ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌ನಿಂದಾಗಿ ಸ್ಮಾರ್ಟ್‌ಫೋನ್ ಬಳಕೆ ಗಣನೀಯ ಹೆಚ್ಚಳ: ಅಧ್ಯಯನ ವರದಿ

Last Updated 14 ಡಿಸೆಂಬರ್ 2020, 7:58 IST
ಅಕ್ಷರ ಗಾತ್ರ

ನವದೆಹಲಿ: ಸಾಂಕ್ರಾಮಿಕ ರೋಗದ ನಡುವೆ ಮನೆಯಿಂದ ಕೆಲಸ, ವ್ಯಾಸಂಗ ಹಾಗೂ ಮನರಂಜನೆಗಾಗಿ ಜನರು ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚೆಚ್ಚು ಅವಲಂಬಿಸಿದ್ದಾರೆ. ಅಧ್ಯಯನ ವರದಿಯೊಂದರ ಪ್ರಕಾರ ಭಾರತೀಯರು ಸ್ಮಾರ್ಟ್‌ಫೋನ್ ಬಳಕೆಯು ದಿನಕ್ಕೆ ಅಂದಾಜು ಶೇಕಡಾ 25ರಷ್ಟು ಏರಿಕೆ ಕಂಡುಬಂದಿದೆ. ಅಂದರೆ ದಿನವೊಂದರಲ್ಲಿ ಸರಿ ಸುಮಾರು ಏಳು ತಾಸು ಸ್ಮಾರ್ಟ್‌ಫೋನ್‌ಗಳಲ್ಲಿ ತಲ್ಲೀನವಾಗಿರುತ್ತಾರೆ.

ಮೊಬೈಲ್ ತಯಾರಕ ಸಂಸ್ಥೆ ವಿವೊ ಮತ್ತು ಸಿಎಂಆರ್ ನಡೆಸಿದ ಅಧ್ಯಯನ ವರದಿ ಪ್ರಕಾರ ಸ್ಮಾರ್ಟ್‌ಫೋನ್‌ ಬಳಕೆಯ ಸರಾಸರಿ ಸಮಯದಲ್ಲಿ ಗಣನೀಯ ಹೆಚ್ಚಳ ಕಂಡುಬಂದಿದೆ.

ವರದಿಯ ಪ್ರಕಾರ ಸರಾಸರಿ ಬಳಕೆಯು 2019 ಮಾರ್ಚ್‌ನಲ್ಲಿದ್ದ 4.9 ತಾಸಿನಿಂದ 2020 ಮಾರ್ಚ್ ವೇಳೆಗೆ (ಕೋವಿಡ್‌ ಪೂರ್ವ) ಶೇಕಡಾ 11ರಷ್ಟು ಅಂದರೆ 5.5 ಗಂಟೆಗೆ ಏರಿಕೆಯಾಗಿದೆ. ಕೋವಿಡ್ ಲಾಕ್‌ಡೌನ್ ಬಳಿಕ ಏಪ್ರಿಲ್‌ ನಂತರ ಈ ಸರಾಸರಿ ಪ್ರಮಾಣವು ಶೇಕಡಾ 25ರಷ್ಟು ಏರಿಕೆ ಕಂಡಿದ್ದು, 6.9 ಗಂಟೆಗಳಿಗೆ ತಲುಪಿದೆ ಎಂದು ವರದಿ ತಿಳಿಸಿದೆ.

'ಸ್ಮಾರ್ಟ್‌ಫೋನ್‌ ಮತ್ತು ಮಾನವ ಸಂಬಂಧಗಳ ಮೇಲೆ ಅವುಗಳ ಪರಿಣಾಮ-2020' ಅಡಿಯಲ್ಲಿ ಈ ಅಧ್ಯಯನ ನಡೆಸಲಾಗಿದೆ.

ಕೋವಿಡ್ 19 ಲಾಕ್‌ಡೌನ್ ಜಾರಿಗೆ ಬಂದ ಬಳಿಕ ಭಾರತೀಯರು ಮನೆಯಲ್ಲಿ ಹೆಚ್ಚೆಚ್ಚು ಕೆಲಸ ಮಾಡುತ್ತಿದ್ದಾರೆ. ಹಾಗೆಯೇ ವ್ಯಾಸಂಗ ಹಾಗೂ ಮನರಂಜನೆಗಾಗಿಯೂ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚೆಚ್ಚು ಬಳಕೆ ಮಾಡುತ್ತಾರೆ.

ವರ್ಕ್ ಫ್ರಮ್ ಹೋಮ್ ಶೇಕಡಾ 75ರಷ್ಟು ಹೆಚ್ಚಳ ಕಂಡುಬಂದಿದ್ದು, ಕಾಲಿಂಗ್ (ಮೊಬೈಲ್ ಕರೆ) ಶೇ. 63 ಹಾಗೂ ಒಟಿಟಿ (ನೆಟ್‌ಫ್ಲಿಕ್ಸ್ ಹಾಗೂ ಸ್ಪಾಟಿಫೈ ಇತರೆ) ಬಳಕೆಯಲ್ಲಿ ಶೇಕಡಾ 59ರಷ್ಟು ಹೆಚ್ಚಳ ಕಂಡುಬಂದಿದೆ.

ಸೋಷಿಯಲ್ ಮೀಡಿಯಾ ಬಳಕೆಯಲ್ಲೂ ಶೇಕಡಾ 55ರಷ್ಟು ಹೆಚ್ಚಳ ಕಂಡುಬಂದಿದ್ದು, ಗೇಮಿಂಗ್‌ನಲ್ಲಿ ಶೇಕಡಾ 45ರಷ್ಟು ವೃದ್ಧಿಯಾಗಿದೆ. ಮತ್ತಷ್ಟು ಕುತೂಹಲದಾಯಕ ಸಂಗತಿಯೆಂದರೆ ಫೋಟೋ ಕ್ಲಿಕ್ಲಿಸುವ ಹಾಗೂ ಸೆಲ್ಪಿ ತೆಗೆದುಕೊಳ್ಳುವ ಸರಾಸರಿ ಅವಧಿಯು 14ರಿಂದ 18 ನಿಮಿಷಗಳಿಗೆ ಏರಿಕೆಯಾಗಿದೆ.

ಈ ಅಧ್ಯಯನವನ್ನು ಪ್ರಮುಖ ಎಂಟು ನಗರಗಳಲ್ಲಿ (ನಾಲ್ಕು ಮಹಾನಗರಗಳು, ಬೆಂಗಳೂರು, ಹೈದರಾದಾಬ್, ಅಹಮಾದಾಬಾದ್ ಮತ್ತು ಪುಣೆ) 15ರಿಂದ 45 ವಯಸ್ಸಿನ 2000 ಬಳಕೆದಾರರಲ್ಲಿ ನಡೆಸಲಾಗಿತ್ತು. ಇದರಲ್ಲಿ ಶೇ. 70ರಷ್ಟು ಪುರುಷರು ಹಾಗೂ ಶೇ. 30ರಷ್ಟು ಮಹಿಳೆಯರು ಭಾಗಿಯಾಗಿದ್ದಾರೆ.

ಜನರು ಕುಟುಂಬದೊಂದಿಗೆ ಕಳೆಯುವ ಸಮಯದಲ್ಲೂ ಶೇಕಡಾ 26ರಷ್ಟು (ಕೋವಿಡ್ ಪೂರ್ವ 4.4 ಗಂಟೆಗಳಿಂದ ಕೋವಿಡ್ ನಂತರ 5.5 ತಾಸು) ಹೆಚ್ಚಳ ಕಂಡುಬಂದಿದೆ. ಆದರೂ ಸ್ಮಾರ್ಟ್‌ಫೋನ್ ಬಳಕೆಯು ತಮ್ಮ ಪ್ರೀತಿ ಪಾತ್ರರೊಂದಿಗೆ ಕಳೆಯುವ ಗುಣಮಟ್ಟದ ಸಮಯದ ಮೇಲೆ ಪರಿಣಾಮ ಬೀರಿದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ಶೇ. 74ರಷ್ಟು ಜನರು ಮೊಬೈಲ್ ಫೋನ್ ಬಳಕೆಯನ್ನು ನಿಲ್ಲಿಸಿದಾಗ ಕಿರಿಕಿರಿಯನ್ನು ಅನುಭವಿಸುತ್ತಾರೆ. ಆದರೆ ಶೇಕಡಾ 73ರಷ್ಟು ಜನರು ಬಲವಂತವಾಗಿ ಮೊಬೈಲ್ ಪರಿಶೀಲಿಸುವ ಚಟಕ್ಕೆ ಒಳಗಾಗಿರುವುದಾಗಿ ಆಭಿಪ್ರಾಯಪಟ್ಟಿದ್ದಾರೆ.

ಶೇಕಡಾ 74ರಷ್ಟು ಮಂದಿ ಮೊಬೈಲ್ ಫೋನ್‌ಗಳಿಂದ ಜೀವನವನ್ನು ಪ್ರತ್ಯೇಕಿಸಬೇಕು ಎಂದು ಒಪ್ಪಿಕೊಂಡರು. ಹಾಗೆಯೇ ಶೇಕಡಾ 73ರಷ್ಟು ಮಂದಿ ಸ್ಮಾರ್ಟ್‌ಫೋನ್‌ಗಳಲ್ಲಿ ಕಡಿಮೆ ಸಮಯ ಕಳೆದರೆ ಸಂತೋಷವಾಗಿರುತ್ತಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಪ್ರಸ್ತುತ ಬಳಕೆಯು ಇದೇ ರೀತಿ ಮುಂದುವರಿದರೆ ಮಾನಸಿಕ ಅಥವಾ ದೈಹಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ ಎಂದು ಶೇಕಡಾ 70ರಷ್ಟು ಮಂದಿ ಒಪ್ಪಿದ್ದಾರೆ.

ಮೊಬೈಲ್ ಫೋನ್‌ಗಳನ್ನು ಸ್ವಲ್ಪ ಸಮಯ ಸ್ವಿಚ್ ಆಫ್ ಮಾಡುವದಿರಂದ ಕುಟುಂಬದವರೊಂದಿಗೆ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗುತ್ತದೆ ಎಂದು ಶೇ. 74ರಷ್ಟು ಮಂದಿ ಅಭಿಪ್ರಾಯಪಟ್ಟಿದ್ದಾರೆ. ಅದೇ ಹೊತ್ತಿಗೆ ಶೇಕಡಾ 70ರಷ್ಟು ಮಂದಿ, ಮೊಬೈಲ್ ಫೋನ್ ಬಳಕೆಯು ಪ್ರೀತಿ ಪಾತ್ರರೊಂದಿಗಿನ ಸಂಬಂಧದ ಮೇಲೆ ಪ್ರತಿಕೂಲ ಪರಿಣಾಮವನ್ನು ಬೀರುತ್ತದೆ ಎಂಬುದನ್ನು ಒಪ್ಪಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT