ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆ್ಯಪಲ್ ಐಫೋನ್ 14 ಪ್ರೊ: ಫೋಟೋಗ್ರಫಿ-ಪ್ರಿಯರಿಗೆ ಅಂಗೈಯ ಸಂಗಾತಿ

Last Updated 11 ಅಕ್ಟೋಬರ್ 2022, 11:35 IST
ಅಕ್ಷರ ಗಾತ್ರ

ಆ್ಯಪಲ್ ಈ ವರ್ಷ ಬಿಡುಗಡೆ ಮಾಡಿರುವ ಐಫೋನ್ 14 ಸರಣಿಯ 'ಪ್ರೊ' ಆವೃತ್ತಿ ಪ್ರಜಾವಾಣಿಗೆ ರಿವ್ಯೂಗೆ ದೊರೆತಿದ್ದು, ಎರಡು ವಾರಗಳ ಬಳಕೆಯ ಸಂದರ್ಭದಲ್ಲಿ ಗಮನಿಸಿದ ಅಂಶಗಳು ಇಲ್ಲಿವೆ.

ಐಫೋನ್ 14 ಪ್ರೊ ನೋಡಿದ ತಕ್ಷಣ ಗಮನ ಸೆಳೆಯುವುದು ಅದರ ಸ್ಕ್ರೀನ್ ಮೇಲೆ ಕ್ಯಾಪ್ಸೂಲ್ ಮಾತ್ರೆಯಾಕಾರದಲ್ಲಿರುವ 'ಡೈನಮಿಕ್ ಐಲೆಂಡ್'. ಇದು ಸೆಲ್ಫೀ ಕ್ಯಾಮೆರಾ ಇರುವ ಹಾಗೂ ಫೇಸ್ ಐಡಿ ತಂತ್ರಾಂಶ ಅಡಕವಾಗಿರುವ ಖಾಲಿ ಸ್ಥಳ. ಅನ್ಯ ಫೋನ್‌ಗಳಲ್ಲಿರುವ 'ನಾಚ್'ಗಿಂತ ವಿಭಿನ್ನವಾಗಿ ಗಮನ ಸೆಳೆಯುತ್ತದೆ ಮತ್ತು ಹಿಂದಿನ ಐಫೋನ್‌ಗಳಿಗಿಂತ ಕಡಿಮೆ ಸ್ಥಳಾವಕಾಶವನ್ನು ಬಳಸುತ್ತದೆ. ಕರೆ ಬಂದಾಗ ಮತ್ತು ಹಾಡು ಪ್ಲೇ ಆಗುವಾಗ ಈ ಜಾಗದಲ್ಲಿ ಅತ್ಯಾಕರ್ಷಕವಾಗಿ ಅವು ಕಾಣಿಸಿಕೊಳ್ಳುತ್ತವೆ ಮತ್ತು ಅದಕ್ಕೆ ತಕ್ಕಂತೆ ಗಾತ್ರವನ್ನೂ (ಎರಡು ಬದಿಯಿಂದ ವಿಸ್ತಾರವಾಗಿ) ಸ್ವಲ್ಪ ಮಟ್ಟಿಗೆ ಬದಲಾಯಿಸಿಕೊಳ್ಳುತ್ತದೆ.

6.1 ಇಂಚಿನ OLED (ಸೂಪರ್ ರೆಟಿನಾ XDR) ಸ್ಕ್ರೀನ್ 120GHz ರೀಫ್ರೆಶ್ ರೇಟ್ ಇರುವುದರಿಂದ ಮತ್ತು ಅತ್ಯಾಧುನಿಕ ಐಒಎಸ್ 16ರ ಕಾರ್ಯಾಚರಣೆ ವ್ಯವಸ್ಥೆಯ ಮೂಲಕ ಅತ್ಯಂತ ಸುಲಲಿತವಾದ ಬ್ರೌಸಿಂಗ್ ಸಾಧ್ಯವಾಗುತ್ತದೆ. ಹಿಂದಿನ ಫೋನ್‌ಗಳಿಗಿಂತ ಉತ್ತಮವಾದ ಸ್ಕ್ರೀನ್ ಪ್ರಖರತೆ ಇರುವುದರಿಂದ ಹೊರಾಂಗಣದಲ್ಲಂತೂ ಕಣ್ಣಿಗೆ ಯಾವುದೇ ರೀತಿಯ ತ್ರಾಸವೂ ಇಲ್ಲದೆ ಫೋನ್‌ನಲ್ಲಿ ಕೆಲಸ ಮಾಡಬಹುದು. ಅದೇ ರೀತಿಯಾಗಿ, ಮಂದ ಬೆಳಕಿನಲ್ಲಿಯೂ ಕಣ್ಣುಗಳಿಗೆ ಹಾನಿಯಾಗದಂತಹಾ ಸ್ವಯಂಚಾಲಿತ ಪ್ರಖರತೆ ವ್ಯವಸ್ಥೆ ಗಮನ ಸೆಳೆಯುತ್ತದೆ. ಸುತ್ತ ಗಟ್ಟಿಯಾದ ಫ್ರೇಮ್ ಇದ್ದು, ಉತ್ತಮ ಬಿಲ್ಡ್ ಹೊಂದಿದೆ.

ಲಾಕ್ ಸ್ಕ್ರೀನ್‌ಗಿಂತ ಮಬ್ಬಾಗಿರುವ ಸ್ಕ್ರೀನ್ ಮೇಲೆ ದಿನಾಂಕ, ಸಮಯವಲ್ಲದೆ, ಈ ಬಾರಿ ಹೆಚ್ಚುವರಿ ವಿಜೆಟ್‌ಗಳನ್ನೂ (ಕ್ಯಾಲೆಂಡರ್, ಅಲಾರಂ, ಬ್ಯಾಟರಿ ಚಾರ್ಜ್ ಮುಂತಾದ ಸೀಮಿತ ವಿಜೆಟ್‌ಗಳನ್ನು) ಸೇರಿಸುವ ಆಯ್ಕೆ ನೀಡಲಾಗಿದೆ. ಲಾಕ್ ಸ್ಕ್ರೀನ್ ಮೇಲೆ ನೋಟಿಫಿಕೇಶನ್‌ಗಳು ಕಾಣಿಸಿಕೊಳ್ಳುತ್ತವೆ. ಅನ್‌ಲಾಕ್ ಮಾಡಿದಾಗ ಕಾಣಿಸುವ ನೋಟಿಫಿಕೇಶನ್‌ಗಳಲ್ಲದೆ, ಹಳೆಯದನ್ನು ನೋಡಬೇಕಿದ್ದರೆ, ಸ್ಕ್ರೀನ್ ಕೆಳಭಾಗದಿಂದ ಒತ್ತಿಹಿಡಿದರಾಯಿತು.

ಸದಾ ಕಾಲ ಆನ್ ಇರುವ ಸ್ಕ್ರೀನ್, ಆನ್ ಇದ್ದರೂ ಕೂಡ ಬ್ಯಾಟರಿ ಹೆಚ್ಚೇನೂ ವ್ಯಯವಾಗದಂತಿರುವ ತಂತ್ರಾಂಶ ಮತ್ತೊಂದು ವಿಶೇಷ. ಇದು ಲಾಕ್ ಸ್ಕ್ರೀನ್‌ನಂತೆಯೇ ಕಂಡರೂ, ಸ್ವಲ್ಪ ಕಾಲ ಬಳಸದೇ ಬಿಟ್ಟಾಗ ಬೆಳಕಿನ ಪ್ರಮಾಣ ಮಂದವಾಗುವ ಕಾರಣ, ಹೆಚ್ಚು ಬ್ಯಾಟರಿ ಚಾರ್ಜ್ ವ್ಯಯವಾಗುವುದಿಲ್ಲ.

ಅದ್ಭುತ ಕ್ಯಾಮೆರಾ
ಐಫೋನ್ ಕ್ಯಾಮೆರಾಗಳು ಎಂದಿನಂತೆಯೇ ಗಮನ ಸೆಳೆದರೆ, ಈ ವರ್ಷದ ಅಪ್‌ಗ್ರೇಡ್, ಛಾಯಾಗ್ರಹಣ-ಪ್ರಿಯರಿಗೆ ಹೇಳಿ ಮಾಡಿಸಿದಂತಿದೆ. 48 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ ಲೆನ್ಸ್ ಇದ್ದು, ಈಗಾಗಲೇ ಚಿತ್ರ, ವಿಡಿಯೊ ಗುಣಮಟ್ಟಕ್ಕೆ ಹೆಸರು ಪಡೆದಿರುವ ಐಫೋನ್‌ಗೆ ಮತ್ತಷ್ಟು ಬಲ ಬಂದಂತಾಗಿದೆ. ಜೊತೆಗೆ, ಫ್ಲ್ಯಾಶ್ ಹಾಗೂ ಪ್ರಬಲವಾಗಿರುವ ತ್ರಿವಳಿ ಕ್ಯಾಮೆರಾ ವ್ಯವಸ್ಥೆ ಇದೆ.

ಐಫೋನ್ 14 ಪ್ರೊ ಮೂಲಕ ತೆಗೆದ ಚಿತ್ರ
ಐಫೋನ್ 14 ಪ್ರೊ ಮೂಲಕ ತೆಗೆದ ಚಿತ್ರ

ಫೋಟೊ, ವಿಡಿಯೊಗಳಂತೂ ಅತ್ಯುತ್ತಮ ಗುಣಮಟ್ಟದಲ್ಲಿ ಮೂಡಿಬರುತ್ತವೆ. 3X ಆಪ್ಟಿಕಲ್ ಝೂಮ್ ಹಾಗೂ 15X ಡಿಜಿಟಲ್ ಝೂಮ್ ವ್ಯವಸ್ಥೆಯಿದೆ. ಇಷ್ಟು ಒಳ್ಳೆಯ ಕ್ಯಾಮೆರಾ ಲೆನ್ಸ್‌ಗಳಿರುವಾಗ ಆಪ್ಟಿಕಲ್ ಝೂಮ್ ಇನ್ನಷ್ಟು ಹೆಚ್ಚು ನೀಡಬಹುದಿತ್ತು ಎಂಬ ಆಸೆ ಮೂಡಿದ್ದು ಸುಳ್ಳಲ್ಲ. 48 ಮೆಗಾಪಿಕ್ಸೆಲ್‌ಗಳ ಸಾಮರ್ಥ್ಯದ ವೈಡ್ ಆ್ಯಂಗಲ್ ಪ್ರಧಾನ ಲೆನ್ಸ್ ಅತ್ಯುತ್ತಮ ಡೀಟೇಲ್ ಮತ್ತು ವರ್ಣವೈವಿಧ್ಯದ ನಿಖರತೆಗೆ ಕಾರಣವಾಗಿದೆ. ಯಾವುದೇ ರೀತಿಯ ಬೆಳಕಿನ ವ್ಯವಸ್ಥೆಯಲ್ಲಿ ಅದು ಹೊಂದಿಕೊಂಡು ಉತ್ತಮ ಗುಣಮಟ್ಟದ ಫೋಟೊ, ವಿಡಿಯೊಗಳನ್ನು ಒದಗಿಸುತ್ತದೆ. ಸಮೀಪದ ಶಾಟ್‌ಗಳಿಗೆ ಮ್ಯಾಕ್ರೋ ಕ್ಯಾಮೆರಾ ಲೆನ್ಸ್ ಆಗಿ ಪರಿವರ್ತನೆಯಾಗುವ 12 MP ಅಲ್ಟ್ರಾ ವೈಡ್ ಆ್ಯಂಗಲ್ ಲೆನ್ಸ್, ಚಿತ್ರಗಳ ಗುಣಮಟ್ಟಕ್ಕೆ ಮತ್ತಷ್ಟು ಮೆರುಗು ನೀಡುತ್ತದೆ. ಅದೇ ರೀತಿ, 12MP ಟೆಲಿಫೋಟೋ ಲೆನ್ಸ್ ಅಂತೂ 3X ಝೂಮ್ ಮೂಲಕ, ದೂರದ ಚಿತ್ರಗಳನ್ನು ಗುಣಮಟ್ಟದ ಜೊತೆಗೆ ಸೆರೆಹಿಡಿಯಲು ಕಾರಣವಾಗುತ್ತದೆ. ವಿಡಿಯೊ ಬಗೆಗಿನ ತಂತ್ರಾಂಶವನ್ನೂ ಉನ್ನತೀಕರಿಸಲಾಗಿದ್ದು, ಚಲನೆಯ ವೇಳೆ ಸಣ್ಣಪುಟ್ಟ ಅದುರುವಿಕೆಯನ್ನು (ಶೇಕ್) ಉತ್ತಮವಾಗಿ ನಿಭಾಯಿಸುತ್ತದೆ. ಸಿನಿಮ್ಯಾಟಿಕ್ ಮೋಡ್‌ನಲ್ಲಿ 4ಕೆ ರೆಸೊಲ್ಯುಶನ್‌ನಲ್ಲಿ ವಿಡಿಯೊ ರೆಕಾರ್ಡಿಂಗ್ ಮಾಡಬಹುದಾಗಿದ್ದು, 5ಜಿ ನೆಟ್‌ವರ್ಕ್ ವೇಗದ ನಿರೀಕ್ಷೆಯಲ್ಲಿರುವ ಯೂಟ್ಯೂಬರ್‌ಗಳಿಗಂತೂ, ಅತ್ಯುತ್ತಮ ಗುಣಮಟ್ಟದಲ್ಲಿ ವಿಡಿಯೊಗಳನ್ನು ತಯಾರಿಸಿ ಅಪ್‌ಲೋಡ್ ಮಾಡಲು ಇದು ಅನುಕೂಲಕರ. ವಿಡಿಯೊ ರೆಕಾರ್ಡಿಂಗ್ ಮಾಡುವಾಗ ಧ್ವನಿಯೂ ಉತ್ತಮವಾಗಿ ಸೆರೆಯಾಗುತ್ತದೆ ಎಂಬುದನ್ನು ಕೂಡ ಗಮನಿಸಬೇಕು.

ಎ16 ಬಯೋನಿಕ್ ಚಿಪ್ ಸೆಟ್ ಮತ್ತು 5ಕೋರ್ ಜಿಪಿಯು ಇರುವುದರಿಂದಾಗಿ ಎಲ್ಲ ರೀತಿಯ ಕಾರ್ಯಾಚರಣೆ ಸುಲಲಿತವಾಗಿಯೂ, ವೇಗವಾಗಿಯೂ ಆಗುತ್ತದೆ. ಭರ್ಜರಿ ಗ್ರಾಫಿಕ್ಸ್ ಇರುವ ಗೇಮ್‌ಗಳನ್ನು ಆಡುವ ಸಂದರ್ಭದಲ್ಲಿ ಯಾವುದೇ ರೀತಿಯ ಸ್ಥಾಗಿತ್ಯ ಅಥವಾ ವಿಳಂಬದ ತೊಡಕು ಆಗುವುದಿಲ್ಲ. ಅದೇ ರೀತಿ, ಐಫೋನ್ 13 ಪ್ರೊಗಿಂತಲೂ ಹೆಚ್ಚು ಸಾಮರ್ಥ್ಯದ ಬ್ಯಾಟರಿಯಿಂದಾಗಿ, ಸದಾ ಕಾಲ ಆನ್ ಇರುವ ಸ್ಕ್ರೀನ್ ಹೊರತಾಗಿಯೂ, ಇಮೇಲ್, ವಾಟ್ಸ್ಆ್ಯಪ್, ಬ್ರೌಸಿಂಗ್, ಆಡಿಯೋ, ವಿಡಿಯೊಗಳ ಸಾಮಾನ್ಯ ಬಳಕೆಯಲ್ಲಿ ಎರಡು ದಿನಗಳಿಗೆ ಸಾಕಾಗುವಷ್ಟು ಬ್ಯಾಟರಿ ಚಾರ್ಜ್ ಇರುತ್ತದೆ. ವಿಡಿಯೊ ರೆಕಾರ್ಡಿಂಗ್, ವಿಡಿಯೊ ಎಡಿಟಿಂಗ್, ಗೇಮಿಂಗ್‌ಗೆ ಸಹಜವಾಗಿ ಹೆಚ್ಚು ಬ್ಯಾಟರಿಯ ಅಗತ್ಯವಿರುತ್ತದೆ. ಈಗ ಆರಂಭವಾಗಿರುವ 5ಜಿ ಬಳಸುವುದಕ್ಕೆ ತಂತ್ರಾಂಶ ಅಪ್‌ಗ್ರೇಡ್ ಶೀಘ್ರವೇ ಲಭ್ಯವಾಗಲಿದೆ ಎಂದು ಆ್ಯಪಲ್ ತಿಳಿಸಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ಆ್ಯಪಲ್ ಐಫೋನ್ 14 ಪ್ರೊ ನೋಡುವುದಕ್ಕೂ ಆಕರ್ಷಕವಾಗಿದೆ ಮತ್ತು ಹಿಂದಿನ ಫೋನ್‌ಗಳಿಗಿಂತ ಗುಣಮಟ್ಟವೂ ವೃದ್ಧಿಯಾಗಿದೆ. ಡೈನಮಿಕ್ ಐಲೆಂಡ್ ಎಂಬ ಸ್ಕ್ರೀನ್ ಮೇಲೆ ಎದ್ದುಕಾಣಿಸುವ ಜಾಗ, ಸದಾ ಕಾಲ ಆನ್ ಇರುವ ಲಾಕ್ ಸ್ಕ್ರೀನ್‌ನೊಂದಿಗೆ ಹೊಸತನವಿದೆ ಮತ್ತು ಸ್ಟೋರೇಜ್‌ಗೆ ಅನುಗುಣವಾಗಿ ₹1,29,990 ದಿಂದ ಆರಂಭವಾಗುವ ಬೆಲೆಯಲ್ಲಿ 128ಜಿಬಿ, 256ಜಿಬಿ, 512ಜಿಬಿ ಜೊತೆಗೆ 1ಟಿಬಿ ಸ್ಟೋರೇಜ್ ಸಾಮರ್ಥ್ಯ ಇರುವ ಮಾದರಿಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT