ಮಂಗಳವಾರ, 27 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶ್ರವಣದೋಷವುಳ್ಳ ಸವಾರರಿಗಾಗಿ ಹೆಲ್ಮೆಟ್‌

Published 26 ಡಿಸೆಂಬರ್ 2023, 23:30 IST
Last Updated 26 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಗಿಜಿಗಿಡುವ ವಾಹನ ದಟ್ಟಣೆಯಲ್ಲಿ ಸಾಮಾನ್ಯರಿಗೆ ನಡೆದಾಡುವುದೇ ತ್ರಾಸದಾಯಕವಾಗಿರುವಾಗ, ಕಿವಿ ಕೇಳಿಸದವರ, ಕಣ್ಣು ಕಾಣಿಸದವರ ಪಾಡು ಹೇಳತೀರದು. ಆದರೆ ವಾಹನ ಚಾಲನೆ ಸಂದರ್ಭದಲ್ಲಿ ಕಿವಿ ಕೇಳಿಸದವರಿಗೆ ಒಂದಷ್ಟರ ಮಟ್ಟಿಗೆ ನೆರವಾಗುವ ಹೆಲ್ಮೆಟ್‌ ಒಂದನ್ನು ಮಂಗಳೂರಿನ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಬೆಂಗಳೂರು ಟೆಕ್‌ ಸಮ್ಮಿಟ್‌ನಲ್ಲಿ ಇಂಥದ್ದೊಂದು ಸಾಧನ ಪ್ರದರ್ಶನ ಕಂಡಿತು.

ಕಿವಿ ಕೇಳಿಸದ ದ್ವಿಚಕ್ರ ವಾಹನ ಸವಾರರಿಗೆ ನೆರವಾಗುವ ಹೆಲ್ಮೆಟ್‌ ಅನ್ನು ಈ ಕಾಲೇಜಿನ 3ನೇ ವರ್ಷದ ಕಂಪ್ಯೂಟರ್ ಸೈನ್ಸ್ ವಿಭಾಗದ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಜನರ ಗಮನ ಸೆಳೆದ ಈ ಸಾಧನದ ಮಾದರಿಯನ್ನು ಎನ್. ಸಾತ್ವಿಕ್ ಶೆಟ್ಟಿ ಹಾಗೂ ನಿಧಿ ಅಭಿವೃದ್ಧಿಪಡಿಸಿದ್ದಾರೆ.

‘ಕಿವಿ ಕೇಳಿಸದವರು ಅಥವಾ ಮಂದವಾಗಿ ಕೇಳಿಸುವವರಿಗೆ ವಾಹನ ಚಾಲನೆ ಮಾಡುವುದು ತೀರಾ ಸಮಸ್ಯೆ. ಹೆಲ್ಮೆಟ್ ಇರುವಾಗಂತೂ ಅದು ಇನ್ನೂ ಕಷ್ಟದ ಕೆಲಸ. ಈ ಸಮಸ್ಯೆಗೆ ಪರಿಹಾರದ ಮೊದಲ ಹೆಜ್ಜೆ ಎಂಬಂತೆ ಈ ಹೆಲ್ಮೆಟ್ ಅಭಿವೃದ್ಧಿಪಡಿಸಲಾಗಿದೆ’ ಎಂದೆನ್ನುತ್ತಾರೆ ಸಾತ್ವಿಕ್ ಶೆಟ್ಟಿ.

‘ಇದು ಸಾಧಾರಣ ಹೆಲ್ಮೆಟ್‌ನಂತೆಯೇ ಇದೆ. ಅದರೊಳಗೆ 6 ಚಾನಲ್‌ನ ಮೈಕ್ರೊಫೋನ್ ಅಳವಡಿಸಲಾಗಿದೆ. ಜತೆಗೆ ಅದಕ್ಕೆ ಪೂರಕವಾಗಿ ಆರು ವೈಬ್ರೇಟರ್‌ಗಳನ್ನು ಅಳವಡಿಸಲಾಗಿದೆ. ವಾಹನದ ಅಕ್ಕಪಕ್ಕದ ಶಬ್ದಗಳನ್ನು ಗ್ರಹಿಸಿ ಅದಕ್ಕೆ ತಕ್ಕಂತೆ ನಿಖರ ದಿಕ್ಕಿನಿಂದ ಬರುತ್ತಿರುವ ಶಬ್ದದ ಮಾಹಿತಿಯನ್ನು ಈ ಹೆಲ್ಮೆಟ್‌ ಬಳಕೆದಾರರಿಗೆ ನೀಡಲಿದೆ’ ಎಂದು ತಿಳಿಸಿದರು.

‘ಉದಾಹರಣೆಗೆ ವಾಹನ ಸವಾರರ ಹಿಂದಿನಿಂದ ಬಲಭಾಗದಲ್ಲಿ ವಾಹನವೊಂದು ಹಿಂದಿಕ್ಕುವ ಪ್ರಯತ್ನದಲ್ಲಿದ್ದು, ಹಾರ್ನ್ ಮಾಡಿದರೆ, ಅದರ ನಿಖರ ದಿಕ್ಕನ್ನು ಗ್ರಹಿಸಿ ಹೆಲ್ಮೆಟ್ ಒಳಗೆ ಅಳವಡಿಸಿರುವ ಸೆನ್ಸರ್‌ಗೆ ಮಾಹಿತಿ ನೀಡುತ್ತದೆ. ಆ ಮಾಹಿತಿ ಆಧರಿಸಿ ಆ ದಿಕ್ಕಿನೆಡೆಗೆ ಇರುವ ಸೆನ್ಸರ್‌ ವೈಬ್ರೇಟ್ ಆಗುತ್ತದೆ. ಅದರಿಂದ ವಾಹನದ ದಿಕ್ಕನ್ನು ಅರಿಯಲು ಸಾಧ್ಯವಾಗುತ್ತದೆ’ ಎಂದು ವಿವರಿಸಿದರು.

‘ಇತರ ವಾಹನಗಳ ಶಬ್ದ ಹಾಗೂ ಅದರ ದಿಕ್ಕನ್ನು ಗ್ರಹಿಸಿ, ನಿಖರ ಮಾಹಿತಿ ನೀಡಲು ಕೃತಕ ಬುದ್ಧಿಮತ್ತೆಯನ್ನು ಬಳಸಲಾಗಿದೆ. ಈ ಯೋಜನೆಗೆ ನ್ಯೂ ಏಜ್ ಇನ್‌ಕ್ಯುಬೇಷನ್ ನೆಟ್‌ವರ್ಕ್ (ಎನ್‌ಎಐಎನ್‌) ಮೂಲಕ ಅನುದಾನ ದೊರೆತಿದೆ. ಯೋಜನೆಗೆ ಸಹ್ಯಾದ್ರಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಜೆ.ಬಿ.ಜನಾರ್ದನ ಸ್ವಾಮಿ ಮಾರ್ಗದರ್ಶಕರಾಗಿದ್ದಾರೆ ಎಂದು ಸಾತ್ವಿಕ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT