ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒನ್‌ಪ್ಲಸ್‌ ನಾರ್ಡ್‌ ಸಿಇ 5ಜಿ: ಪ್ರೀಮಿಯಂ ವೈಶಿಷ್ಟ್ಯಗಳ 5ಜಿ ಫೋನ್‌

Last Updated 31 ಆಗಸ್ಟ್ 2021, 10:56 IST
ಅಕ್ಷರ ಗಾತ್ರ

ಕಳೆದ ವರ್ಷ ಒನ್‌ಪ್ಲಸ್‌ ನಾರ್ಡ್‌ ಬಿಡುಗಡೆ ಆಗುವವರೆಗೂ ಒನ್‌ಪ್ಲಸ್‌ ಎಂದರೆ ಪ್ರೀಮಿಯಂ ಸ್ಮಾರ್ಟ್‌ಫೋನ್‌ ಎನ್ನುವ ಭಾವನೆ ಇತ್ತು. ಪ್ರೀಮಿಯಂ ವಿಭಾಗದಲ್ಲಿ ಸಾಕಷ್ಟು ಜನಪ್ರಿಯತೆ ಮತ್ತು ಮಾರುಕಟ್ಟೆ ಪಾಲನ್ನು ಹೊಂದಿದ ಬಳಿಕ ಮೇಲ್ಮಧ್ಯಮ ಬೆಲೆಯ (₹ 23 ಸಾವಿರದಿಂದ ₹ 30 ಸಾವಿರದೊಳಗೆ) ವಿಭಾಗದಲ್ಲಿಯೂ ತನ್ನ ಛಾಪನ್ನು ಮೂಡಿಸಲು ನಾರ್ಡ್‌ ಬಿಡುಗಡೆ ಮಾಡಿತು. ಅದರ ಮುಂದುವರಿದ ಭಾಗವಾಗಿ ಇದೀಗ ಒನ್‌ಪ್ಲಸ್‌ ನಾರ್ಡ್‌ ಸಿಇ 5ಜಿ ಫೋನ್‌ ಬಿಡುಗಡೆ ಮಾಡಿದೆ.

ವಿನ್ಯಾಸ, ಬಣ್ಣದಲ್ಲಿ ತಕ್ಷಣಕ್ಕೆ ಸೆಳೆಯುವಂತೆ ಇದನ್ನು ರೂಪಿಸಲಾಗಿದೆ. ವೇಗ, ಬ್ಯಾಟರಿ ಬಾಳಿಕೆ, ಕ್ಯಾಮೆರಾದ ಗುಣಮಟ್ಟ ನಾರ್ಡ್‌ಗಿಂತಲೂ ಉತ್ತಮವಾಗಿದೆ. 7.9 ಎಂಎಂ ದಪ್ಪ, 170 ಗ್ರಾಂ ತೂಕ ಇದೆ. 6.43 ಇಂಚಿನ ಪರದೆ ಹೊಂದಿದೆ. ಎರಡು ನ್ಯಾನೊ ಸಿಮ್‌ ಹಾಕಬಹುದು. ಮೈಕ್ರೊಎಸ್‌ಡಿ ಕಾರ್ಡ್‌ ಹಾಕಲು ಸ್ಲಾಟ್‌ ಇಲ್ಲ. ಇದರಲ್ಲಿ 3.5ಎಂಎಂ ಹೆಡ್‌ಫೋನ್‌ ಜಾಕ್ ನೀಡಿರುವುದು ಹೆಚ್ಚ ಅನುಕೂಲ ಆಗಿದೆ. ನಾರ್ಡ್‌ನಲ್ಲಿ ಇದರ ಕೊರತೆ ಇತ್ತು.

ಬ್ಯಾಟರಿ: 4,500 ಎಂಎಎಚ್‌ ಬ್ಯಾಟರಿ ಹೊಂದಿದ್ದು, ವೇಗದ ಚಾರ್ಜಿಂಗ್‌ಗೆ 30ಡಬ್ಲ್ಯು ಮತ್ತು 30ಟಿ ವಾರ್ಪ್‌ ಚಾರ್ಜ್‌ ಸೌಲಭ್ಯ ಹೊಂದಿದೆ. ಬ್ಯಾಟರಿ ಶೇ 50ರಷ್ಟು ಚಾರ್ಜ್‌ ಆಗಲು 22 ನಿಮಿಷ ತೆಗೆದುಕೊಂಡಿತು. ಶೇ 100ರಷ್ಟು ಪೂರ್ತಿ ಚಾರ್ಜ್‌ ಆಗಲು ಒಂದು ಗಂಟೆ 10 ನಿಮಿಷ ಬೇಕಾಯಿತು. ಸಾಮಾನ್ಯ ಬಳಕೆಯ ದೃಷ್ಟಿಯಿಂದ ನೋಡಿದರೆ ಒಮ್ಮೆ ಶೇ 100ರಷ್ಟು ಚಾರ್ಜ್‌ ಮಾಡಿದರೆ ಒಂದೂವರೆ ದಿನ ಬಳಸಬಹುದು. ಹೆಚ್ಚು ಸಮಯ ವಿಡಿಯೊ ನೋಡುವುದು, ಬ್ರೌಸ್‌ ಮಾಡಿದರೆ, ಗೇಮ್‌ ಆಡಿದರೆ 15 ಗಂಟೆಯವರೆಗೆ ಬ್ಯಾಟರಿಯು ಬಾಳಿಕೆ ಬರುತ್ತದೆ.

ಗೇಮಿಂಗ್‌ ಮೋಡ್‌ನಲ್ಲಿ ನೋಟಿಫಿಕೇಷನ್‌ಗಳನ್ನು ಬ್ಲಾಕ್‌ ಮಾಡುವ ಆಯ್ಕೆ ಇದೆ. ಗೇಮ್ ಆಡುತ್ತಿರುವಾಗಲೇ ಕರೆಗಳಿಗೆ ನೇರವಾಗಿ ಉತ್ತರಿಸಬಹುದಾಗಿದೆ. 12ಜಿಬಿ ರ್‍ಯಾಮ್‌ ಇರುವುದರಿಂದ ಅಪ್ಲಿಕೇಷನ್‌ಗಳು ತಕ್ಷಣವೇ ಒಪನ್ ಆಗುತ್ತವೆ. ಮಲ್ಟಿಟಾಸ್ಕ್‌ ಸಹ ಬಹಳ ಸರಳವಾಗಿದೆ.

ಕ್ಯಾಮೆರಾ: ಹಗಲು ಮತ್ತು ಮಂದ ಬೆಳಕಿನಲ್ಲಿ ಉತ್ತಮ ಫೊಟೊಗಳನ್ನು ತೆಗೆಯಬಹುದು. ಬರಿ ಗಣ್ಣಿನಲ್ಲಿ ನೋಡುವುದಕ್ಕಿಂತಲೂ ಚಿತ್ರದಲ್ಲಿ ತುಸು ಹೆಚ್ಚೇ ಎದ್ದು ಕಾಣುತ್ತದೆಯಾದರೂ ಸಹಜತೆಗೆ ಧಕ್ಕೆಯಾಗುವಂತಿಲ್ಲ. ಅಲ್ಟ್ರಾ ವೈಡ್‌ ಆ್ಯಂಗಲ್‌ ಆಯ್ಕೆಯಲ್ಲಿ ಚಿತ್ರದ ಗುಣಮಟ್ಟ ಕಡಿಮೆ ಆಗುತ್ತದೆ. ಕ್ಲೋಸಪ್‌ನಲ್ಲಿ ತೆಗೆದ ಚಿತ್ರದ ಸ್ಪಷ್ಟತೆ ಚೆನ್ನಾಗಿದೆ. ನೈಟ್‌ಸ್ಕೇಪ್‌ ಆಯ್ಕೆಯಲ್ಲಿ ಫೊಟೊ ತೆಗೆದ ಮೇಲೆ ಅದು ಮೂಡಲು 7–8 ಸೆಕೆಂಡ್‌ ಬೇಕಾಗುತ್ತದೆ. ಇಲ್ಲಿಯೂ ಗುಣಮಟ್ಟದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಸೆಲ್ಫಿಯೂ ಉತ್ತಮವಾಗಿ ಮೂಡಿಬರುತ್ತದೆ.

ಕಳೆದ ವರ್ಷ ಒನ್‌ಪ್ಲಸ್‌ ನಾರ್ಡ್‌ ರಿವ್ಯೂಗೆ ಬಂದಿದ್ದಾಗ ಅದರ ಕಾರ್ಯಾಚರಣಾ ವ್ಯವಸ್ಥೆ ಅಪ್‌ಡೇಟ್ ಆಗಿರಲಿಲ್ಲ. ಎರಡು ಬಾರಿ ಅಪ್‌ಡೇಟ್‌ ಆದ ಬಳಿಕ ಸ್ಮಾರ್ಟ್‌ಫೋನ್‌ನ ಕಾರ್ಯಸಾಮರ್ಥ್ಯದ ನೈಜ ಅನುಭವ ಸಾಧ್ಯವಾಗಿತ್ತು. ಒನ್‌ಪ್ಲಸ್‌ ನಾರ್ಡ್‌ ಸಿಇ 5ಜಿ ಫೋನ್‌ ವಿಷಯದಲ್ಲಿಯೂ ಹಾಗೆಯೇ ಆಗಿದೆ. ಇದನ್ನು ಗಮನಿಸಿದರೆ ಮಾರುಕಟ್ಟೆಗೆ ಬಿಡುವ ಮುನ್ನ ಅದರ ಕಾರ್ಯಾಚರಣೆಯ ಕುರಿತು ಕಂಪನಿ ಸರಿಯಾಗಿ ಪರೀಕ್ಷೆ ನಡೆಸುತ್ತಿಲ್ಲ ಎನ್ನುವುದು ಮತ್ತೊಮ್ಮೆ ಸ್ಪಷ್ಟವಾಗಿದೆ. ಕಂಪನಿ ಈ ಬಗ್ಗೆ ಹೆಚ್ಚು ಗಮನ ಹರಿಸಬೇಕಿದೆ. ಒಟ್ಟಾರೆಯಾಗಿ ಮೇಲ್ಮಧ್ಯಮ ಬೆಲೆಯ ವಿಭಾಗದಲ್ಲಿ ಉನ್ನತ ಮಟ್ಟದ ವೈಶಿಷ್ಟ್ಯಗಳನ್ನು ಬಯಸುವವರು ಇದನ್ನು ಪರಿಗಣಿಸಬಹುದಾಗಿದೆ.

ವೈಶಿಷ್ಟ್ಯಗಳು
ಪರದೆ;
6.43 ಇಂಚು 90 ಹರ್ಟ್ಸ್‌ ಫ್ಲ್ಯೂಯೆಡ್‌ ಅಮೊಎಲ್‌ಇಡಿ ಡಿಸ್‌ಪ್ಲೇ
ಒಎಸ್‌: ಆಂಡ್ರಾಯ್ಡ್‌ 11 ಆಧಾರಿತ ಆಕ್ಸಿಜನ್‌ ಒಎಸ್
ಪ್ರೊಸೆಸರ್: ಕ್ವಾಲ್ಕಂ ಸ್ನ್ಯಾಪ್‌ಡ್ರ್ಯಾಗನ್‌ 750ಜಿ
ಹಿಂಬದಿ ಕ್ಯಾಮೆರಾ: 64+8+2 ಎಂಪಿ
ಸೆಲ್ಫಿ ಕ್ಯಾಮೆರಾ:16 ಎಂಪಿ‌
ಬ್ಯಾಟರಿ: 4500 ಎಂಎಎಚ್‌
ಬೆಲೆ: 8 ಜಿಬಿ‌+128ಜಿಬಿಗೆ ₹24,999. 6ಜಿಬಿ+128ಜಿಬಿಗೆ ₹24,999. 12ಜಿಬಿ+256ಜಿಬಿಗೆ ₹27,999.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT