ರಾಡಾರ್ ಆಧಾರಿತ ಸ್ಲೀಪ್ ಟ್ರ್ಯಾಕರ್ ಅಭಿವೃದ್ಧಿಪಡಿಸುತ್ತಿದೆ ಅಮೆಜಾನ್

ಸ್ಮಾರ್ಟ್ ಯುಗದಲ್ಲಿ ಸಾಮಾನ್ಯವಾಗಿ ಈಗ ಬಹುತೇಕರು ಫಿಟ್ನೆಸ್ ಬ್ಯಾಂಡ್, ಫಿಟ್ನೆಸ್ ಟ್ರ್ಯಾಕರ್, ಸ್ಮಾರ್ಟ್ ವಾಚ್ ಬಳಸುತ್ತಾರೆ. ಆರೋಗ್ಯದ ಕಾಳಜಿ ಜತೆಗೆ ಫ್ಯಾಶನ್ ಟ್ರೆಂಡ್ ಆಗಿಯೂ ಜನರು ಅಧಿಕ ಸಂಖ್ಯೆಯಲ್ಲಿ ಸ್ಮಾರ್ಟ್ ಗ್ಯಾಜೆಟ್ ಬಳಸುತ್ತಾರೆ. ಈ ಸಾಲಿಗೆ ಅಮೆಜಾನ್ ಹೊಸ ಉತ್ಪನ್ನವೊಂದನ್ನು ಶೀಘ್ರದಲ್ಲಿ ಪರಿಚಯಿಸುತ್ತಿದೆ. ಇದರ ವಿಶೇಷವೆಂದರೆ, ನೀವು ಈ ಗ್ಯಾಜೆಟ್ ಅನ್ನು ಧರಿಸಬೇಕಿಲ್ಲ. ಅದರ ಬದಲು ನಿಮ್ಮ ಪಕ್ಕ ಇರಿಸಿಕೊಂಡರೆ ಸಾಕಾಗುತ್ತದೆ. ನಿಮ್ಮ ನಿದ್ರೆ ಹೇಗಿತ್ತು ಮತ್ತು ದೈಹಿಕ ಆರೋಗ್ಯ ಹೇಗಿದೆ ಎಂಬ ವರದಿಯನ್ನು ಅಮೆಜಾನ್ ನೀಡುತ್ತದೆ.
ರಾಡಾರ್ ಆಧಾರಿತ ಸ್ಲೀಪ್ ಟ್ರ್ಯಾಕರ್
ಅಮೆಜಾನ್, ಬ್ರಹ್ಮ್ಸ್ ಹೆಸರಿನ ಯೋಜನೆಯೊಂದರಲ್ಲಿ ರಾಡಾರ್ ಆಧಾರಿತ ಟೆಕ್ನಾಲಜಿ ಬಳಸಿಕೊಂಡು ನಿದ್ರೆಯ ಪ್ರಮಾಣ ಮತ್ತು ದೈಹಿಕ ಸ್ಥಿತಿಗತಿಯನ್ನು ಅಳೆಯಲಿದೆ ಎಂದು 'ಬ್ಯುಸಿನೆಸ್ ಇನ್ ಸೈಡರ್' ವರದಿ ಮಾಡಿದೆ.
ಹೇಗೆ ಕೆಲಸ ಮಾಡುತ್ತದೆ?
ಈ ಉಪಕರಣವನ್ನು ನೀವು ಧರಿಸುವ ಅಗತ್ಯವಿಲ್ಲ. ಅದರ ಬದಲಿಗೆ, ಬೆಡ್ ಬಳಿ ಇರಿಸಿದರೆ ಸಾಕಾಗುತ್ತದೆ. ಅದರಲ್ಲಿನ ಮಿಲಿಮೀಟರ್ ವೇವ್ ರಾಡಾರ್ ಸೆನ್ಸಾರ್ ನಿಮ್ಮ ನಿದ್ರೆ, ಉಸಿರಾಟದಲ್ಲಿನ ವ್ಯತ್ಯಾಸ ಮತ್ತು ಇತರ ದೈಹಿಕ ಚಟುವಟಿಕೆಯಲ್ಲಿನ ಏರುಪೇರುಗಳನ್ನು ದಾಖಲಿಸಬಲ್ಲದು. ಅಷ್ಟೇ ಅಲ್ಲದೆ, ನೀವು ತೊಂದರೆಯಲ್ಲಿದ್ದೀರಿ ಎಂದು ಗೊತ್ತಾದರೆ ತಕ್ಷಣ ಸಂಬಂಧಪಟ್ಟವರಿಗೂ ಸೂಚನೆ ನೀಡುತ್ತದೆ.
ಯಾವಾಗ ಲಭ್ಯವಾಗುತ್ತದೆ?
ಹೊಸ ಸ್ಲೀಪ್ ಟ್ರ್ಯಾಕರ್ ಯಾವಾಗ ಲಭ್ಯ ಮತ್ತು ಬೆಲೆ ಎಷ್ಟಿರಲಿದೆ ಎನ್ನುವ ವಿಚಾರವನ್ನು ಅಮೆಜಾನ್ ಬಹಿರಂಗಪಡಿಸಿಲ್ಲ. ಅಷ್ಟೇ ಅಲ್ಲದೆ, ಮಶಿನ್ ಲರ್ನಿಂಗ್ ಮತ್ತು ಕ್ಲೌಡ್ ಟೆಕ್, ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ಮತ್ತಷ್ಟು ಸಾಧ್ಯತೆಯನ್ನು ಕೂಡ ಪರಿಚಯಿಸುವ ಇರಾದೆಯನ್ನು ಅಮೆಜಾನ್ ಹೊಂದಿದೆ.
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ.
ಪ್ರಜಾವಾಣಿಯನ್ನು ಟ್ವಿಟರ್ನಲ್ಲಿ ಇಲ್ಲಿ ಫಾಲೋ ಮಾಡಿ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.