ಸೋಮವಾರ, ಜೂನ್ 21, 2021
30 °C

Zeb-Soul: ಬ್ಲೂಟೂತ್ ಇಯರ್‌ಫೋನ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Zebronics Zeb Soul

ಡಿಜಿಟಲ್ ಸಾಧನಗಳ ತಯಾರಿಕೆಯಲ್ಲಿ ದೇಶೀಯವಾಗಿ ಹೆಸರು ಮಾಡುತ್ತಿರುವ ಜೆಬ್ರಾನಿಕ್ಸ್ ಕಂಪನಿಯು ಇತ್ತೀಚೆಗೆ ಜೆಬ್-ಸೋಲ್ ಹೆಸರಿನಲ್ಲಿ ಬ್ಲೂಟೂತ್ ನೆಕ್‌ಬ್ಯಾಂಡ್ ಸ್ಪೀಕರ್ ಹೊರತಂದಿದೆ.

ಇದು ವೈರ್‌ಲೆಸ್ ಬ್ಲೂಟೂತ್ ಇಯರ್‌ಫೋನ್ ಆಗಿದ್ದು, ನೋಡಲು ಆಕರ್ಷಕವಾಗಿದೆ. ಕತ್ತಿನ ಸುತ್ತ ಚೆನ್ನಾಗಿ ಕೂರುತ್ತದೆ. ಇದರ ಇಯರ್ ಬಡ್‌ಗಳು ಬಳಕೆಯಲ್ಲಿಲ್ಲದಿರುವಾಗ ಪರಸ್ಪರ ಬೆಸೆಯುವಂತೆ ಅಯಸ್ಕಾಂತವಿದೆ. ವಿಶೇಷತೆ ಎಂದರೆ 11.5 ಗಂಟೆಗಳ ಪ್ಲೇಬ್ಯಾಕ್ ಸಮಯ. ಅಂದರೆ, ಸಂಪೂರ್ಣವಾಗಿ ಚಾರ್ಜ್ ಆಗಲು 2 ಗಂಟೆ ಬೇಕಿದ್ದು, ನಿರಂತರವಾಗಿ 11.5 ಗಂಟೆ ಹಾಡುಗಳನ್ನು ಆಲಿಸಬಹುದು. ನಿರಂತರವಾಗಿ 5.5 ಗಂಟೆ ಫೋನ್ ಕರೆಗೆ ಬಳಸಬಹುದು. ಇದರ ಸ್ಟ್ಯಾಂಡ್‌ಬೈ ಸಮಯ 200 ಗಂಟೆ ಎಂದು ಕಂಪನಿ ಹೇಳಿಕೊಂಡಿದೆ. ಕೇವಲ 38 ಗ್ರಾಂ ತೂಗುವ ಈ ಇಯರ್‌ಫೋನ್ (ನೆಕ್ ಬ್ಯಾಂಡ್) ಅದ್ಭುತವಾದ ಧ್ವನಿಯನ್ನು ಹೊರಸೂಸುತ್ತದೆ.

ವಾಯ್ಸ್ ಅಸಿಸ್ಟೆಂಟ್ ಬೆಂಬಲಿಸುವ ಈ ನೆಕ್ ಬ್ಯಾಂಡ್, ಎಎಸಿ (ಅಡ್ವಾನ್ಸ್‌ಡ್ ಆಡಿಯೋ ಕೋಡಿಂಗ್) ವೈಶಿಷ್ಟ್ಯದೊಂದಿಗೆ ಬ್ಲೂಟೂತ್ ಮೂಲಕ ಫೋನ್‌ನಿಂದ ಆಡಿಯೋ ಪ್ರಸಾರವನ್ನು ಸುಲಲಿತವಾಗಿಸುತ್ತದೆ. ಏಕಕಾಲದಲ್ಲಿ ಎರಡು ಫೋನ್ ಅಥವಾ ಬ್ಲೂಟೂತ್ ಸಾಧನಗಳನ್ನು ಇದಕ್ಕೆ ಸಂಪರ್ಕಿಸಬಹುದಾಗಿದೆ. ಮೊದಲು ಒಂದು ಫೋನ್ ಸಂಪರ್ಕಿಸಿ (Pair ಮಾಡಿ), ಬಳಿಕ ಆ ಫೋನ್‌ನಲ್ಲಿ ಬ್ಲೂಟೂತ್ ಆಫ್ ಮಾಡಬೇಕು. ನಂತರ ಇನ್ನೊಂದು ಸಾಧನದಲ್ಲಿ ಬ್ಲೂಟೂತ್ ಆನ್ ಮಾಡಬೇಕು. ಒಮ್ಮೆ ಒಬ್ಬರು ತಮ್ಮ ಫೋನ್‌ನ ಆಡಿಯೋ ಕೇಳಲು ಇದನ್ನು ಬಳಸಿದರೆ, ಮತ್ತೊಂದು ಬಾರಿಗೆ ಇನ್ನೊಬ್ಬರು ತಮ್ಮ ಫೋನ್‌ನಿಂದ ಹಾಡುಗಳನ್ನು ಇದೇ ಇಯರ್‌ಫೋನ್‌ನಲ್ಲಿ ಆಲಿಸಬಹುದು. ಈ ಡ್ಯುಯಲ್ ಪೇರಿಂಗ್ ವ್ಯವಸ್ಥೆಯು ಮನೆಯಲ್ಲಿ ಹಾಡುಗಳನ್ನು ಕೇಳಲು ಅನುಕೂಲ.

ಕರೆ ಸ್ವೀಕರಿಸಲು ಮತ್ತು ನಿರಾಕರಿಸಲು ಒಂದು ಬಟನ್, ಹಾಡುಗಳ ಪ್ಲೇ/ಪಾಸ್ ಬಟನ್, ವಾಲ್ಯೂಮ್ ಅಪ್/ಡೌನ್ ಬಟನ್ ಮತ್ತು ಅದನ್ನೇ ಒತ್ತಿ ಹಿಡಿದುಕೊಂಡರೆ ಮುಂದಿನ/ಹಿಂದಿನ ಹಾಡನ್ನು ಕೇಳಬಹುದು. ಮೈಕ್ರೋ ಯುಎಸ್‌ಬಿ ಚಾರ್ಜಿಂಗ್ ಪೋರ್ಟ್ ಇದರಲ್ಲಿದೆ. ನೀರು ಬಿದ್ದರೆ ಪಕ್ಕನೇ ಏನೂ ಆಗುವುದಿಲ್ಲ. ಆ ರೀತಿಯ ಕವಚವಿದೆ. ಕರೆ ಬರುವಾಗ ಅಲರ್ಟ್ ಮಾಡಲು ವೈಬ್ರೇಟ್ ಆಗುವ ವ್ಯವಸ್ಥೆ ಇದರಲ್ಲಿದೆ. ಇದರೊಂದಿಗೆ, ಆನ್/ಆಫ್ ಮಾಡುವ ಬಟನ್ ಕೂಡ ಇದೆ.

ರಬ್ಬರ್‌ನ ಇಯರ್‌ಬಡ್ಸ್ ಹಾಗೂ ಯುಎಸ್‌ಬಿ ಚಾರ್ಜಿಂಗ್ ಕೇಬಲ್ ಹಾಗೂ ಬಳಕೆದಾರರ ವಿವರಣಾ ಪುಸ್ತಕವನ್ನೂ ನೀಡಲಾಗುತ್ತಿದ್ದು, ಈ ಬ್ಲೂಟೂತ್ ನೆಕ್ ಬ್ಯಾಂಡ್ ಆಕರ್ಷಕವಾದ ತುಸು ದೊಡ್ಡದೇ ಎನಿಸಬಹುದಾದ ಬಾಕ್ಸ್‌ನಲ್ಲಿ ಮಾರಾಟಕ್ಕೆ ಲಭ್ಯವಿದೆ. ನೆಕ್ ಬ್ಯಾಂಡ್ ರಬ್ಬರ್ ಗುಣಮಟ್ಟವು ಚೆನ್ನಾಗಿದ್ದು, ಕತ್ತಿನ ಸುತ್ತ ಅನುಕೂಲಕರವಾಗಿ ಕೂರುತ್ತದೆ. ಪ್ರೀಮಿಯಂ ಲುಕ್ ಜತೆಗೆ ವಿನ್ಯಾಸವು ಆಕರ್ಷಕವಾಗಿದೆ. ಇದರ ಬೆಲೆ ರೂ.3499.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು