ಶುಕ್ರವಾರ, ಡಿಸೆಂಬರ್ 9, 2022
21 °C

ಪಿಟ್ರಾನ್‌ ಬಾಸ್‌ಬಡ್ಸ್‌ ಇಯಾನ್‌: ಉತ್ತಮ ಆಲ್‌ರೌಂಡರ್‌

ವಿಶ್ವನಾಥ ಎಸ್. Updated:

ಅಕ್ಷರ ಗಾತ್ರ : | |

Prajavani

ಕಡಿಮೆ ಬೆಲೆಗೆ ಸ್ಮಾರ್ಟ್‌ ಸಾಧನಗಳನ್ನು ನೀಡುತ್ತಿರುವ ದೇಶದ ಪ್ರಮುಖ ಕಂಪನಿ ಪಿಟ್ರಾನ್‌, ಈಚೆಗಷ್ಟೇ ‘ಪಿಟ್ರಾನ್‌ ಬಾಸ್‌ಬಡ್ಸ್‌ ಇಯಾನ್‌’ ಬಿಡುಗಡೆ ಮಾಡಿದೆ. ಗಾತ್ರ, ಆಡಿಯೊ ಗುಣಮಟ್ಟ, ಬ್ಯಾಟರಿ ಬಾಳಿಕೆ... ಹೀಗೆ ಎಲ್ಲಾ ರೀತಿಯಲ್ಲಿಯೂ ಇದು ಉತ್ತಮವಾಗಿದೆ. ಬೆಲೆ ₹2,999.

ಗಾತ್ರದಲ್ಲಿ ಬೆಂಕಿಪೊಟ್ಟಣಕ್ಕಿಂತಲೂ ಕಡಿಮೆ ಇದ್ದು, ತೂಕವೂ ಕಡಿಮೆ. ಚಾರ್ಜಿಂಗ್‌ ಕೇಸ್‌ ಗುಣಮಟ್ಟ ಪರವಾಗಿಲ್ಲ. ಬಡ್ಸ್‌ ಅನ್ನು ಕೇಸ್‌ನಿಂದ ಹೊರತೆಗೆಯಲು ಕಷ್ಟಪಡಬೇಕು. ಬಡ್ಸ್‌ ತೆಗೆಯುವಾಗ ಕೇಸ್‌ನ ಮುಚ್ಚಳ ಕೈಗೆ ಅಡ್ಡಿಯಾಗುತ್ತದೆ. ಬಡ್ಸ್‌ನ ಇಯರ್‌ಟಿಪ್‌ಗೆ ಬಳಸಿರುವ ರಬ್ಬರ್‌ ಕಡಿಮೆ ಗುಣಮಟ್ಟದ್ದಾಗಿದೆ. ಬೇಗನೆ ದೂಳು ಅಂಟಿಕೊಳ್ಳುತ್ತದೆ. ಇಯರ್‌ಟಿಪ್‌ ಕಿವಿಯೊಳಗೆ ಕೂರುವುದರಿಂದ ಈ ಬಗ್ಗೆ ಕಂಪನಿ ಹೆಚ್ಚು ಗಮನ ಹರಿಸುವ ಅಗತ್ಯ ಇದೆ. ಕಿವಿಯ ಗಾತ್ರಕ್ಕೆ ಅನುಗುಣವಾಗಿ ದೊಡ್ಡ, ಮಧ್ಯಮ ಮತ್ತು ಸಣ್ಣ ಹೀಗೆ ಮೂರು ಗಾತ್ರದ ಇಯರ್‌ಟಿಪ್‌ಗಳನ್ನು ಹೆಚ್ಚುವರಿಯಾಗಿ ಕೊಡಲಾಗಿದ್ದು, ಮಕ್ಕಳು ಅಥವಾ ದೊಡ್ಡವರಿಗೂ ಉಪಯುಕ್ತವಾಗಿವೆ.

ಬ್ಲುಟೂತ್ 5.3 ಆವೃತ್ತಿ ಇದ್ದು, ಫೋನ್‌ ಜೊತೆ ಬಹಳ ಸುಲಭವಾಗಿ ಸಂಪರ್ಕಿಸಬಹುದು. ಮೊದಲ ಬಾರಿಗೆ ಫೋನ್‌ ಜೊತೆ ಪೇರ್ ಮಾಡುವಾಗ  ‘ಪವರ್‌ ಆನ್‌, ಪೇರಿಂಗ್’ ಎನ್ನುವ ಧ್ವನಿ ಕೇಳಿಸುತ್ತದೆ. ಅದೇ ರೀತಿ ಬಡ್ಸ್‌ ಅನ್ನು ಕಿವಿಗೆ ಇಟ್ಟುಕೊಂಡು ಮೊಬೈಲ್‌ಗೆ ಸಂಪರ್ಕಿಸುವಾಗಲೂ ‘ಪಿಟ್ರಾನ್‌ ಬಾಸ್‌ಬಡ್ಸ್‌ ಕನೆಕ್ಟೆಡ್‌’ ಎನ್ನುವುದು ಸಹ ದೊಡ್ಡ ಧ್ವನಿಯಲ್ಲಿ ಕೇಳಿಸುತ್ತದೆ. ಇದು ಸ್ಪಲ್ಪ ಕಿರಿಕಿರಿ ಎನ್ನಿಸುತ್ತದೆ. ಇದಕ್ಕೆ ಬದಲಾಗಿ ಮ್ಯೂಸಿಕ್‌ ಮೂಲಕ ಕನೆಕ್ಟ್‌ ಮತ್ತು ಡಿಸ್‌ಕನೆಕ್ಟ್‌ ಆಗುವುದನ್ನು ತಿಳಿಸುವ ವ್ಯವಸ್ಥೆ ಮಾಡಬಹುದಿತ್ತು. ನೀರು ಮತ್ತು ಬೆವರಿನಿಂದ ರಕ್ಷಣೆಗೆ ಐಪಿಎಕ್ಸ್‌4 ರೇಟಿಂಗ್‌ ಹೊಂದಿದೆ.

ಇಯರ್‌ಟಿಪ್‌ ಇರುವುದರಿಂದ ಬಡ್ಸ್‌ ಕಿವಿಯಲ್ಲಿ ಸರಿಯಾಗಿ ಕೂರುತ್ತದೆ. ಬಿದ್ದುಬಿಡಬಹುದು ಎನ್ನುವ ಆತಂಕ ಇರುವುದಿಲ್ಲ. ಅಷ್ಟೇ ಅಲ್ಲ, ಇದರಿಂದಾಗಿ ಹೊರಗಿನ ಶಬ್ಧವನ್ನು ನಿಯಂತ್ರಿಸಿ ಆಡಿಯೊ ಗುಣಮಟ್ಟವೂ ಬಹಳ ಸ್ಪಷ್ಟವಾಗಿ ಕೇಳಿಸುತ್ತದೆ. ಎನ್ವಿರಾನ್ಮೆಂಟಲ್‌ ನಾಯ್ಸ್‌ ಕ್ಯಾನ್ಸಲೇಷನ್ (ಇಎನ್‌ಸಿ) ವ್ಯವಸ್ಥೆ ಇರುವುದರಿಂದ ಹೊರಗಿನ ಶಬ್ಧವು ಬಹುಪಾಲು ಕೇಳಿಸುವುದಿಲ್ಲ. ಇದರಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿಯೂ ಮನರಂಜನೆಗೆ ಯಾವುದೇ ತೊಡಕು ಉಂಟಾಗುವುದಿಲ್ಲ. ಇಲ್ಲಿ ಸಣ್ಣ ಮಟ್ಟಿನ ಜಾಗರೂಕತೆಯೂ ಅಗತ್ಯ. ಮ್ಯೂಸಿಕ್‌ ಪ್ಲೇ ಮಾಡದೇ ಹಾಗೆಯೇ ಕಿವಿಯಲ್ಲಿ ಬಡ್ಸ್‌ ಇಟ್ಟುಕೊಂಡಿದ್ದರೂ ನಮ್ಮ ಪಕ್ಕ ಇರುವವರು ಸಹಜವಾಗಿ ಮಾತನಾಡಿದರೆ, ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ವಾಹನದವರು ಸಣ್ಣದಾಗಿ ಹಾರನ್‌ ಮಾಡಿದರೆ ಅದು ನಮ್ಮ ಕಿವಿಗೆ ಕೇಳುವುದಿಲ್ಲ. ಹೀಗಾಗಿ ಸಾರ್ವಜನಿಕ ಸ್ಥಳಗಳಲ್ಲಿ ಮ್ಯೂಸಿಕ್‌ ಪ್ಲೇ ಮಾಡುವಾಗ, ಹೆಚ್ಚು ವಾಲ್ಯುಂ ಕೊಡದೇ ಇರುವುದು ಒಳಿತು.

ಈ ಬಾಸ್‌ಬಡ್ಸ್‌ನಲ್ಲಿ ಕರೆ ಸ್ವೀಕರಿಸುವ ವ್ಯವಸ್ಥೆಯು ಒಂದು ಹಂತದವರೆಗೆ ಚೆನ್ನಾಗಿಯೇ ಕೆಲಸ ಮಾಡುತ್ತದೆ. ಇಯರ್‌ಟಿಪ್‌ ಕಿವಿಯೊಳಗೆ ಕೂರುವುದರಿಂದ ಮತ್ತು ಇಎನ್‌ಸಿ ವ್ಯವಸ್ಥೆಯಿಂದಾಗಿ ಸಾರ್ವಜನಿಕ ಸ್ಥಳಗಳಲ್ಲಿಯೂ ಕರೆ ಮಾಡಿದಾಗ ನಮ್ಮ ದ್ವನಿಯು ಇನ್ನೊಬ್ಬರಿಗೆ ಸ್ಪಷ್ಟವಾಗಿ ಕೇಳಿಸುತ್ತದೆ. ಸ್ಟೀರಿಯೊ ಕಾಲ್‌ಗೆ ಬಿಲ್ಟ್‌ಇನ್‌ ಎಚ್‌ಡಿ ಮೈಕ್‌ ಹೊಂದಿದೆ. ಇಯರ್‌ ಬಡ್ಸ್‌ ಒಂದರ ತೂಕ 3.65 ಗ್ರಾಮ್‌ ಇದೆ. ಒಂದು ಗಂಟೆಯಲ್ಲಿ ಪೂರ್ತಿ ಚಾರ್ಜ್‌ ಆಗುತ್ತದೆ. ಟಚ್‌ ಮೂಲಕ ಬಡ್ಸ್‌ ಅನ್ನು ನಿಯಂತ್ರಿಸಬಹುದು. ಟೈಪ್‌–ಸಿ ಫಾಸ್ಟ್‌ ಚಾರ್ಜಿಂಗ್‌ ಕೇಬಲ್‌ ಹೊಂದಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು