ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಯಾಮ್‌ಸಂಗ್ ಗ್ಯಾಲಕ್ಸಿ S22 ರಿವ್ಯೂವ್: ಉತ್ತಮ ಕ್ಯಾಮೆರಾವುಳ್ಳ ಹಗುರ ಫೋನ್ ಇದು

ಐಫೋನ್ ಪ್ರತಿಸ್ಫರ್ಧಿ
Last Updated 29 ಮಾರ್ಚ್ 2022, 12:34 IST
ಅಕ್ಷರ ಗಾತ್ರ

ಐಫೋನ್‌ಗೆ ಪ್ರತಿಸ್ಫರ್ಧಿ ಎಂದೆಲ್ಲ ಚರ್ಚೆಗೊಳಗಾದ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್22 ಇತ್ತೀಚೆಗೆ ಭಾರತೀಯ ಮಾರುಕಟ್ಟೆಗೆ ಬಂದಿದೆ. ಇದರ 8 ಜಿಬಿ RAM, 128GB ಸ್ಟೋರೇಜ್‌ನ ಬಿಳಿ ಬಣ್ಣದ ಬೇಸ್ ಮಾಡೆಲ್ ಅನ್ನು ಎರಡು ವಾರ ಬಳಸಿ ನೋಡಿದಾಗ ಅನುಭವಕ್ಕೆ ಬಂದ ವಿಚಾರಗಳು ಇಲ್ಲಿವೆ.

ಪ್ರಮುಖ ವೈಶಿಷ್ಟ್ಯಗಳು
* 6.10 ಇಂಚು ಡಿಸ್‌ಪ್ಲೇ
* ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 8 ಪೀಳಿಗೆ 1
* 50 ಮೆಗಾಪಿಕ್ಸೆಲ್, 12 ಮೆಗಾಪಿಕ್ಸೆಲ್, 10 ಮೆಗಾಪಿಕ್ಸೆಲ್ ಪ್ರಧಾನ ಕ್ಯಾಮೆರಾ
* 10 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾ
* 8GB RAM
* 128 GB ಸ್ಟೋರೇಜ್
* 3,700mAh ಬ್ಯಾಟರಿ ಸಾಮರ್ಥ್ಯ
* ಆಂಡ್ರಾಯ್ಡ್ 12 ಕಾರ್ಯಾಚರಣಾ ವ್ಯವಸ್ಥೆ

ವಿನ್ಯಾಸ
ಇದು ಸಾಮಾನ್ಯ ಸ್ಮಾರ್ಟ್‌ಫೋನ್‌ಗಳಂತೆ ಕಂಡರೂ, ಕೈಗೆತ್ತಿಕೊಂಡಾಗ ಆಗುವ ಅನುಭವವೇ ಬೇರೆ. ಸುಂದರವಾದ ಬಾಕ್ಸ್‌ನೊಳಗೆ, 6.1 ಇಂಚು ಸ್ಕ್ರೀನ್ ಇರುವ ಮಾದರಿ ಎನಿಸಬಹುದಾದ ಗಾತ್ರದ, ತುಂಬ ಹಗುರವಾದ ಈ ಫೋನ್ ಒಳ್ಳೆಯ ಪ್ರೀಮಿಯಂ ಫೋನ್ ಅನ್ನು ಹಿಡಿದುಕೊಂಡಿದ್ದೇವೆಂಬ ಭಾವನೆ ಮೂಡಿಸುತ್ತದೆ. ವಿನ್ಯಾಸದಲ್ಲಿ ಹೆಚ್ಚೇನೂ ದೊಡ್ಡ ಮಟ್ಟದ ಬದಲಾವಣೆಗಳಿಲ್ಲ, ಆದರೆ ಇದರ ಸುತ್ತ ಇರುವ ಅಲ್ಯುಮೀನಿಯಂ (ಕ್ರೋಮ್) ಚೌಕಟ್ಟು, ತೀರಾ ತೆಳುವಾದ ಬೆಝೆಲ್ ಇರುವ (ಸ್ಕ್ರೀನ್ ಸುತ್ತ ಖಾಲಿ ಕಪ್ಪು ಜಾಗ) ಡಿಸ್‌ಪ್ಲೇ ಮತ್ತು ಬಿಲ್ಡ್ ಗುಣಮಟ್ಟ ಹಾಗೂ ಕ್ಯಾಮೆರಾ ಗುಣಮಟ್ಟ - ಇವೆಲ್ಲವೂ ಇದಕ್ಕೆ ಐಫೋನ್ ಪ್ರತಿಸ್ಫರ್ಧಿ ಎಂಬ ಹೆಸರು ತಂದುಕೊಟ್ಟಿರುವುದರಲ್ಲಿ ಉತ್ಪ್ರೇಕ್ಷೆಯಿಲ್ಲ. ಈಗಿನ ಕಾಲಕ್ಕೆ ತೀರಾ ದೊಡ್ಡದೂ ಅಲ್ಲದ, ತೀರಾ ಚಿಕ್ಕದೂ ಅಲ್ಲದ ಗಾತ್ರದ ಗ್ಯಾಲಕ್ಸಿ ಎಸ್22, ಕೈಯಲ್ಲಿ ಹಿಡಿಯಲು, ಜೇಬಿನಲ್ಲಿರಿಸಿಕೊಳ್ಳಲು ಸೂಕ್ತವಾಗಿದೆ. ಇತ್ತೀಚೆಗಿನ ಬಹುತೇಕ ಫೋನ್‌ಗಳು 6.5 ಇಂಚು ಅಥವಾ ಹೆಚ್ಚು ದೊಡ್ಡದಾಗಿದ್ದು, ಕೆಲವರಿಗೆ ಅವುಗಳ ಗಾತ್ರ ಅನನುಕೂಲ ಅಂತ ಅನ್ನಿಸಿದ್ದಿರಬಹುದು. ಅಂಥವರಿಗಾಗಿಯೇ ರೂಪುಗೊಂಡಂತಿದೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್22.

ಹೋಲ್-ಪಂಚ್ ನಾಚ್ ಇರುವ ಡಿಸ್‌ಪ್ಲೇ ಇದ್ದು, ಸ್ಯಾಮ್‌ಸಂಗ್ ಇದನ್ನು 'ಇನ್ಫಿನಿಟಿ-ಒ' ಡಿಸ್‌ಪ್ಲೇ ಎಂದು ಕರೆಯುತ್ತದೆ. ಹಿಂಭಾಗದ ಪ್ಯಾನೆಲ್‌ನಲ್ಲಿ ತ್ರಿವಳಿ ಕ್ಯಾಮೆರಾ ಮಾಡ್ಯೂಲ್ ಇದ್ದು, ಬಲ ಪಾರ್ಶ್ವದಲ್ಲಿ ವಾಲ್ಯೂಮ್ ಮತ್ತು ಪವರ್ ಬಟನ್‌ಗಳು, ಕೆಳಗೆ ಯುಎಸ್‌ಬಿ ಟೈಪ್-ಸಿ ಪೋರ್ಟ್ ಮತ್ತು ಸಿಮ್ ಟ್ರೇ, ಸ್ಪೀಕರ್ ಗ್ರಿಲ್ ಇದೆ. ಫ್ಲ್ಯಾಗ್‌ಶಿಪ್ ಫೋನ್‌ಗಳೆಲ್ಲವೂ ಸ್ವಲ್ಪ ಭಾರ ಇರುತ್ತವೆಂಬ ಪ್ರತೀತಿ ಇದ್ದರೂ ಸ್ಯಾಮ್‌ಸಂಗ್‌ನ ಎಸ್22 ಫೋನ್ ಹಾಗಿಲ್ಲ. ಮೂರು ಬಣ್ಣಗಳಲ್ಲಿ (ಫ್ಯಾಂಟಮ್ ಬಿಳಿ, ಫ್ಯಾಂಟಮ್ ಕಪ್ಪು ಹಾಗೂ ಕಡು ಹಸಿರು) ಲಭ್ಯವಿದ್ದು, ಇನ್ನಷ್ಟೇ ಭಾರತಕ್ಕೆ ಬರಬೇಕಿರುವ 5ಜಿ ಸೇವೆಯನ್ನು ಬೆಂಬಲಿಸುತ್ತದೆ.

120Hz ರಿಫ್ರೆಶ್ ರೇಟ್ ಇರುವ, 6.1 ಇಂಚು ಫುಲ್ ಹೆಚ್‌ಡಿ ಪ್ಲಸ್ ಸೂಪರ್ AMOLED ಡಿಸ್‌ಪ್ಲೇ ಆಕರ್ಷಕವಾಗಿದ್ದು, ವಿವಿಡ್ ಹಾಗೂ ನ್ಯಾಚುರಲ್ - ಹೀಗೆ ಎರಡು ಪೂರ್ವನಿರ್ಧರಿತ ಮೋಡ್‌ಗಳಿಗೆ ಬದಲಾಯಿಸಿಕೊಳ್ಳಬಹುದು. ಪ್ರಖರ ಬಿಸಿಲಿನಲ್ಲಿಯೂ ಸ್ಕ್ರೀನ್‌ನಲ್ಲಿ ಓದುವುದು ಸಾಧ್ಯವಾಗಿದೆ.

ಕ್ವಾಲ್‌ಕಂ ಸ್ನ್ಯಾಪ್‌ಡ್ರ್ಯಾಗನ್ 8 ಚಿಪ್‌ಸೆಟ್, 8ಜಿಬಿ RAM ಇರುವುದರಿಂದ ಫ್ಲ್ಯಾಗ್‌ಶಿಪ್ ಮಾದರಿಗೆ ತಕ್ಕಂತೆ ವೇಗವಿದೆ. ಆ್ಯಪ್‌ಗಳು ವೇಗವಾಗಿ ತೆರೆದುಕೊಳ್ಳುತ್ತವೆ ಮತ್ತು ಸುಲಲಿತ, ವೇಗದ ಬ್ರೌಸಿಂಗ್ ಸಾಧ್ಯವಾಗಿದೆ. ಆದರೆ, ಕೆಲವೊಮ್ಮೆ ಈ ಫೋನ್ ಬಿಸಿ ಆಗುವುದು ಗಮನಕ್ಕೆ ಬಂತು.

ಬ್ಯಾಟರಿ

ಬ್ಯಾಟರಿ ಬಗ್ಗೆ ಹೇಳುವುದಾದರೆ, 3700 mAh ಅಂತ ಸ್ಯಾಮ್‌ಸಂಗ್ ಹೇಳಿದೆ. ಶಕ್ತಿಶಾಲಿ ಚಿಪ್‌ಸೆಟ್ ಮತ್ತು ಜಿಪಿಯು ಇದರಲ್ಲಿದ್ದು, ಹೆಚ್ಚು ಕಾಲ ಬ್ಯಾಟರಿ ಚಾರ್ಜ್ ಉಳಿಸಿಕೊಳ್ಳಲು ಶಕ್ತವಾಗಿದೆಯಾದರೂ, ಈ ಶೇಖರಣಾ ಸಾಮರ್ಥ್ಯವು ಫ್ಲ್ಯಾಗ್‌ಶಿಪ್ ಫೋನ್‌ಗೆ ಹೇಳಿಸಿದ್ದಲ್ಲ ಎಂಬ ಅಭಿಪ್ರಾಯ ಮೂಡಿತು. ಸಾಮಾನ್ಯ ಬಳಕೆಯಲ್ಲಿ ಇಡೀ ದಿನದ ಚಾರ್ಜ್‌ಗೆ ಸಮಸ್ಯೆಯಾಗಿಲ್ಲವಾದರೂ, ಹೆಚ್ಚು ಹೊತ್ತು ಗೇಮ್ ಆಡುವುದು ಅಥವಾ ಸಾಮಾಜಿಕ ಜಾಲತಾಣಗಳ ಬ್ರೌಸಿಂಗ್‌ಗೆ ಇನ್ನಷ್ಟು ಬ್ಯಾಟರಿ ಬೇಕು ಅನಿಸಿತು. 25W ವೇಗದ ಚಾರ್ಜಿಂಗ್ ಬೆಂಬಲವಿದ್ದು, ಸುಮಾರು ಒಂದುವರೆ ಗಂಟೆಯಲ್ಲಿ ಪೂರ್ತಿ ಚಾರ್ಜ್ ಆಗುತ್ತದೆ. ಚಾರ್ಜರ್ ಪ್ರತ್ಯೇಕವಾಗಿ ಖರೀದಿಸಬೇಕಾಗುತ್ತದೆ.

ಕ್ಯಾಮೆರಾ
ಆಂಡ್ರಾಯ್ಡ್ ಫೋನ್‌ಗಳಲ್ಲಿ ಅತ್ಯುತ್ತಮ ಕ್ಯಾಮೆರಾವನ್ನು ಅಳವಡಿಸಿರುವ ಸ್ಯಾಮ್‌ಸಂಗ್‌ನ ಈ ಫೋನ್‌ನಲ್ಲಿ, 50 ಮೆಗಾಪಿಕ್ಸೆಲ್‌ನ ಪ್ರಧಾನ ಸೆನ್ಸರ್ ಇದೆ. 12 ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಕೋನದ ಲೆನ್ಸ್, 10 ಮೆಗಾಪಿಕ್ಸೆಲ್ ಟೆಲಿಫೋಟೋ ಲೆನ್ಸ್‌ನಲ್ಲಿಯೇ 3x ಝೂಮ್ ವ್ಯವಸ್ಥೆಯಿದೆ. ಇವುಗಳ ಸಂಗಮದಿಂದ ಸಮೀಪದ ಮತ್ತು ದೂರದ ವಸ್ತುಗಳ ಚಿತ್ರಗಳು ಅತ್ಯುತ್ತಮವಾಗಿ ಮೂಡಿಬರುತ್ತವೆ. ಉತ್ತಮ ಬೆಳಕಿರುವೆಡೆ ಮಾತ್ರವಲ್ಲದೆ, ಮಂದ ಬೆಳಕಿನ ಚಿತ್ರಗಳು ಕೂಡ ಉತ್ತಮ ಗುಣಮಟ್ಟದಲ್ಲಿ ಮತ್ತು ಬಣ್ಣಗಳ ವೈವಿಧ್ಯವೂ ನಿಖರವಾಗಿ ಸೆರೆಯಾಗುತ್ತದೆ. 10 ಮೆಗಾಪಿಕ್ಸೆಲ್ ಸೆಲ್ಫೀ ಕ್ಯಾಮೆರಾದಲ್ಲಿಯೂ ಗುಣಮಟ್ಟದ ಚಿತ್ರಗಳು ಸೆರೆಯಾಗುತ್ತವೆ.

ಪ್ರೋ, ಪ್ರೋ ವಿಡಿಯೊ, ಸಿಂಗಲ್ ಟೇಕ್, ನೈಟ್, ಫುಡ್, ಪನೋರಮ, ಸೂಪರ್ ಸ್ಲೋ-ಮೋ, ಸ್ಲೋ ಮೋಷನ್, ಹೈಪರ್ ಲ್ಯಾಪ್ಸ್, ಪೋರ್ಟ್ರೇಟ್ ವಿಡಿಯೋ ಮತ್ತು ಡೈರೆಕ್ಟರ್ಸ್ ವ್ಯೂ ಹೆಸರಿನ ವೈವಿಧ್ಯಮಯ ಮೋಡ್‌ಗಳು ಈಗಿನ ಅನಿವಾರ್ಯತೆಗೆ ತಕ್ಕಂತಿವೆ.

ಸರಿಯಾದ ಬೆಳಕಿನ ವ್ಯವಸ್ಥೆ ಇರುವಲ್ಲಿ ತೆಗೆದ ಫೊಟೊಗಳ ಗುಣಮಟ್ಟವು ಐಫೋನ್ ಫೊಟೊಗಳಂತೆಯೇ ಇದೆ. 3x ಆಪ್ಟಿಕಲ್ ಝೂಮ್ ಮತ್ತು 30x ಡಿಜಿಟಲ್ ಝೂಮ್ ಇದೆ. ಪೋರ್ಟ್ರೇಟ್ ಮೋಡ್‌ನಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ತಂತ್ರಜ್ಞಾನವು ಚೆನ್ನಾಗಿ ಕೆಲಸ ಮಾಡುತ್ತದೆ ಮತ್ತು ಮುಖ ಅಥವಾ ಯಾವುದೇ ವಸ್ತುವಿನ ಸುತ್ತ ನಿಖರ ರೇಖೆಗಳೊಂದಿಗೆ ಹಿನ್ನೆಲೆಯನ್ನು ಮಸುಕಾಗಿಸುತ್ತದೆ.

ಒಟ್ಟಾರೆ ಹೇಗಿದೆ
ಸ್ಯಾಮ್‌ಸಂಗ್ ಗ್ಯಾಲಕ್ಸಿ ಎಸ್22 ಫೋನ್‌ನಲ್ಲಿ ಸುಲಲಿತವಾಗಿ ಮತ್ತು ವೇಗವಾಗಿ ಕೆಲಸ ಸಾಗುತ್ತದೆ ಎಂಬುದು ಅನುಭವಕ್ಕೆ ಬಂದ ಮಾತು. ವಿಡಿಯೊ ವೀಕ್ಷಣೆಗೆ, ಮೊಬೈಲ್ ಗೇಮ್ ಆಡುವುದಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಕೈಯಲ್ಲಿ ಹಿಡಿದುಕೊಂಡರೆ ಪ್ರೀಮಿಯಂ ಫೋನ್‌ನ ಅನುಭವ, ಕ್ರೋಮ್ ಪಟ್ಟಿಗಳ ಆಕರ್ಷಣೆ, ಹಗುರ ತೂಕ ಮತ್ತು ಅತ್ಯಂತ ವೇಗದ ಕಾರ್ಯಾಚರಣೆ. ಬ್ಯಾಟರಿ ಸಾಮರ್ಥ್ಯ ಮತ್ತು ಚಾರ್ಜಿಂಗ್ ವೇಗ (25W) ಕೊಂಚ ಕಡಿಮೆಯಾಯಿತು ಎಂಬುದನ್ನು ಬಿಟ್ಟರೆ, ಆಂಡ್ರಾಯ್ಡ್ ಫೋನ್‌ಗಳಲ್ಲಿ ಐಫೋನ್‌ಗೆ ನೋಟದಲ್ಲಿಯೂ, ಕಾರ್ಯಾಚರಣೆಯಲ್ಲಿಯೂ ಸ್ಫರ್ಧೆ ನೀಡಬಹುದು. ಬೆಲೆ 8ಜಿಬಿ, 128ಜಿಬಿ ಬೇಸಿಕ್ ಮಾಡೆಲ್ ₹72,999 ಹಾಗೂ 256ಜಿಬಿ ಮಾಡೆಲ್ ₹76,999 ರಿಂದ ಆರಂಭವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT