ಗುರುವಾರ , ಮೇ 13, 2021
16 °C

ಏನಿದು ಬ್ಲೂಟೂತ್ ಟ್ರ್ಯಾಕರ್?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಳೆದ ವಾರ ಆ್ಯಪಲ್ ಈವೆಂಟ್‌ನಲ್ಲಿ ಆ್ಯಪಲ್ ಕಂಪನಿ, ಆಕರ್ಷಕವಾದ ಏರ್‌ಟ್ಯಾಗ್ ಎಂಬ ನೂತನ ಗ್ಯಾಜೆಟ್ ಪರಿಚಯಿಸಿತು. ಆ್ಯಪಲ್ ಏರ್‌ಟ್ಯಾಗ್ ಎನ್ನುವುದು ಬ್ಲೂಟೂತ್ ಟ್ರ್ಯಾಕರ್ ಆಗಿದ್ದು, ನಿಮ್ಮ ಐಫೋನ್ ಜತೆಗೆ ಅದನ್ನು ಜೋಡಿಸಿದರೆ, ಫೈಂಡ್ ಮೈ ಆಯ್ಕೆ ಮೂಲಕ ಏರ್‌ಟ್ಯಾಗ್ ಅಳವಡಿಸಿದ ವಸ್ತು ಎಲ್ಲಿದೆ ಎನ್ನುವುದನ್ನು ಸುಲಭದಲ್ಲಿ ಪತ್ತೆ ಮಾಡಬಹುದು.

ಆ್ಯಪಲ್ ಏರ್‌ಟ್ಯಾಗ್ ಪರಿಚಯಿಸುತ್ತಲೇ, ಈಗಾಗಲೇ ಮಾರುಕಟ್ಟೆಯಲ್ಲಿರುವ ಬ್ಲೂಟೂತ್ ಟ್ರ್ಯಾಕರ್‌ಗಳು ಕೂಡ ಸದ್ದು ಮಾಡುತ್ತಿವೆ. ಜನರು ಇಂದಿನ ಗಡಿಬಿಡಿ ಜೀವನದಲ್ಲಿ ಅಗತ್ಯ ವಸ್ತುಗಳನ್ನು ಎಲ್ಲಾದರೂ ಇರಿಸಿಕೊಂಡು ಮರೆತುಬಿಡುವುದೇ ಜಾಸ್ತಿ. ಅದರಲ್ಲೂ ವ್ಯಾಲೆಟ್, ಕೀ ಇತ್ಯಾದಿ ದಿನಬಳಕೆಯ ವಸ್ತುಗಳನ್ನು ಎಲ್ಲೆಂದರಲ್ಲಿ ಇರಿಸಿ, ಆಮೇಲೆ ಮರೆಯುವ ಅಭ್ಯಾಸ ಇರುವವರಿಗೆ ಈ ಬ್ಲೂಟೂತ್ ಟ್ರ್ಯಾಕರ್‌ಗಳು ಅತ್ಯಂತ ಹೆಚ್ಚು ಉಪಕಾರಿಯಾಗಿವೆ.

ಅದರಲ್ಲೂ ಕಾರಿನ ಕೀ, ಬೈಕ್ ಕೀ.. ಈಗಷ್ಟೇ ನನ್ನ ಕೈಯಲ್ಲಿ ಇತ್ತು, ಈಗ ಕಾಣಿಸುತ್ತಿಲ್ಲ, ಎಲ್ಲಿ ಇರಿಸಿದ್ದೇನೆ ಎಂದೇ ನೆನಪಾಗುತ್ತಿಲ್ಲ ಎಂದು ಹಲವರು ಅಲವತ್ತುಕೊಳ್ಳುತ್ತಾರೆ. ಇನ್ನು ಕೆಲವರು ಸದಾ ಕಾಲ ಯಾವುದಾದರೊಂದು ಕಾರ್ಯ ನಿಮಿತ್ತ, ಇಲ್ಲವೇ ಊರಿಗೆ ಪ್ರಯಾಣಿಸುತ್ತಲೇ ಇರುತ್ತಾರೆ. ಅಂತಹವರು ಎರಡು ಮೂರು ಬ್ಯಾಗ್ ಹೊಂದಿರುವುದು ಸಾಮಾನ್ಯ. ಅಂತಹ ಸಂದರ್ಭದಲ್ಲಿ ಕೆಲವೊಮ್ಮೆ ಬ್ಯಾಗ್ ಎಲ್ಲಾದರೂ ಇರಿಸಿದ್ದರೆ, ಇಲ್ಲವೆ ಬ್ಯಾಗ್ ಒಳಗೆ ಮತ್ತೇನಾದರೂ ಸರಕು ಇದ್ದರೆ, ಅದಕ್ಕೆ ನೀವು ಬ್ಲೂಟೂತ್ ಟ್ರ್ಯಾಕರ್ ಅಳವಡಿಸಿದ್ದರೆ, ಸುಲಭದಲ್ಲಿ ಪತ್ತೆಹಚ್ಚಬಹುದು.

ಬದಲಾಯಿಸಬಹುದಾದ ಬ್ಯಾಟರಿ

ಬ್ಲೂಟೂತ್ ಟ್ರ್ಯಾಕರ್ ಅಳವಡಿಸಿರುವ ಉಪಕರಣಗಳನ್ನು ಪಿಂಗ್ ಮಾಡುವ ಮೂಲಕ, ಲೊಕೇಶನ್ ಹುಡುಕುವ ಮೂಲಕ ಪತ್ತೆಹಚ್ಚಬಹುದು. ಇವುಗಳು ದೀರ್ಘ ಬಾಳಿಕೆಯ ಮತ್ತು ಬದಲಾಯಿಸಬಹುದಾದ ಬ್ಯಾಟರಿಯನ್ನು ಹೊಂದಿರುತ್ತವೆ. ಹಿಂಭಾಗದಲ್ಲಿ ಸುಲಭದಲ್ಲಿ ಲಿಥಿಯಂ ಅಯಾನ್ ಬ್ಯಾಟರಿಯನ್ನು ತೆಗೆದು ಬದಲಾಯಿಸಲು ಸಾಧ್ಯವಿದೆ. ಆ್ಯಪಲ್ ಏರ್‌ಟ್ಯಾಗ್ ಸರಿಸುಮಾರು ಒಂದು ವರ್ಷ ಬಾಳಿಕೆ ಬರುತ್ತದೆ ಎಂದು ಹೇಳಿದೆ.

ಉಪಯೋಗವೇನು?

ಮನೆಯಲ್ಲಿ ಮಕ್ಕಳು ಮತ್ತು ಹಿರಿಯರು ಇದ್ದರೆ, ಆಕಸ್ಮಿಕವಾಗಿ ಕೆಲವೊಂದು ಅಗತ್ಯ ವಸ್ತುಗಳನ್ನು ಅವರು ಮರೆತು ಎಲ್ಲೋ ಒಂದೆಡೆ ಇರಿಸಿರುತ್ತಾರೆ. ಅಂತಹ ಉಪಕರಣಗಳಿಗೆ ಬ್ಲೂಟೂತ್ ಟ್ರ್ಯಾಕರ್ ಅಳವಡಿಸಿದ್ದರೆ, ಸುಲಭದಲ್ಲಿ ಪತ್ತೆಹಚ್ಚಬಹುದು.

ಬಳಕೆ ಹೇಗೆ?

ಬ್ಲೂಟೂತ್ ಟ್ರ್ಯಾಕರ್ ಅಳವಡಿಸುವುದು ಮತ್ತು ಬಳಸುವುದು ತೀರಾ ಸುಲಭ. ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿಯೇ ಬ್ಲೂಟೂತ್ ಟ್ರ್ಯಾಕರ್ ಅನ್ನು ಪೇರ್ ಮಾಡಿಕೊಂಡರೆ ಸಾಕು. ಅದಕ್ಕೆ ಬೇಕಾದ ಹೆಸರನ್ನು ಕೂಡ ಕೊಡಬಹುದು. ಅಲ್ಲದೆ, ಫೋನ್ ಆ್ಯಪ್ ಜತೆಗೆ ಬ್ಲೂಟೂತ್ ಟ್ರ್ಯಾಕರ್ ಸಿಂಕ್ ಮಾಡಿಕೊಂಡಿದ್ದರೆ, ಅವುಗಳನ್ನು ರಿಂಗ್ ಮಾಡುವುದು, ಲೊಕೇಶನ್ ಟ್ರ್ಯಾಕ್ ಮಾಡುವುದು ಕೂಡ ಸುಲಭ.

ಏನೆಲ್ಲ ಅನುಕೂಲಗಳಿವೆ?

ಕೆಲವೊಂದು ಬ್ಲೂಟೂತ್ ಟ್ರ್ಯಾಕರ್‌ಗಳು ನಿಮ್ಮ ಫೋನ್ ಜತೆಗೆ ಜೋಡಿಸಿಕೊಂಡಿದ್ದು, ನಿಗದಿತ ಅಂತರದಿಂದ ದೂರ ಹೋಗುತ್ತಿದ್ದಂತೆ ತಕ್ಷಣ ಅಲರ್ಟ್ ಸಂದೇಶ ಬರುತ್ತದೆ. ಅಂದರೆ, ನಿಮ್ಮ ಬ್ಲೂಟೂತ್ ಟ್ರ್ಯಾಕರ್ ಅಳವಡಿಸಿದ ಬ್ಯಾಗ್, ಇಲ್ಲವೇ ಏನಾದರೂ ಉಪಕರಣವನ್ನು ನಿಮ್ಮ ಬಳಿಯಿಂದ ಯಾರಾದರೂ ಎಗರಿಸಲು ಯತ್ನಿಸಿದರೆ, ಅಥವಾ ಮನೆಯಲ್ಲೇ ಆಗಿರಬಹುದು ನಿಮ್ಮ ಬ್ಲೂಟೂತ್ ಸಂಪರ್ಕದಿಂದ ದೂರ ಇದ್ದರೆ ನಿಮಗೆ ಸಂದೇಶ ಕೂಡ ಬರುತ್ತದೆ. ಹೀಗಾಗಿ ನಿಮ್ಮ ಅಮೂಲ್ಯ ವಸ್ತು ಸದಾ ನಿಮ್ಮ ಬಳಿಯೇ ಇರುವಂತೆ ನೋಡಿಕೊಳ್ಳಬಹುದು. ಕಳೆದುಹೋಯಿತು ಅಥವಾ ಮರೆತು ಎಲ್ಲೋ ಇರಿಸಿಬಂದೆ ಎನ್ನುವ ಪ್ರಮೇಯವಿರುವುದಿಲ್ಲ..

ಟ್ರ್ಯಾಕಿಂಗ್ ಬಗ್ಗೆ ಚಿಂತಿಸಬೇಕಿಲ್ಲ..

ಬ್ಲೂಟೂತ್ ಟ್ರ್ಯಾಕರ್ ಕೆಲಸ ಮಾಡಲು ಬ್ಲೂಟೂತ್ ಸಂಪರ್ಕ ಅಗತ್ಯವಾಗಿ ಬೇಕಾಗುತ್ತದೆ. ಇಲ್ಲಿ ನೀವು ಪೇರ್ ಮಾಡಿದ ಬ್ಲೂಟೂತ್ ಟ್ರ್ಯಾಕರ್ ನಿಮ್ಮ ಫೋನ್ ಜತೆ ಮಾತ್ರ ಸಂಪರ್ಕದಲ್ಲಿರುವುದರಿಂದ, ಅದನ್ನು ಬೇರೆ ಇನ್ಯಾರೋ ಟ್ರ್ಯಾಕ್ ಮಾಡಿ ಬಳಸುತ್ತಾರೆ ಎನ್ನುವ ಭಯ ಬೇಕಾಗಿಲ್ಲ. ನಿಮ್ಮ ಬ್ಲೂಟೂತ್ ಟ್ರ್ಯಾಕರ್ ಅನ್ನು ಇನ್ನೊಬ್ಬರ ಜತೆ ನೀವು ಶೇರ್ ಮಾಡಿ, ಅನುಮತಿಸಿದರಷ್ಟೇ ಅವರು ಕೂಡ ನೋಡಲು ಸಾಧ್ಯವಾಗುತ್ತದೆ. ಹೀಗಾಗಿ ಟ್ರ್ಯಾಕಿಂಗ್ ಕುರಿತು ಚಿಂತಿಸಬೇಕಾಗಿಲ್ಲ ಎಂದು ಎಲ್ಲ ಕಂಪನಿಗಳು ಗ್ರಾಹಕರಿಗೆ ಹೇಳುತ್ತವೆ.

ಬೆಲೆ ಎಷ್ಟಿರುತ್ತದೆ?

ದೇಶದಲ್ಲಿ ಬ್ಲೂಟೂತ್ ಟ್ರ್ಯಾಕರ್‌ಗಳ ಬೆಲೆ ಅಂದಾಜು ₹2,500 ರಿಂದ ಆರಂಭವಾಗುತ್ತದೆ. ಆ್ಯಪಲ್ ಪರಿಚಯಿಸಿದ ಏರ್‌ಟ್ಯಾಗ್ ಒಂದಕ್ಕೆ ₹3,190 ಇದೆ. ಟೈಲ್ ಟ್ರ್ಯಾಕರ್ ಕೂಡ ಆರಂಭಿಕ ದರ ₹2,900 ಹೊಂದಿದೆ. ಮಾದರಿ ಮತ್ತು ವಿನ್ಯಾಸಕ್ಕೆ ಅನುಗುಣವಾಗಿ ದರ ವ್ಯತ್ಯಾಸವಾಗುತ್ತದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು