ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತಿಯಾದ ಗ್ಯಾಜೆಟ್ ಬಳಕೆ; ಸಂಪರ್ಕ ಸೇತುವಾದರೂ ಸಂಬಂಧಕ್ಕೆ ಕಡಿವಾಣ

Last Updated 14 ಡಿಸೆಂಬರ್ 2020, 5:32 IST
ಅಕ್ಷರ ಗಾತ್ರ

ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಂತೂ ಈಗ ಜನರ ಪಾಲಿಗೆ ಹೊಸ ‘ಆಕ್ಸಿಜನ್‌’ ಆಗಿಬಿಟ್ಟಿದೆ. ಈ ಗ್ಯಾಜೆಟ್‌ಗಳ ಅವಲಂಬನೆ ಎಷ್ಟಿದೆಯೆಂದರೆ ಇವುಗಳಿಲ್ಲದೇ ಜನರು ಬದುಕುವುದೇ ಇಲ್ಲ ಎಂಬಷ್ಟು. ಕೆಲವರಿಗಂತೂ ಮೊಬೈಲ್ ಫೋನ್ ಇಲ್ಲದಿದ್ದರೆ ಉಸಿರೇ ನಿಂತಂತೆ ಅನುಭವ!. ಬಹುತೇಕರ ಬೆಳಗು ಆರಂಭವಾಗುವುದೇ ಫೇಸ್‌ಬುಕ್, ವಾಟ್ಸ್‌ಆ್ಯಪ್ ಇಲ್ಲವೇ ಇನ್‌ಸ್ಟಾಗ್ರಾಂ ನೋಡುವುದರ ಮೂಲಕ. ಅಂತೆಯೇ ಅವರ ದಿನಚರಿ ಮುಕ್ತಾಯವಾಗುವುದು ಕೂಡಾ ಇವುಗಳಿಂದಲೇ. ಒಂದರ್ಥದಲ್ಲಿ ಇಡೀ ಜಗತ್ತೇ ಈ ಗ್ಯಾಜೆಟ್‌ಗಳ ಸ್ಕ್ರೀನ್‌ಗಳಲ್ಲಿ ಬಂಧಿಯಾಗಿಬಿಟ್ಟಿದೆ. ಇದೊಂದು ರೀತಿಯಲ್ಲಿ ಆಧುನಿಕ ಸಾಂಕ್ರಾಮಿಕ ವ್ಯಸನ!

ಗ್ಯಾಜೆಟ್‌ಗಳು ನಮ್ಮ ಮನಸ್ಸನ್ನು ಹೇಗೆ ನಿಯಂತ್ರಿಸುತ್ತವೆ ಎನ್ನುವ ಕುರಿತು ಅನೇಕ ಸಂಶೋಧನೆ, ಅಧ್ಯಯನಗಳು ನಡೆಯುತ್ತಲೇ ಇವೆ. ಗ್ಯಾಜೆಟ್‌ಗಳ ಮಿತಿಮೀರಿದ ಬಳಕೆಯು ಮನುಷ್ಯನಲ್ಲಿ ಆಕ್ರಮಣಶೀಲತೆ, ಖಿನ್ನತೆ, ಮಾನಸಿಕ ಒತ್ತಡಗಳಷ್ಟೇ ಅಲ್ಲ ಆತ್ಮಹತ್ಯೆಗೂ ಪ್ರೇರೇಪಿಸುತ್ತದೆ ಎನ್ನುತ್ತವೆ ಅಧ್ಯಯನಗಳು. ಗ್ಯಾಜೆಟ್‌ಗಳ ಮಿತಿಮೀರಿದ ಬಳಕೆಯು ಪುಟ್ಟ ಮಕ್ಕಳಲ್ಲಿ ಎಡಿಎಚ್‌ಡಿ (ಅಟೆನ್ಷನ್ ಡೆಫಿಸಿಟ್ ಹೈಪರ್ ಆ್ಯಕ್ಟಿವಿಟಿ ಡಿಸಾರ್ಡರ್) ಸಮಸ್ಯೆ ಉಂಟು ಮಾಡಿದರೆ ಹದಿಹರೆಯದವರಲ್ಲಿ ವರ್ತನೆಯ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಗ್ಯಾಜೆಟ್‌ಗಳ ವ್ಯಸನ ಹಿರಿಯರನ್ನೂ ಬಿಟ್ಟಿಲ್ಲ!

ಅತ್ಯಂತ ಪ್ರಭಾವಶಾಲಿಯಾಗಿರುವ ಗ್ಯಾಜೆಟ್‌ಗಳು ನಮ್ಮನ್ನು ಒಂದೆಡೆ ಸಬಲರನ್ನಾಗಿ ಮಾಡಿದರೆ, ಮತ್ತೊಂದೆಡೆ ದುರ್ಬಲರನ್ನಾಗಿಸುತ್ತಿರುವುದು ಸುಳ್ಳಲ್ಲ. ನಮ್ಮ ಸ್ಮರಣಶಕ್ತಿಯನ್ನಷ್ಟೇ ಅಲ್ಲ, ದಾಂಪತ್ಯ ಮತ್ತು ವೃತ್ತಿ ಬದುಕನ್ನೂ ಸುಲಭವಾಗಿ ನಿರ್ನಾಮ ಮಾಡಿಬಿಡಬಲ್ಲವು!

ಗ್ಯಾಜೆಟ್‌ಗಳ ಅತಿಬಳಕೆಯಿಂದಾಗುವ ಹಾನಿಗಳು
ನಿದ್ದೆಗೆ ಸಂಚಕಾರ:
ಮಲಗುವ ಸಮಯದಲ್ಲಿ ಗ್ಯಾಜೆಟ್‌ಗಳ ಬಳಕೆಯು ನಿದ್ರಾಹೀನತೆಗೆ ಕಾರಣವಾಗುತ್ತದೆ. ಗ್ಯಾಜೆಟ್‌ಗಳನ್ನು ಬಳಸುವಾಗ ಅವುಗಳಿಂದ ಹೊರಹೊಮ್ಮುವ ನೀಲಿ ಕಿರಣಗಳು ಮೆದುಳನ್ನು ಸಕ್ರಿಯವಾಗಿರುವಂತೆ ಉತ್ತೇಜಿಸುತ್ತವೆ. ಇದರಿಂದ ರಾತ್ರಿಯ ನಿದ್ದೆಯ ವೇಳೆ ಮೆದುಳು ಸ್ರವಿಸಬೇಕಾಗಿದ್ದ ಮೆಲಟೊನಿನ್‌ ಪ್ರಮಾಣ ಕಡಿಮೆಯಾಗಿ ಸುಖಕರವಾದ ನಿದ್ದೆ ಮರೀಚಿಕೆಯಾಗುತ್ತದೆ. ಮಲಗುವ ಸಮಯದಲ್ಲಿ ವಿಡಿಯೊ ಗೇಮ್‌ ಇಲ್ಲವೇ ಸುದ್ದಿಗಳ ವೀಕ್ಷಣೆಯು ಮೆದುಳನ್ನು ಗೊಂದಲಕ್ಕೀಡು ಮಾಡುತ್ತದೆ.

ಸಾಮಾಜಿಕ ಪ್ರತ್ಯೇಕತೆ: ಮೊಬೈಲ್ ಫೋನ್ ಮತ್ತು ಟ್ಯಾಬ್ಲೆಟ್‌ಗಳ ಬಳಕೆಯು ದೂರದಲ್ಲಿರುವವರನ್ನು ಸಂಪರ್ಕಿಸಲು ಸೇತುವಾದರೂ ಇಂದಿನ ಪೀಳಿಗೆಯನ್ನು ಸಾಮಾಜಿಕವಾಗಿ ಪ್ರತ್ಯೇಕಿಸಿದೆ ಎಂದೇ ಅರ್ಥೈಸಿಕೊಳ್ಳಬಹುದು. ಕುಟುಂಬದ ಶುಭ ಸಮಾರಂಭಗಳಲ್ಲಿ ಒಟ್ಟಿಗೆ ಸೆಲ್ಫಿ ತೆಗೆದುಕೊಳ್ಳುವಾಗ ಒಟ್ಟುಗೂಡುವ ಸಂಬಂಧಿಕರು, ಸೆಲ್ಫಿ ನಂತರ ಯಥಾಪ್ರಕಾರ ಮುಖಾಮುಖಿ ಮಾತಿಲ್ಲದೇ, ಕಥೆಯಿಲ್ಲದೇ ಮೊಬೈಲ್‌ಗಳಲ್ಲಿ ಮುಳುಗಿ ಹೋಗುತ್ತಾರೆ. ಸ್ನೇಹಿತರು, ಸಂಬಂಧಿಕರು ಸಿಕ್ಕಾಗ ಪರಸ್ಪರ ಎದಿರುಗೊಳ್ಳುವಿಕೆಯ ಸಂಭ್ರಮ ಗ್ಯಾಜೆಟ್‌ಗಳಿಂದಾಗಿ ಮರೆಯಾಗುತ್ತಿರುವುದು ಸುಳ್ಳಲ್ಲ.

ಕುಟುಂಬದ ಸದಸ್ಯರೆಲ್ಲರೂ ಒಟ್ಟಾಗಿ ಸೇರಿ ಸಂಭ್ರಮಿಸುವ ಕ್ಷಣಗಳು ಸಾಮಾಜಿಕ ಸಂವಹನಕ್ಕೆ ಕಾರಣವಾಗುತ್ತಿತ್ತು. ಅಷ್ಟೇ ಅಲ್ಲ ಒಟ್ಟು ಸೇರಿ ಸಂತೋಷಿಸುವ ಕ್ಷಣಗಳಲ್ಲಿ ‘ಆಕ್ಸಿಟೊಸಿನ್‌’ ಎನ್ನುವ ಸಂತೋಷ ಹಾರ್ಮೋನ್‌ಗಳು ಸ್ರವಿಸುತ್ತಿದ್ದವು. ಇದು ಮನಸ್ಸಿನಲ್ಲಿ ಸಕಾರಾತ್ಮಕ ಮತ್ತು ಸಂತೋಷಕರ ಭಾವನೆಗಳನ್ನು ತುಂಬುತ್ತಿತ್ತು. ಆದರೆ, ಗ್ಯಾಜೆಟ್‌ಗಳ ಬಳಕೆಯು ಇಂತಹ ಭಾವನಾತ್ಮಕ ಸಂವಹನಕ್ಕೆ ಕಡಿವಾಣ ಹಾಕುವುದರಿಂದ ದೈಹಿಕ–ಮಾನಸಿಕ ಪರಿಣಾಮಗಳಿಗೆ ಕಾರಣವಾಗುತ್ತಿದೆ. ಅಷ್ಟೇ ಅಲ್ಲ, ಗ್ಯಾಜೆಟ್‌ಗಳ ಅತಿ ಬಳಕೆಯು ರೋಗನಿರೋಧಕ ಶಕ್ತಿಯನ್ನೂ ಕುಂದಿಸುತ್ತಿದೆ.

ಖಿನ್ನತೆ: ಇತ್ತೀಚಿನ ದಿನಗಳಲ್ಲಿ ಹಲವರು ಮಾನಸಿಕ ಆರೋಗ್ಯದ ಸಮಸ್ಯೆ ಎದುರಿಸುತ್ತಿದ್ದಾರೆ. ಇದಕ್ಕೆ ಮುಖ್ಯ ಕಾರಣವೆಂದರೆ ಗ್ಯಾಜೆಟ್‌ಗಳ ಬಳಕೆ. ನಿರಂತರವಾಗಿ ಗ್ಯಾಜೆಟ್‌ಗಳಿಗೆ ಒಗ್ಗಿಕೊಳ್ಳುವುದರಿಂದ ಖಿನ್ನತೆ ಆವರಿಸಿಕೊಳ್ಳುವ ಪ್ರಮಾಣ ಶೇ 37ರಷ್ಟಿದೆ ಎನ್ನುತ್ತದೆ ಅಧ್ಯಯನವೊಂದು. ಯುವಜನರಲ್ಲಿ ಆತ್ಮಹತ್ಯೆ ಪ್ರವೃತ್ತಿ ಹೆಚ್ಚಾಗಲು ಖಿನ್ನತೆಯೇ ಕಾರಣವಾಗುತ್ತಿರುವುದು ಆತಂಕಕಾರಿ.

(ಲೇಖಕ: ಬೆಂಗಳೂರಿನಲ್ಲಿ ಆಯುರ್ವೇದ ತಜ್ಞರು ಮತ್ತು ಬ್ಲಾಗರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT