ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ ಮತ್ತೆ ಮರೆಗೆ; ತಯಾರಿಕೆ ನಿಲ್ಲಿಸಿದ ಟಿಸಿಎಲ್‌

Last Updated 5 ಫೆಬ್ರುವರಿ 2020, 7:09 IST
ಅಕ್ಷರ ಗಾತ್ರ
ADVERTISEMENT
""

ಭಾರತದಲ್ಲಿ ಮೊಬೈಲ್‌ ಇಂಟರ್‌ನೆಟ್‌ ಆಗಷ್ಟೇ ಪ್ರಚುರಗೊಳ್ಳುತ್ತಿದ್ದ ಸಮಯದಲ್ಲಿ ಯಾವುದೇ ಮೊಬೈಲ್‌ ಫೋನ್‌ಗಿಂತ ಹೆಚ್ಚು ವೇಗವಾಗಿ ಇ–ಮೇಲ್‌ ರವಾನಿಸುವ ಮೂಲಕ ಸ್ಟಾರ್‌ಗಳು, ಉದ್ಯಮಿಗಳು ಹಾಗೂ ತಂತ್ರಜ್ಞಾನ ಪ್ರಿಯರಲ್ಲಿ ಮೆಚ್ಚುಗೆ ಪಡೆದಿದ್ದ 'ಬ್ಲ್ಯಾಕ್‌ಬೆರಿ' ಈಗ ಮತ್ತೆ ಮರೆಗೆ ಸರಿಯುತ್ತಿದೆ. ಕೆನಡಾ ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳು ಜಾಗತಿಕ ಮಾರುಕಟ್ಟೆಯಲ್ಲಿ ಕಾಣಸಿಗುವುದು ಅನುಮಾನ ಎಂಬ ಸ್ಥಿತಿ ನಿರ್ಮಾಣವಾಗಿದೆ.

ಚೀನಾದ ಎಲೆಕ್ಟ್ರಾನಿಕ್ಸ್‌ ಸಮೂಹ 'ಟಿಸಿಎಲ್‌' ಬ್ಲ್ಯಾಕ್‌ಬೆರಿ ಸ್ಮಾರ್ಟ್‌ಫೋನ್‌ಗಳ ಮಾರಾಟ ನಿಲ್ಲಿಸುವುದಾಗಿ ಇತ್ತೀಚೆಗೆ ಪ್ರಕಟಿಸಿದೆ. '2020ರ ಆಗಸ್ಟ್‌ 31ರಿಂದ ಟಿಸಿಎಲ್‌ ಕಮ್ಯುನಿಕೇಷನ್ಸ್‌ ಬ್ಲ್ಯಾಕ್‌ಬೆರಿ ಬ್ರ್ಯಾಂಡೆಡ್‌ ಫೋನ್‌ಗಳನ್ನು ಮಾರಾಟ ಮಾಡುವುದಿಲ್ಲ' ಎಂದು ಬ್ಯ್ಯಾಕ್‌ಬೆರಿ ಮೊಬೈಲ್‌ ಸೋಮವಾರ ಟ್ವಿಟರ್‌ನಲ್ಲಿ ತಿಳಿಸಿದೆ.

'ಇನ್ನು ಮುಂದೆ ಟಿಸಿಎಲ್‌ ಕಮ್ಯುನಿಕೇಷನ್‌ ಹೊಸ ಬ್ಲ್ಯಾಕ್‌ಬೆರಿ ಮೊಬೈಲ್‌ ಫೋನ್‌ಗಳನ್ನು ವಿನ್ಯಾಸಗೊಳಿಸುವ, ತಯಾರಿಸುವ ಅಥವಾ ಮಾರಾಟ ಮಾಡುವ ಹಕ್ಕು ಹೊಂದಿರುವುದಿಲ್ಲ. 2020ರ ಆಗಸ್ಟ್‌ 31ರ ವರೆಗೂ ವಾರಂಟಿ ಸರ್ವಿಸ್‌ ಹಾಗೂ ಗ್ರಾಹಕ ಸೇವೆಗಳನ್ನು ನೀಡಲಿದೆ' ಪ್ರಕಟಣೆಯಲ್ಲಿ ಹೇಳಿದೆ.

ಆ್ಯಪಲ್‌ ಐಫೋನ್‌, ಸ್ಯಾಮ್‌ಸಂಗ್‌ ಗ್ಯಾಲಕ್ಸಿ ಹಾಗೂ ಚೀನಾದ ಸ್ಮಾರ್ಟ್‌ಫೋನ್‌ಗಳ ಅಬ್ಬರದಲ್ಲಿ ಬ್ಲ್ಯಾಕ್‌ಬೆರಿ ಈ ಹಿಂದೆಯೇ ಅಪರೂಪ ಎಂಬಂತಾಗಿತ್ತು. ಮಾರಾಟ ಕುಸಿತದಿಂದಾಗಿ 2016ರಲ್ಲಿಬ್ಲ್ಯಾಕ್‌ಬೆರಿ ತಯಾರಿಕೆ ನಿಲ್ಲಿಸಿತು. ಒಪ್ಪಂದದ ಮೂಲಕ ಟಿಸಿಎಲ್‌ ಅದೇ ಬ್ರ್ಯಾಂಡ್‌ ಬಳಸಿ ತಯಾರಿಕೆ ಮತ್ತು ಮಾರಾಟ ಮುಂದುವರಿಸಿತು. ಹೊಸ ಆ್ಯಂಡ್ರಾಯ್ಡ್‌ ಶೈಲಿಗೆ ಫೋನ್‌ಗಳನ್ನು ಸಿದ್ಧಪಡಿಸಿ ಮಾರುಕಟ್ಟೆಗೆ ತಂದಿತು. ಆದರೆ,ಬ್ಲ್ಯಾಕ್‌ಬೆರಿ ಗ್ರಾಹಕರ ಗಮನ ಸೆಳೆಯಲು ವಿಫಲವಾಯಿತು.

ಭಾರತ, ಶ್ರೀಲಂಕಾ, ನೇಪಾಳ ಹಾಗೂ ಬಾಂಗ್ಲಾದೇಶದಲ್ಲಿ 'ಆಪ್ಟಿಮಸ್‌ ಇನ್ಫ್ರಾಕಾಮ್‌' ಬ್ಲ್ಯಾಕ್‌ಬೆರಿ ಫೋನ್‌ಗಳನ್ನು ತಯಾರಿಸಿದೆ. ಬಿಬಿ ಮೆರಾಹ್‌ ಪುತಿಹ್‌ 2017ರಲ್ಲಿ ಇಂಡೋನೇಷ್ಯಾದಲ್ಲಿ ಒಂದು ಫೋನ್‌ ಬಿಡುಗಡೆ ಮಾಡಿತ್ತು. ಉಳಿದ ಎಲ್ಲ ಭಾಗಗಳಿಗೂ ಟಿಸಿಎಲ್‌ ಫೋನ್‌ ತಯಾರಿಸುವ ಹಕ್ಕು ಹೊಂದಿತ್ತು.

ಬ್ಲ್ಯಾಕ್‌ಬೆರಿ ಮುಂದಿನ ಹೆಜ್ಜೆ ಕುರಿತು ಯಾವುದೇ ಮಾಹಿತಿ ನೀಡಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT