರಕರಣಗಳಿಗೆ ಕಾರಣವಾಗಿರುವುದಿದೆ. ಆ್ಯಸಿಡ್‌‌ ದಾಳಿಗೆ ತುತ್ತಾಗುವ ಹೆಣ್ಣುಮಕ್ಕಳು ತಮ್ಮದಲ್ಲದ ತಪ್ಪಿಗೆ ಶಿಕ್ಷೆ ಅನುಭವಿಸಬೇಕಾಗುತ್ತದೆ. ಪುರುಷಪ್ರಧಾನ ವ್ಯವಸ್ಥೆಯಲ್ಲಂತೂ ಹೆಣ್ಣು ದಂಡನೆಗೊಳಗಾಗಲಿಕ್ಕಾಗಿಯೇ ಹುಟ್ಟಿದವಳು. ಹುಡುಗರು ಹುಡುಗಿಯರ ನಡುವೆ ಸಹಜ ಸಂವಹನಕ್ಕೆ ಅವಕಾಶವೇ ಇಲ್ಲದ ಸಮಾಜದಲ್ಲಿ, ಸಹಜವಾಗಿಯೇ ಲಿಂಗಭೇದ ಮನಃಸ್ಥಿತಿ ತಲೆಯೆತ್ತುತ್ತದೆ. ಈ ಮನೋಧರ್ಮವೇ ಆ್ಯಸಿಡ್‌‌ ದಾಳಿಗೆ ಕಾರಣಗಳಲ್ಲೊಂದು. ತನ್ನ ಅಪೇಕ್ಷೆಗಳಿಗೆ ತಕ್ಕಂತೆ ಹೆಣ್ಣು ಇಲ್ಲದೆ ಹೋದಾಗ ಗಂಡು ಕುಪಿತನಾಗುತ್ತಾನೆ. ಹೆಣ್ಣು ತನ್ನಿಂದ ದೂರವಾಗಲು ಬಯಸಿದರಂತೂ ಮತ್ತಷ್ಟು ಕ್ರುದ್ಧನಾಗುತ್ತಾನೆ. ತನಗೆ ಸಿಗದ ಹೆಣ್ಣು ಮತ್ತಾರಿಗೂ ಸಿಗಬಾರದೆಂಬ ಧೋರಣೆಯಿಂದ ಅವಳ ಮುಖಕ್ಕೆ ಆ್ಯಸಿಡ್‌‌ ಎರಚಿರುವ ಮನಸ್ಸುಗಳೂ ಇವೆ. ಮಹಿಳೆಯ ಮೇಲೆ ಅಧಿಕಾರ ಚಲಾಯಿಸುವ ಗಂಡಿನ ಹಟವೇ ದುರಂತಕ್ಕೆ ಎಡೆಮಾಡಿಕೊಡುತ್ತದೆ.

ಎಲ್ಲೆಡೆ ಒಂದೇ ವ್ಯಥೆ

ಆ್ಯಸಿಡ್‌‌ ದಾಳಿ ಭಾರತಕ್ಕೆ ಸೀಮಿತವಾದ ವಿದ್ಯಮಾನವೇನೂ ಅಲ್ಲ. ನೆರೆಯ ಬಾಂಗ್ಲಾದಲ್ಲೂ ಆ್ಯಸಿಡ್‌‌ ನೀರಿನಂತೆ ಬಳಕೆಯಾಗುವುದಿದೆ. ಬಾಂಗ್ಲಾದ ಢಾಕಾ ನಗರವಂತೂ ‘ವಿಶ್ವದ ಆ್ಯಸಿಡ್‌‌ ದಾಳಿಗಳ ರಾಜಧಾನಿ’ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ. ಕೌಟುಂಬಿಕ ದೌರ್ಜನ್ಯದ ಭಾಗವಾಗಿ ನಡೆಯುವ ಆ್ಯಸಿಡ್‌‌ ದಾಳಿಗಳು ಬಾಂಗ್ಲಾದಲ್ಲಿ ಹೆಚ್ಚು. ವಿಪರ್ಯಾಸವೆಂದರೆ, ಸುಟ್ಟಗಾಯಗಳಿಗೆ ಚಿಕಿತ್ಸೆ ನೀಡುವ ಸೌಲಭ್ಯಗಳು ಅಲ್ಲಿ ವಿರಳ. ಆ್ಯಸಿಡ್‌‌ ಮಾರಾಟಕ್ಕೆ ನಿಯಂತ್ರಣಗಳು ಹೇರಿದ ಮೇಲೆ ಬಾಂಗ್ಲಾದಲ್ಲಿ–ಢಾಕಾದಲ್ಲಿ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ.

ಏಷ್ಯಾದ ದೇಶಗಳು, ಮಧ್ಯಪ್ರಾಚ್ಯ, ವೆಸ್ಟ್‌ ಇಂಡೀಸ್‌, ದಕ್ಷಿಣ ಆಫ್ರಿಕಾ, ಇಂಗ್ಲೆಂಡ್‌, ಫ್ರಾನ್ಸ್‌ – ಅಮಾನವೀಯ ಘಟನೆಗಳ ಸಾಕ್ಷಿಗೆ ಜಗತ್ತಿನ ಯಾವ ಮಣ್ಣೂ ಹೊರತಾಗಿಲ್ಲ. ಪ್ರತಿ ದಿನ ಒಂದಲ್ಲಾ ಒಂದು ಕಡೆ ಓರ್ವ ಹೆಣ್ಣಿನ ಮುಖವನ್ನು ಆ್ಯಸಿಡ್‌‌ ತೋಯಿಸುತ್ತಲೇ ಇದೆ. ಕೆಲವು ಪ್ರಸಂಗಗಳಲ್ಲಂತೂ ಮಕ್ಕಳ ಮೇಲೂ ರಾಸಾಯನಿಕಗಳನ್ನು ಸುರಿದಿರುವುದಿದೆ.

ಆ್ಯಸಿಡ್ ದಾಳಿ ಈಗ ಜಾಗತಿಕ ಸಮಸ್ಯೆ. ಉಗಾಂಡಾದಲ್ಲಿಯೂ ಆ್ಯಸಿಡ್‌ ದಾಳಿ ದೊಡ್ಡ ಪಿಡುಗಾಗಿದೆ

ವಿಶ್ವದ ಸಭ್ಯ ನಾಗರಿಕತೆಯ ಮಾದರಿಗಳಲ್ಲೊಂದಾದ ಲಂಡನ್‌ ಕೂಡ ಆ್ಯಸಿಡ್‌‌ ಓಕುಳಿಯಾಟಕ್ಕೆ ಹೊರತಾಗಿಲ್ಲ. ವರ್ಷದಿಂದ ವರ್ಷಕ್ಕೆ ಅಲ್ಲಿ ರಾಸಾಯನಿಕ ದಾಳಿಗಳ ಅಪರಾಧಗಳ ಸಂಖ್ಯೆ ಹೆಚ್ಚುತ್ತಲೇ ಇದೆ. 2015ರಲ್ಲಿ 261 ಪ್ರಕರಣಗಳು ವರದಿಯಾಗಿದ್ದರೆ, 2016ರಲ್ಲಿ 454 ಪ್ರಕರಣಗಳು ದಾಖಲಾಗುವ ಮೂಲಕ ಶೇ. 74ರ ಹೆಚ್ಚಳ ಅಲ್ಲಿ ದಾಖಲಾಗಿತ್ತು. ‘ಲಂಡನ್‌ ಟೈಮ್ಸ್‌’ ಪ್ರಕಾರ, 2012ರಿಂದ 2015ರ ಅವಧಿಯಲ್ಲಿ ರಾಸಾಯನಿಕ ದಾಳಿಗಳ ಪ್ರಮಾಣ ಬ್ರಿಟನ್‌ನಲ್ಲಿ ಶೇ.30ರಷ್ಟು ಹೆಚ್ಚಾಗಿದೆ. ಭಾರತಕ್ಕೂ ಲಂಡನ್‌ನಲ್ಲಿನ ಘಟನೆಗಳಿಗೂ ವ್ಯತ್ಯಾಸವೆಂದರೆ, ಮಿಕದ ಲಿಂಗದಲ್ಲಿ ವ್ಯತ್ಯಾಸವಿರುವುದು. ಭಾರತದಲ್ಲಿ ಆ್ಯಸಿಡ್‌‌ ದಾಳಿಗೆ ಗುರಿಯಾಗುವ ಬಹುತೇಕರು ಹೆಣ್ಣುಮಕ್ಕಳೇ ಆಗಿರುತ್ತಾರೆ. ಆದರೆ, ಬ್ರಿಟನ್‌ನಲ್ಲಿ ದಾಳಿಗೆ ಒಳಗಾಗುವರಲ್ಲಿ ಹುಡುಗರೇ ಹೆಚ್ಚು. ಪಡ್ಡೆ ಹುಡುಗರು ಅಥವಾ ಗ್ಯಾಂಗುಗಳ ನಡುವಿನ ಸಂಘರ್ಷ ಆ್ಯಸಿಡ್‌‌ ದಾಳಿಯ ರೂಪು ಪಡೆದುಕೊಳ್ಳುತ್ತದೆ. ಆ್ಯಸಿಡ್‌‌ ಅನ್ನು ಆಯುಧದಂತೆ ಬಳಸುವುದನ್ನು ನಿರ್ಬಂಧಿಸುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಕಾನೂನುಗಳು ಇಲ್ಲದಿರುವುದು ಕೂಡ ಅಪಾಯಕಾರಿ ಆಮ್ಲಗಳನ್ನು ಬ್ರಿಟನ್‌ನಲ್ಲಿ ಬಿಡುಬೀಸಾಗಿ ಬಳಸುವುದಕ್ಕೆ ಕಾರಣವಾಗಿದೆ.

ಬದಲಾಗಬೇಕು ಮನೋಧರ್ಮ

ಆ್ಯಸಿಡ್‌‌ ಎರಚುವಂತಹ ವಿಕೃತಿಗಳನ್ನು ತಡೆಯಲಿಕ್ಕೆ ಇರುವ ದಾರಿಗಳು ಎರಡು: ಮೊದಲನೆಯದು ಕಾನೂನಿಗೆ ಸಂಬಂಧಿಸಿದ್ದು. ಆ್ಯಸಿಡ್‌‌ ಮಾರಾಟಕ್ಕೆ ನಿರ್ಬಂಧಗಳನ್ನು ವಿಧಿಸುವುದು ಹಾಗೂ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸುವ ಕೆಲಸವನ್ನು ಕಾರ್ಯಾಂಗ ಹಾಗೂ ನ್ಯಾಯಾಂಗ ಮಾಡಬೇಕಿದೆ. ಇದಕ್ಕೆ ಪೂರಕವಾಗಿ ಆಗಬೇಕಾದ ಕೆಲಸವನ್ನು ನಾವೆಲ್ಲರೂ ಮಾಡಬೇಕಿದೆ. ಅದು ನಮ್ಮ ಮನಸ್ಸುಗಳನ್ನು ತಿಳಿಗೊಳಿಸಿಕೊಳ್ಳುವ ಕೆಲಸ. ಮಕ್ಕಳ ಮನಸ್ಸನ್ನು ಪ್ರಾಂಜಲಗೊಳಿಸುವ ಕೆಲಸ.

ಲಿಂಗಭೇದ ಮನಃಸ್ಥಿತಿ ಮೂಡದಂತೆ ಮಕ್ಕಳನ್ನು ರೂಪಿಸುವ ಕೆಲಸ ಮನೆಗಳನ್ನೂ ಶಾಲೆಗಳಲ್ಲೂ ನಡೆಯಬೇಕು. ಹೆಣ್ಣಿನ ಮೇಲೆ ದೌರ್ಜನ್ಯ ಎಸಗುವುದು ಲಜ್ಜೆಗೆಟ್ಟವರ ಕೆಲಸ ಎನ್ನುವ ಮನಸ್ಥಿತಿ ಎಲ್ಲರಲ್ಲೂ ಮೂಡಬೇಕು. ದೌರ್ಜನ್ಯಕ್ಕೆ ಒಳಗಾದವರು ಮುಖ ಮರೆಸಿಕೊಂಡು ಬದುಕುವ ಸ್ಥಿತಿ ಸಮಾಜದಲ್ಲಿದೆ. ಆ ಪರಿಸ್ಥಿತಿ ಬದಲಾಗಿ, ಅಪರಾಧ ಎಸಗಿದವರು ಸಮಾಜದ ಕಡೆಗಣ್ಣಿಗೆ ತುತ್ತಾಗುವ ಸಂದರ್ಭ ರೂಪುಗೊಳ್ಳಬೇಕು. ಈ ಎಚ್ಚರ, ವಿವೇಕ ಮೂಡಿದರಷ್ಟೇ ಆರೋಗ್ಯಕರ ಸಮಾಜ ಸೃಷ್ಟಿಯಾಗಬಲ್ಲದು.

ಹೆಣ್ಣನ್ನು ದೇವತೆ ಎಂದು ಪೂಜಿಸುವ ಸಂಸ್ಕೃತಿ ನಮ್ಮದು ಎಂದು ಹೇಳಿಕೊಳ್ಳುತ್ತೇವೆ. ಪೂಜಿಸದಿದ್ದರೂ ಚಿಂತೆಯಿಲ್ಲ, ಸಹಜೀವಿಯನ್ನಾಗಿ ಗೌರವ ನೀಡುವುದು ಸಾಧ್ಯವಾದರೆ ಅದು ಹೆಣ್ಣಿಗೆ, ಸಮಾಜಕ್ಕೆ, ನಮ್ಮ ಬದುಕಿಗೆ ಸಲ್ಲಿಸುವ ಬಹುದೊಡ್ಡ ಗೌರವವಾಗುತ್ತದೆ.

ಪ್ರತಿಕ್ರಿಯಿಸಿ: ರಚನಾತ್ಮಕ ಟೀಕೆ–ಟಿಪ್ಪಣಿಗಳಿಗೆ ಸ್ವಾಗತ. ಪ್ರತಿಕ್ರಿಯೆ ಚುಟುಕು, ಚುರುಕಾಗಿರಲಿ. ಇ–ಮೇಲ್: feedback@sudha.co.in

(ಈ ಲೇಖನವು ಸುಧಾ ವಾರಪತ್ರಿಕೆಯ 6ನೇ ಫೆಬ್ರುವರಿ 2020ರ ಸಂಚಿಕೆಯಲ್ಲಿ ಪ್ರಕಟವಾಗಿತ್ತು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT