ಭಾನುವಾರ, 21 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗೀತದ ಜೊತೆಗೆ ಮೋಜಿಗಾಗಿ ಫಿಜೆಟ್ ಸ್ಪಿನ್ನರ್: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್

Published 20 ಜೂನ್ 2024, 8:25 IST
Last Updated 20 ಜೂನ್ 2024, 8:25 IST
ಅಕ್ಷರ ಗಾತ್ರ
ಪ್ರಮುಖ ವೈಶಿಷ್ಟ್ಯಗಳು
  • 360° ಫಿಜೆಟ್ ಸ್ಪಿನ್ನರ್ ಕೇಸ್
  • X-ಬೇಸ್ ತಂತ್ರಜ್ಞಾನ
  • ಸುತ್ತಲಿನ ನಾಯ್ಸ್ ಕ್ಯಾನ್ಸಲೇಶನ್

ಸಂಗೀತಪ್ರಿಯರಿಗಾಗಿ ಅದ್ಭುತವಾದ ಧ್ವನಿಯನ್ನು ಆಸ್ವಾದಿಸುವಂತೆ ಮಾಡಬಲ್ಲ ಸಾಕಷ್ಟು ಇಯರ್‌ಫೋನ್‌ಗಳು, ಇಯರ್‌ಬಡ್‌ಗಳು ಈಗ ಮಾರುಕಟ್ಟೆಯಲ್ಲಿ ಸಾಕಷ್ಟಿವೆ. ಅದಕ್ಕೆ ಉತ್ತಮ ಮಾರುಕಟ್ಟೆಯೂ ಇರುವುದರಿಂದ, ವಿಶೇಷವಾಗಿ ಯುವ ಜನರನ್ನು ಸೆಳೆಯುವಂತೆ ಮಾಡುವಲ್ಲಿ ವಿವಿಧ ಕಂಪನಿಗಳು ಸಾಕಷ್ಟು ಕಸರತ್ತು ನಡೆಸುತ್ತವೆ. ಅಂಥದ್ದರಲ್ಲಿ 'ನು ರಿಪಬ್ಲಿಕ್' (Nu Republic) ಎಂಬ ಭಾರತೀಯ ಮೂಲದ ಕಂಪನಿಯು ವಿಶಿಷ್ಟವಾದ ಇಯರ್‌ಬಡ್‌ಗಳನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿದೆ. ಅದುವೇ ಫಿಜೆಟ್ ಸ್ಪಿನ್ನರ್ ಸೈಬರ್‌ಸ್ಟಡ್ ಸ್ಪಿನ್ 360° ಇಯರ್‌ಬಡ್. ಇದನ್ನು ಎರಡು ವಾರಗಳ ಕಾಲ ಬಳಸಿ ನೋಡಿದಾಗಿನ ಅನುಭವ ಇಲ್ಲಿದೆ.

ವಿನ್ಯಾಸ

ಫಿಜೆಟ್ ಸ್ಪಿನ್ನರ್ (Fidget Spinner) ಎಂಬುದು ಐರೋಪ್ಯ ದೇಶಗಳಲ್ಲಿ ಹೆಚ್ಚು ಜನಪ್ರಿಯವಾಗಿರುವ ಒಂದು ಆಟಿಕೆ. ಇತ್ತೀಚೆಗಷ್ಟೇ ಭಾರತಕ್ಕೂ ಬಂದಿದೆ. ಒಂದು ಕೈಯಲ್ಲಿ ಹಿಡಿದುಕೊಂಡು, ಮತ್ತೊಂದು ಕೈಯಿಂದ ಗಿರಗಿರನೆ ತಿರುಗುವಂತೆ ಮಾಡುವ ಆಟಿಕೆಯಿದು. ಬಹುತೇಕ ಗಿರಿಗಿಟ್ಲಿಯನ್ನು ಹೋಲುತ್ತದೆ. ಮನೋದ್ವೇಗದ ಸಂದರ್ಭದಲ್ಲಿ ಅಥವಾ ಏಕಾಗ್ರತೆಯ ಅಗತ್ಯವಿದ್ದಾಗ, ಕೈಯಲ್ಲಿರುವ ಈ ಸ್ಪಿನ್ನರ್ ಅನ್ನು ತಿರುಗಿಸುತ್ತಾ ನೋಡುವುದರಿಂದ ಉದ್ವೇಗ ಶಮನವಾಗುತ್ತದೆ ಮತ್ತು ಏಕಾಗ್ರತೆ ಹೆಚ್ಚುವುದು ಸಾಧ್ಯ ಎನ್ನುವ ನಂಬಿಕೆ. ದೇಶದಲ್ಲೇ ಮೊದಲ ಬಾರಿಗೆ ಇಂತಹಾ ಫಿಜೆಟ್ ಸ್ಪಿನ್ನರ್ ಆಟಿಕೆಯಲ್ಲೇ ಇಯರ್‌ಬಡ್ ನೀಡಲಾಗಿರುವುದು ವಿಶೇಷ.

ಇಯರ್‌ಬಡ್‌ಗಳನ್ನು ಇರಿಸಬಲ್ಲ ಚಾರ್ಜಿಂಗ್ ಕೇಸ್ ಅನ್ನೇ ಫಿಜೆಟ್ ಸ್ಪಿನ್ನರ್ ಆಗಿ ವಿನ್ಯಾಸಗೊಳಿಸಿರುವ ನು ರಿಪಬ್ಲಿಕ್ ಕಂಪನಿಯು, ಯುವ ಜನರನ್ನು ಆಕರ್ಷಿಸುವಲ್ಲಿ ಯಶಸ್ವಿಯಾಗಿದೆ ಸುಂದರವಾದ ವಿನ್ಯಾಸ, ಆಕರ್ಷಕ ಬಣ್ಣ ಮತ್ತು ಈ ಸ್ಪಿನ್ನರ್‌ನ ಎರಡು ಬಾಹುಗಳಲ್ಲಿ ಎರಡು ಇಯರ್‌ಬಡ್‌ಗಳನ್ನು ಒಳಗಿರಿಸಿದರೆ, ಬ್ಯಾಟರಿ ಚಾರ್ಜ್ ಆಗುತ್ತದೆ. ಇದರ ರೆಕ್ಕೆಗಳನ್ನು (ಗ್ಲೈಡರ್) ತೆರೆಯುವಾಗ ಮತ್ತು ಮುಚ್ಚುವಾಗ, ಸ್ವೀಷ್... ಎಂಬಂತೆ ಧ್ವನಿ ಕೇಳಿಸುತ್ತದೆ. ಜೊತೆಗೆ ಬಣ್ಣದ ಬೆಳಕು ಕೂಡ ಕಾಣಿಸುತ್ತದೆ. ತಂತ್ರಜ್ಞಾನವನ್ನು ಅಪ್ಪಿಕೊಂಡಿರುವ, ಹಾಡುಗಳನ್ನು ಆನಂದಿಸುವ ಮತ್ತು ಆನ್‌ಲೈನ್ ಅಥವಾ ಆಫ್‌ಲೈನ್ ಗೇಮ್‌ಗಳನ್ನು ಆಡುವ ಯುವ ಜನಾಂಗಕ್ಕೆ ಈ ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್‌ಗಳು ನೋಡುವುದಕ್ಕೂ ಆಕರ್ಷಣೀಯ ಮತ್ತು ಹಾಡು ಕೇಳುವುದಕ್ಕೂ ಉತ್ತಮ ಧ್ವನಿ ಹೊಮ್ಮಿಸುವ ವ್ಯವಸ್ಥೆ ಇದೆ.

ಹಾಡುಗಳನ್ನು, ಸಂಗೀತೋಪಕರಣಗಳ ಧ್ವನಿಗಳನ್ನು ಸ್ಪಷ್ಟವಾಗಿ ಆಲಿಸಬಹುದಾಗಿದ್ದು, ಇಯರ್‌ಬಡ್‌ಗಳು ಕಿವಿಯಲ್ಲಿ ಸರಿಯಾಗಿ ಕೂರುತ್ತವೆ.

ಗೇಮ್ ಆಡುವಾಗ ತುಂಬ ಆಸಕ್ತಿದಾಯಕ ಹಂತದಲ್ಲಿ ಚಡಪಡಿಸುವ ಕೈಗಳಿಗೆ ಕೆಲಸ ಕೊಟ್ಟು, ಗಮನ ಕೇಂದ್ರೀಕರಿಸಲು ಸಹಕಾರ ನೀಡುತ್ತದೆ ಈ ಸ್ಪಿನ್ನರ್ ವೈಶಿಷ್ಟ್ಯ. ಲೋಹದ ಆವರಣವಿರುವ ಈ ಚಾರ್ಜಿಂಗ್ ಕೇಸ್ ಅನ್ನು 360 ಡಿಗ್ರಿ ತಿರುಗಿಸಬಹುದಾಗಿದೆ.

ಇದರಲ್ಲಿ ಎರಡು ಮೋಡ್‌ಗಳಿವೆ. ಗೇಮಿಂಗ್ ಮೋಡ್ ಮತ್ತು ಮ್ಯೂಸಿಕ್ ಮೋಡ್. ಇಷ್ಟೇ ಅಲ್ಲದೆ, ಈಗ ಬಹುತೇಕ ಎಲ್ಲ ಇಯರ್‌ಫೋನ್/ಇಯರ್‌ಬಡ್‌ಗಳಲ್ಲಿರುವ ನಾಯ್ಸ್ ಕ್ಯಾನ್ಸಲೇಶನ್ ENC ವೈಶಿಷ್ಟ್ಯವು ಅಡಕವಾಗಿದೆ. ಸುತ್ತಮುತ್ತಲಿನ ಧ್ವನಿಯು ಕಿವಿಯೊಳಗೆ ಕೇಳಿಸದಂತೆ, ಕೇವಲ ಇಯರ್‌ಬಡ್‌ನಲ್ಲಿರುವ ಸ್ಪೀಕರ್‌ಗಳಿಂದ ಹೊರಹೊಮ್ಮುವ ಸಂಗೀತದ ಧ್ವನಿಯನ್ನು ಮಾತ್ರವೇ ಆಲಿಸುವಂತೆ ಮಾಡುವ ವ್ಯವಸ್ಥೆಯಿದು. ಜೊತೆಗೆ, ಎಕ್ಸ್-ಬೇಸ್ ಮೋಡ್ ಮೂಲಕ, ಬೇಸ್ ಧ್ವನಿಯನ್ನು ಹೆಚ್ಚಿಸುವ ವ್ಯವಸ್ಥೆಯಿದ್ದು, ಸಂಗೀತಪ್ರಿಯರಿಗೆ ಇಷ್ಟವಾಗಬಹುದು.

ಬ್ಯಾಟರಿ ಚಾರ್ಜ್ ಬಗ್ಗೆ ಹೇಳುವುದಾದರೆ, ಒಮ್ಮೆ ಚಾರ್ಜ್ ಮಾಡಿದರೆ, ಸುಮಾರು 70 ಗಂಟೆಗಳ ಕಾಲ ನಿರಂತರವಾಗಿ ಹಾಡು ಕೇಳುತ್ತಿರಬಹುದಾಗಿದೆ.

ಪ್ರಮುಖ ವೈಶಿಷ್ಟ್ಯಗಳು

- 360° ಫಿಜೆಟ್ ಸ್ಪಿನ್ನರ್ ಕೇಸ್

- ಆಕರ್ಷಕವಾದ ಕೆಂಪು ಕೇಸ್, ಮೆಟಲ್ ಗ್ಲೈಡರ್‌ಗಳನ್ನು ತೆರೆದಾಗ ಸ್ವೂಷ್ ಅಂತ ಕೇಳಿಸುವ ಧ್ವನಿ

- ಸತತ ಸುಮಾರು 70 ಗಂಟೆ ಬ್ಯಾಟರಿ ಚಾರ್ಜ್ ಬಾಳಿಕೆ

- ಸುತ್ತಲಿನ ನಾಯ್ಸ್ ಕ್ಯಾನ್ಸಲೇಶನ್

- X-ಬೇಸ್ ತಂತ್ರಜ್ಞಾನ

- ಸ್ಪರ್ಶದಿಂದಲೇ ವಾಲ್ಯೂಮ್ ನಿಯಂತ್ರಣ

- ಅವಳಿ ಮೋಡ್ (ಗೇಮ್/ಮ್ಯೂಸಿಕ್)

- ಬೆವರು ಮತ್ತು ಜಲನಿರೋಧಕತೆ

ಬೆಲೆ: ಸೈಬರ್‌ಸ್ಟಡ್ ಸ್ಪಿನ್ ಇಯರ್‌ಬಡ್‌ಗಳ ಸದ್ಯದ ಬೆಲೆ ₹2,499.

ಬಜೆಟ್ ಬೆಲೆಯಲ್ಲಿ ಯುವಜನಾಂಗಕ್ಕೆ ಆಕರ್ಷಣೀಯವಾದ ಈ ಇಯರ್‌ಬಡ್ ಸಂಗೀತ ಕೇಳುವುದಕ್ಕೆ, ಉತ್ತಮ ಬೇಸ್ ಧ್ವನಿಗೆ, ಗೇಮ್ ಆಡುವುದಕ್ಕೆ, ಜೊತೆಗೆ ಫಿಜೆಟ್ ಸ್ಪಿನ್ನರ್ ಮೂಲಕ ಕಾಲಯಾಪನೆಗೂ ಅನುಕೂಲ ಕಲ್ಪಿಸುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT