ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಮಾಂತರಿಕ್ಷದ ಹೊಳೆಯುವ ತಾರೆ ಪ್ರೊ.ರೊದ್ದಂ

Last Updated 15 ಡಿಸೆಂಬರ್ 2020, 19:58 IST
ಅಕ್ಷರ ಗಾತ್ರ

ವಾತಾವರಣ ಮತ್ತು ವೈಮಾಂತರಿಕ್ಷ ಕ್ಷೇತ್ರದಲ್ಲಿ ಅದ್ಭುತ ಸಾಧನೆಗೈದು ಅಂತರಾಷ್ಷ್ರೀಯ ಖ್ಯಾತಿ ಪಡೆದಿದ್ದ ವಿಜ್ಞಾನಿ ಪದ್ಮವಿಭೂಷಣ ಪ್ರೊ.ರೊದ್ದಂ ನರಸಿಂಹರವರು ಸೋಮವಾರ ರಾತ್ರಿ ನಮ್ಮನಗಲಿ, ವೈಮಾಂತರಿಕ್ಷದಲ್ಲಿ ಲೀನವಾಗಿ ತಮ್ಮ ತರಲ ಬಲವಿಜ್ಞಾನದ (ಫ್ಲೂಯಿಡ್ ಮೆಕ್ಯಾನಿಕ್ಸ್) ಹಾದಿಯನ್ನು ಮುಗಿಸಿದರು. ಸೌಮ್ಯ ಸ್ವಭಾವ, ಮಿತಭಾಷಿಗಳಾದ 87 ವರ್ಷದ ರೊದ್ದಂ ಅವರು ತೀರ ಇತ್ತೀಚಿನವರೆಗೂ ಬೆಂಗಳೂರಿನ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದಲ್ಲಿ(ಜೆ.ಎನ್.ಸಿ.ಎ.ಎಸ್. ಆರ್) ಸಕ್ರಿಯವಾಗಿ ತಮ್ಮ ಸಂಶೋಧನಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು.

ವೈಮಾಂತರಿಕ್ಷ ಕ್ಷೇತ್ರ ಮತ್ತು ವಾತಾವರಣದಲ್ಲಿನ ಪ್ರಕ್ಷುಬ್ದ ಪ್ರವಾಹದ ಕುರಿತಾದ ಸಮಸ್ಯೆಗಳನ್ನು ಬಿಡಿಸುವುದು, ಆಗಸದಲ್ಲಿ ಕಂಡುಬರುವ ರಾಶಿ ಮೇಘಗಳ (ಕ್ಯುಮುಲಸ್ ಮೋಡಗಳ) ತದ್ರೂಪನ್ನು ತಮ್ಮ ಪ್ರಯೋಗಾಲಯದಲ್ಲಿ ಸೃಷ್ಟಿಸುವುದು, ಸೌರ ಚಟುವಟಿಕೆ ಮತ್ತು ಮಳೆ ಹೊಯ್ಯುವ ‘ಮಾನ್ಸೂನ್’ ಮೋಡಗಳ ನಡುವಿನ ಸಂಬಂಧಗಳ ಸಂಶೋಧನೆಯಲ್ಲಿ ನಿರತರಾಗುವುದು, ಧಾರಾರೇಖೆ ಪ್ರವಾಹವು ಯಾವಾಗ ಪ್ರಕ್ಷುಬ್ಧ ಪ್ರವಾಹವಾಗಿ ಮಾರ್ಪಾಡುಗೊಳ್ಳುವುದು ?, ಅಭಿಜಾತ ಭಾರತೀಯ ವಿಜ್ಞಾನ; ಅದರಲ್ಲೂ ವಿಜ್ಞಾನಿ ಚರಕರಿಂದ ಹಿಡಿದು ನೀಲಕಂಠರವರೆಗೂ, ಭಾರತೀಯ ವಿಜ್ಞಾನ ತುಳಿದ ಹಾದಿಯ ಗಾಢ ಅಧ್ಯಯನಕ್ಕಾಗಿಯೇ ತಮ್ಮ ಜೀವನವನ್ನು ಸಮರ್ಪಿಸಿದ್ದ ಪ್ರೊ. ರೊದ್ದಂ ನರಸಿಂಹರು ನವ-ಯುವ ಸಮುದಾಯದಲ್ಲಿ ಬೆರಗನ್ನು ಹುಟ್ಟಿಸದೇ ಇರರು.

‘ರೊದ್ದಂ ನರಸಿಂಹರು ಸ್ವಾತಂತ್ರ್ಯೋತ್ತರ ಭಾರತ ಕಂಡ ಅತ್ಯುತ್ತಮ ವೈಮಾಂತರಿಕ್ಷ ವಿಜ್ಞಾನಿ’ ಎಂದು ಭಾರತ ರತ್ನ ಪ್ರೊ. ಸಿ.ಎನ್.ಆರ್.ರಾವ್, ರೊದ್ದಂ ಅವರ 85ನೇ ಹುಟ್ಟುಹಬ್ಬದಂದು ಪ್ರಶಂಶಿಸಿದ್ದು, ಈಗಲೂ ಕಣ್ಣಿಗೆ ಕಟ್ಟಿದಂತಿದೆ. ಪ್ರೊ. ರೊದ್ದಂ ಅವರು ವಿಜ್ಞಾನ ವಲಯದಲ್ಲಿ ಪ್ರೊ.ಆರ್.ಎನ್. ಎಂದೇ ಚಿರಪರಿಚಿತರಾಗಿದ್ದರು. ಭಾರತೀಯ ವಿಜ್ಞಾನ ಸಂಸ್ಥೆಯ ವೈಮಾಂತರಿಕ್ಷ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ, ವಾತಾವರಣ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿ, ರಾಷ್ಟ್ರೀಯ ವೈಮಾಂತರಿಕ್ಷ ಪ್ರಯೋಗ ಶಾಲೆಗಳ (ನ್ಯಾಷನಲ್ ಏರೋಸ್ಪೇಸ್ ಲ್ಯಾಬೋರೆಟರೀಸ್ , ಎನ್.ಎ.ಎಲ್.) ನಿರ್ದೇಶಕರಾಗಿ, ಆಧುನಿಕ ಅಧ್ಯಯನ ಗಳ ರಾಷ್ಟ್ರೀಯ ಸಂಸ್ಥೆಯ (ನ್ಯಾಷನಲ್ ಇನ್ಸ್‌ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್) ನಿರ್ದೇಶಕರಾಗಿ, ಜೆ.ಎನ್.ಸಿ.ಎ.ಎಸ್.ಆರ್.ನ ಎಂಜಿನಿಯರಿಂಗ್ ಮೆಕ್ಯಾನಿಕ್ಸ್ ಘಟಕದ ಮುಖ್ಯಸ್ಥರಾಗಿ ತರಲ ಬಲವಿಜ್ಞಾನದ ನಾನಾ ಮಜಲು ಗಳಲ್ಲಿ, ವೈಮಾಂತರಿಕ್ಷ ಮತ್ತು ವಾತಾವರಣ ವಿಜ್ಞಾನಕ್ಕೆ ಅದ್ಭುತ ಕೊಡುಗೆಗಳನ್ನು ನೀಡಿದ್ದಾರೆ.

ಎನ್.ಎ.ಎಲ್.ದಲ್ಲಿ ಆರಂಭ ಗೊಂಡಿದ್ದ ಲಘು ಯುದ್ಧ ವಿಮಾನ ಮತ್ತು ಲಘು ಸಾರಿಗೆ ವಿಮಾನಗಳ ಅಭಿವೃದ್ಧಿಗೆ ಖಚಿತ ರೂಪುರೇಷೆ ನೀಡಿ, ಲಘು ವಿಮಾನವನ್ನು ಅಭಿವೃದ್ಧಿಪಡಿಸಿ ಅದಕ್ಕೆ ‘ಸಾರಸ್’ ಎಂದು ನಾಮಕರಣ ಮಾಡಿದ್ದು ಇಂದು ಇತಿಹಾಸದ ಪುಟ ಸೇರಿದೆ. ಪ್ರಧಾನಿಯಾಗಿದ್ದ ರಾಜೀವ್ ಗಾಂಧಿಯವರ ವೈಜ್ಞಾನಿಕ ಸಲಹಾ ಸಮಿತಿಯ ಸದಸ್ಯರಾಗಿ, ದೇಶದಲ್ಲಿ ದೊಡ್ಡ ಸಮಾಂತರ ಗಣಕವನ್ನು ಆರಂಭಿಸುವಲ್ಲಿ ನಿರ್ಣಾಯಕ ಪಾತ್ರವನ್ನು ಅವರು ನಿರ್ವಹಿಸಿದ್ದರು. ಭಾರತೀಯ ವಿಜ್ಞಾನ ಅಕಾಡೆಮಿಯ ಅಧ್ಯಕ್ಷರಾಗಿ ಅತ್ಯಂತ ಜನಪ್ರಿಯ ಮಾಸಿಕ ‘ರೆಸೊನೆನ್ಸ್’ ಹೊರತರುವುದರ ಜೊತೆಗೆ ಹಲವು ಬಗೆಯ ವಿಜ್ಞಾನ ಜನಪ್ರಿಯ ಕಾರ್ಯಕ್ರಮಗಳಿಗೆ ಅಡಿಪಾಯ ಹಾಕಿದ್ದರು. ಹಿಂದುಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಹೆಚ್.ಎ.ಎಲ್.) ಸೇರಿದಂತೆ ಹತ್ತು ಹಲವು ಬಗೆಯ ವೈಜ್ಞಾನಿಕ ಸಂಸ್ಥೆ ಮತ್ತು ಸಮಿತಿಗಳಲ್ಲಿ ಸಕ್ರಿಯವಾಗಿದ್ದೂ ಕೂಡ ಅವರ ಸಾಮಾಜಿಕ ಒಳಗೊಳ್ಳುವಿಕೆ ಮತ್ತು ಸಹಭಾಗಿತ್ವಕ್ಕೆ ಕನ್ನಡಿಯಾಗಿ ನಿಂತಿವೆ.

ಪ್ರೊ.ಆರ್.ಎನ್. ಅವರ ವಿಜ್ಞಾನ ಸಂಶೋಧನೆಗಾಗಿ ಹಲವು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗೌರವಗಳು ಸಂದಿವೆ. ಭಟ್ನಾಗರ್ ಪ್ರಶಸ್ತಿ(1976), ಕನ್ನಡ ರಾಜ್ಯೋತ್ಸವ ಪ್ರಶಸ್ತಿ (1986), ಪದ್ಮಭೂಷಣ (1987), ಶ್ರೀನಿವಾಸ ರಾಮಾನುಜನ್ ಪದಕ (1998), ಅಮೆರಿಕದ ಇನ್ಸ್‌ಟಿಟ್ಯೂಟ್ ಆಫ್ ಏರೋನಾಟಿಕ್ಸ್ ಮತ್ತು ಆಸ್ಟ್ರೋನಾಟಿಕ್ಸ್ ಕೊಡುವ ತರಲ ಬಲವಿಜ್ಞಾನ ಪ್ರಶಸ್ತಿ (2000), ಆರ್ಯಭಟ ಪ್ರಶಸ್ತಿ (2004), ಟ್ರಿಸ್ಟೆ ವಿಜ್ಞಾನ ಪುರಸ್ಕಾರ (2008), ಸರ್.ಎಂ.ವಿ. ರಾಜ್ಯ ಪ್ರಶಸ್ತಿ (2012), ಪದ್ಮವಿಭೂಷಣ (2013), ಭಾರತೀಯ ವಿಜ್ಞಾನ ಸಂಸ್ಥೆಯ ವೈಮಾಂತರಿಕ್ಷ ವಿಭಾಗದ ಅಮೃತ ಮಹೋತ್ಸವದ ವಿಶಿಷ್ಟ ವಿಜ್ಞಾನ ಪ್ರಶಸ್ತಿ (2017) ಪ್ರಮುಖವಾಗಿವೆ. ರೂರ್ಕಿ, ಬನಾರಸ್, ಗುಲಬರ್ಗಾ ವಿ.ವಿ.ಗಳಿಂದ ಗೌರವ ಡಾಕ್ಟರೇಟ್, ಶಾಂತಿನಿಕೇತನದಿಂದ ದೇಶಿಕೋತ್ತಮ ಗೌರವಗಳೂ ಅವರ ಸೇವೆಗೆ ಸಂದಿರುವುದು ಉಲ್ಲೇಖಾರ್ಹ.

ಪ್ರೊ.ಆರ್.ಎನ್. ತಮ್ಮ ವೈಮಾಂತ ರಿಕ್ಷ ಸಂಶೋಧನೆಗಳ ಜೊತೆಜೊತೆಗೆ ಭಾರತೀಯ ಇತಿಹಾಸವನ್ನು ಅಧ್ಯಯನ ಮಾಡಿ, ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿ ಕಾಡಿದ್ದ ಟಿಪ್ಪು ಸುಲ್ತಾನ್‌ನ ರಾಕೆಟ್ ಪ್ರಯೋಗಗಳ ಕುರಿತು ಸಾರ್ವಜನಿಕರು ಆಶ್ಚರ್ಯ ಚಕಿತರಾಗುವಂತೆ ಉಪನ್ಯಾಸ ನೀಡಿದವರು. ಯೋಗವಾಸಿಷ್ಠದ ತಾತ್ವಿಕ ಕಾವ್ಯ; ವಿಧಿ ನಿರಾಕರಣೆ, ಸ್ವಪ್ರಯತ್ನದ ಬಗೆಗಿನ ಆಯ್ದ ಶ್ಲೋಕಗಳನ್ನು ಇಂಗ್ಲಿಷಿಗೆ ಅನುವಾದಗೊಳಿಸಿ, ಹಾಗೆಯೇ ಚಾರ್ವಾಕ ಸಿದ್ದಾಂತದ ಬಗ್ಗೆ ಒಳನೋಟ ಗಳನ್ನು ಬೀರಿ ತಮ್ಮ ದಾರ್ಶನಿಕ ಪ್ರಜ್ಞೆಯನ್ನು ಮೆರೆದವರು.

ಯುವಸಂಶೋಧಕರ ಗುಂಪಿ ನೊಂದಿಗೆ, ಸದಾ ಚಟುವಟಿಕೆ ಯಿಂದ ಇದ್ದು, ಸಂಶೋಧನಾ ಕೇಂದ್ರ ದಲ್ಲಿ ಅವರೊಟ್ಟಿಗೆಯೇ ಊಟ ಮಾಡುವ, ಅವರ ಒಡನಾಟದಲ್ಲಿಯೇ ತಾವು ಚಿರ ಯುವಕರಂತೆ ತಮ್ಮ ನವೀನ ಬಗೆಯ ಆಲೋಚನೆಗಳನ್ನು ಹಂಚಿಕೊಳ್ಳುವ ಉತ್ಸಾಹಿಯೇ ಪ್ರೊ.ಆರ್.ಎನ್. ಅದೆಷ್ಟೋ ಸಲ ಅವರ ಜೊತೆ ಸಂವಹಿಸಿದರೂ ಅವರೆಂದೂ ತಾವು ಹಿರಿಯ ವಿಜ್ಞಾನಿ ಎಂದು ತೋರಿಸಿಕೊಳ್ಳದೇ, ನೆರೆದಿ ರುವವರ ಜೊತೆಯಲ್ಲಿ ಸಾಮಾನ್ಯ ಸಮಾಲೋಚಕರಂತೆ ಬೆರೆಯುತ್ತಿದ್ದಿದ್ದು; ನಿಜಕ್ಕೂ ಆದರಣೀಯ ಮತ್ತು ಅನುಕರಣೀಯ.

(ಲೇಖಕ–ಪ್ರಿನ್ಸಿಪಾಲ್‌, ವಿ.ವಿ. ಸಂಘ ಸ್ವತಂತ್ರ್ಯ ಪಿಯು ಕಾಲೇಜು, ಬಳ್ಳಾರಿ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT