ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಜೆಯ ಮೋಜಿಗೆ ಕಲಿಕಾ ಆ್ಯಪ್‌ಗಳು

Last Updated 2 ಮೇ 2019, 12:12 IST
ಅಕ್ಷರ ಗಾತ್ರ

ಆಟ ಮತ್ತು ಪಾಠಗಳಿಗೆ ಕೊಂಡಿ ಬೆಸೆಯುವುದರ ಜೊತೆಗೆ ಮೋಜನ್ನು ನೀಡುವ ಅನೇಕ ಕಿರುತಂತ್ರಾಂಶಗಳು ಗೂಗಲ್ ಪ್ಲೇಸ್ಟೋರ್ ನಲ್ಲಿವೆ. ಇವು ಮಕ್ಕಳು ರಜಾದಿನಗಳಲ್ಲಿ ವಿಷಯಗಳನ್ನು ಕಲಿಯಲು ಮತ್ತು ಅವರ ಬೆಳವಣಿಗೆಗೆ ಸಹಾಯಮಾಡುತ್ತವೆ. ಅವುಗಳಲ್ಲಿ ಕೆಲವು ಉಪಯುಕ್ತ ಹಾಗೂ ಸುರಕ್ಷಿತವಾಗಿರುವ ಕೆಲವು ಕಿರುತಂತ್ರಾಂಶಗಳ ಮಾಹಿತಿ ಇಲ್ಲಿದೆ.

Times Tables & Friends - KS2 Multiplication Games: ಕರಡಿ ಪಾತ್ರಧಾರಿಯ ಜೊತೆಗೆ ಸೇರಿ ಅನ್ವೇಷಣೆಯ ಆಟಗಳನ್ನು ಆಡುವುದರ ಮೂಲಕ ಗಣಿತ ವಿಷಯಗಳನ್ನು ಕಲಿಯುವ ಆ್ಯಪ್. ಇಲ್ಲಿ ಅಳವಡಿಸಲಾಗಿರುವ ಗುಣಾಕಾರ ಲೆಕ್ಕಗಳನ್ನು ಬಿಡಿಸಲು ಮತ್ತು ಮುಂದಿನ ಹಂತದ ಆಟಕ್ಕೆ ಜಿಗಿಯಲು ಕರಡಿ ಮತ್ತು ಬಣ್ಣಬಣ್ಣದ ಬಲೂನ್‌ಗಳು ಸಹಾಯಮಾಡುತ್ತವೆ. ಗುಣಾಕಾರ ಲೆಕ್ಕಗಳ ಜೊತೆಗೆ ಶ್ರವಣ, ಮೌಖಿಕ, ಚಲನೆ, ಕೌಶಲ ಹಾಗೂ ಬಣ್ಣಗಳನ್ನು ಗುರುತಿಸುವುದನ್ನು ಆಟಗಳ ಮೂಲಕ ಕಲಿಯಬಹುದು. Mobilaxy: Kids Math and Word Games ಎಂಬ ಕಂಪನಿ ಇದನ್ನು ರಚಿಸಿದೆ.

DoodleMaths: Primary Maths: ಮಕ್ಕಳಿಗೆ ಗಣಿತವನ್ನು ಕಲಿಸುವ ವಿಭಿನ್ನವಾದ ಆ್ಯಪ್. ವಿನೋದ ಮತ್ತು ಸಂವಾದಾತ್ಮಕ ರೀತಿಯಿಂದ ಕೂಡಿದ ಆಟಗಳನ್ನು ಅಳವಡಿಸಿದ್ದಾರೆ. 4 ರಿಂದ 14 ವರ್ಷದವರೆಗಿನ ಮಕ್ಕಳಿಗೆ ಬೇಕಾದ ಗಣಿತವನ್ನು ಕಲಿಸುತ್ತದೆ. ಮಕ್ಕಳ ಗಣಿತ ಕಲಿಕೆಯಲ್ಲಿ ನ್ಯೂನ್ಯತೆಗಳನ್ನು ಗುರುತಿಸಿ ಅದನ್ನು ಸರಿಪಡಿಸಲು ಪ್ರಯತ್ನಿಸುತ್ತದೆ. ಕೆಲವು ಪ್ರಶ್ನೆಗಳನ್ನು ಅಳವಡಿಸಲಾಗಿದ್ದು, ಅವುಗಳಿಗೆ ನೀಡುವ ಉತ್ತರದ ಆಧಾರದ ಮೇಲೆ ಯಾವ ಹಂತದ ಗಣಿತ ಕಲಿಸಬೇಕು ಎಂಬುದನ್ನು ತಿಳಿದುಕೊಂಡು ಅದಕ್ಕೆ ತಕ್ಕಂತೆ ಗಣಿತ ಆಟಗಳು, ಪಠ್ಯಕ್ರಮ, ಕ್ವಿಜ್‌ಗಳನ್ನು ಮತ್ತು ನಿತ್ಯದ ಸವಾಲುಗಳನ್ನು ನೀಡುತ್ತದೆ. ಇದನ್ನು ಗಣಿತ ಶಿಕ್ಷಕರ ನೆರವಿನಿಂದ ರಚಿಸಲಾಗಿದ್ದು, ಸಾವಿರಾರು ಶಾಲೆಗಳಲ್ಲಿ ಬಳಸಲಾಗುತ್ತಿದೆ. ಮಾಹಿತಿಗೆ www.doodlemaths.com ಜಾಲತಾಣ ನೋಡಿ.

Slice Fractions: ಇಂಗ್ಲಿಷ್‌ ಸೇರಿದಂತೆ ವಿಶ್ವದ ಪ್ರಮುಖ 14 ಭಾಷೆಗಳಲ್ಲಿ ಲಭ್ಯವಿರುವ ಗಣಿತ ಆ್ಯಪ್. ಭಿನ್ನರಾಶಿಯನ್ನು ವಿನೋದ ಆಟಗಳ ಮೂಲಕ ಕಲಿಸುತ್ತದೆ. 5 ರಿಂದ 12 ವರ್ಷದ ವರೆಗಿನ ಮಕ್ಕಳ ಕಲಿಕೆಗೆ ಉಪಯುಕ್ತವಾಗಿದ್ದು, ಭಿನ್ನರಾಶಿಯ ಲೆಕ್ಕಗಳನ್ನು ಬಿಡಿಸಲು ಅನೇಕ ಆಟಗಳನ್ನು ಅಳವಡಿಸಿದ್ದಾರೆ. ಜೊತೆಗೆ 140ಕ್ಕೂ ಅಧಿಕ ಭೌತವಿಜ್ಞಾನದ ಪಜಲ್‌ಗಳನ್ನೂ ಅಳವಡಿಸಿದ್ದಾರೆ. ಹೆಚ್ಚಿನ ಮಾಹಿತಿಗೆ https://ululab.com/ಜಾಲತಾಣಕ್ಕೆ ಭೇಟಿನೀಡಿ.


Pettson's Inventions Deluxe: ಸೃಜನಶೀಲತೆ, ತಾಂತ್ರಿಕತೆ ಮತ್ತು ಕಲ್ಪನೆಯ ಕೌಶಲವನ್ನು ಹೊಂದಿದ ಶೈಕ್ಷಣಿಕ ಆಟಗಳ ಆ್ಯಪ್. ಪೆಟ್ಸನ್ ಮತ್ತು ಅವನ ಬೆಕ್ಕು ಸೇರಿ ಅದ್ಭುತ ಆವಿಷ್ಕಾರಗಳನ್ನು ಮಾಡುತ್ತ ಹೊಸ ಯಂತ್ರಗಳನ್ನು ಕಂಡುಹಿಡಿಯುತ್ತ ಮುಂದೆ ಸಾಗುತ್ತಾರೆ. ಇದರಿಂದ ಮಕ್ಕಳಲ್ಲಿ ತರ್ಕ, ಸೃಜನಶೀಲತೆ ಮತ್ತು ಕಲ್ಪನೆಯ ಮನೋಭಾವವನ್ನು ಬೆಳೆಸಿಕೊಳ್ಳಲು ನೆರವಾಗುತ್ತದೆ. ಇದು Filimundus AB ಎಂಬ ಕಂಪನಿಯ ಆ್ಯಪ್.

Hello Numbers: ಶೂನ್ಯದಿಂದ ಒಂಬತ್ತರ ವರೆಗೆ ಸಂಖ್ಯೆಗಳನ್ನು ಮಕ್ಕಳಿಗೆ ಮನೋರಂಜನೆ, ಕಾಲ್ಪನಿಕ ಪಾತ್ರಗಳು, ಆಡಿಯೊ ಮತ್ತು ಆ್ಯನಿಮೇಷನ್ ಮೂಲಕ ಪರಿಚಯಿಸುವ ಆ್ಯಪ್. ಮಕ್ಕಳಿಗೆ ಶೂನ್ಯದ ಪರಿಕಲ್ಪನೆಯನ್ನು ಮತ್ತು ಸಂಖ್ಯೆಗಳನ್ನು ಸರಳವಾಗಿ ಹೇಳಿಕೊಡುವ ಆಟಗಳನ್ನು ಅಳವಡಿಸಲಾಗಿದೆ. NumbersAlive! ಎಂಬ ಸಂಸ್ಥೆ ರಚಿಸಿದೆ. ಇದೇ ರೀತಿಯ ಇನ್ನೂ ಹಲವು ಕಿರುತಂತ್ರಾಂಶಗಳು ಗೂಗಲ್ ಪ್ಲೇಸ್ಟೋರ್‌ನಲ್ಲಿವೆ.


Mussila Music School: ಇದು ಕಲೆ, ಸಂಗೀತ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಹಾಗೂ ತಜ್ಞರನ್ನೊಳಗೊಂಡ ಮುಸ್ಸಿಲಾ ಎಂಬ ಪ್ರತಿಷ್ಠಿತ ಕಂಪನಿಯ ಆ್ಯಪ್. ಮಕ್ಕಳಿಗೆ ಸಂಗೀತವನ್ನು ಆಟಗಳ ಮೂಲಕ ಹೇಳಿಕೊಡುವ ಅತ್ಯುತ್ತಮವಾದ ಆ್ಯಪ್. ಮುಸ್ಸಿಲಾ ಬ್ಯಾಂಡ್‌ನವರ ಕಳೆದು ಹೋದ ಕೆಲವು ವಾದ್ಯಗಳು ಮತ್ತು ಅಲಂಕಾರಿಕ ಬಟ್ಟೆ ಮತ್ತು ವಸ್ತುಗಳನ್ನು ಹುಡುಕುವ ಆಟದ ಜತೆಗೆ ಬೇಸಿಕ್ ಮ್ಯೂಸಿಕ್, ವಾದ್ಯ ಉಪಕರಣಗಳ ಬಳಕೆ ಮತ್ತು ಸ್ವಂತ ಸಂಗೀತವನ್ನು ಸೃಷ್ಟಿಸುವ ಕೌಶಲವನ್ನು ಕಲಿಸುತ್ತದೆ. ಇಲ್ಲಿನ ಆಟಗಳು ಶ್ರವಣ ತರಬೇತಿ, ಸಂಗೀತ ಸಿದ್ಧಾಂತ, ಮಧುರ ಮತ್ತು ಲಯವನ್ನು ಕಲಿಸುತ್ತದೆ. ಸಂಗೀತ ಉಪಕರಣಗಳನ್ನು ಗುರುತಿಸುವುದು, ಕೀಬೋರ್ಡ್–ಪಿಯಾನೋ ನುಡಿಸುವುದು, ಸ್ವಂತ ಬೀಟ್ಸ್ ಸೃಷ್ಟಿಸುವುದು, ವಾಯ್ಸ್ ಮತ್ತು ಸುತ್ತಲಿನ ಶಬ್ಧ/ಧ್ವನಿಯನ್ನು ರೆಕಾರ್ಡ್ ಮಾಡುವುದು, ರೀಮಿಕ್ಸ್ ಗಳನ್ನು ರಚಿಸುವುದು, ಮಧುರ ಮತ್ತು ಲಯಗಳ ಪ್ರಯೋಗ ಹೀಗೆ ನಾನಾ ವಿಷಯಗಳ ಕಲಿಕೆಗೆ ಆಟ ಮತ್ತು ಕಲಿಕಾ ಸಂಪನ್ಮೂಲಗಳನ್ನು ಅಳವಡಿಸಿದ್ದಾರೆ. ಮಾಹಿತಿಗೆ http://www.mussila.com/ ಜಾಲತಾಣಕ್ಕೆ ಭೇಟಿನೀಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT