ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೊಡ್ಡ ಪರದೆಯ ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌ಗಳಿಗೆ ಬೇಡಿಕೆ: ಫ್ಲಿಪ್‌ಕಾರ್ಟ್‌ ವರದಿ

Last Updated 23 ಜನವರಿ 2021, 9:58 IST
ಅಕ್ಷರ ಗಾತ್ರ

ಬೆಂಗಳೂರು: ಶಾಲೆಗಳು ಆನ್‌ಲೈನ್ ಶಿಕ್ಷಣ ನೀಡುತ್ತಿರುವುದು ಮತ್ತು ಇ-ಲರ್ನಿಂಗ್ ಅವಕಾಶಗಳು ಹೆಚ್ಚಾಗುತ್ತಿರುವುದರಿಂದ ದೊಡ್ಡ ಪರದೆಯ (ಡಿಸ್‌ಪ್ಲೇ) ಲ್ಯಾಪ್‌ಟಾಪ್ ಮತ್ತು ಟ್ಯಾಬ್‌ಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಫ್ಲಿಪ್‌ಕಾರ್ಟ್‌ ನಡೆಸಿರುವ ಸಮೀಕ್ಷೆಯಿಂದ ಈ ಮಾಹಿತಿ ತಿಳಿದುಬಂದಿದೆ.

ಕಳೆದ ಒಂದು ವರ್ಷದಿಂದ ಲ್ಯಾಪ್‌ಟಾಪ್ ಮತ್ತು ಟ್ಯಾಬ್ಲೆಟ್‌ಗಳಿಗೆ ಭಾರಿ ಬೇಡಿಕೆ ಬರುತ್ತಿದೆ. ಲಾಕ್‌ಡೌನ್‌ಗೂ ಮುಂಚೆ ಮತ್ತು ನಂತರದ ಅವಧಿಯಲ್ಲಿ ಲ್ಯಾಪ್‌ಟಾಪ್‌‌ಗಳಿಗೆ ಶೇ 200 ಮತ್ತು ಟ್ಯಾಬ್ಲೆಟ್‌ಗಳಿಗೆ ಶೇ90 ರಷ್ಟು ಬೇಡಿಕೆ ಹೆಚ್ಚಾಗಿದೆ. ಗ್ರಾಹಕರು ಅದರಲ್ಲೂ ಪ್ರಮುಖವಾಗಿ ವಿದ್ಯಾರ್ಥಿಗಳು ಈ ಹಿಂದೆ 8 ಇಂಚುಗಳ ಟ್ಯಾಬ್ಲೆಟ್‌ಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗ ದೊಡ್ಡ ಸ್ಕ್ರೀನ್‌ನ ಟ್ಯಾಬ್ಲೆಟ್‌ಗಳನ್ನು ಬಯಸುತ್ತಿದ್ದಾರೆ. ಇದಕ್ಕೆ ಪ್ರಮುಖ ಕಾರಣ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಲು ಹೆಚ್ಚು ಸಮಯವನ್ನು ವ್ಯಯಿಸುತ್ತಿದ್ದಾರೆ. ಹೀಗಾಗಿ ಉತ್ತಮ ಮತ್ತು ಅನುಕೂಲಕರವಾದ ದೃಶ್ಯಾವಳಿಗಾಗಿ ಈ ದೊಡ್ಡ ಸ್ಕ್ರೀನ್‌ನ ಸಾಧನಗಳನ್ನು ಬಯಸುತ್ತಿದ್ದಾರೆ ಎಂದು ತಿಳಿಸಿದೆ.

ಗ್ರಾಹಕರ ಅನುಭವವನ್ನು ಇನ್ನಷ್ಟು ಉತ್ತಮಗೊಳಿಸುವ ನಿಟ್ಟಿನಲ್ಲಿ ಫ್ಲಿಪ್‌ಕಾರ್ಟ್ ಪ್ಲಾಟ್‌ಫಾರ್ಮ್‌ನಲ್ಲಿ ಭಾನುವಾರದಿಂದ ವಿಶ್ವ ಶಿಕ್ಷಣ ದಿನಾಚರಣೆ ಸಂದರ್ಭದಲ್ಲಿ ಲ್ಯಾಪ್ ಟಾಪ್‌ಗಳು, ಟ್ಯಾಬ್ಲೆಟ್‌ಗಳು ಮತ್ತು ಐಟಿ ಆಧಾರಿತ ಸಾಧನಗಳಿಗೆ ಕ್ಯುರೇಟೆಡ್ ಕೊಡುಗೆಗಳನ್ನು ರಚಿಸಿದೆ ಮತ್ತು ಅದನ್ನು ಸುಲಭಗೊಳಿಸುವ ದಿಸೆಯಲ್ಲಿ ವಿದ್ಯಾರ್ಥಿ ಕ್ಲಬ್ ಕಾರ್ಯಕ್ರಮದಂತಹ ಉಪಕ್ರಮಗಳನ್ನು ಆರಂಭಿಸಿದೆ.

‘ಗ್ರಾಹಕರಿಗೆ ಕೆಲಸ ಮತ್ತು ಕಲಿಕೆಯ ಚಟುವಟಿಕೆಗಳಿಗೆ ಉತ್ತಮವಾದ ಉತ್ಪನ್ನಗಳನ್ನು ತರಲು ನಾವು ನಮ್ಮ ಬ್ರ್ಯಾಂಡ್ ಪಾಲುದಾರರೊಂದಿಗೆ ಕ್ಯುರೇಟೆಡ್ ಆಯ್ಕೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಲ್ಯಾಪ್‌ಟಾಪ್‌, ಟ್ಯಾಬ್ಲೆಟ್‌, ರೂಟರ್‌ಗಳಂತಹ ಕಲಿಕಾ ಸಾಧನಗಳಿಗೆ ಬೇಡಿಕೆ ಪ್ರಮಾಣವು ಕಳೆದ ಒಂದು ವರ್ಷದಿಂದ ಗಣನೀಯ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ’ ಎಂದು ಫ್ಲಿಪ್‌ಕಾರ್ಟ್‌ನ ಎಲೆಕ್ಟ್ರಾನಿಕ್ಸ್ ವಿಭಾಗದ ಹಿರಿಯ ನಿರ್ದೇಶಕ ರಾಕೇಶ್ ಕೃಷ್ಣನ್ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT