ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ Galaxy M33: ಉತ್ತಮ ಕ್ಯಾಮೆರಾ, ಬ್ಯಾಟರಿಯ ಶಕ್ತಿಶಾಲಿ ಫೋನ್

Last Updated 19 ಏಪ್ರಿಲ್ 2022, 11:40 IST
ಅಕ್ಷರ ಗಾತ್ರ

ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ ಸರಣಿಯಲ್ಲಿ ಹೊಸದಾಗಿ ಅಂದರೆ ಏಪ್ರಿಲ್ ತಿಂಗಳಾರಂಭದಲ್ಲಿ ಮಾರುಕಟ್ಟೆಗೆ ಬಿಡುಗಡೆಯಾಗಿರುವುದು Galaxy M33 5G. ಹಿಂದಿನ ಎಂ32ರ ಉತ್ತಮ ಅಪ್‌ಗ್ರೇಡ್ ಇದು. ವಿಶೇಷವಾಗಿ ಗ್ಯಾಲಕ್ಸಿ ಎ ಸರಣಿಯ ಅತ್ಯಾಧುನಿಕ ಫೋನ್‌ಗಳಾದ ಎ53 5ಜಿಯಲ್ಲಿ ಬಳಕೆಯಾಗಿರುವ ಹೊಸ ಎಕ್ಸಿನೋಸ್ ಚಿಪ್ ಇಲ್ಲೂ ಬಳಕೆಯಾಗಿದ್ದು, 120Hz ರಿಫ್ರೆಶ್ ರೇಟ್, 6000mAh ಬ್ಯಾಟರಿ ಇದರಲ್ಲಿಯೂ ಇದೆ. ಪ್ರಜಾವಾಣಿಗೆ ರಿವ್ಯೂಗೆ ದೊರೆತಿರುವ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಂ33 5ಜಿ ಫೋನ್ ಹೇಗಿದೆ? ಅದನ್ನು ಎರಡು ವಾರ ಬಳಸಿ ನೋಡಿದಾಗ ಕಂಡುಬಂದ ಅಂಶಗಳು ಇಲ್ಲಿವೆ.

ವಿನ್ಯಾಸ
Galaxy M33 5G ಫೋನ್‌ನ 6.6 ಇಂಚಿನ ಸ್ಕ್ರೀನ್‌ನಲ್ಲಿ ಬೆಝೆಲ್ (ಸುತ್ತ ಖಾಲಿ ಜಾಗ) ಇದೆ. ಸ್ಕ್ರೀನ್ ಮುಂಭಾಗದಲ್ಲಿ ವಾಟರ್-ಡ್ರಾಪ್ ನಾಚ್ (ಕ್ಯಾಮೆರಾ ಸುತ್ತ) ಜೊತೆಗೆ, ಬಹುತೇಕ ಹಳೆಯ ವಿನ್ಯಾಸವೇ ಇದೆ. ಹಿಂಭಾಗದಲ್ಲಿ ಹೊಳೆಯುವ ಕವಚವಿದ್ದು, ಬೆರಳಚ್ಚು ಮೂಡುತ್ತದೆ. ಎಂದಿನಂತೆ ಬಲಭಾಗದಲ್ಲಿ ವಾಲ್ಯೂಮ್ ಹಾಗೂ ಫಿಂಗರ್‌ಪ್ರಿಂಟ್ ಸೆನ್ಸರ್ ಸಹಿತ ಪವರ್ ಬಟನ್, ಎಡಭಾಗದಲ್ಲಿ ಎರಡು ಸಿಮ್ ಕಾರ್ಡ್ ಮತ್ತು ಮೈಕ್ರೋಎಸ್‌ಡಿ ಕಾರ್ಡ್ ಇರಿಸಬಲ್ಲ ಸಿಮ್ ಟ್ರೇ ಇದೆ. ಕೆಳಭಾಗದಲ್ಲಿ ಯುಎಸ್‌ಬಿ ಟೈಪ್-ಸಿ ಪೋರ್ಟ್, ಸ್ಪೀಕರ್, ಮೈಕ್ ಮತ್ತು 3.5ಮಿಮೀ ಹೆಡ್‌ಫೋನ್ ಜ್ಯಾಕ್ ಇದೆ. 215 ಗ್ರಾಂ ತೂಕವಿದ್ದು, ಅರ್ಧವೃತ್ತಾಕಾರದ ಅಂಚುಗಳುಳ್ಳ ಟಿಎಫ್‌ಟಿ ಡಿಸ್‌ಪ್ಲೇ ಇದೆ. ಸ್ಕ್ರೀನ್‌ಗ ಗೊರಿಲ್ಲಾ ಗ್ಲಾಸ್ 5 ಅಳವಡಿಸಲಾಗಿದ್ದು, ಗೀರುಗಳಾಗದಂತೆ ತಡೆಯುತ್ತದೆ.

6000mAh ಬ್ಯಾಟರಿ ಇರುವುದರಿಂದ ಸ್ವಲ್ಪ ಮಟ್ಟಿಗೆ ತೂಕ ಮತ್ತು ದಪ್ಪ ಇದೆಯಾದರೂ, ಬ್ಯಾಟರಿ ಕಾರ್ಯನಿರ್ವಹಣೆ ಚೆನ್ನಾಗಿರುವುದರಿಂದ ಇದೇನೂ ದೊಡ್ಡ ಸಮಸ್ಯೆಯಾಗದು. ಬಹುತೇಕ ಫೋನ್‌ಗಳಲ್ಲಿ AMOLED ಡಿಸ್‌ಪ್ಲೇ ಇದ್ದರೆ, Galaxy M33 5G ಫೋನ್‌ನಲ್ಲಿ FHD+ ಡಿಸ್‌ಪ್ಲೇ ಜೊತೆಗೆ 120Hz ರಿಫ್ರೆಶ್ ರೇಟ್ ಇದೆ. ಆನಿಮೇಶನ್‌ಗಳು, ಗೇಮ್‌ಗಳು, ವೀಡಿಯೊಗಳಲ್ಲಿ ಯಾವುದೇ ವಿಳಂಬ ಇಲ್ಲದೆ, ಸಮರ್ಪಕ ಬಣ್ಣಗಳೊಂದಿಗೆ ವೀಕ್ಷಣೆಯನ್ನು ಸೊಗಸಾಗಿಸಿದೆ.

ಕ್ಯಾಮೆರಾ
ಹಿಂಭಾಗದಲ್ಲಿ ನಾಲ್ಕು ಲೆನ್ಸ್‌ಗಳುಳ್ಳ ಚೌಕಾಕಾರದ ಕ್ಯಾಮೆರಾ ಸೆಟಪ್ ಇದ್ದು 50MP ಪ್ರಧಾನ ಲೆನ್ಸ್, 5MP ಅಲ್ಟ್ರಾ-ವೈಡ್, 2MP ಡೆಪ್ತ್ ಸೆನ್ಸರ್ ಹಾಗೂ 2MP ಮ್ಯಾಕ್ರೋ ಸೆನ್ಸರ್ ಇದೆ. ಡೀಫಾಲ್ಟ್ ಶೂಟಿಂಗ್ ಮೋಡ್‌ನಲ್ಲಿ 12 ಮೆಗಾಪಿಕ್ಸೆಲ್ ಚಿತ್ರವಷ್ಟೇ ಮೂಡಿಬರುತ್ತದೆ. 50 ಮೆಗಾಪಿಕ್ಸೆಲ್ ಬೇಕಿದ್ದರೆ ಕ್ಯಾಮೆರಾ ಸೆಟ್ಟಿಂಗ್ಸ್‌ನಲ್ಲಿ ಈ ಆಯ್ಕೆಯನ್ನು ಆನ್ ಮಾಡಿಕೊಳ್ಳಬೇಕಾಗುತ್ತದೆ. ಚಿತ್ರಗಳು ಮತ್ತು ವಿಡಿಯೊಗಳ ಗುಣಮಟ್ಟವು ಬಹುತೇಕ ಎಲ್ಲ ರೀತಿಯ ಬೆಳಕಿನ ಪರಿಸ್ಥಿತಿಗಳಲ್ಲಿ ಚೆನ್ನಾಗಿ ಮೂಡಿಬರುತ್ತದೆ. ಕ್ಯಾಮೆರಾದಲ್ಲಿ ಸ್ವಯಂಚಾಲಿತ ಫೋಕಸ್ ವ್ಯವಸ್ಥೆಯಿದೆ. 10x ಡಿಜಿಟಲ್ ಝೂಮ್ ವ್ಯವಸ್ಥೆಯಿರುವುದರಿಂದ ದೂರದ ವಸ್ತುಗಳನ್ನು ಕ್ಯಾಮೆರಾದಲ್ಲಿ ಸೆರೆಹಿಡಿಯುವುದು ಅನುಕೂಲಕರವಾಗಿದೆ.

ಮುಂಭಾಗದಲ್ಲಿ 8MP ಸೆಲ್ಫೀ ಕ್ಯಾಮೆರಾ ಇದೆ. ಜೊತೆಗೆ, ಕ್ಯಾಮೆರಾದಲ್ಲಿ ಇಂಟರ್ನೆಟ್ ಸಂಪರ್ಕಗೊಂಡಿರುವಾಗ ಬಳಸಬಹುದಾಗಿರುವ ಫನ್ ಮೋಡ್ ಆಕರ್ಷಕವಾಗಿದೆ. ಸಣ್ಣಪುಟ್ಟ ವಿಡಿಯೊಗಳ ಜಮಾನ ಇದಾಗಿರುವುದರಿಂದ, ನಮ್ಮದೇ ಫೊಟೊಗಳಿಗೆ ವೈವಿಧ್ಯಮಯ ಮತ್ತು ರಂಜನೀಯ ಎಫೆಕ್ಟ್‌ಗಳನ್ನು (ಉದಾಹರಣೆಗೆ, ತಲೆಯ ಮೇಲೆ ಬೆಕ್ಕು ಆಡುವುದು, ಮೈಮೇಲೆ ಮೊಲದ ಮರಿಗಳು ಆಡುತ್ತಿರುವುದು ಇತ್ಯಾದಿ) ನೀಡಿ ಇನ್‌ಸ್ಟಾಗ್ರಾಂ ರೀಲ್ ಅಥವಾ ಫೇಸ್‌ಬುಕ್ ಸ್ಟೋರಿ ಅಥವಾ ವಾಟ್ಸ್ಆ್ಯಪ್ ಸ್ಟೇಟಸ್ ಹಾಕಿಕೊಂಡು ಉಳಿದವರಿಗೂ ರಂಜನೆ ನೀಡಬಹುದು.

ವೈಶಿಷ್ಟ್ಯಗಳು
ಇದರಲ್ಲಿರುವ ರ‍್ಯಾಮ್ ಪ್ಲಸ್ ಎಂಬ ವೈಶಿಷ್ಟ್ಯದ ಮೂಲಕ 16GB ವರೆಗೆ ವರ್ಚುವಲ್ RAM ಹೊಂದಿಸಬಹುದು. ಇದು ಹಲವು ಕೆಲಸಗಳನ್ನು ಏಕಕಾಲಕ್ಕೆ ಮಾಡುವಾಗ (ಮಲ್ಟಿಟಾಸ್ಕ್), ಗೇಮ್ ಆಡುವಾಗ ಸಹಕಾರಿಯಾಗುತ್ತದೆ. ವಾಯ್ಸ್ ಫೋಕಸ್ ತಂತ್ರಜ್ಞಾನವನ್ನು ಬಳಸಿದರೆ ಸುತ್ತಮುತ್ತ ಗದ್ದಲವಿರುವಲ್ಲಿ ಫೋನ್‌ನಲ್ಲಿ ಮಾತನಾಡುತ್ತಿದ್ದರೆ, ಆಚೆ ಕಡೆಯವರಿಗೆ ನಮ್ಮ ಸ್ಪಷ್ಟವಾಗಿ ಮಾತುಗಳು ಕೇಳಿಸುವುದು ಸಾಧ್ಯ. ಜೊತೆಗೆ, ಸ್ಯಾಮ್‌ಸಂಗ್ ಫೋನ್‌ಗಳು ಬಿಸಿಯಾಗುತ್ತವೆ ಎಂಬ ದೂರಿನ ಮೇಲೆ ಗಮನ ಕೇಂದ್ರೀಕರಿಸಿರುವ ಸ್ಯಾಮ್‍ಸಂಗ್, ಈ ಫೋನ್‌ನಲ್ಲಿ ಪವರ್ ಕೂಲ್ ತಂತ್ರಜ್ಞಾನ ಅಳವಡಿಸಿದೆ. ಇದು ಸಾಧನವನ್ನು ತಣ್ಣಗಿರಿಸುವಲ್ಲಿ ನೆರವಾಗುತ್ತದೆ. ಮತ್ತು ಸ್ವಯಂಚಾಲಿತ ಡೇಟಾ ಸ್ವಿಚಿಂಗ್ ತಂತ್ರಜ್ಞಾನದ ಮೂಲಕ, ಪ್ರಧಾನ ಸಿಮ್ ಕಾರ್ಡ್‌ನಲ್ಲಿ ಇಂಟರ್ನೆಟ್ ಸಂಪರ್ಕಕ್ಕೆ ನೆಟ್‌ವರ್ಕ್ ಸಾಮರ್ಥ್ಯ ಕಡಿಮೆ ಇದ್ದಲ್ಲಿ, ಮತ್ತೊಂದು ಸಿಮ್‌ನಲ್ಲಿರುವ ಡೇಟಾ ಆನ್ ಆಗುವಂತೆ ಹೊಂದಿಸಬಹುದು. ಇವುಗಳ ಜೊತೆಗೆ ಸ್ಯಾಮ್‌ಸಂಗ್‌ನ ನಾಕ್ಸ್ (KNOX) ಸುರಕ್ಷತಾ ವ್ಯವಸ್ಥೆ ಉಳಿದ ಫೋನ್‌ಗಳಂತೆ ಇದರಲ್ಲೂ ಇದೆ.

ಕಾರ್ಯಾಚರಣೆ ಹೇಗಿದೆ?
ಫೇಸ್ ಅನ್‌ಲಾಕ್ ಮತ್ತು ಫಿಂಗರ್‌ಪ್ರಿಂಟ್ ಅನ್‌ಲಾಕ್ ವ್ಯವಸ್ಥೆಗಳೆರಡೂ ಕ್ಷಿಪ್ರವಾಗಿ ಕೆಲಸ ಮಾಡುತ್ತವೆ. ಆಂಡ್ರಾಯ್ಡ್ 12 ಆಧಾರಿತ ಒನ್ ಯುಐ4 ಕಾರ್ಯಾಚರಣಾ ವ್ಯವಸ್ಥೆಯು ವೇಗವಾಗಿದೆ ಮತ್ತು ಅತ್ಯಾಧುನಿಕತೆಗೆ ತಕ್ಕಂತಿದೆ. ಮೊದಲೇ ಹೇಳಿದಂತೆಎಕ್ಸಿನೋಸ್ 1280 ಪ್ರೊಸೆಸರ್ (ಒಕ್ಟಾ ಕೋರ್) ಇರುವುದರಿಂದ ಯಾವುದೇ ಗೇಮ್ ಅಥವಾ ವಿಡಿಯೊ ವೀಕ್ಷಣೆಯ ವೇಳೆ ವಿಳಂಬ (ಲೇಟೆನ್ಸಿ) ಅಥವಾ ಸ್ಥಾಗಿತ್ಯ ಅನುಭವಕ್ಕೆ ಬರಲಿಲ್ಲ. ದೈನಂದಿನ ಬಳಕೆಗೆ ಎ53ಕ್ಕೆ ಹೋಲಿಸಿದರೆ, ಕಡಿಮೆ ಬೆಲೆಯಲ್ಲಿ ಇದು ಹೇಳಿ ಮಾಡಿಸಿದಂತಿದೆ. 25W ವೇಗದ ಚಾರ್ಜಿಂಗ್ ಇದ್ದು, ಸಾಮಾನ್ಯ ಕಾರ್ಯಾಚರಣೆಯ ವೇಳೆ ಒಂದುವರೆ ದಿನ ಅವಧಿಗೆ ಬ್ಯಾಟರಿ ಚಾರ್ಜ್ ಸಮಸ್ಯೆಯಾಗಲಿಲ್ಲ. ಬೆಲೆ 6GB/128GB ಆವೃತ್ತಿಗೆ ₹17999 ಹಾಗೂ 8GB/128GB ಆವೃತ್ತಿಯ ಫೋನ್‌ಗೆ ₹19499. ಮಧ್ಯಮ ಶ್ರೇಣಿಯ ಬೆಲೆಯಲ್ಲಿ ಹೆಚ್ಚು ಬ್ಯಾಟರಿ, ಉತ್ತಮ ಕ್ಯಾಮೆರಾ ಮತ್ತು ಗೇಮಿಂಗ್ ಬಗ್ಗೆ ಹೆಚ್ಚು ಗಮನ ಹರಿಸುವವರಿಗೆ ಈ ಫೋನ್ ಇಷ್ಟವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT