ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇತಿಹಾಸದ ಕಾರ್ಕೋಟಕ; ಕಲಿಸುವುದೇ ವಿವೇಕದ ಪಾಠ?

Last Updated 23 ಏಪ್ರಿಲ್ 2020, 15:11 IST
ಅಕ್ಷರ ಗಾತ್ರ
ADVERTISEMENT
""
""
""
""
""

1665–66ರಲ್ಲಿ ಇಂಗ್ಲೆಂಡ್‌ನಲ್ಲಿ ಲಕ್ಷಾಂತರ ಜನರನ್ನು ಬಲಿತೆಗೆದುಕೊಂಡಿದ್ದ ಪ್ಲೇಗ್ ಸಾಂಕ್ರಾಮಿಕ ರೋಗದ ಕರಾಳ ನೆನಪುಗಳು, ‘ದಿ ಗ್ರೇಟ್ ಪ್ಲೇಗ್’ ಇತಿಹಾಸದ ಪುಟಗಳಲ್ಲಿ ದಾಖಲಾಗಿದೆ. ಇಂಗ್ಲೆಂಡ್‌ನ ಕಾಕ್‌ ಆ್ಯಂಡ್ ಕೀ ಅಲೇ ಎಂಬ ಕೆಳವರ್ಗದ ಜನರು ವಾಸಿಸುವ ಗಲ್ಲಿಯೊಂದರಲ್ಲಿ ಪ್ಲೇಗ್‌ನ ಮೃತ್ಯುಚುಂಬನದಿಂದ ಆದ ಅನಾಹುತವನ್ನು ಕಟ್ಟಿಕೊಡುತ್ತಲೇ ಇಡೀ ದೇಶದ ಅಂದಿನ ದುರಂತವನ್ನು ಧ್ವನಿಸುವುದು ‘ದಿ ಗ್ರೇಟ್ ಪ್ಲೇಗ್’ ಎಂಬ ಹೆಸರಿನ ಸಾಕ್ಷ್ಯಚಿತ್ರದ ವಿಶೇಷ. ಈ ಸಾಕ್ಷ್ಯಚಿತ್ರ ನಮಗೆ ಇತಿಹಾಸದ ಒಂದು ಕರಾಳ ಕಾಲಘಟ್ಟದ ನೆರಳನ್ನು ದರ್ಶಿಸುತ್ತದೆ; ಆದರೆ ನಾವು ಈಗ ಎದುರಾಗಿ ನಿಂತಿರುವ ಕೊರೊನಾ ಎಂಬ ವಿಷಕನ್ಯೆಯನ್ನು ಎದುರಿಸುವ ವಿವೇಕವನ್ನೂ ಮೂಡಿಸಬಲ್ಲದೇ? ಈ ಲೇಖನವು ಸುಧಾ ವಾರಪತ್ರಿಕೆಯ ಏಪ್ರಿಲ್ 23, 2020ರ ಸಂಚಿಕೆಯಲ್ಲಿ ಪ್ರಕಟವಾಗಿದೆ.

---

1665ನೇ ವರ್ಷದ ಅಂತ್ಯಭಾಗ. ಲಂಡನ್‌ ನಗರ ತನ್ನ ಹಿಂದಿನ ಜೀವಕಳೆಯನ್ನು ಮರುಕಳಿಸಿಕೊಳ್ಳಲು ಸಜ್ಜುಗೊಳ್ಳುತ್ತಿತ್ತು. ಎರಡು ವರ್ಷಗಳ ಹಿಂದೆ ಪಟ್ಟಣ ಬಿಟ್ಟು ಓಡಿಹೋದ ಸಿರಿವಂತರೆಲ್ಲ, ಹೊಡೆದಾಟ ಮುಗಿದ ಮೇಲೆ ನೆಲಕ್ಕೆ ಚೆಲ್ಲಿದ ಚಿಲ್ಲರೆ ಆಯ್ದುಕೊಳ್ಳಲು ಬರುವವರ ಹಾಗೆ ಮೆಲ್ಲಗೇ ವಾಪಸ್ ಬರಲು ಶುರುಮಾಡಿದ್ದರು.

ಆದರೆ ಲಂಡನ್‌ನ ಥೇಮ್ಸ್ ನದಿ ದಡದಲ್ಲಿನ ಕೊಳೆಗೇರಿಯಂಥ ಬೀದಿ ‘ಕಾಕ್ ಆ್ಯಂಡ್ ಕೀ ಅಲೇ’ ಮಾತ್ರ ಸ್ಮಶಾನಸದೃಶವಾಗಿತ್ತು. ಆ ಬೀದಿಯಲ್ಲಿನ ಜೋಸೆಫ್ ಫೆನ್ನಿಯ ಮನೆ ಹುಡುಕಿಕೊಂಡು ಬಂದ ಚರ್ಚ್‌ನ ವಾರ್ಡನ್ ಹೆನ್ರಿ ಒಂದು ಕ್ಷಣ ಬೆಚ್ಚಿಬಿದ್ದ. ಬಾಗಿಲು ತೆಗೆದು ಕೋಳಿಗೂಡಿನಂಥ ಮನೆಯ ಒಳಗಡಿಯಿಟ್ಟವನಿಗೆ ಕಾಣಿಸಿದ್ದು ಜೀವಕಳೆಯನ್ನು ಕಳೆದುಕೊಂಡು ನಿಶ್ಚೇತಳಾಗಿ ಕುಳಿತಿದ್ದ ಎಲಿಜಬೆತ್. ಗಂಡ ಹಾಗೂ ಮೂವರು ಗಂಡುಮಕ್ಕಳನ್ನು ಕಳೆದುಕೊಂಡು ಪೂರ್ತಿ ಅನಾಥಳಾಗಿ ಕೂತಿದ್ದಳವಳು. ಹೆನ್ರಿ ಅಂಜಿಕೆಯಿಂದಲೇ ಚರ್ಚ್‌ ಪರವಾಗಿ ಮೂರು ನಾಣ್ಯಗಳನ್ನು ಅವಳೆದುರಿನ ಹಲಗೆಯ ಮೇಲೆ ಇಟ್ಟ. ಎಲಿಜಬೆತ್ ಒಮ್ಮೆ ಆ ನಾಣ್ಯಗಳನ್ನೂ ಒಮ್ಮೆ ಹೆನ್ರಿಯ ಮುಖವನ್ನೂ ದಿಟ್ಟಿಸಿದಳು. ಅವಳ ತುಟಿಗಳಲ್ಲಿ ಒಂದು ನಗು ಮೂಡಿತು. ಆ ನಗುವಿನಲ್ಲಿ ಎಂಥ ಕಲ್ಲಿನೆದೆಯನ್ನೂ ಕತ್ತರಿಸಬಲ್ಲಷ್ಟು ಹರಿತ ವಿಷಾದವಿತ್ತು. ಅವಳ ಕಣ್ಣುಗಳಲ್ಲಿ ಹೆನ್ರಿಗೆ, ಭೀಕರವಾಗಿ ಮಣ್ಣುಗೂಡಿದ ಆ ಬೀದಿಯ ಅಮಾಯಕ ಜೀವಗಳ ನೋವಿನ ನರಕ ಉರಿಯುತ್ತಿರುವ ಹಾಗೆ ಭಾಸವಾಯ್ತು. ಮತ್ತಲ್ಲಿ ನಿಲ್ಲಲಾಗದೇ ಹೊರಗೆ ಬಂದ ಹೆನ್ರಿಯ ಮನಸ್ಸಿನಲ್ಲಿ ಕೆಲವು ತಿಂಗಳುಗಳಲ್ಲಿ ತಾನು ನೋಡಿದ ಭೀಕರ ಮಾರಣಹೋಮದ ಛಿದ್ರ ಚಿತ್ರಗಳು ಮೂಡಲಾರಂಭಿಸಿದ್ದವು.

ಪ್ಲೇಗ್!

ಜಗತ್ತು ಕಂಡ ಅತ್ಯಂತ ಭೀಕರ, ವಿಕಾರ, ಅನಾಹುತಕಾರಿ ಸಾಂಕ್ರಾಮಿಕ ರೋಗಗಳಲ್ಲಿ ಪ್ಲೇಗ್‌ಗೆ ಎಲ್ಲಕ್ಕಿಂತ ಮೊದಲ ಸ್ಥಾನ. 1665 ಮತ್ತು 1666ರಲ್ಲಿ ಇಂಗ್ಲೆಂಡ್‌ ದೇಶದ ನಡುಮುರಿದು ನೆಲಕ್ಕೆ ಕೆಡವಿದ ಈ ಸಾಂಕ್ರಾಮಿಕ ಮಾರಿಯನ್ನು ಈಗಲೂ ‘ಗ್ರೇಟ್ ಪ್ಲೇಗ್’ ಎಂದೇ ನೆನಪಿಸಿಕೊಂಡು ಬೆಚ್ಚುವವರಿದ್ದಾರೆ. ಆ ರೋಗಕ್ಕೆ ಬಲಿಯಾದವರ ಸಂಖ್ಯೆ ಎಷ್ಟು ಎಂಬುದಕ್ಕೆ ಇಂದಿಗೂ ನಿಖರ ದಾಖಲೆಗಳಿಲ್ಲ. ಒಂದು ಅಂದಾಜಿನ ಪ್ರಕಾರ ಇಂಗ್ಲೆಂಡಿನ ಸುಮಾರು ಎರಡು ಲಕ್ಷ ಜನರು ಪ್ಲೇಗ್‌ ಮಾರಿಗೆ ಬಲಿಯಾಗಿದ್ದಾರೆ; ಅದೂ ಕೇವಲ ಹದಿನೆಂಟು ತಿಂಗಳ ಅವಧಿಯಲ್ಲಿ!

ಜಗತ್ತನ್ನೇ ತತ್ತರಿಸುವ ಹಾಗೆ ಮಾಡಿದ ಪ್ಲೇಗ್ ಎಂಬ ಆ ಮಹಾಮಾರಿ ಸೃಜನಶೀಲ ಲೇಖಕರನ್ನೂ ಬಹುವಾಗಿ ಕಾಡಿದೆ. ಜಗತ್ತಿನ ಶ್ರೇಷ್ಠ ಲೇಖಕರಲ್ಲಿ ಒಬ್ಬನಾದ ಆಲ್ಬರ್ಟು ಕಮೂನ ‘ದಿ ಪ್ಲೇಗ್’ ಎನ್ನುವ ಕಾದಂಬರಿ ಅವುಗಳಲ್ಲಿ ಪ್ರಮುಖವಾದದ್ದು. ಪ್ಲೇಗ್ ರೋಗದ ಕ್ರೌರ್ಯವನ್ನು ಹೇಳುತ್ತಲೇ ಮನುಷ್ಯನ ದುರಾಸೆ, ಸಣ್ಣತನಗಳು, ಬೇಜವಾಬ್ದಾರಿ, ಮಹಾಸಂಕಷ್ಟ ಎದುರಾದಾಗ ಅವನು ಸಾಮೂಹಿಕವಾಗಿ ವರ್ತಿಸುವ ರೀತಿ ಎಲ್ಲದರ ಬಗ್ಗೆಯೂ ಆಳವಾಗಿ ಚಿತ್ರಿಸುವ ಈ ಕಾದಂಬರಿ ಇಂದಿಗೂ ಅಸಂಖ್ಯ ಸಾಹಿತ್ಯಪ್ರಿಯರಿಗೆ ಸಾರ್ವಕಾಲಿಕ ನೆಚ್ಚಿನ ಕೃತಿಯಾಗಿಯೇ ಉಳಿದಿದೆ.

ದೃಶ್ಯಮಾಧ್ಯಮದಲ್ಲಿಯೂ ಈ ಭಯಂಕರ ಸಾಂಕ್ರಾಮಿಕದ ರೌದ್ರಾವತಾರವನ್ನು ಮರುಸೃಷ್ಟಿಸುವ ಪ್ರಯತ್ನ ನಡೆದಿದೆ. ಹಲವು ಸಿನಿಮಾಗಳ ಮೂಲಕ, ಸಾಕ್ಷ್ಯಚಿತ್ರಗಳ ಮೂಲಕ ಅಂದಿನ ಕಾಲದ ಪರಿಸ್ಥಿತಿಯನ್ನು ಜಗತ್ತಿನ ಮುಂದೆ ತೆರೆದಿಡಲು ಯತ್ನಿಸಲಾಗಿದೆ. ಅವುಗಳಲ್ಲಿ ಬಹುಮುಖ್ಯವಾಗಿರುವುದು ‘ದಿ ಗ್ರೇಟ್ ಪ್ಲೇಗ್’ ಎಂಬ ಸಾಕ್ಷ್ಯಚಿತ್ರ.

ಇಂಗ್ಲೆಂಡಿನಲ್ಲಿ ಪ್ಲೇಗ್‌ ಉಲ್ಬಣಗೊಂಡ ಕಾಲಾವಧಿಯಲ್ಲಿ ಅಲ್ಲಿಯೇ ಇದ್ದು ಅಲ್ಲಿನ ದುರಂತಗಳಿಗೆಲ್ಲ ಸಾಕ್ಷಿಯಾಗಿದ್ದ ಸ್ಯಾಮ್ಯುಯೆಲ್ ಪೀಪ್ಸ್ ಎಂಬ ಗಣ್ಯ ವ್ಯಕ್ತಿಯೊಬ್ಬ ತಾನು ಪ್ರತಿದಿನ ಕಂಡಿದ್ದನ್ನು ಡೈರಿಯಲ್ಲಿ ಬರೆದಿಡುತ್ತಿದ್ದ. ಅದು ಅಲ್ಲಿನ ಸಾಮಾನ್ಯ ಜನರು ಪ್ಲೇಗ್ ಎಂಬ ಮಾರಿಯಿಂದ ಹೇಗೆಲ್ಲ ತತ್ತರಿಸಿಹೋದರು ಎಂಬುದನ್ನು ಜಗತ್ತಿಗೆ ತೋರಿಸುವ ಪ್ರಮುಖ ದಾಖಲೆಯಾಗಿತ್ತು. ಆದರೆ ಈ ದಾಖಲೆಯನ್ನು ನೂರಾರು ವರ್ಷಗಳ ಕಾಲ ಇಂಗ್ಲೆಂಡಿನ ಚರ್ಚ್ ಹೊರಜಗತ್ತಿಗೆ ಕೊಡದೆ ಬಚ್ಚಿಟ್ಟುಕೊಂಡಿತ್ತು. ಎಷ್ಟೋ ವರ್ಷಗಳ ನಂತರ ಸಿಕ್ಕ ಈ ದಾಖಲೆಗಳು ಮತ್ತು ಆಗಿನ ಕಾಲಕ್ಕೆ ಪ್ರತಿ ವಾರ ಸ್ಥಳೀಯ ಆಡಳಿತ ಪ್ರಕಟಿಸುತ್ತಿದ್ದ ಮರಣಪತ್ರಗಳನ್ನು ಆಧಾರವಾಗಿ ಇಟ್ಟುಕೊಂಡು, ‘ಕಾಕ್ ಆ್ಯಂಡ್ ಕೀ ಅಲೇ’ ಎಂಬ ವಲಸಿಗರ ಬೀದಿಯ ನಿವಾಸಿಗಳು ಪ್ಲೇಗ್‌ನಿಂದ ಅನುಭವಿಸಿದ ಸಂಕಷ್ಟ ಮತ್ತು ಜೀವನಷ್ಟಗಳನ್ನು ಕಟ್ಟಿಕೊಡುವ ಪ್ರಯತ್ನವನ್ನು ‘ದಿ ಗ್ರೇಟ್ ಪ್ಲೇಗ್’ ಡಾಕ್ಯುಮೆಂಟರಿ ಮಾಡುತ್ತದೆ.

ವಲಸಿಗರೇ ಹೆಚ್ಚಾಗಿ ತುಂಬಿಕೊಂಡಿದ್ದ ‘ಕಾಕ್ ಆ್ಯಂಡ್ ಕೀ ಅಲೇ’ ಚಿತ್ರದಲ್ಲಿ ಕಮ್ಮಾರ, ಯಂತ್ರ ರಿಪೇರಿ ಮಾಡುವವರು, ಸಮಾಧಿಗೆ ಹೊಂಡ ತೋಡುವವರು, ಪಬ್‌ ನಡೆಸುತ್ತಿರುವವರು, ಸೆಕ್ಯೂರಿಟಿ ಹೀಗೆ ತಳ ಸಮುದಾಯದ ಜನರೇ ಹೆಚ್ಚಾಗಿ ವಾಸಿಸುತ್ತಿದ್ದುದು. ಸೇಂಟ್ ಡನ್‌ಸ್ಟನ್‌ ಚರ್ಚ್‌ನ ವಾರ್ಡನ್ ಹೆನ್ರಿ ಈ ಬೀದಿಯ ‘ಬಡವರ ಪರಿಹಾರ ನಿಧಿ’ಯ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದವನು. ಚರ್ಚ್‌ನ ಸಿಬ್ಬಂದಿ ಮತ್ತು ಬೀದಿಯ ಕಾರ್ಮಿಕರಿಗೆ ಯಾವ ಕಾರಣಕ್ಕೆ ಎಷ್ಟು ಹಣ ಕೊಟ್ಟಿದ್ದೇನೆ ಎಂಬುದನ್ನೆಲ್ಲ ಅವನು ವಿವರವಾಗಿ ಬರೆದಿಟ್ಟಿದ್ದಾನೆ. ಆ ದಾಖಲೆಯೂ ಅಂದಿನ ಸಾಮಾಜಿಕ ವ್ಯವಸ್ಥೆ, ವರ್ಗ ವ್ಯವಸ್ಥೆಯನ್ನು ಅರಿತುಕೊಳ್ಳಲು ಬಹುಮುಖ್ಯ ದಾಖಲೆಯಾಗಿದೆ.

1665ರ ಮಧ್ಯದ ಹೊತ್ತಿಗೆ ಇಂಗ್ಲೆಂಡಿನ ಬೇರೆ ಬೇರೆ ಪ್ರದೇಶಗಳಿಂದ ಪ್ಲೇಗ್‌ನಿಂದ ಜನರು ಸಾಯುತ್ತಿರುವುದು ವರದಿಯಾಗುತ್ತಿತ್ತು. ಆಗ ರೋಗ ಯಾವುದರಿಂದ ಹೇಗೆ ಹರಡುತ್ತದೆ ಎಂಬ ಅರಿವೂ ಇರಲಿಲ್ಲ. ಅದು ಪ್ರಾಣಿಗಳಿಂದ ಹರಡಬಹುದು ಎಂಬ ಕಾರಣಕ್ಕೆ ಲಾರ್ಡ್ ಮೇಯರ್ ನಾಯಿ ಮತ್ತು ಬೆಕ್ಕುಗಳನ್ನು ಸಾಮೂಹಿಕವಾಗಿ ಸಾಯಿಸುವುದಕ್ಕೆ ಆದೇಶ ನೀಡಿದ. ಇದರಿಂದ ಆ ಕಾಲಕ್ಕೆ ಇಂಗ್ಲೆಂಡ್‌ನಲ್ಲಿ ಸುಮಾರು ನಲ್ವತ್ತು ಸಾವಿರ ಸಾಕುಪ್ರಾಣಿಗಳನ್ನು ಸಾಯಿಸಲಾಯಿತು ಎನ್ನುವ ಅಂದಾಜಿದೆ. ಶ್ರೀಮಂತರು ನಗರಗಳನ್ನು ಬಿಟ್ಟು ಸುರಕ್ಷಿತ ಜಾಗಕ್ಕೆ ವಲಸೆ ಹೋಗಲಾರಂಭಿಸಿದ್ದರು.

ಇಷ್ಟೆಲ್ಲ ನಡೆಯುತ್ತಿದ್ದರೂ ಇನ್ನೂ ಕಾಕ್ ಆ್ಯಂಡ್ ಕೀ ಅಲೇ ಬೀದಿಯಲ್ಲಿ ಪ್ಲೇಗ್ ಲಕ್ಷಣಗಳು ಗೋಚರಿಸಿರಲಿಲ್ಲ. 1665ರ ಜೂನ್ 15ರಂದು ಆ ಬೀದಿಯಲ್ಲಿ ಮೊದಲ ಪ್ಲೇಗ್ ಪ್ರಕರಣ ಪತ್ತೆಯಾಯಿತು. ಅದಕ್ಕೆ ಬಲಿಯಾಗಿದ್ದು ಬಡ ವಿಧವೆ ರೆಬೆಕಾ ಆ್ಯಂಡ್ರೂಸ್. ಐದಾರು ವರ್ಷದ ತನ್ನ ಮಗನೊಂದಿಗೆ ವಾಸಿಸುತ್ತಿದ್ದ ಅವಳಿಗೆ ಪ್ಲೇಗ್ ಇರುವುದು ಖಚಿತವಾಗುತ್ತಿದ್ದಂತೆಯೇ ಮಗನೊಟ್ಟಿಗೇ ಅವಳನ್ನು ಮನೆಯೊಳಗೆ ಕೂಡಿಹಾಕಿ ಹೊರಗಿನಿಂದ ಬೀಗ ಹಾಕಲಾಯಿತು. ಊಟ ಮತ್ತು ಪ್ರಾಥಮಿಕ ಆರೋಗ್ಯ ಉಪಚಾರವಷ್ಟೇ ಅವಳಿಗೆ ಲಭ್ಯವಾಗುತ್ತಿದ್ದದ್ದು. ಅವಳು ತಪ್ಪಿಸಿಕೊಂಡು ಹೋಗದ ಹಾಗೆ ಕಾವಲು ಕಾಯಲು ಕಾವಲುಗಾರನನನ್ನೂ ನೇಮಿಸಲಾಯಿತು. ಜುಲೈ 3ರಂದು ರೆಬೆಕಾ ಪ್ಲೇಗ್‌ನಿಂದ ತೀರಿಕೊಂಡಳು. ಆದರೆ ಅವಳ ಮಗ ಇನ್ನೂ ಜೀವಂತವಾಗಿದ್ದ. ಅವನೊಬ್ಬನನ್ನೇ ಮನೆಯಲ್ಲಿ ಕೂಡಿಹಾಕಲಾಯಿತು. ತಾಯಿ ತೀರಿಕೊಂಡ ಮರುದಿನ ಮಗನೂ ಪ್ಲೇಗ್ ಮಾರಿಗೆ ಬಲಿಯಾದ.

ಇದು ಕಾಕ್ ಆ್ಯಂಡ್ ಕೀ ಅಲೇ ಬೀದಿಯ ಕರಾಳ ದಿನಗಳ ಮೊದಲ ಕರೆಗಂಟೆಯಾಗಿತ್ತಷ್ಟೆ. ಅಲ್ಲಿಂದ ನಿಧಾನಕ್ಕೆ ಒಬ್ಬರಿಂದ ಇನ್ನೊಬ್ಬರಿಗೆ ರೋಗ ಹಬ್ಬುತ್ತಲೇ ಹೋಯಿತು. ಜೂನ್ 28ರಂದು, ಸಮಾಧಿಗೆ ಹೊಂಡ ತೆಗೆಯುವ ವಿಲಿಯಮ್ ಪೆನ್ನಿಯ ಎಡಕಂಕುಳಲ್ಲಿ ಗಡ್ಡೆ ಕಾಣಿಸಿಕೊಂಡಿತು. ಹೆಂಡತಿ, ಇಬ್ಬರು ಮಕ್ಕಳೊಟ್ಟಿಗೆ ಅವನನ್ನೂ ಮನೆಯೊಳಗೆ ಕೂಡಿಹಾಕಿ ಹೊರಗಿನಿಂದ ಬೀಗ ಜಡಿಯಲಾಯಿತು. ಆದರೆ ಅವನ ಹಿರಿಮಗ ಮನೆಯಿಂದ ತಪ್ಪಿಸಿಕೊಂಡು ಹೊರಗಿದ್ದ. ಎಷ್ಟೋ ದಿನಗಳ ಕಾಲ ಅಪ್ಪನ ಕೆಲಸವನ್ನು ನಿರ್ವಹಿಸಿ, ಸಮಾಧಿಗೆ ಗುಂಡಿ ತೋಡುತ್ತ ಕಳೆದ. ತನ್ನ ಇಬ್ಬರು ತಮ್ಮಂದಿರು, ತಂದೆ, ಆಪ್ತರು, ಒಡನಾಡಿಗಳೆಲ್ಲರ ಸಾಮೂಹಿಕ ಮಾರಣಹೋಮಕ್ಕೆ ಸಾಕ್ಷಿಯಾದ. ಕೊನೆಗೆ ತಾನೂ ಪ್ಲೇಗ್ ರೋಗಕ್ಕೆ ಬಲಿಯಾಗಿ ಬೇರೆಯವರಿಗೆ ಎಂದು ತೋಡಿದ ಹೊಂಡದಲ್ಲಿ ತಾನೂ ಸಾಮೂಹಿಕವಾಗಿ ಸಮಾಧಿಯಾದ.

ಆ ಬೀದಿಯ ಇಪ್ಪತ್ತು ಮನೆಗಳಲ್ಲಿ 12 ಮನೆಗಳಿಗೆ ಪ್ಲೇಗ್ ಅಮರಿಕೊಂಡಿತ್ತು. ಆ ಹನ್ನೆರಡು ಮನೆಗಳಲ್ಲಿ ಹನ್ನೊಂದು ಮನೆಗಳ ಒಳಗೆ ಕುಟುಂಬದವರನ್ನು ಸೇರಿಸಿ ಹೊರಗಿನಿಂದ ಬೀಗ ಜಡಿಯಲಾಗಿತ್ತು. ಆ ಬೀದಿಯ ಅರ್ಧಕ್ಕಿಂತ ಹೆಚ್ಚು ಜನರನ್ನು ಪ್ಲೇಗ್ ಮಾರಿ ನುಂಗಿ ನೊಣೆದಿತ್ತು. ಅದು ಮರಣಮೃದಂಗ ಬಾರಿಸಿ ಕುಣಿದು ದಣಿದು ತೇಗಿ ಎದ್ದು ಹೋದಾಗ ಅಲ್ಲಿ ಉಳಿದಿದ್ದು ಬರೀ 36 ಜನರು. ಎಷ್ಟೋ ಕುಟುಂಬಗಳೇ ನಾಶವಾಗಿದ್ದವು. ಕೆಲವೊಂದು ಮನೆಗಳಲ್ಲಿ ಹಿರಿಯರು ಮಕ್ಕಳನ್ನು ಕಳೆದುಕೊಂಡು ಜೀವಚ್ಛವವಾಗಿದ್ದರು. ಎಷ್ಟೋ ಮಕ್ಕಳಿಗೆ ತಮ್ಮ ತಂದೆ ತಾಯಿಯ ಶವಸಂಸ್ಕಾರ ಮಾಡುವ ಅವಕಾಶವೂ ಸಿಗಲಿಲ್ಲ. ಗಂಡ, ಹೆಂಡತಿ, ಪ್ರೇಮಿಗಳು, ವೃದ್ಧರು, ಸಂಬಂಧಿಗಳು, ಸ್ನೇಹಿತರು – ಹೀಗೆ ಕಣ್ಣೆದುರೇ ತಮ್ಮವರ ಅರೆಕೊಳೆತ ಶವಗಳನ್ನು ಎಳೆದುಕೊಂಡು ಹೋಗುವುದನ್ನು ನೋಡಿ ಅವರ ಮನಸ್ಸು ನಿಶ್ಚೇಷ್ಟಿತವಾಗಿಬಿಟ್ಟಿತ್ತು.

‘ದಿ ಗ್ರೇಟ್ ಪ್ಲೇಗ್’ ಸಾಕ್ಷ್ಯಚಿತ್ರ ಕಾಕ್ ಆ್ಯಂಡ್ ಕೀ ಅಲೇ ಬೀದಿಯ ಮನೆಯಮನೆಯಲ್ಲಿಯೂ ಕೇಳುತ್ತಿದ್ದ ನೋವಿನ ಆರ್ತನಾದವನ್ನು ನಿರೂಪಿಸುತ್ತಲೇ ಆಗಿನ ಕಾಲದ ಇಂಗ್ಲೆಂಡ್ ದೇಶದ ಪರಿಸ್ಥಿತಿಯನ್ನೂ ಕಟ್ಟಿಕೊಡುತ್ತ ಹೋಗುತ್ತದೆ. ಅಮೆರಿಕ–ಇಂಗ್ಲೆಂಡ್ ದೇಶದ ಇತಿಹಾಸತಜ್ಞರ ವಿವರಣೆ, ಸನ್ನಿವೇಶದ ಸಿನಿಮೀಯ ಮರುಸೃಷ್ಟಿಯ ಪ್ರಯತ್ನದ ಮೂಲಕ ಅಂದಿನ ಬಡ ಜನರ ಬದುಕಿನ ರೀತಿ, ಪ್ಲೇಗ್ ಮಾರಿ ಅವರನ್ನು ಹಿಂಡಿ ಹಿಂಸಿಸಿದ ಪರಿ, ಆಡಳಿತವರ್ಗದ ನಿರ್ಲಕ್ಷ್ಯ, ನಿಷ್ಕರುಣೆ ಎಲ್ಲವನ್ನೂ ಬಹುಸೂಕ್ಷ್ಮವಾಗಿ ಕಟ್ಟಿಕೊಡುತ್ತದೆ.

45 ವರ್ಷಗಳ ಹಿಂದೆ ಇಂಗ್ಲೆಂಡನ್ನು ಆವರಿಸಿದ ‘ಪ್ಲೇಗ್‌’ ಕರಾಳ ನೆನಪು ಬಹುತೇಕರ ಮನಸ್ಸಿಂದ ಮರೆಯಾಗಿಬಿಟ್ಟಿದೆ. ಆದರೆ ಅದಕ್ಕಿಂತ ಭಯಾನಕವಾಗಬಲ್ಲ ಕೊರೊನಾ ಹೊಡೆತಕ್ಕೆ ಜಗತ್ತೇ ತತ್ತರಿಸುತ್ತಿದೆ. ಮತ್ತೀಗ ಅದರ ಅಟ್ಟಹಾಸಕ್ಕೆ ಬಹುಪಾಲು ಬಲಿಯಾಗುತ್ತಿರುವುದು ಸಾಮಾನ್ಯ ಜನರೇ. ರೋಗವನ್ನು ಹಬ್ಬದಂತೆ ತಡೆಯಲು, ತಮ್ಮ ಪ್ರಾಣದ ಹಂಗು ತೊರೆದು ರೋಗಿಗಳ ಸುಶ್ರೂಷೆಗೆ ನಿಂತಿರುವ ವೈದ್ಯಕೀಯ ಸಿಬ್ಬಂದಿ ಅಗತ್ಯ ವೈದ್ಯಕೀಯ ಸಲಕರಣೆಗಳು ಮತ್ತು ಸುರಕ್ಷತಾ ಸಾಧನಗಳ ಕೊರತೆಯಿಂದ ಬಳಲುತ್ತಿರುವುದ ಸನ್ನಿವೇಶಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ಇತಿಹಾಸದ ದುರಂತಗಳು ಮನುಷ್ಯನಲ್ಲಿ ವಿವೇಕ ಹುಟ್ಟಿಸುವುದಿಲ್ಲ; ಮನುಷ್ಯಕುಲದ ವಿಪತ್ತುಗಳು ಹೊಸ ಹೊಸ ವೇಷ ತೊಟ್ಟು ಬಂದು ಜನಸಾಮಾನ್ಯರ ಬದುಕಿಗೆ ತಪರಾಕಿ ಕೊಟ್ಟು ಹೋಗುವುದು ತಪ್ಪುವುದಿಲ್ಲ. ಮುಂದೊಂದು ದಿನ ಕೊರೊನಾ ದುರಂತಕ್ಕೆ ಸಂಬಂಧಿಸಿದಂತೆ ಸೃಜನಶೀಲನೊಬ್ಬ ‘ದಿ ಗ್ರೇಟ್‌ ಕೊರೊನಾ’ ಎನ್ನುವ ಸಾಕ್ಷ್ಯಚಿತ್ರ ರೂಪಿಸಿದರೆ ಅದರಲ್ಲಿ ಅಚ್ಚರಿಯೇನೂ ಇಲ್ಲ. ಆದರೆ, ಆ ಚಿತ್ರ ’ದಿ ಗ್ರೇಟ್‌ ಪ್ಲೇಗ್‌’ನಷ್ಟು ವಸ್ತುನಿಷ್ಠವಾಗಿರುತ್ತದೆಂದು ನಿರೀಕ್ಷಿಸುವುದು ಕಷ್ಟ.

ಯೂಟ್ಯೂಬ್‌ನಲ್ಲಿ‘ದಿ ಗ್ರೇಟ್ ಪ್ಲೇಗ್’

2017 ಏಪ್ರಿಲ್ 1ರಂದು ‘ಟೈಮ್‌ಲೈನ್’ ಎಂಬ ಯೂಟ್ಯೂಬ್‌ ಚಾನಲ್‌ನಲ್ಲಿ ಬಿಡುಗಡೆಯಾದ ‘ದಿ ಗ್ರೇಟ್ ಪ್ಲೇಗ್’ ಎಂಬ ಸಾಕ್ಷ್ಯಚಿತ್ರವನ್ನು ಇದುವರೆಗೆ 38 ಲಕ್ಷಕ್ಕೂ ಅಧಿಕ ಜನರು ವೀಕ್ಷಿಸಿದ್ದಾರೆ. ಈ ಸಾಕ್ಷ್ಯಚಿತ್ರವನ್ನು ವೀಕ್ಷಿಸಲು https://www.youtube.com/watch?v=HPe6BgzHWY0 ಕೊಂಡಿ ಬಳಸಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT